ಟ್ರಾವೆಲ್ ತಪಸ್ಸಿನಂತೆ...
ನಮ್ಮ ಡ್ರೈವರ್ ಒಂದು ಚಹವನ್ನು ನಮ್ಮ ಕೈಗಿತ್ತು. ನೀವು ಮನೆಯ ಸೋಫಾ ಮೇಲೆ ಕೂತಿದ್ದೀರಿ ಎಂಬಷ್ಟು ಸಲೀಸಾಗಿ ಚಹಾ ಕುಡಿಯಿರಿ. ನೂರು ಕಿಮಿ ದಾಟಿದರೂ ಒಂದು ತೊಟ್ಟು ಚಹಾ ಕೆಳಗೆ ಬೀಳುವುದಿಲ್ಲ ಎಂದು ಗ್ಯಾರಂಟಿ ಕೊಟ್ಟ. ಅವನ ಮಾತು ನಿಜವಾಗಿತ್ತು. ಅವೈಜ್ಞಾನಿಕ ರಸ್ತೆಹುಬ್ಬುಗಳು, ಅನಗತ್ಯ ರಿಪೇರಿಗಳು, ಹಳ್ಳ, ಅಡ್ಡಿ, ಕಡ್ಡಿ ಏನೂ ಇರಲಿಲ್ಲ. ಥೇಟು ನಮ್ಮ ಮನೆಯ ನೆಲಕ್ಕೆ ಟೈಲ್ಸ್ ಹಾಕಿರುವಂಥ ಅನುಭವ. ಅಂಥ ರಸ್ತೆಗಳ ಮೂಲಕ ಸಾಗುವಾಗ ಅಕ್ಕಪಕ್ಕದಲ್ಲಿದ್ದಂಥ ಪರ್ವತಗಳ ಗಂಭೀರತೆ, ನಾಜೂಕು, ನಿಮ್ಮ ಮನಸನ್ನು ಶಾಂತಗೊಳಿಸಿಬಿಡುತ್ತವೆ.
- ವೀರಕಪುತ್ರ ಶ್ರೀನಿವಾಸ
ಆಕಾಶಮುಟ್ಟುವ ಕಟ್ಟಡಗಳ ನಗರ ದುಬೈನಲ್ಲಿ ಕಾಲಿಟ್ಟ ಕ್ಷಣದಿಂದಲೇ, ಮಾನವನ ಕನಸಿನ ಶಕ್ತಿ ಏನು ಮಾಡಬಲ್ಲದು ಎಂಬುದು ಕಣ್ಣಾರೆ ಕಂಡು ಬೆರಗಾಗಿದ್ದೆ. ಮರಳುಗಾಡಿನ ಮಧ್ಯೆ ಬೆಳೆದ ಈ ನಗರದಲ್ಲಿ ಪ್ರತಿ ರಸ್ತೆಯೂ ಶಿಸ್ತಿನ ಪ್ರತೀಕ, ಪ್ರತಿ ಕಟ್ಟಡವೂ ಸಾಹಸದ ಕಥೆ. ವಿಶ್ವದ ಅತಿ ಎತ್ತರದ, ಅತಿ ಅಗಲದ, ಅತಿ ಉದ್ದದ, ಅತಿ ಆಳದ ಎಂಬ ಟ್ಯಾಗ್ಲೈನ್ ಇಟ್ಟುಕೊಂಡು ಸೃಷ್ಟಿಯಾಗಿರುವ ಪ್ರತಿ ಕಟ್ಟಡದ್ದು ಒಂದು ಸೊಬಗಾದರೆ, ರಾತ್ರಿ ಹೊಳೆಯುವ ದೀಪಾಲಂಕೃತ ಕಟ್ಟಡಗಳು ಮತ್ತು ರಸ್ತೆಗಳು ದುಬೈಗೆ ಚಿನ್ನದ ಕಳೆಯನ್ನು ತಂದುಬಿಡುತ್ತವೆ. ಅಲ್ಲಿ ಎಲ್ಲವೂ ಅದ್ಭುತವೇ ಅನ್ನಿಸಲಾರಂಭಿಸುತ್ತೆ. ಹಗಲೇ ಚಂದ ಎನ್ನುವಾಗ ರಾತ್ರಿ ಇನ್ನೂ ಚಂದ ಎನ್ನಿಸಲಾರಂಭಿಸುತ್ತೆ.“ಮರಳಿನಲ್ಲಿ ಅರಳಿದ ಬೆರಗೆಂದರೆ, ಅದು ದುಬೈ!
ಇದನ್ನೂ ಓದಿ: ಅಮೆರಿಕದ ಸಂತೆಯಲ್ಲಿ ರಂಗು ರಂಗಿನ ತರಕಾರಿ
ಆದ್ರೆ ಎಷ್ಟು ದಿನ ಅದೇ ಕಟ್ಟಡ, ಅದೇ ಬೆಳಕು, ಅದೇ ರಸ್ತೆಗಳು! ವಾರವಾಗುವಷ್ಟರಲ್ಲಿ ದುಬೈಗೆ ಬೈ ಬೈ ಹೇಳಬೇಕೆನಿಸಲಾರಂಭಿಸುತ್ತೆ. ಆಗ ನಾವು ಮಾಡಿದ ಒಂದು ದೊಡ್ಡ ಕೆಲಸವೆಂದರೆ, ಖೋರ್ಫಕ್ಕಾನ್ ಎಂಬ ಪರ್ವತಗಳ ಸಾಲಿನತ್ತ ಹೊರಟಿದ್ದು. ಅದು ನಮ್ಮ ಪ್ರವಾಸದ ಮತ್ತು ಜೀವನದ ಅತ್ಯಮೂಲ್ಯ ಕ್ಷಣಗಳು. ಇದುವರೆಗೆ ಸಮುದ್ರ ಮತ್ತು ಆಕಾಶಕ್ಕೆ ಮಾತ್ರ ಕಣ್ಣು ಹಾಯಿಸಿದಷ್ಟೂ ದೂರ ಎಂಬ ಮಾತು ಬಳಸುತ್ತಿದ್ದೆವು. ಆದರೆ ಈ ಖೋರ್ಫಕ್ಕಾನ್ ರಸ್ತೆಗಳಲ್ಲಿ ಸಾಗುವಾಗ ರಸ್ತೆಗಳೂ ಸಹ ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣುತ್ತಿದ್ದವು. ಅದೂ ಎಂಥಾ ರಸ್ತೆಗಳಂತೀರಿ! ಆ ರಸ್ತೆಗಳ ಮೇಲೆ ಹೋಗುವಾಗ ಪ್ರಯಾಣಿಸಿದ ಅನುಭವವಾಗುವುದಿಲ್ಲ, ಜಾರಿದಂಥ ಅನುಭವವಾಗುತ್ತದೆ.

ನಮ್ಮ ಡ್ರೈವರ್ ಒಂದು ಚಹವನ್ನು ನಮ್ಮ ಕೈಗಿತ್ತು. ನೀವು ಮನೆಯ ಸೋಫಾ ಮೇಲೆ ಕೂತಿದ್ದೀರಿ ಎಂಬಷ್ಟು ಸಲೀಸಾಗಿ ಚಹಾ ಕುಡಿಯಿರಿ. ನೂರು ಕಿಮಿ ದಾಟಿದರೂ ಒಂದು ತೊಟ್ಟು ಚಹಾ ಕೆಳಗೆ ಬೀಳುವುದಿಲ್ಲ ಎಂದು ಗ್ಯಾರಂಟಿ ಕೊಟ್ಟ. ಅವನ ಮಾತು ನಿಜವಾಗಿತ್ತು. ಅವೈಜ್ಞಾನಿಕ ರಸ್ತೆಹುಬ್ಬುಗಳು, ಅನಗತ್ಯ ರಿಪೇರಿಗಳು, ಹಳ್ಳ, ಅಡ್ಡಿ, ಕಡ್ಡಿ ಏನೂ ಇರಲಿಲ್ಲ. ಥೇಟು ನಮ್ಮ ಮನೆಯ ನೆಲಕ್ಕೆ ಟೈಲ್ಸ್ ಹಾಕಿರುವಂಥ ಅನುಭವ. ಅಂಥ ರಸ್ತೆಗಳ ಮೂಲಕ ಸಾಗುವಾಗ ಅಕ್ಕಪಕ್ಕದಲ್ಲಿದ್ದಂಥ ಪರ್ವತಗಳ ಗಂಭೀರತೆ, ನಾಜೂಕು, ನಿಮ್ಮ ಮನಸನ್ನು ಶಾಂತಗೊಳಿಸಿಬಿಡುತ್ತವೆ. ಅಲ್ಲೂ ಒಂದು ಸಮುದ್ರವಿದೆ. ಅದರ ತೀರದಲ್ಲಿ ನಿಂತಾಗ ಸ್ವಚ್ಚತೆಗೆ ವ್ಯಾಖ್ಯಾನ ದೊರಕುತ್ತದೆ. ಆ ಕಡಲತೀರದ ಗಾಳಿ ನಿಮಗೆ ಸೋಕಿದಾಗ ಯಾವುದೋ ಕತೆ ಕೇಳಿದಂತಾಗುತ್ತದೆ. ಅಷ್ಟು ಮಾತ್ರವಲ್ಲ; ಅಲ್ಲೊಂದು ಸೂರ್ಯಾಸ್ತ ವೀಕ್ಷಣೆಯ ಸ್ಥಳವಿದೆ. ಅಲ್ಲಿ ಕೂತು ಸೂರ್ಯನನ್ನು ನೋಡುವಾಗ ಕೆಂಪಾದದ್ದು ಸೂರ್ಯನೋ ನಾವೋ ಎಂಬು ಅನುಮಾನ ಬಂದುಬಿಡುತ್ತದೆ. ಅಂಥ ಆಹ್ಲಾದಕರ ಸಂಜೆ ಕೇವಲ ಅಲ್ಲಿ ಮಾತ್ರ ಸಿಗುತ್ತದೆ. ಇದೆಲ್ಲವೂ ನಮ್ಮದಾಗಬೇಕೆಂದರೆ, ಕಾರ್ಪೋರೇಟ್ ಕಂಪೆನಿಗಳ ತರ ದಿನಕ್ಕೆ ಇಷ್ಟು ಟಾರ್ಗೆಟ್ ಅಂತ ಓಡಿ ಓಡಿ ನೋಡಬಾರದು. ಪ್ರವಾಸಗಳನ್ನು ಪ್ರಯಾಸಗಳನ್ನಾಗಿಸಿಕೊಳ್ಳಬಾರದು. ಸಮಯ ಮಾಡಿಕೊಂಡು, ಸಮಯ ಕೊಡಬೇಕು! ಹೊಸ ಊರಿಗೆ ಬಂದಿದ್ದೇವೆ ಎನ್ನುವುದನ್ನು ಮಾತ್ರವಲ್ಲ ಹೊಸ ಊರನ್ನು ನಮ್ಮದಾಗಿಸಿಕೊಳ್ಳುವುದೂ ಗೊತ್ತಿರಬೇಕು. ಆಗ ಮುನ್ನೂರು ಕಿಮಿ ಸಾಗಿದರೂ ಆಯಾಸವೆಂಬುದೇ ಆಗುವುದಿಲ್ಲ. ಮನಸು ಟ್ರಾವೆಲ್ ತಪಸ್ಸು ಮಾಡಿದಂಥ ಅನುಭೂತಿಯನ್ನು ತನ್ನದಾಗಿಸಿಕೊಳ್ಳುತ್ತದೆ.