• ಸಹನ ಪ್ರಸಾದ್‌

2018ರ ಸಮಯ, ಅದು ನನ್ನ ಮೊದಲ ವಿದೇಶ ಪ್ರಯಾಣ. ಯುರೋಪ್‌ಗೆ ಯಾವುದೋ ಸಮ್ಮೇಳನಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ಸಮ್ಮೇಳನ ಮುಗಿದ ನಂತರ ಸುತ್ತ ಮುತ್ತ ದೇಶಗಳಿಗೆ ಭೇಟಿ ನೀಡುವಾಗ ಹೊಸ ಜಾಗದಲ್ಲಿ ಏನೇನು ಕಷ್ಟಗಳು ಎದುರಾಗುತ್ತವೆ ಎನ್ನುವುದು ಅರಿವಿಗೆ ಬಂತು. ಮೊದಲನೆಯದಾಗಿ, ಊಟ ತಿಂಡಿ. ಹೋಟೆಲ್‌ಗಳನ್ನು ಹುಡುಕಿಕೊಂಡು ಹೋಗಬೇಕು. ಅದರಲ್ಲೂ ಸಸ್ಯಾಹಾರಿಯಾಗಿದ್ದರೆ ಮತ್ತೂ ಕಷ್ಟ. ಗೂಗಲ್ ದಾರಿ ತೋರಿಸಿದರೂ ಅಲ್ಲಿಗೆ ಹೋಗಲು ವಾಹನ ಸೌಕರ್ಯ ಸಿಗುವುದು ಕಷ್ಟ. ಇದು ಮ್ಯಾನೇಜ್ ಆದರೂ ಒಂದೆಡೆಯಿಂದ ಮತ್ತೊಂದೆಡೆಗೆ ಹೋಗಲು ಶ್ರಮ ಪಡಬೇಕು. ಮ್ಯಾಪ್‌ ನೋಡುತ್ತಾ ಪ್ರಯಾಣ ಮತ್ತಿತರ ಪ್ಲಾನ್ ಮಾಡಬೇಕು. ಕೆಲವರಿಗೆ ಇದು ಇಷ್ಟದ ಸಂಗತಿ. ಆದರೆ ವೃದ್ಧರು ಮತ್ತು ಚಿಕ್ಕ ಮಕ್ಕಳು ಇರುವಾಗ ಗುಂಪಿನಲ್ಲಿ ಪ್ರವಾಸ ಹೋಗುವುದು ಉತ್ತಮ. ಎಲ್ಲ ಜವಾಬ್ದಾರಿಗಳನ್ನು ಟೀಮ್ ಮ್ಯಾನೇಜರ್‌ಗೆ ವಹಿಸಿ, ಪ್ರಯಾಣದ ಸವಿಯನ್ನು ಮಾತ್ರ ನಮ್ಮ ಪಾಲಿಗೆ ಇರಿಸಿಕೊಳ್ಳಬಹುದು.

ಸ್ಮಾರ್ಟ್‌ ಟ್ರಾವೆಲ್‌ ತಂತ್ರ ಗೊತ್ತಿದ್ದರೆ ಕಡಿಮೆ ಖರ್ಚು, ಉತ್ತಮ ಪ್ರಯಾಣ

ಪ್ರವಾಸ ಮನಸಿಗೆ ನೆಮ್ಮದಿ ನೀಡುವ ಮತ್ತು ಹೊಸ ಅನುಭವಗಳನ್ನು ಪಡೆಯುವ ಮಾರ್ಗ. ಇತ್ತೀಚೆಗೆ 'ಸೋಲೋ ಟ್ರಾವೆಲ್' ಜನಪ್ರಿಯವಾಗುತ್ತಿದೆ. ಆದರೆ ಸ್ನೇಹಿತರು, ಕುಟುಂಬ ಅಥವಾ ಸಮಾನ ಮನಸ್ಕರ ಜತೆಗೆ ಗುಂಪಿನಲ್ಲಿ ಪ್ರವಾಸ ಹೋಗುವುದರಲ್ಲಿ ಇರುವ ಸಂಭ್ರಮವೇ ಬೇರೆ.

ಗುಂಪು ಪ್ರವಾಸದ ಲಾಭಗಳು

ಹಣ ಉಳಿತಾಯ ಮಾಡಿಕೊಳ್ಳಬಹುದು

ಗುಂಪಿನಲ್ಲಿ ಪ್ರಯಾಣಿಸುವುದರಿಂದ ಹಣದ ಉಳಿತಾಯವಾಗುತ್ತದೆ. ವಾಹನ ಬಾಡಿಗೆ, ಹೊಟೇಲ್ ರೂಮ್‌ಗಳು ಮತ್ತು ಗೈಡ್‌ಗಳ ಶುಲ್ಕವನ್ನು ಎಲ್ಲರು ಹಂಚಿಕೊಳ್ಳಬಹುದು. ಇದರಿಂದ ಆರ್ಥಿಕ ಹೊರೆ ಕೊಂಚ ಕಡಿಮೆಯಾಗುತ್ತದೆ. ಅನೇಕ ಪ್ರವಾಸಿ ತಾಣಗಳಲ್ಲಿ ಗುಂಪುಗಳಿಗೆ ವಿಶೇಷ ರಿಯಾಯಿತಿಗಳು ಸಿಗುತ್ತವೆ.

New Project (35)

ಸುರಕ್ಷತೆ ಮತ್ತು ಧೈರ್ಯ

ಹೊಸ ದೇಶ ಅಥವಾ ಅಪರಿಚಿತ ಸ್ಥಳಗಳಿಗೆ ಹೋಗುವಾಗ ಸುರಕ್ಷತೆ ಬಹಳ ಮುಖ್ಯ. ಗುಂಪಿನಲ್ಲಿ ಪ್ರಯಾಣಿಸುವಾಗ ಒಬ್ಬರಿಗೊಬ್ಬರು ಆಸರೆಯಾಗಿರುತ್ತಾರೆ. ತುರ್ತು ಸಂದರ್ಭಗಳಲ್ಲಿ ಅಥವಾ ಅನಾರೋಗ್ಯದ ಸಮಯದಲ್ಲಿ ಸಹಾಯ ಮಾಡಲು ಜತೆಯಲ್ಲಿ ಜನರು ಇರುತ್ತಾರೆ ಎಂಬ ಧೈರ್ಯ ಇರುತ್ತದೆ.

ಹೊಸ ಗೆಳೆತನ

ಗುಂಪು ಪ್ರವಾಸವು ಹೊಸ ವ್ಯಕ್ತಿಗಳನ್ನು ಭೇಟಿ ಮಾಡಲು ಮತ್ತು ಸಾಮಾಜಿಕವಾಗಿ ಬೆರೆಯಲು ಉತ್ತಮ ಅವಕಾಶ ನೀಡುತ್ತದೆ. ನಿಮ್ಮಂತೆಯೇ ಆಸಕ್ತಿ ಹೊಂದಿರುವ ಜನರೊಂದಿಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಬಹುದು. ಇದು ಪ್ರವಾಸದ ಖುಷಿಯನ್ನು ಇಮ್ಮಡಿಗೊಳಿಸುತ್ತದೆ. ಸುಂದರವಾದ ಸೂರ್ಯಾಸ್ತವನ್ನು ನೋಡುವಾಗ ಅಥವಾ ಬೆಟ್ಟ ಹತ್ತುವಾಗ ಜತೆಗಿರುವವರೊಂದಿಗೆ ಆ ಕ್ಷಣವನ್ನು ಹಂಚಿಕೊಳ್ಳುವುದು ನೆನಪಿನಲ್ಲಿ ಉಳಿಯುತ್ತದೆ.

New Project (33)

ಯೋಜನೆಯ ಚಿಂತೆ ಇರುವುದಿಲ್ಲ

ನೀವು ಅಧಿಕೃತ ಟೂರ್ ಪ್ಯಾಕೇಜ್‌ಗಳ ಮೂಲಕ ಗುಂಪು ಪ್ರವಾಸ ಹೋದರೆ, ರೂಮ್ ಬುಕಿಂಗ್, ಸಾರಿಗೆ ಅಥವಾ ಮುಂದೆ ಯಾವ ಪ್ರವಾಸಿ ತಾಣಕ್ಕೆ ಹೋಗಬೇಕು ಎನ್ನುವ ಕುರಿತು ಯೋಜನೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಕಿಲ್ಲ. ಎಲ್ಲವನ್ನೂ ಟೂರ್ ಆಯೋಜಕರೇ ನಿರ್ವಹಿಸುವುದರಿಂದ ನೀವು ನಿರಾಳವಾಗಿ ಪ್ರವಾಸವನ್ನು ಆನಂದಿಸಬಹುದು.

ಜ್ಞಾನ ವಿನಿಮಯ

ಗುಂಪಿನಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ವಿಷಯದ ಬಗ್ಗೆ ತಿಳಿದಿರುತ್ತದೆ. ಯಾರೋ ಒಬ್ಬರಿಗೆ ಸ್ಥಳದ ಇತಿಹಾಸದ ಬಗ್ಗೆ ಗೊತ್ತಿದ್ದರೆ, ಮತ್ತೊಬ್ಬರಿಗೆ ಸ್ಥಳೀಯ ಆಹಾರದ ಬಗ್ಗೆ ಮಾಹಿತಿ ಇರುತ್ತದೆ. ಹೀಗೆ ಒಬ್ಬರಿಗೊಬ್ಬರು ಮಾಹಿತಿ ಹಂಚಿಕೊಳ್ಳುವುದರಿಂದ ಆ ಸ್ಥಳದ ಬಗ್ಗೆ ಹೆಚ್ಚಿನ ಜ್ಞಾನ ಲಭ್ಯವಾಗುತ್ತದೆ.

ಒಂಟಿಯಾಗಿ ಪ್ರಯಾಣಿಸುವುದು ಸ್ವಾತಂತ್ರ್ಯವನ್ನು ನೀಡಿದರೆ, ಗುಂಪು ಪ್ರವಾಸ ಒಗ್ಗಟ್ಟು, ಸುರಕ್ಷತೆ ಮತ್ತು ಹಂಚಿಕೊಳ್ಳುವಿಕೆಯ ಸಂಭ್ರಮವನ್ನು ನೀಡುತ್ತದೆ. ಮುಂದಿನ ಬಾರಿ ಪ್ರವಾಸ ಯೋಜಿಸುವಾಗ ನಿಮಗೆ ಪ್ರಿಯವಾದವರ ಗುಂಪಿನೊಂದಿಗೆ ಹೊರಡಿ. ಆ ನೆನಪುಗಳು ಜೀವನಪೂರ್ತಿ ನಿಮ್ಮೊಂದಿಗೆ ಇರುತ್ತವೆ.

ಗುಂಪು ಪ್ರವಾಸ ಹೋಗುವುದರಲ್ಲಿ ಕೇವಲ ಪ್ಲಸ್‌ ಪಾಯಿಂಟ್‌ಗಳೇ ಇವೆಯಾ ಎಂದರೆ ಕಂಡಿತವಾಗಿ ಇಲ್ಲ. ಗುಂಪು ಪ್ರವಾಸ ಮೇಲ್ನೋಟಕ್ಕೆ ಆಕರ್ಷಕವಾಗಿ ಕಂಡರೂ ಅದರಲ್ಲಿ ಹಲವಾರು ಸವಾಲುಗಳು ಮತ್ತು ಅನಾನುಕೂಲಗಳೂ ಇವೆ.

New Project (34)

ವೈಯಕ್ತಿಕ ಸ್ವಾತಂತ್ರ್ಯದ ಕೊರತೆ

ಗುಂಪು ಪ್ರವಾಸದಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಅಭಾವ ಇರುತ್ತದೆ. ಇಲ್ಲಿ ಪ್ರವಾಸದ ವೇಳಾಪಟ್ಟಿಯನ್ನು ಆಯೋಜಕರು ಮೊದಲೇ ನಿರ್ಧರಿಸಿರುತ್ತಾರೆ. ನಿಮಗೆ ಒಂದು ನಿರ್ದಿಷ್ಟ ಸ್ಥಳ ತುಂಬಾ ಇಷ್ಟವಾಗಿ ಅಲ್ಲಿ ಹೆಚ್ಚು ಸಮಯ ಕಳೆಯಬೇಕು ಎನಿಸಿದರೂ ಗುಂಪಿನ ಇತರರೊಂದಿಗೆ ಹೊರಡಲೇಬೇಕಾಗುತ್ತದೆ. ಅದು ಅನಿವಾರ್ಯ ಆಗಿಬಿಡುತ್ತದೆ.

ಕಠಿಣ ವೇಳಾಪಟ್ಟಿ

ಹೆಚ್ಚಿನ ಗುಂಪು ಪ್ರವಾಸಗಳು ‘ಹೆಚ್ಚು ಸ್ಥಳಗಳನ್ನು ಕಡಿಮೆ ಸಮಯದಲ್ಲಿ’ ನೋಡುವ ಗುರಿ ಹೊಂದಿರುತ್ತವೆ. ಇದರಿಂದಾಗಿ ಬೆಳಗ್ಗೆ ಬೇಗ ಏಳುವುದು ಮತ್ತು ತಡರಾತ್ರಿಯವರೆಗೆ ಪ್ರಯಾಣ ಮಾಡುವುದು ಅನಿವಾರ್ಯವಾಗುತ್ತದೆ. ಇದು ವಿಶ್ರಾಂತಿಗಿಂತ ಹೆಚ್ಚಾಗಿ ದೈಹಿಕ ಸುಸ್ತನ್ನು ತರಬಹುದು.

ಹೊಂದಾಣಿಕೆಯ ಸಮಸ್ಯೆ

ಗುಂಪಿನಲ್ಲಿ ವಿವಿಧ ಸ್ವಭಾವದ ಜನರು ಇರುತ್ತಾರೆ. ಕೆಲವರು ಸಮಯ ಪಾಲನೆ ಮಾಡದಿದ್ದರೆ ಇಡೀ ಗುಂಪಿನ ಪ್ರಯಾಣ ವಿಳಂಬವಾಗುತ್ತದೆ. ಅಪರಿಚಿತರೊಂದಿಗೆ ದಿನವಿಡೀ ಕಳೆಯುವುದು ಎಲ್ಲರಿಗೂ ಸುಲಭದ ಮಾತಲ್ಲ. ಆಹಾರದ ವಿಷಯದಲ್ಲೂ ಎಲ್ಲರಿಗೂ ಒಪ್ಪುವಂಥ ಸಾಮಾನ್ಯ ಮೆನು ಇರುವುದರಿಂದ, ಸ್ಥಳೀಯ ವಿಶಿಷ್ಟ ಖಾದ್ಯಗಳನ್ನು ಸವಿಯುವ ಅವಕಾಶ ಕೈತಪ್ಪಬಹುದು.

ವೆಚ್ಚ ಮತ್ತು ವಾಣಿಜ್ಯೀಕರಣ

ಅನೇಕ ಬಾರಿ ಗುಂಪು ಪ್ರವಾಸಗಳು ಆಯೋಜಕರ ಲಾಭದ ಉದ್ದೇಶದಿಂದ ಕೂಡಿರುತ್ತವೆ. ಅವರು ಕೆಲವು ನಿರ್ದಿಷ್ಟ ಅಂಗಡಿಗಳಿಗೆ ಅಥವಾ ಹೊಟೇಲ್‌ಗಳಿಗೆ ನಿಮ್ಮನ್ನು ಕರೆದೊಯ್ಯುತ್ತಾರೆ. ಅಲ್ಲಿ ವಸ್ತುಗಳ ಬೆಲೆ ಹೆಚ್ಚಿರಬಹುದು. ವೈಯಕ್ತಿಕವಾಗಿ ಹೋದರೆ ಅಗ್ಗದದಲ್ಲಿ ಸಿಗುವ ಸೌಲಭ್ಯಗಳು ಇಲ್ಲಿ ದುಬಾರಿಯಾಗಿರಬಹುದು.

ಚೆಕ್‌-ಲಿಸ್ಟ್‌ ಪ್ರವಾಸವಾಗಬಹುದು

ಗುಂಪು ಪ್ರವಾಸಗಳಲ್ಲಿ ಕೇವಲ ಪ್ರಸಿದ್ಧ ಪ್ರವಾಸಿ ತಾಣಗಳ ಮುಂದೆ ಫೊಟೋ ತೆಗೆದುಕೊಳ್ಳುವುದಕ್ಕೆ ಮಾತ್ರ ಆದ್ಯತೆ ಇರುತ್ತದೆ. ಆ ಪ್ರದೇಶದ ಸಂಸ್ಕೃತಿ ಮತ್ತು ಅಲ್ಲಿನ ಜನರೊಂದಿಗೆ ಬೆರೆಯುವ ಅವಕಾಶ ತುಂಬಾ ಕಡಿಮೆ. ಇದು ಕೇವಲ ಒಂದು ʻಚೆಕ್-ಲಿಸ್ಟ್ʼ ಮುಗಿಸಿದಂತಾಗುತ್ತದೆಯೇ ಹೊರತು, ನಿಜವಾದ ಪ್ರವಾಸದ ಅನುಭವ ನೀಡುವುದಿಲ್ಲ.

ಹೀಗೆ ಗುಂಪು ಪ್ರವಾಸದಲ್ಲಿ ಅನುಕೂಲ ಹಾಗೂ ಅನಾನುಕೂಲಗಳೆರಡೂ ಇವೆ. ಅಂತಿಮವಾಗಿ, ನಾವು ಪ್ರವಾಸದಿಂದ ಏನನ್ನು ನಿರೀಕ್ಷಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಆಯ್ಕೆ ನಿರ್ಧಾರವಾಗುತ್ತದೆ. ನಮಗೆ ಯಾವುದೇ ಜವಾಬ್ದಾರಿಗಳಿಲ್ಲದೆ, ಸುರಕ್ಷಿತವಾಗಿ ನಾಲ್ಕು ಜನರೊಂದಿಗೆ ಬೆರೆತು ಪ್ರಸಿದ್ಧ ತಾಣಗಳನ್ನು ನೋಡುವ ಹಂಬಲವಿದ್ದರೆ ಗುಂಪು ಪ್ರವಾಸ ಅತ್ಯುತ್ತಮ. ಆದರೆ, ಸಮಯದ ಬಂಧನವಿಲ್ಲದೆ ಸ್ಥಳೀಯ ಸಂಸ್ಕೃತಿಯ ಆಳವಾದ ಅನುಭವ ಪಡೆಯುವ ತುಡಿತವಿದ್ದರೆ ವೈಯಕ್ತಿಕ ಪ್ರಯಾಣವೇ ಸರಿ. ಆದ್ದರಿಂದ, ನಿಮ್ಮ ಆಸಕ್ತಿ, ದೈಹಿಕ ಸಾಮರ್ಥ್ಯ ಮತ್ತು ಬಜೆಟ್‌ಗೆ ಅನುಗುಣವಾಗಿ ಸೂಕ್ತ ಪ್ರವಾಸವನ್ನು ಆರಿಸಿ.