Saturday, May 2, 2026
Saturday, May 2, 2026

ಫ್ಲೈಟ್‌ ಟಿಕೆಟ್‌ ದರದ ಹಿಂದಿರುವ ರಹಸ್ಯ

ವಿಮಾನಯಾನ ಸಂಸ್ಥೆಗಳು 'ಡೈನಾಮಿಕ್ ಪ್ರೈಸಿಂಗ್' ಎಂಬ ತಂತ್ರವನ್ನು ಬಳಸುತ್ತವೆ. ಅಂದರೆ ವಿವಿಧ ಅಂಶಗಳ ಆಧಾರದ ಮೇಲೆ ಟಿಕೆಟ್ ಬೆಲೆಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಸಾಮಾನ್ಯ ಎಲ್ಲ ವ್ಯಾಪಾರದಂತೆ ಇಲ್ಲಿ ಬೆಲೆಗಳು ಸ್ಥಿರವಾಗಿರುವುದಿಲ್ಲ. ಒಂದೇ ದಿನಕ್ಕೆ ಹಲವು ಬಾರಿ ಬದಲಾಗಬಹುದು. ಇದಕ್ಕೆ ಪ್ರಮುಖ ಕಾರಣವೆಂದರೆ 'ಬೇಡಿಕೆ'. ಒಂದು ನಿರ್ದಿಷ್ಟ ಮಾರ್ಗಕ್ಕಾಗಿ ಹೆಚ್ಚಿನ ಜನರು ಹುಡುಕಾಟ ನಡೆಸಿದಾಗ ಅಥವಾ ಬುಕ್ ಮಾಡಿದಾಗ ಬೆಲೆಗಳು ಏರುತ್ತವೆ. ಪ್ರಯಾಣದ ದಿನಾಂಕ ಹತ್ತಿರ ಬಂದರೂ ಸೀಟುಗಳು ಮಾರಾಟವಾಗದಿದ್ದರೆ, ವಿಮಾನವನ್ನು ಭರ್ತಿ ಮಾಡಲು ಸಂಸ್ಥೆಗಳು ದರವನ್ನು ಇಳಿಸಬಹುದು.

ನಿಮ್ಮ ಪಕ್ಕದ ಸೀಟಿನಲ್ಲಿ ಕುಳಿತ ಪ್ರಯಾಣಿಕರೊಂದಿಗೆ ಎಂದಾದರೂ ಟಿಕೆಟ್ ದರವನ್ನು ಹೋಲಿಸಿ ನೋಡಿದ್ದೀರಾ? ಒಂದೇ ವಿಮಾನದ, ಒಂದೇ ದಾರಿಯ ಪ್ರಯಾಣಕ್ಕೆ ಅವರು ನಿಮಗಿಂತ ಬಹಳ ಕಡಿಮೆ ಅಥವಾ ಹೆಚ್ಚು ಹಣ ಪಾವತಿಸಿರುವುದು ನಿಮಗಾಗ ಪ್ರಶ್ನೆ ಮೂಡಬಹುದು. ವಿಮಾನಯಾನ ಸಂಸ್ಥೆಗಳ ಈ ಬೆಲೆ ಹೇಗೆ ನಿರ್ಧಾರ ಮಾಡುತ್ತವೆ? ಒಬ್ಬರಿಗೆ ಕಡಿಮೆ ಇನ್ನೊಬ್ಬರಿಗೆ ಜಾಸ್ತಿ ಹೇಗೆ? ಇದು ಅನ್ಯಾಯ ಅಲ್ಲವೇ? ಅಂತೆಲ್ಲ ಅನಿಸಬಹುದು. ಇದರ ಹಿಂದಿರುವ ರಹಸ್ಯ ಗೊತ್ತೇ?

ಈ ಬೆಲೆಗಳು ಯಾದೃಚ್ಛಿಕವಲ್ಲ ಅಥವಾ ವೈಯಕ್ತಿಕವೂ ಅಲ್ಲ. ಪ್ರತಿಯೊಂದು ಟಿಕೆಟ್ ದರದ ಹಿಂದೆ ಡೇಟಾ, ಸಮಯ ಮತ್ತು ಡಿಮಾಂಡ್‌ ಇಂದ ನಡೆಯುವ ಅತ್ಯಾಧುನಿಕ ಸಿಸ್ಟಮ್‌ ಕೆಲಸ ಮಾಡುತ್ತದೆ.

ಡೈನಾಮಿಕ್‌ ಪ್ರೈಸಿಂಗ್:

ವಿಮಾನಯಾನ ಸಂಸ್ಥೆಗಳು 'ಡೈನಾಮಿಕ್ ಪ್ರೈಸಿಂಗ್' ಎಂಬ ತಂತ್ರವನ್ನು ಬಳಸುತ್ತವೆ. ಅಂದರೆ ವಿವಿಧ ಅಂಶಗಳ ಆಧಾರದ ಮೇಲೆ ಟಿಕೆಟ್ ಬೆಲೆಗಳು ನಿರಂತರವಾಗಿ ಬದಲಾಗುತ್ತಿರುತ್ತವೆ. ಸಾಮಾನ್ಯ ಎಲ್ಲ ವ್ಯಾಪಾರದಂತೆ ಇಲ್ಲಿ ಬೆಲೆಗಳು ಸ್ಥಿರವಾಗಿರುವುದಿಲ್ಲ. ಒಂದೇ ದಿನಕ್ಕೆ ಹಲವು ಬಾರಿ ಬದಲಾಗಬಹುದು. ಇದಕ್ಕೆ ಪ್ರಮುಖ ಕಾರಣವೆಂದರೆ 'ಬೇಡಿಕೆ'. ಒಂದು ನಿರ್ದಿಷ್ಟ ಮಾರ್ಗಕ್ಕಾಗಿ ಹೆಚ್ಚಿನ ಜನರು ಹುಡುಕಾಟ ನಡೆಸಿದಾಗ ಅಥವಾ ಬುಕ್ ಮಾಡಿದಾಗ ಬೆಲೆಗಳು ಏರುತ್ತವೆ. ಪ್ರಯಾಣದ ದಿನಾಂಕ ಹತ್ತಿರ ಬಂದರೂ ಸೀಟುಗಳು ಮಾರಾಟವಾಗದಿದ್ದರೆ, ವಿಮಾನವನ್ನು ಭರ್ತಿ ಮಾಡಲು ಸಂಸ್ಥೆಗಳು ದರವನ್ನು ಇಳಿಸಬಹುದು. ಹಾಗಂತ ಇದರರ್ಥ ಕೊನೆಯ ಕ್ಷಣದಲ್ಲಿ ಯಾವಾಗಲೂ ಕಡಿಮೆ ಬೆಲೆಗೆ ಸಿಗುತ್ತದೆ ಎಂದಲ್ಲ. ಕೆಲವೊಮ್ಮೆ ಜನಪ್ರಿಯ ಮಾರ್ಗಗಳಲ್ಲಿ ಪ್ರಯಾಣದ ದಿನ ಹತ್ತಿರ ಬಂದಂತೆ ಬೆಲೆಗಳು ಗಗನಕ್ಕೇರಬಹುದು.

ಮತ್ತೊಂದು ಪ್ರಮುಖ ಅಂಶವೆಂದರೆ 'ಫೇರ್ ಕ್ಲಾಸಸ್'. ಅಥವಾ 'ಬಕೆಟ್ಸ್' ಎಂದೂ ಕರೆಯುತ್ತಾರೆ. ಎಕಾನಮಿ ಕ್ಲಾಸ್‌ನಲ್ಲಿಯೇ ಹಲವು ಬೆಲೆಯ ಹಂತಗಳಿರುತ್ತವೆ. ಮೊದಲು ಬುಕ್ ಮಾಡುವವರಿಗೆ ಸಾಮಾನ್ಯವಾಗಿ ಕಡಿಮೆ 'ಬಕೆಟ್'ಗಳು ಲಭ್ಯವಿರುತ್ತವೆ. ಇವು ಭರ್ತಿಯಾದಂತೆ, ಹೆಚ್ಚಿನ ಬೆಲೆಯ ಸೀಟುಗಳು ಮಾತ್ರ ಉಳಿಯುತ್ತವೆ. ಇದೇ ಕಾರಣಕ್ಕೆ ಪಕ್ಕದ ಸೀಟಿನ ಇಬ್ಬರು ಪ್ರಯಾಣಿಕರು ಬೇರೆ ಬೇರೆ ದರ ಪಾವತಿಸಿರುತ್ತಾರೆ. ಸೀಟಿನ ಗುಣಮಟ್ಟದ ಮೇಲೆ ಈ ದರ ನಿರ್ಧಾರವಾಗಿದೆ ಎಂದು ಭಾವಿಸಿದರೆ ಅದು ತಪ್ಪು. ಆ ಸೀಟನ್ನು ಯಾವಾಗ ಮತ್ತು ಹೇಗೆ ಖರೀದಿಸಲಾಯಿತು ಎಂಬುದರ ಮೇಲೆ ಈ ಬೆಲೆ ಅವಲಂಬಿತವಾಗಿರುತ್ತದೆ.

Untitled design - 2026-05-01T202932.011

ಟೈಂ ಪ್ಲೇ ಮಿಥ್‌:

ಈ ಟಿಕೆಟ್‌ ಬುಕಿಂಗ್‌ ಆಟದಲ್ಲಿ ದೊಡ್ಡ ಆಟಗಾರ ಎಂದರೆ ಸಮಯ ಎಂದು ಅನೇಕರು ಅಂದುಕೊಂಡಿರುತ್ತಾರೆ. ಮಧ್ಯರಾತ್ರಿ ಅಥವಾ ವಾರದ ಒಂದು ನಿರ್ದಿಷ್ಟ ದಿನದಂದು ಟಿಕೆಟ್‌ಗಳು ಯಾವಾಗಲೂ ಕಡಿಮೆ ಬೆಲೆಗಳಿಗೆ ಸಿಗುತ್ತವೆ ಎಂಬ ನಂಬಿಕೆ ಅನೇಕರಿಲ್ಲಿದೆ. ಆದರೆ, ಇದಕ್ಕೆ ಯಾವುದೇ ಆಧಾರವಿಲ್ಲ. ಆದರೆ, ಒಂದಂತೂ ಹೌದು, ಬೆಲೆಗಳು ಪ್ರಯಾಣದ ಸೀಸನ್, ರಜೆಗಳು ಮತ್ತು ಸ್ಥಳೀಯ ಕಾರ್ಯಕ್ರಮಗಳ ಮೇಲೆ ಅವಲಂಬಿತವಾಗಿರುತ್ತವೆ. ಉದಾಹರಣೆಗೆ, ಹಬ್ಬಗಳು ಅಥವಾ ದೀರ್ಘ ವಾರಾಂತ್ಯಗಳಲ್ಲಿ ಹೆಚ್ಚಿನ ಬೇಡಿಕೆಯಿರುವುದರಿಂದ ಬೆಲೆಗಳು ಹೆಚ್ಚಿರುತ್ತವೆ. ಹಾಗೆಯೇ, ವಾರದ ದಿನಗಳಲ್ಲಿ ಉದ್ಯೋಗದ ನಿಮಿತ್ತ ಪ್ರಯಾಣಿಸುವ ಮಾರ್ಗಗಳಲ್ಲಿ ಬೆಲೆ ಏರಿಕೆ ಕಂಡುಬಂದರೆ, ಪ್ರವಾಸಿ ತಾಣಗಳ ಮಾರ್ಗಗಳಲ್ಲಿ ರಜಾ ಅವಧಿಯಲ್ಲಿ ಬೆಲೆಗಳು ಏರುಪೇರಾಗುತ್ತವೆ.

ವಿಮಾನಯಾನ ಸಂಸ್ಥೆಗಳು ಅಲ್ಗಾರಿದಮ್‌ಗಳು ಮತ್ತು ಪ್ರಿಡಿಕ್ಟಿವ್ ಅನಾಲಿಟಿಕ್ಸ್ ಮೇಲೆ ಹೆಚ್ಚು ಅವಲಂಬಿತವಾಗಿವೆ. ಈ ವ್ಯವಸ್ಥೆಗಳು ಹಳೆಯ ಡೇಟಾ, ಬುಕಿಂಗ್ ಪ್ರವೃತ್ತಿಗಳು, ಇನ್ನೊಂದು ವಿಮಾನಯಾನ ಸಂಸ್ಥೆಗಳ ಬೆಲೆಗಳು ಮತ್ತು ಬಳಕೆದಾರರ ಬ್ರೌಸಿಂಗ್ ಹಿಸ್ಟರಿ ವಿಶ್ಲೇಷಿಸಿ ಬೇಡಿಕೆಯನ್ನು ಊಹಿಸುತ್ತವೆ. ಪದೇ ಪದೆ ಸರ್ಚ್ ಮಾಡುವುದರಿಂದ ಬೆಲೆ ಹೆಚ್ಚಾಗುತ್ತದೆ ಎಂಬ ಮಾತು ಪೂರ್ತಿ ಸತ್ಯ ಎಂದು ನಂಬಲು ಆಗುವುದಿಲ್ಲ. ಆದರೆ, ಅನೇಕ ಬಳಕೆದಾರರಿಂದ ಏಕಕಾಲಕ್ಕೆ ಬರುವ ಹೆಚ್ಚಿನ ಬೇಡಿಕೆಯು ಬೆಲೆ ಬದಲಾವಣೆಯ ಮೇಲೆ ಪ್ರಭಾವ ಬೀರಬಹುದು. ವಿಮಾನಯಾನ ಸಂಸ್ಥೆಗಳಿಗೆ ಎರಡು ಮುಖ್ಯ ಗುರಿಗಳಿವೆ. ಪ್ರತಿಯೊಂದು ಸೀಟನ್ನು ಭರ್ತಿ ಮಾಡುವುದು ಒಂದು ಗುರಿಯಾದರೆ ಮತ್ತು ಹೆಚ್ಚು ಆದಾಯ ಗಳಿಸುವುದು.

ಇನ್ನೇನು ಕಾರಣಗಳು?

ಇವುಗಳ ಜತೆಗೆ ಇನ್ನೂ ಕೆಲವು ವಿಷಯಗಳು ಕೂಡ ಸೇರಿರುತ್ತವೆ. ಇಂಧನ ವೆಚ್ಚ, ವಿಮಾನ ನಿಲ್ದಾಣದ ಶುಲ್ಕಗಳು, ವಿದೇಶಿ ವಿನಿಮಯ ದರಗಳು ಮತ್ತು ಇತರ ಸಂಸ್ಥೆಗಳ ಪೈಪೋಟಿ ಕೂಡ ಇಲ್ಲಿ ಮುಖ್ಯವಾಗುತ್ತವೆ. ಉದಾಹರಣೆಗೆ, ಇಂಧನ ಬೆಲೆಯಲ್ಲಿನ ಹಠಾತ್ ಏರಿಕೆಯು ಎಲ್ಲಾ ಮಾರ್ಗಗಳ ಟಿಕೆಟ್ ದರ ಹೆಚ್ಚಳಕ್ಕೆ ಕಾರಣವಾಗುತ್ತವೆ. ಉದಾಹರಣೆಗೆ ಪ್ರಸ್ತುತ ಯುದ್ಧದ ಸಂದರ್ಭವನ್ನೇ ಗಮನಿಸಬಹುದು. ಇಂಧನ ಬೆಲೆ ಏರಿಕೆಯಿಂದಾಗಿ ವಿಮಾನದರದಲ್ಲಿ ಹೆಚ್ಚಳ ಕಾಣಬಹುದು. ಅಂತೆಯೇ, ಒಂದು ಮಾರ್ಗದಲ್ಲಿ ಹೊಸ ವಿಮಾನಯಾನ ಸಂಸ್ಥೆ ಪ್ರವೇಶಿಸಿದರೆ ಪೈಪೋಟಿಯಿಂದಾಗಿ ತಾತ್ಕಾಲಿಕವಾಗಿ ದರಗಳು ಕಡಿಮೆಯಾಗಬಹುದು.

ವಿಮಾನಯಾನ ಸಂಸ್ಥೆಗಳು ಬೆಲೆಯನ್ನು ಹೇಗೆ ನಿರ್ಧರಿಸುತ್ತವೆ ಎಂದು ಅರ್ಥಮಾಡಿಕೊಂಡರೆ ಪ್ರಯಾಣಿಕರಿಗೆ ಯಾವ ಸಂದರ್ಭದಲ್ಲಿ ಎಲ್ಲಿಗೆ ಪ್ರಯಾಣ ಮಾಡಬೇಕು ಎಂಬ ನಿರ್ಧಾರ ಕೈಗೊಳ್ಳಲು ಸಹಾಯವಾಗುತ್ತದೆ. ತುಂಬಾ ಬೇಗ ಅಥವಾ ತುಂಬಾ ತಡವಾಗಿ ಬುಕ್ ಮಾಡದೆ ಸರಿಯಾದ ಸಮಯದಲ್ಲಿ ಕಾಯ್ದಿರಿಸುವುದು, ದಿನಾಂಕಗಳಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳುವುದು ಮತ್ತು ಬೆಲೆಯನ್ನು ಸರಿಯಾಗಿ ಗಮನಿಸುವುದು ಉತ್ತಮ ಡೀಲ್‌ಗಳನ್ನು ಪಡೆಯಲು ಸಹಕಾರಿ. ಏನೇ ಆದರೂ ಇದೊಂದು ಡಿಮಾಂಡ್‌ ಮತ್ತು ಸಪ್ಲೈ ವ್ಯವಸ್ಥೆ. ಇದರ ಸುತ್ತಲೇ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ, ಮುಂದಿನ ಬಾರಿ ನೀವು ವಿಮಾನ ಟಿಕೆಟ್ ಬುಕ್ ಮಾಡುವಾಗ ಈ ಅಂಶಗಳನ್ನು ಮರೆಯಬೇಡಿ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!