ಸ್ಯಾನ್ ಡಿಯಾಗೋದಲ್ಲೊಂದು ಚುಂಬನವಾಸಿ
ಅನೇಕ ವರ್ಷಗಳ ಕಾಲ ಅನಾಮಿಕರಾಗಿದ್ದ ಇವರಿಬ್ಬರ ಬಗ್ಗೆ ಪ್ರಪಂಚಕ್ಕೆ ತಿಳಿದಿದ್ದು 2010 ರಲ್ಲಿ! ಜಾರ್ಜ್ ಮೆಂಡೋನ್ಸಾ ನ ಸ್ನೇಹಿತ ಲೈಫ್ ಮ್ಯಾಗಜಿನ್ ನ ಮುಖಪುಟದಲ್ಲಿ ಪ್ರಕಟವಾಗಿದ್ದ ಈ ಚಿತ್ರದ ಬಗ್ಗೆ ತನ್ನ ಸ್ನೇಹಿತನಿಗೆ ತಿಳಿಸಿದಾಗ ಆ ನಾವಿಕನ ಪರಿಚಯ ಜಗಜ್ಜಾಹೀರಾಯಿತು.
- ಡಾ. ಸುಮಾ ರಮೇಶ್, ಬೆಂಗಳೂರು
ಜುಲೈ 6ರಂದು ‘ವಿಶ್ವ ಚುಂಬನ ದಿನ’ವೆಂದು ಸಾಮಾಜಿಕ ಜಾಲತಾಣದಲ್ಲಿ ಹಲವರು ಲೇಖನ, ಕವಿತೆಗಳನ್ನು ಹಂಚಿಕೊಳ್ಳುತ್ತಿದ್ದದ್ದನ್ನು ನೋಡಿದ ತಕ್ಷಣ ನನಗೆ ನೆನಪಾಗಿದ್ದು, ಇತ್ತೀಚೆಗೆ ನಾನು ನೋಡಿದ ಅಮೇರಿಕಾದ ಸ್ಯಾನ್ ಡಿಯಾಗೋ ಪಟ್ಟಣದ “ಕಿಸ್ಸಿಂಗ್ ಸ್ಟ್ಯಾಚು.” ಅಮೆರಿಕದ ಒಕ್ಲಹೋಮದಲ್ಲಿ ನೆಲೆಸಿರುವ ಮಗನ ಮನೆಗೆ ಮೂರು ತಿಂಗಳ ಹಿಂದೆ ಮೊದಲ ಬಾರಿಗೆ ಹೋದಾಗ, ಅವನೊಡನೆ ಕ್ಯಾಲಿಫೋರ್ನಿಯ ಪ್ರವಾಸ ಮಾಡುವ ಅವಕಾಶ ದೊರಕಿತು. ಆ ಸಂದರ್ಭದಲ್ಲಿ ಸ್ಯಾನ್ ಡಿಯಾಗೋ ಪಟ್ಟಣದಲ್ಲಿರುವ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿದ್ದೆವು. ಅಲ್ಲಿನ ಬಂದರಿನಲ್ಲಿ ಮಿಡ್ ವೇ ಸಮರ ನೌಕೆಯನ್ನು ಸಾರ್ವಜನಿಕರ ಪ್ರದರ್ಶನಕ್ಕಾಗಿ ವ್ಯವಸ್ಥಿತಗೊಳಿಸಿರುವೆಡೆ ಗಮನ ಸೆಳೆದಿದ್ದು ಈ ‘ ಅನ್ ಕಂಡೀಷನಲ್ ಸರೆಂಡರ್’ ಪ್ರತಿಮೆ. ಇದು “ಕಿಸ್ಸಿಂಗ್ ಸ್ಟ್ಯಾಚು” ಹಾಗೂ ’ಶಾಂತಿಯ ಅಪ್ಪುಗೆ’ ಎಂದೂ ಪ್ರಖ್ಯಾತವಾಗಿದೆ.

ಇಪ್ಪತ್ತೈದು ಅಡಿ ಎತ್ತರದ ‘Unconditional Surrender’ ಎಂದು ಪ್ರಸಿದ್ಧವಾದ ಈ ಪ್ರತಿಮೆಯನ್ನು ‘ಸೆವಾರ್ಡ್ ಜಾನ್ಸನ್’ ಎಂಬ ಕಲಾವಿದ ನಿರ್ಮಿಸಿದ್ದು, ಈಗ ಸಂಗ್ರಹಾಲಯವಾಗಿರುವ ಯುಎಸ್ಎಸ್ ಮಿಡ್ ವೇ ಯುದ್ಧ ನೌಕೆಯ ಬಳಿ ಸ್ಥಾಪಿಸಲಾಗಿದೆ. ಕಡಲ ತಡಿಯಲ್ಲಿ ದೈತ್ಯಾಕಾರದ ಮಿಡ್ ವೇ ನೌಕೆಯ ಬಲಭಾಗದಲ್ಲಿ, ಸಾಗರ ಹಾಗು ಆಗಸದ ನೀಲಿಯ ಹಿನ್ನೆಲೆಯಲ್ಲಿ ಹಸಿರು ಹುಲ್ಲಿನ ಹಾಸಿನ ಮೇಲೆ ನಿಂತಿರುವ ಎತ್ತರದ ಈ ಪ್ರತಿಮೆ ನೋಡುಗರ ಕಣ್ಣನ್ನು ತಕ್ಷಣ ಸೆಳೆಯುವಂತಿದೆ. ನಾವಿಕನೊಬ್ಬ ನರ್ಸೊಬ್ಬಳ ತುಟಿಗೆ ತುಟಿ ಸೇರಿಸಿ ಮುತ್ತಿಕ್ಕುತ್ತಿರುವ ಈ ಪ್ರತಿಮೆ ಚರಿತ್ರೆಯ ಕ್ಷಣವೊಂದನ್ನು ಸೆರೆಹಿಡಿದಿರುವ ವಿಶೇಷವಾಗಿದೆ. ಮೂಲತಃ ಈ ಪ್ರತಿಮೆ ಮೊದಲು ಹವಾಯಿಯ ‘ಪರ್ಲ್ ಹಾರ್ಬರ್’ನಲ್ಲಿ ಎರಡನೇ ಮಹಾಯುದ್ಧದ ಮುಕ್ತಾಯದ ಸಂಕೇತವಾಗಿ ನಿರ್ಮಿಸಲಾಗಿದೆ. ಮಿಕ್ಕಂತೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋ, ಫ್ಲೋರಿಡಾದ ಸರಸೋಟ, ನ್ಯೂಯಾರ್ಕ್ ಹಾಗೂ ಫ್ರಾನ್ಸಿನ ನಾರ್ಮ್ಯಾಂಡಿಯಲ್ಲಿ ಇದರ ಪ್ರತಿಕೃತಿಗಳು ಸ್ಥಾಪಿತವಾಗಿವೆ.
ಉತ್ಕಟವಾಗಿ ಪ್ರೇಮಿಸುತ್ತಿರುವವರ ಭಾವುಕತೆಯ ಮಹಾಪೂರದ ಕ್ಷಣದಲ್ಲಿ ಘಟಿಸಿದ ಕ್ರಿಯೆಯಿದು ಎಂದು ಭಾವಿಸಿದರೆ ನಿಮಗೆ ಇಲ್ಲಿ ಆಶ್ಚರ್ಯ ಕಾದಿದೆ. ಈ ಚುಂಬನದ ಪ್ರಸಂಗ ಜರುಗಿದ್ದು ಇಬ್ಬರು ಅಪರಿಚಿತರ ನಡುವೆ! 1945ನೇ ಇಸವಿಯ ಆಗಸ್ಟ್ 14ರಂದು ನ್ಯೂಯಾರ್ಕ್ ನ ಟೈಮ್ಸ್ ಸ್ಕ್ವೇರ್ ನಲ್ಲಿ ಎರಡನೇ ಮಹಾ ಯುದ್ಧದ ಮುಕ್ತಾಯದ VJ Day (Victory over Japan)ನ ಸಂಭ್ರಮಾಚರಣೆಯ ಸಮಯದಲ್ಲಿ ಜಾರ್ಜ್ ಮೆಂಡೋನ್ಸಾ ಎಂಬ ನಾವಿಕ ಸಂತೋಷದ ಭರದಲ್ಲಿ ಪಕ್ಕದಲ್ಲಿ ನಿಂತಿದ್ದ ಗ್ರೇಟಾ ಜಿಮ್ಮರ್ ಫ್ರೀಡ್ಮನ್ ಎಂಬ ಅಪರಿಚಿತ ನರ್ಸ್ ಒಬ್ಬಳನ್ನು ಬರಸೆಳೆದು ಮುತ್ತಿಕ್ಕಿದ್ದ. ಆ ಕ್ಷಣವನ್ನು ಆಲ್ಫ್ರೆಡ್ ಐಸೆನ್‌ಸ್ಟೇಡ್ಟ್ ಎಂಬ ಛಾಯಾಗ್ರಾಹಕ ಸೆರೆಹಿಡಿದ. ನಂತರ ಈ ಚಿತ್ರವನ್ನು ‘ಲೈಫ್ ಮ್ಯಾಗಜಿನ್’ ನಲ್ಲಿ ಪ್ರಕಟಿಸಿದ ನಂತರ ಅದು ಅಮೆರಿಕದ ಅತ್ಯಂತ ಮಹತ್ವದ ಸಾಂಕೇತಿಕ ಚಿತ್ರವಾಗಿ ಪ್ರಸಿದ್ಧಿ ಪಡೆಯಿತು.
ಜಪಾನಿನ ಶರಣಾಗತಿಯೊಂದಿಗೆ ದೀರ್ಘ ಹಾಗು ಭೀಕರವಾದ ಮಹಾಯುದ್ಧವು ಮುಕ್ತಾಯಗೊಂಡ ಸಂತೋಷದ ಭರದಲ್ಲಿ ಘಟಿಸಿದ ಈ ಪ್ರಸಂಗ, ಅಮೆರಿಕದ ಜನರಿಗೆ ಯುದ್ಧದಿಂದ ಸಿಕ್ಕ ಬಿಡುಗಡೆಯ ನೆಮ್ಮದಿ ಹಾಗು ಸಂತಸದ ಸಂಕೇತವಾಗಿದೆ. ಆ ಪ್ರಸಿದ್ಧ ಛಾಯಾಚಿತ್ರವನ್ನಾಧರಿಸಿ ಪರ್ಲ್ ಹಾರ್ಬರ್ ನಲ್ಲಿ 25 ಅಡಿ ಎತ್ತರದ ಪ್ರತಿಮೆಯ ಸ್ಥಾಪನೆಯಾಯಿತು. ಗೆಲುವು, ಶಾಂತಿ, ಭರವಸೆ ಹಾಗು ಒಗ್ಗಟ್ಟಿನ ಸಂಕೇತವಾಗಿ ಈ ‘ಅನ್ ಕಂಡೀಷನಲ್ ಸರೆಂಡರ್’ ಪ್ರತಿಮೆ ಅಮೆರಿಕದ ಜನರ ಸಂತೋಷ ಹಾಗು ಚರಿತ್ರೆಯ ಮಹತ್ವವನ್ನು ಇಂದಿಗೂ ಎತ್ತಿಹಿಡಿದಿದೆ. ಆ ಇಬ್ಬರು ಅಪರಿಚಿತರಾದರೂ, ಆ ಕ್ಷಣದಲ್ಲಿ ಇಡೀ ಅಮೆರಿಕದ ಜನರ ಭಾವನೆಗಳ ಪ್ರತಿಬಿಂಬದಂತೆ ತಮ್ಮ ಭಾವನೆಗಳೊಡನೆ ತತ್ ಕ್ಷಣದ ಪ್ರತಿಕ್ರಿಯೆಯಾಗಿ ವ್ಯಕ್ತಪಡಿಸಿದ್ದಾರೆ.
ಅನೇಕ ವರ್ಷಗಳ ಕಾಲ ಅನಾಮಿಕರಾಗಿದ್ದ ಇವರಿಬ್ಬರ ಬಗ್ಗೆ ಪ್ರಪಂಚಕ್ಕೆ ತಿಳಿದಿದ್ದು 2010 ರಲ್ಲಿ! ಜಾರ್ಜ್ ಮೆಂಡೋನ್ಸಾ ನ ಸ್ನೇಹಿತ ಲೈಫ್ ಮ್ಯಾಗಜಿನ್ ನ ಮುಖಪುಟದಲ್ಲಿ ಪ್ರಕಟವಾಗಿದ್ದ ಈ ಚಿತ್ರದ ಬಗ್ಗೆ ತನ್ನ ಸ್ನೇಹಿತನಿಗೆ ತಿಳಿಸಿದಾಗ ಆ ನಾವಿಕನ ಪರಿಚಯ ಜಗಜ್ಜಾಹೀರಾಯಿತು. ಸಾವಿರಾರು ಜನರು ಅಂದು ನ್ಯೂಯಾರ್ಕ್ ನ ಟೈಮ್ ಸ್ಕ್ವೇರ್ ನಲ್ಲಿ ಯುದ್ಧದ ಮುಕ್ತಾಯವನ್ನು ಸಂಭ್ರಮಿಸುವಾಗ ಕುಡಿದ ಮತ್ತಿನಲ್ಲಿ ಜಾರ್ಜ್ ಮೆಂಡೋನ್ಸಾ ಸಂತೋಷ, ಉತ್ಸಾಹಗಳ ಉತ್ಕರ್ಷದ ಘಳಿಗೆಯಲ್ಲಿ ಪಕ್ಕದಲ್ಲಿ ನಿಂತಿದ್ದ ನರ್ಸ್ ಒಬ್ಬಳನ್ನು ಬರಸೆಳೆದು ಅಪ್ಪಿ ಚುಂಬಿಸಿದ್ದನ್ನು ಅಸ್ಪಷ್ಟವಾಗಿ ನೆನಪಿಸಿಕೊಂಡನು. ಛಾಯಾಚಿತ್ರದಲ್ಲಿ ತನ್ನ ಕೈ ಮೇಲಿದ್ದ ಹಚ್ಚೆಯನ್ನು ಗುರುತಿಸಿ ಅದು ತಾನೇ ಎಂದು ಖಚಿತಪಡಿಸಿದನು.

ಯುದ್ಧದ ಸಮಯದಲ್ಲಿ ತಾನಿದ್ದ ಸಮರ ನೌಕೆಯಲ್ಲಿ ಗಾಯಾಳುಗಳಿಗೆ ಶುಶ್ರೂಷಕಿಯರು ಬಹಳ ಕಾಳಜಿವಹಿಸಿ ಮಾಡುತ್ತಿದ್ದ ಸೇವೆಯ ನೆನಪಾಗಿ ತಾನು ಪಕ್ಕದಲ್ಲಿದ್ದ ನರ್ಸ್ ಗೆ ಉತ್ಸಾಹದ ಭರದಲ್ಲಿ ಮುತ್ತಿಕ್ಕಿದೆ ಎಂದು ತನ್ನ ಕ್ರಿಯೆಯನ್ನು ಸಮರ್ಥಿಸಿಕೊಂಡಿರುವನು. ಈ ವಿಗ್ರಹವನ್ನು ನೋಡಿದ ತಕ್ಷಣ ನನಗೆ ಈ ಘಟನೆಯ ಸಂದರ್ಭದಲ್ಲಿ ನರ್ಸ್ ಗ್ರೇಟಾ ಜಿಮ್ಮರ್ ಫ್ರೀಡ್ಮನ್ ಳ ಪ್ರತಿಕ್ರಿಯೆ ಏನಿದ್ದಿರಬಹುದು ಎಂಬ ಆಲೋಚನೆ ಮೂಡಿತು. ವಿಭಿನ್ನ ಸಂಸ್ಕೃತಿಯ ನೆಲದಲ್ಲಿ ಈ ಘಟನೆಗೆ ಯಾವ ಬಗೆಯ ಪ್ರತಿಕ್ರಿಯೆಗಳು ಬಂದಿರಬಹುದೆಂದು ಕಲ್ಪಿಸಿಕೊಳ್ಳಲು ಆರಂಭಿಸಿದೆ. ಕುತೂಹಲದಿಂದ ಗ್ರೇಟಾ ಜಿಮ್ಮರ್ ಫ್ರೀಡ್ಮನ್ ಳು ಇದರ ಬಗ್ಗೆ ಉಲ್ಲೇಖಿಸಿರುವ ಅಭಿಪ್ರಾಯವನ್ನು ಹುಡುಕಿ ನೋಡಿದಾಗ ‘ತನ್ನ ಒಪ್ಪಿಗೆ ಇಲ್ಲದೆ ನಡೆದ ಪ್ರಸಂಗವಿದು ‘ ಎಂದು ನೆನಪಿಸಿಕೊಳ್ಳುತ್ತಾ, ‘ಇದರಲ್ಲಿ ಘಟಿಸಿದ ಮುತ್ತಿನ ಪ್ರಸಂಗಕ್ಕೆ ಹೆಚ್ಚು ಗಮನ ಕೊಡಬೇಕಿಲ್ಲ. ಆ ನಾವಿಕ ಬಲಶಾಲಿಯಾಗಿದ್ದ. ಅಂದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾಗ ಇದ್ದಕ್ಕಿದ್ದಂತೆ ನನ್ನನ್ನು ಬರಸೆಳೆದು ಅಪ್ಪಿದ. ಆ ಕ್ಷಣ ಪ್ರೀತಿ, ಪ್ರೇಮಕ್ಕೆಡೆಯಿರದ ಕೇವಲ ಅತೀವ ಸಂತೋಷದ ಪ್ರತಿಕ್ರಿಯೆಯಾಗಿತ್ತದು. ಸದ್ಯ ಯುದ್ಧ ನಿಂತಿತಲ್ಲ ಎಂಬ ಬಿಡುಗಡೆಯ ಭಾವ ಹಾಗೂ ತಾನು ಮತ್ತೆ ಯುದ್ಧಕ್ಕೆ ತೆರಳಬೇಕಿಲ್ಲವೆಂಬ ಖುಷಿಯನ್ನು ಅವನು ವ್ಯಕ್ತಪಡಿಸಿದ ರೀತಿಯಾಗಿತ್ತು. ಅದಕ್ಕಿಂತ ಹೆಚ್ಚು ಈ ಪ್ರಸಂಗಕ್ಕೆ ಮಹತ್ವ ಕೊಡಬೇಕಿಲ್ಲ’ ಎಂದು ಹೇಳಿರುವುದು ಕಂಡಿತು. ಆದರೂ ಐತಿಹಾಸಿಕ ಮಹತ್ವವನ್ನು ಗಳಿಸಿದ ಈ ಚಿತ್ರ ಹಾಗೂ ಪ್ರತಿಮೆ, ಪರಸ್ಪರ ಒಪ್ಪಿಗೆ ಇರದ ಮುತ್ತಿನ ಪ್ರಸಂಗದಿಂದ ನಂತರದಲ್ಲಿ ಅನೇಕ ವಿವಾದ ಹಾಗು ಕಟು ವಿಮರ್ಶೆಗಳನ್ನು ಎದುರಿಸಬೇಕಾಯಿತು. ಈ ಪ್ರತಿಮೆ ಮುಂದಿನ ಜನಾಂಗಕ್ಕೆ ಯಾವ ಸಂದೇಶವನ್ನು ಕೊಡಬಹುದೆಂಬ ವಿಷಯದ ಬಗ್ಗೆ ಅನೇಕ ಸಂವಾದಗಳೂ ಸಹ ಇತ್ತೀಚಿನ ದಿನಗಳಲ್ಲಿ ನಡೆಯಿತು.
ಇಂದಿಗೂ ‘ಅನ್ ಕಂಡೀಷನಲ್ ಸರೆಂಡರ್’ ಪ್ರತಿಮೆ ಕೇವಲ ಕಲಾಕೃತಿ ಮಾತ್ರವಲ್ಲದೆ ಶಾಂತಿ, ನೆಮ್ಮದಿ, ಪ್ರೀತಿ ಹಾಗು ಭರವಸೆಗಳ ಪ್ರತೀಕವಾಗಿ ಅಮೆರಿಕದ ಚರಿತ್ರೆಯ ಬಹು ಮುಖ್ಯ ಘಟ್ಟದ ಸಂಕೇತವಾಗಿದೆ. ಪ್ರವಾಸಿಗರನ್ನು ಆಕರ್ಷಿಸಿ ಛಾಯಾಚಿತ್ರಕ್ಕೆ ಹೇಳಿ ಮಾಡಿಸಿದಂತಿರುವ ಉತ್ತಮ ಸ್ಥಳವಾಗಿದೆ.