• ಸುಮಾ ಕಂಚೀಪಾಲ್

ಪ್ರವಾಸ ಎನ್ನುವುದು ಇತ್ತೀಚಿನ ದಿನಗಳಲ್ಲಿ ಕೇವಲ ಒಂದು ಹವ್ಯಾಸವಾಗಿ ಉಳಿದಿಲ್ಲ, ಅದೊಂದು ಸ್ಪರ್ಧೆಯಾಗಿ ಬದಲಾಗಿದೆ. ಯಾರೋ ಸ್ನೇಹಿತರು ವಿದೇಶಕ್ಕೆ ಹೋದರೆಂದು ನಾವೂ ಹೋಗಬೇಕು, ಅವರು ಹಾಕಿದ ಫೊಟೋಗಳಿಗಿಂತ ಹೆಚ್ಚು ಲೈಕ್ಸ್ ಪಡೆಯುವಂಥ ಫೊಟೋಗಳನ್ನು ನಾವೂ ಪೋಸ್ಟ್ ಮಾಡಬೇಕು ಎಂಬ ಹಠದಲ್ಲಿ ನಾವು ಪ್ರವಾಸದ ಅಸಲಿ ಉದ್ದೇಶವನ್ನೇ ಮರೆಯುತ್ತಿದ್ದೇವೆ. ಆದರೆ, ನಿಜವಾದ ಪ್ರವಾಸಕ್ಕೆ ಸಾವಿರಾರು ರುಪಾಯಿ ಹಣವಾಗಲಿ ಅಥವಾ ನೂರಾರು ಕಿಲೋಮೀಟರ್‌ಗಳ ಪ್ರಯಾಣವಾಗಲಿ ಬೇಕಿಲ್ಲ.

ಇದನ್ನೂ ಓದಿ: ಟ್ರಾವೆಲ್ ತಪಸ್ಸಿನಂತೆ...

ಸಣ್ಣ ತಾಣ, ದೊಡ್ಡ ನೆಮ್ಮದಿ

ಪ್ರವಾಸವೆಂದರೆ ಅದು ಕೇವಲ ತಾಜ್‌ಮಹಲ್ ಅಥವಾ ಪ್ಯಾರಿಸ್ ನೋಡುವುದಷ್ಟೇ ಅಲ್ಲ. ನಿಮ್ಮೂರಿನ ಪಕ್ಕದ ಹಳ್ಳದಲ್ಲಿ ಕಾಲು ಕೆದರಿ ಕುಳಿತುಕೊಳ್ಳುವುದು, ಊರ ಹೊರಗಿನ ಬೋಳು ಗುಡ್ಡದ ಮೇಲೆ ನಿಂತು ಸೂರ್ಯಾಸ್ತ ನೋಡುವುದು ಅಥವಾ ಹಸಿರು ಕಾಡಿನ ಮೌನಕ್ಕೆ ಕಿವಿಗೊಡುವುದು ಕೂಡ ಒಂದು ಅದ್ಭುತ ಪ್ರವಾಸವೇ. ಮನಸಿಗೆ ಎಲ್ಲಿ ನೆಮ್ಮದಿ ಸಿಗುತ್ತದೆಯೋ ಅದೇ ಅತ್ಯುತ್ತಮ ಪ್ರವಾಸಿ ತಾಣ. ಪ್ರಕೃತಿಯ ಮಡಿಲಲ್ಲಿ ಕಳೆದ ಅರ್ಧ ಗಂಟೆ, ನೂರಾರು ಕಿಲೋಮೀಟರ್ ದೂರದ ಐಷಾರಾಮಿ ಹೊಟೇಲ್‌ಗಿಂತ ಹೆಚ್ಚು ಆಪ್ತವೆನಿಸುತ್ತದೆ.

Untitled design (68)

ಫೊಟೋಗಿಂತ ಕ್ಷಣಗಳೇ ಮುಖ್ಯ

ಇಂದಿನ ದಿನಗಳಲ್ಲಿ ನಮಗೆ ಜಾಗವನ್ನು ನೋಡಿ ಆನಂದಿಸುವುದಕ್ಕಿಂತ ಅದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಆತುರವೇ ಹೆಚ್ಚು. ಸುಂದರವಾದ ಜಲಪಾತದ ಮುಂದೆ ನಿಂತಾಗ ಅದರ ಶಬ್ದವನ್ನು ಆಲಿಸುವ ಬದಲು, ಸರಿಯಾದ 'ಆಂಗಲ್'ನಲ್ಲಿ ಫೊಟೋ ಬರುತ್ತಿದೆಯೇ ಎಂಬ ಚಿಂತೆಯೇ ಕಾಡುತ್ತದೆ. ವರ್ತಮಾನದಲ್ಲಿ ನಾವು ಪ್ರವಾಸಕ್ಕೆ ಹೋಗುವುದು ನಮ್ಮ ಖುಷಿಗಿಂತ ಹೆಚ್ಚಾಗಿ ಇನ್ನೊಬ್ಬರಿಗೆ ತೋರಿಸಲು ಎಂಬಂತಾಗಿದೆ. ಆದರೆ ನೆನಪಿಡಿ, ಫೊಟೋಗಳಲ್ಲಿ ಸಿಗುವ ಲೈಕ್ಸ್ ತಾತ್ಕಾಲಿಕ; ಆ ಜಾಗದಲ್ಲಿ ನೀವು ಅನುಭವಿಸಿದ ಶಾಂತಿ ಶಾಶ್ವತವಾಗಿರುತ್ತದೆ.

ನಿಜವಾದ ಪ್ರವಾಸದ ಅರ್ಥ

ಪ್ರವಾಸ ಎಂದರೆ ವರ್ತಮಾನದ ಜಂಜಾಟಗಳಿಂದ ಬಿಡುವು ಪಡೆದು, ನಮ್ಮನ್ನು ನಾವು ಕಂಡುಕೊಳ್ಳುವ ಪ್ರಕ್ರಿಯೆ. ಅಲ್ಲಿ ಇನ್ನೊಬ್ಬರ ಹಸ್ತಕ್ಷೇಪ ಇರಬಾರದು. ಮೊಬೈಲ್ ಪರದೆಯಾಚೆಗಿನ ಪ್ರಪಂಚವನ್ನು ಕಣ್ಣಾರೆ ಕಂಡು ಸಂಭ್ರಮಿಸಬೇಕು. ಸಣ್ಣ ನದಿ ತೊರೆಗಳ ಸದ್ದು, ಗುಡ್ಡದ ಮೇಲಿನ ತಂಗಾಳಿ ಇವುಗಳು ನೀಡುವ ಚೈತನ್ಯ ಯಾವುದೋ ದುಬಾರಿ ಪ್ರವಾಸಿ ಪ್ಯಾಕೇಜ್ ಮಾತ್ರ ನೀಡುತ್ತದೆ ಎಂಬ ಕಲ್ಪನೆಯನ್ನು ಬಿಟ್ಟುಬಿಡಿ.

ಇಂದಿನ ಡಿಜಿಟಲ್ ಕಾಲಮಾನದಲ್ಲಿ ಫೊಟೋಗಳ ಮಹತ್ವವನ್ನು ಅಲ್ಲಗಳೆಯುವಂತಿಲ್ಲ. ನಾವು ಹೋದ ಜಾಗದ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಅಗತ್ಯವೂ ಹೌದು. ಏಕೆಂದರೆ ವರ್ಷಗಳ ನಂತರ ಆ ಫೊಟೋಗಳನ್ನು ನೋಡಿದಾಗ ಅಲ್ಲಿನ ಮಧುರ ನೆನಪುಗಳು ಮತ್ತೆ ಮರುಕಳಿಸುತ್ತವೆ. ಆದರೆ, ನಮ್ಮ ಪ್ರವಾಸ ಕೇವಲ ಫೊಟೋ ತೆಗೆಯುವ ಪ್ರಕ್ರಿಯೆಯಾಗಬಾರದು. ಆ ಜಾಗದ ಅನುಭವವನ್ನು ಪಡೆದು ಅದನ್ನು ನೆನಪಿನಲ್ಲಿ ಉಳಿಸಿಕೊಳ್ಳುವಂತಿರಬೇಕು. ಕ್ಯಾಮೆರಾ ಕಣ್ಣಿನ ಮೂಲಕ ಪ್ರಪಂಚ ನೋಡುವುದಕ್ಕಿಂತ ಮೊದಲು, ನಮ್ಮ ಕಣ್ಣಾರೆ ಆ ಸೌಂದರ್ಯವನ್ನು ಆಸ್ವಾದಿಸೋಣ. ಆ ನಂತರ ಮಿಸ್‌ ಮಾಡದೆ ಫೊಟೋವನ್ನೂ ಕ್ಲಿಕ್ಕಿಸೋಣ.