Saturday, August 29, 2026
Saturday, August 29, 2026

ಸಿನಿಮಾ ನಗರಿಯಲ್ಲಿದೆ ಇಡೀ ಜಗತ್ತು!

ಸಿನಿಮಾ ನಿರ್ಮಾಣಕ್ಕಾಗಿ ರೂಪುಗೊಂಡ ರಾಮೋಜಿ ಫಿಲ್ಮ್ ಸಿಟಿ ಇಂದು ಭಾರತದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿ ಬೆಳೆದಿದೆ. ಸುಮಾರು 2,000 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ವಿಶಾಲ ತಾಣ ತನ್ನ ಚಿತ್ರೀಕರಣದ ಸೆಟ್‌ಗಳು, ಥೀಮ್ ಪಾರ್ಕ್‌ಗಳು, ಉದ್ಯಾನಗಳು, ಪಕ್ಷಿ-ಚಿಟ್ಟೆಗಳ ಲೋಕ, ಆತಿಥ್ಯ ಹಾಗೂ ವಸತಿ ಸೌಲಭ್ಯಗಳಿಂದಾಗಿ ಪ್ರವಾಸಿಗರ ಪಾಲಿನ ಆಕರ್ಷಣೀಯ ತಾಣವೆನಿಸಿಕೊಂಡಿದೆ. ಸಿನಿಮಾ ಮತ್ತು ಪ್ರವಾಸೋದ್ಯಮದ ಅಪೂರ್ವ ಸಂಗಮವಾಗಿ ರೂಪುಗೊಂಡಿರುವ, ರಾಮೋಜಿರಾವ್ ಅವರ ದೂರದೃಷ್ಟಿಯ ಈ ಕನಸಿನ ನಗರದ ಹುಟ್ಟು, ಬೆಳವಣಿಗೆ, ವೈಶಿಷ್ಟ್ಯಗಳು ಮತ್ತು ಪ್ರವಾಸಿಗರನ್ನು ಸೆಳೆಯುವ ಅಂಶಗಳ ಕುರಿತ ಸಮಗ್ರ ನೋಟ ಇಲ್ಲಿದೆ.

ಕೆಲವು ಪ್ರವಾಸಿ ತಾಣಗಳನ್ನು ನಾವು ನೋಡುತ್ತೇವೆ. ಕೆಲವು ತಾಣಗಳನ್ನು ನಾವು ಅನುಭವಿಸುತ್ತೇವೆ. ಆದರೆ, ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಾವು ಒಂದು ದಿನದ ಮಟ್ಟಿಗೆ ಮತ್ತೊಂದು ಲೋಕದ ಪಾತ್ರವಾಗಿಬಿಡುತ್ತೇವೆ.

ಬೆಳಗ್ಗೆ ಒಂದು ಹಳೆಯ ಕಾಲದ ಅರಮನೆಯ ಮುಂದೆ ನಿಂತಿರುತ್ತೇವೆ. ಕೆಲವೇ ನಿಮಿಷಗಳಲ್ಲಿ ಅದೇ ಪ್ರವಾಸದಲ್ಲಿ ವಿಮಾನ ನಿಲ್ದಾಣವನ್ನೂ ನೋಡಬಹುದು. ಅಲ್ಲಿಂದ ರೈಲು ನಿಲ್ದಾಣ, ಆಸ್ಪತ್ರೆ, ಜೈಲು, ದೇವಸ್ಥಾನ, ಹಳ್ಳಿ, ನಗರ, ವಿದೇಶಿ ಬೀದಿ... ಹೀಗೆ ಒಂದೇ ದಿನದಲ್ಲಿ ಹಲವು ಲೋಕಗಳನ್ನು ಸುತ್ತಿ ಬರಬಹುದು. ಮಧ್ಯೆ ಸಿನಿಮಾದ ಸಾಹಸ ಪ್ರದರ್ಶನ, ಸಂಗೀತ, ನೃತ್ಯ, ಮಕ್ಕಳ ಆಟ, ಪಕ್ಷಿಗಳ ಲೋಕ, ಚಿಟ್ಟೆಗಳ ಉದ್ಯಾನ, ಥೀಮ್ ಗಾರ್ಡನ್‌ಗಳು, ರೋಮಾಂಚಕಾರಿ ರೈಡ್‌ಗಳು ಇವೆಲ್ಲವೂ ನಿಮ್ಮ ಪ್ರವಾಸದ ಭಾಗವಾಗುತ್ತವೆ. ಹೀಗಾಗಿ ರಾಮೋಜಿ ಫಿಲ್ಮ್ ಸಿಟಿ ಕೇವಲ ಫಿಲ್ಮ್ ಸ್ಟುಡಿಯೋ ಅಲ್ಲ. ಅದು ಒಂದು ಅದ್ಭುತ ಪ್ರವಾಸದ ಅನುಭವ.

ಇದನ್ನೂ ಓದಿ: ಗೌಡಗೆರೆಯ ಶಕ್ತಿ ಧಾಮ

ಹೈದರಾಬಾದ್ ಸಮೀಪದ ಸುಮಾರು 2,000 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ರಾಮೋಜಿ ಫಿಲ್ಮ್ ಸಿಟಿ, ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನಿಂದ ವಿಶ್ವದ ಅತಿ ದೊಡ್ಡ ಫಿಲ್ಮ್ ಸಿಟಿ/ಫಿಲ್ಮ್ ಸ್ಟುಡಿಯೋ ಸಂಕೀರ್ಣವಾಗಿ ಗುರುತಿಸಲ್ಪಟ್ಟಿದೆ. 1996ರಲ್ಲಿ ಆರಂಭವಾದ ಈ ತಾಣ ಇಂದು ಸಿನಿಮಾ ನಿರ್ಮಾಣದ ಕೇಂದ್ರದ ಜೊತೆಗೆ ಪ್ರಮುಖ ಪ್ರವಾಸಿ ತಾಣವಾಗಿಯೂ ಬೆಳೆದಿದೆ. ಸಂಸ್ಥೆಯ ಪ್ರಕಾರ, ಇಲ್ಲಿ ವರ್ಷಕ್ಕೆ ಸುಮಾರು 200 ಚಿತ್ರತಂಡಗಳು ಕೆಲಸ ಮಾಡುತ್ತವೆ ಮತ್ತು ವಿವಿಧ ಭಾರತೀಯ ಭಾಷೆಗಳಲ್ಲಿ 3,500ಕ್ಕೂ ಹೆಚ್ಚು ಚಿತ್ರಗಳ ಚಿತ್ರೀಕರಣ ನಡೆದಿದೆ. ಪ್ರತಿವರ್ಷ ಸುಮಾರು 15 ಲಕ್ಷ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿಯೂ ಇದು ಬೆಳೆದಿದೆ.

Untitled design (14)

ರಾಮೋಜಿ ರಾವ್ ಕನಸಿನ ಸಾಮ್ರಾಜ್ಯ

ಚೆರೂಕುರಿ ರಾಮೋಜಿ ರಾವ್ ಕೇವಲ ಉದ್ಯಮಿಯಲ್ಲ; ಮಾಧ್ಯಮ, ಪತ್ರಿಕೋದ್ಯಮ, ಸಿನಿಮಾ ಮತ್ತು ಉದ್ಯಮಶೀಲತೆಯ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ ದೂರದೃಷ್ಟಿಯ ವ್ಯಕ್ತಿ. 1936ರ ನವೆಂಬರ್ 16ರಂದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪೆಡಪರುಪುಡಿಯಲ್ಲಿ ಜನಿಸಿದ ರಾಮೋಜಿ ರಾವ್, ನಂತರ ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದರು. ಈನಾಡು, ಈಟಿವಿ, ಉಷಾಕಿರಣ್ ಮೂವೀಸ್ ಸೇರಿದಂತೆ ರಾಮೋಜಿ ಗ್ರೂಪ್‌ನ ಹಲವು ಸಂಸ್ಥೆಗಳ ಹಿಂದೆ ಅವರ ದೃಷ್ಟಿ ಮತ್ತು ಉದ್ಯಮಶೀಲತೆ ಇತ್ತು.

ಸಿನಿಮಾ ನಿರ್ಮಾಣಕ್ಕೆ ಬೇಕಾದ ಸೌಲಭ್ಯಗಳು ಒಂದೇ ಕಡೆ ಸಿಗಬೇಕು; ಚಿತ್ರತಂಡವೊಂದು ಸ್ಕ್ರಿಪ್ಟ್‌ನೊಂದಿಗೆ ಬಂದು ಸಂಪೂರ್ಣ ಚಿತ್ರ ನಿರ್ಮಾಣದ ಅನುಭವ ಪಡೆಯಬೇಕು ಎಂಬ ಕಲ್ಪನೆಯಿಂದ ರಾಮೋಜಿ ಫಿಲ್ಮ್ ಸಿಟಿ ರೂಪುಗೊಂಡಿತು. 1996ರಲ್ಲಿ ಆರಂಭವಾದ ಈ ಕನಸು ಇಂದು 2,000 ಎಕರೆಗಳಷ್ಟು ವಿಸ್ತಾರಗೊಂಡು, ಸಿನಿಮಾ ನಿರ್ಮಾಣದ ಕೇಂದ್ರದಿಂದ ಪ್ರವಾಸಿಗರ ಕನಸಿನ ಲೋಕವಾಗಿ ಬೆಳೆದಿದೆ. 2016ರಲ್ಲಿ ರಾಮೋಜಿ ರಾವ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಭಾರತ ಸರಕಾರ ಗೌರವಿಸಿತು. 2024ರ ಜೂನ್ 8ರಂದು 87ನೆಯ ವಯಸ್ಸಿನಲ್ಲಿ ಅವರು ನಿಧನರಾದರು. ಆದರೆ ಅವರ ಕನಸಿನ ನಗರ ಇಂದಿಗೂ ಜೀವಂತವಾಗಿದೆ. ರಾಮೋಜಿ ಫಿಲ್ಮ್ ಸಿಟಿ ಅವರ ಉದ್ಯಮಶೀಲತೆಯ ಸ್ಮಾರಕ ಮಾತ್ರವಲ್ಲ; ಒಂದು ದೊಡ್ಡ ಕನಸನ್ನು ಹೇಗೆ ವಾಸ್ತವಕ್ಕೆ ತರಬಹುದು? ಎಂಬುದಕ್ಕೆ ನಿಂತಿರುವ ಉದಾಹರಣೆ.

ದಕ್ಷ ಉತ್ತರಾಧಿಕಾರಿ ವಿಜಯೇಶ್ವರಿ

ರಾಮೋಜಿ ಫಿಲ್ಮ್ ಸಿಟಿಯ ಇಂದಿನ ಬೆಳವಣಿಗೆಯ ಕಥೆಯಲ್ಲಿ ಚ. ವಿಜಯೇಶ್ವರಿ ಅವರ ಪಾತ್ರ ಮಹತ್ವದ್ದು. 1996ರಲ್ಲಿ ಆರಂಭವಾದ ಸಂಸ್ಥೆಯ ಬೆಳವಣಿಗೆಯಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ವಿಜಯೇಶ್ವರಿ ಅವರ ನಾಯಕತ್ವ ಪ್ರಮುಖವಾಗಿದೆ.ಡಾಲ್ಫಿನ್‌ ಹೊಟೇಲ್ಸ್‌ ಪ್ರೈ.ಲಿ ಸಮೂಹದ ಎಂ.ಡಿ ಕೂಡ ಆಗಿರುವ ವಿಜಯೇಶ್ವರಿ ಅವರು ರಾಮೋಜಿ ಫಿಲ್ಮ್ ಸಿಟಿಯನ್ನು ಕೇವಲ ಫಿಲ್ಮ್ ಸ್ಟುಡಿಯೋ ಆಗಿ ನೋಡುವ ಬದಲು, ಪ್ರವಾಸಿಗರಿಗೆ ಸಂಪೂರ್ಣ ಅನುಭವ ನೀಡುವ ಡೆಸ್ಟಿನೇಷನ್ ಆಗಿ ರೂಪಿಸುವ ದೃಷ್ಟಿಕೋನಕ್ಕೆ ಒತ್ತು ನೀಡಿದ್ದಾರೆ. ಸಿನಿಮಾ ನಿರ್ಮಾಣದ ಮೂಲ ಶಕ್ತಿಯನ್ನು ಉಳಿಸಿಕೊಂಡೇ ಪ್ರವಾಸೋದ್ಯಮ, ಮನೋರಂಜನೆ, ಸಾಹಸ, ಆತಿಥ್ಯ, ಕಾರ್ಯಕ್ರಮಗಳು ಮತ್ತು ಕುಟುಂಬ ಆಧಾರಿತ ಅನುಭವಗಳನ್ನು ವಿಸ್ತರಿಸುವುದು ಅವರ ನಾಯಕತ್ವದ ಪ್ರಮುಖ ಯೋಜನೆಯಾಗಿದೆ. ಇಂದಿನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸ್ಟುಡಿಯೋ ಟೂರ್‌ನಿಂದ ಸಾಹಸ, ಬರ್ಡ್‌ ಪಾರ್ಕ್‌, ಲೈವ್‌ ಶೋಸ್‌, ಹೊಟೇಲ್ಸ್‌, ಡೆಸ್ಟಿನೇಶನ್‌ ವೆಡ್ಡಿಂಗ್ಸ್, ಕಾರ್ಪೊರೆಟ್‌ ಕಾರ್ಯಕ್ರಮಗಳು ಇವೆಲ್ಲದರೆಡೆಗೆ ವಿಸ್ತರಿಸಿರುವುದು ಅವರ ಮಹತ್ವಾಕಾಂಕ್ಷೆ ಮತ್ತು ದೂರದರ್ಶಿತ್ವಕ್ಕೆ ಸಾಕ್ಷಿ.

Untitled design (22)

ರಾಮೋಜಿ ರಾವ್ ಬಿತ್ತಿದ ಕನಸನ್ನು ಮುಂದಿನ ತಲೆಮಾರಿನ ಪ್ರವಾಸೋದ್ಯಮದ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸುವ ಜವಾಬ್ದಾರಿ ವಿಜಯೇಶ್ವರಿ ಅವರ ನಾಯಕತ್ವದಲ್ಲಿ ಮುಂದುವರಿದಿದೆ.

ನಗರ ಒಂದು- ಲೋಕ ಹಲವು

ರಾಮೋಜಿ ಫಿಲ್ಮ್ ಸಿಟಿಗೆ ಪ್ರವೇಶಿಸಿದ ಕ್ಷಣದಿಂದಲೇ ಪ್ರವಾಸಿಗನ ಅನುಭವ ಬದಲಾಗುತ್ತದೆ. ಸಾಮಾನ್ಯ ಪ್ರವಾಸಿ ತಾಣದಲ್ಲಿ ನಾವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತೇವೆ. ಆದರೆ ಇಲ್ಲಿ ಒಂದು ಕಥೆಯಿಂದ ಮತ್ತೊಂದು ಕಥೆಗೆ ಪ್ರಯಾಣಿಸುತ್ತೇವೆ. ಅದರ ಪ್ರಮುಖ ಅನುಭವವೇ Studio Tour. ಗೈಡೆಡ್ ಪ್ರವಾಸದಲ್ಲಿ ಪ್ರವಾಸಿಗರನ್ನು ವಿಶೇಷ ಬಸ್‌ಗಳ ಮೂಲಕ ಫಿಲ್ಮ್ ಸಿಟಿಯ ವಿವಿಧ ಭಾಗಗಳಿಗೆ ಕರೆದೊಯ್ಯಲಾಗುತ್ತದೆ. ಖಾಸಗಿ ಕಾರುಗಳಿಗೆ ಮುಖ್ಯ ಪ್ರದೇಶಗಳಲ್ಲಿ ಪ್ರವೇಶವಿಲ್ಲ. ಬಸ್ ಸಾಗುತ್ತಿದ್ದಂತೆ ಕಾಣಿಸಿಕೊಳ್ಳುವ ದೃಶ್ಯಗಳು ಸಿನಿಮಾದ ಸೆಟ್‌ಗಳೆಂದು ಗೊತ್ತಿದ್ದರೂ, ಅವುಗಳ ನೈಜತೆಯೇ ಪ್ರವಾಸಿಗನನ್ನು ಅಚ್ಚರಿಗೊಳಿಸುತ್ತದೆ. ರೈಲು ನಿಲ್ದಾಣ… ವಿಮಾನ ನಿಲ್ದಾಣ… ಆಸ್ಪತ್ರೆ… ಜೈಲು… ದೇವಸ್ಥಾನ… ಮಸೀದಿ… ಗುರುದ್ವಾರ… ಹಳ್ಳಿ… ಸಣ್ಣ ಪಟ್ಟಣ… ಆಧುನಿಕ ನಗರ… ವಿದೇಶಿ ಬೀದಿಗಳು.. ಒಂದು ಚಿತ್ರಕ್ಕೆ ಬೇಕಾದ ಹಿನ್ನೆಲೆಯನ್ನು ಸೃಷ್ಟಿಸುವುದಕ್ಕಾಗಿ ನಿರ್ಮಿಸಿದ ಈ ಲೋಕಗಳು, ಪ್ರವಾಸಿಗರಿಗೆ ಒಂದು ದಿನದ ಅನುಭವದ ತಾಣಗಳಾಗಿ ಮಾರ್ಪಟ್ಟಿವೆ.

ಮಿಸ್ ಮಾಡದಿರಿ ಬಾಹುಬಲಿ ಸೆಟ್

ರಾಮೋಜಿ ಫಿಲ್ಮ್ ಸಿಟಿಯ ಪ್ರವಾಸವನ್ನು ಪೂರ್ಣಗೊಳಿಸುವ ಮುನ್ನ ಬಹುತೇಕ ಪ್ರವಾಸಿಗರು ಕಾತರದಿಂದ ಕಾಯುವ ಪ್ರಮುಖ ತಾಣವೆಂದರೆ ಬಾಹುಬಲಿ ಸೆಟ್. ತೆರೆಯ ಮೇಲೆ ಕಂಡ ಮಹಾಕಾವ್ಯದ ಜಗತ್ತು, ಇಲ್ಲಿ ಕಣ್ಣೆದುರು ಭವ್ಯವಾಗಿ ನಿಂತಿರುವ ಅನುಭವ ನೀಡುತ್ತದೆ. ಮಾಹಿಷ್ಮತಿ ಸಾಮ್ರಾಜ್ಯದ ವೈಭವವನ್ನು ನೆನಪಿಸುವ ಬೃಹತ್ ವಿನ್ಯಾಸಗಳು, ಅರಮನೆಯ ವಾತಾವರಣ, ಭವ್ಯ ಕಲಾಕೃತಿಗಳು, ಸಿನಿಮಾ ಹೇಗೆ ಒಂದು ಕಲ್ಪನೆಯನ್ನು ವಾಸ್ತವದಂತೆ ರೂಪಿಸುತ್ತದೆ ಎಂಬುದಕ್ಕೆ ಇದು ಅದ್ಭುತ ಉದಾಹರಣೆ. ಸಿನಿಮಾ ಪ್ರೇಮಿಗಳಿಗೆ ಇದು ಒಂದು ಸೆಟ್ ಮಾತ್ರವಲ್ಲ. ನಾವು ಸಿನಿಮಾದ ಭಾಗ ಅನಿಸುವ ಕ್ಷಣ.

ಇಲ್ಲಿನ ಪ್ರತಿಯೊಂದು ಮೂಲೆಗೂ ಫೊಟೋಗೆ ಅವಕಾಶ ಇರುವುದರಿಂದ ಕುಟುಂಬ, ಸ್ನೇಹಿತರು ಮತ್ತು ಯುವ ಪ್ರವಾಸಿಗರಿಗೆ ಇದು ವಿಶೇಷ ಆಕರ್ಷಣೆ.

ಸಂಭ್ರಮಕ್ಕೆ ಸ್ವಾಗತಿಸುವ ಯುರೇಕಾ

ರಾಮೋಜಿ ಫಿಲ್ಮ್ ಸಿಟಿಯ ಮತ್ತೊಂದು ಪ್ರಮುಖ ಆಕರ್ಷಣೆ ಯುರೇಕಾ. ಇಲ್ಲಿ ವಿವಿಧ ಕಾಲಘಟ್ಟಗಳು ಮತ್ತು ಸಂಸ್ಕೃತಿಗಳ ಛಾಯೆಗಳನ್ನು ಒಂದೇ ಪ್ರವಾಸದಲ್ಲಿ ಅನುಭವಿಸಬಹುದು. ಮೊಘಲರ ವೈಭವದಿಂದ ಮೌರ್ಯರ ನೆನಪುಗಳವರೆಗೆ, ವೈಲ್ಡ್‌ವೆಸ್ಟ್‌‌ನ ಸಾಹಸಮಯ ವಾತಾವರಣದಿಂದ ಮನೋರಂಜನೆಯ ವಿವಿಧ ಪ್ರದರ್ಶನಗಳವರೆಗೆ ಇದು ಪ್ರವಾಸಿಗರ ಕುತೂಹಲವನ್ನು ಜೀವಂತವಾಗಿರಿಸುವ ಪ್ರದೇಶ. ಮಕ್ಕಳಿಗೆ ಇದು ಕಲಿಕೆಯ ಜೊತೆಗೆ ಆಟದ ಅನುಭವ. ದೊಡ್ಡವರಿಗೆ ಇದು ಸಿನಿಮಾದ ಹಿಂದಿರುವ ಕಲ್ಪನಾ ಜಗತ್ತನ್ನು ಅರಿಯುವ ಅವಕಾಶ.

Untitled design (17)

ಸಿನಿಮಾ ಹೇಗೆ ಹುಟ್ಟುತ್ತದೆ?

ರಾಮೋಜಿ ಫಿಲ್ಮ್ ಸಿಟಿಯ ವಿಶೇಷತೆಯೇ ಇಲ್ಲಿ ಪ್ರವಾಸಿಗರು ಸಿನಿಮಾವನ್ನು ನೋಡುವುದಿಲ್ಲ; ಸಿನಿಮಾದ ನಿರ್ಮಾಣದ ಪ್ರಕ್ರಿಯೆಯನ್ನು ಅನುಭವಿಸುತ್ತಾರೆ. ರಾಮೋಜಿ ಮೂವೀ ಮ್ಯಾಜಿಕ್‌ ವಲಯದಲ್ಲಿ ಸಿನಿಮಾದ ತಂತ್ರಜ್ಞಾನ, ಸಾಹಸ, ಕಲ್ಪನೆ ಮತ್ತು ಮನೋರಂಜನೆಯ ವಿವಿಧ ಮುಖಗಳನ್ನು ಪರಿಚಯಿಸುವ ಅನುಭವಗಳಿವೆ.

ಇಲ್ಲಿ ಆಕ್ಷನ್‌ ಮೂಲಕ ಸಿನಿಮಾ ನಿರ್ಮಾಣದ ಹಿಂದಿರುವ ಸಾಹಸ ಮತ್ತು ತಂತ್ರಗಳನ್ನು ಅರಿಯಬಹುದು. ಫಿಲ್ಮಿ ದುನಿಯಾ ಕಲ್ಪನಾ ಲೋಕಕ್ಕೆ ಕರೆದೊಯ್ಯುತ್ತದೆ. ಸ್ಪೇಸ್‌ ಯಾತ್ರಾ ನಿಮಗೆ ಬಾಹ್ಯಾಕಾಶದ ಅನುಭವವನ್ನು ಮನೋರಂಜನೆಯ ರೂಪದಲ್ಲಿ ನೀಡುತ್ತದೆ.

ಸಾಹಸ ಬೇಕೇ? ವೈಲ್ಡ್‌ ವೆಸ್ಟ್‌ಗೆ ಬನ್ನಿ!

ಸಿನಿಮಾದಲ್ಲಿ ಹೀರೋ-ವಿಲನ್‌ಗಳ ಹೊಡೆದಾಟವನ್ನು ನೋಡುತ್ತಾ ರೋಮಾಂಚನಗೊಳ್ಳುವವರಿಗೆ ನೈಜ ಸಾಹಸ ಪ್ರದರ್ಶನ ಇನ್ನಷ್ಟು ವಿಶೇಷ. ವೈಲ್ಡ್‌ ವೆಸ್ಟ್‌ ಸ್ಟಂಟ್‌ ಶೋ ರಾಮೋಜಿಯ ಜನಪ್ರಿಯ ಲೈವ್ ಪ್ರದರ್ಶನಗಳಲ್ಲಿ ಒಂದು. ಸಾಹಸ, ವೇಗ, ಶೂಟೌಟ್‌ಗಳ ವಾತಾವರಣ ಮತ್ತು ಸ್ಟಂಟ್‌ಗಳ ಮೂಲಕ ಹಳೆಯ ವೈಲ್ಡ್‌ ವೆಸ್ಟ್‌ ಜಗತ್ತನ್ನು ಕಣ್ಣೆದುರು ಕಟ್ಟಿಕೊಡಲಾಗುತ್ತದೆ. ಅದರ ಜೊತೆಗೆ ಲೈಟ್ಸ್ಸ ಕ್ಯಾಮೆರಾ ಆಕ್ಷನ್‌ ಸೇರಿದಂತೆ ವಿವಿಧ ಲೈವ್ ಶೋಗಳು ದಿನದ ಪ್ರವಾಸಕ್ಕೆ ಮತ್ತಷ್ಟು ಬಣ್ಣ ತುಂಬುತ್ತವೆ. ನೂರಾರು ಕಲಾವಿದರು ಭಾಗವಹಿಸುವ ಪ್ರದರ್ಶನಗಳು ರಾಮೋಜಿಯ ಪ್ರವಾಸಿ ಅನುಭವದ ಪ್ರಮುಖ ಭಾಗವಾಗಿವೆ.

Naveen Sagar

Naveen Sagar

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!