ಪ್ರವಾಸವೆಂದೇ ಗೊತ್ತಿಲ್ಲದೆ ಮಾಡುವ ಪ್ರವಾಸಗಳು!
ಆಗಿನ ಯುರೋಪಿಯನ್ನರ ಪ್ರವಾಸಗಳು 3 ʼಜಿʼಗಳ ಮೇಲೆ ನಡೆಯುತ್ತಿತ್ತು. ಅದು ಗೋಲ್ಡ್, ಗ್ಲೋರಿ, ಗಾಡ್. ಎಲ್ಲೆಡೆಯೂ ಕ್ರಿಸ್ಚಿಯನ್ ಧರ್ಮವನ್ನು ಸಾರಲು. ಸಿಕ್ಕಾಪಟ್ಟೆ ದುಡ್ಡನ್ನು ಮಾಡಿಕೊಳ್ಳಲು, ಹಾಗೇ ಚರಿತ್ರೆಯಲ್ಲಿ ತಮ್ಮ ಹೆಸರನ್ನು ಉಳಿಸಿಕೊಳ್ಳಲು ಅವರು ಮಾಡಿದ ಸಾಹಸಗಳೇನೂ ಕಮ್ಮಿ ಇರಲಿಲ್ಲ.
- ವಿನಯ್ ಖಾನ್
ಮನುಷ್ಯ ಸದಾ ಪ್ರವಾಸಿ. ನಾವೆಲ್ಲ ಫಾರಿನ್‌ಗೆ ಹೋಗೋದನ್ನೇ ಗ್ರೇಟ್ ಎನ್ನುವುದಾದರೆ, ಪ್ರತಿದಿನ ಮನೆಯಿಂದ ಆಫೀಸ್ ಗೆ ಹೋಗುವುದೂ ಒಂದು ಲೆಕ್ಕಕ್ಕೆ ಗ್ರೇಟೇ. ಕೆಲವೊಂದಿಷ್ಟು ಜನ ವಿದೇಶದಲ್ಲೋ, ಬೇರೆ ರಾಜ್ಯದಲ್ಲೋ ಖ್ಯಾತ ಪ್ರವಾಸಿ ಸ್ಥಳಕ್ಕೆ ಹೋಗಿದ್ದನ್ನು ಪ್ರವಾಸ ಎಂದರೆ, ಕೆಲವೊಮ್ಮೆ ಮನೆಯಿಂದ 20 ಕಿಮೀ ದೂರವಿರುವ ಆಫೀಸ್‌ಗೆ ಹೋಗುವುದು, ಯಾವುದೋ ಸ್ನೇಹಿತನ ಮನೆಗೆ ಹೋಗುವುದು, ಬೀಗರಮನೆಗೆ-ತವರುಮನೆಗೆ ಹೋಗುವುದೂ ಪ್ರವಾಸವೇ. ಅಲ್ವಾ? ಅಷ್ಟೇ ಏಕೆ ಎಷ್ಟೋ ಊರಲ್ಲೇ ಇರೋ ದೇವಸ್ಥಾನಕ್ಕೆ ಹೋಗುವುದೂ ಪ್ರವಾಸವೇ. ದೇವಸ್ಥಾನ ಎಂದರೆ, ಯಾವುದೋ ಘಟ್ಟದಲ್ಲಿರುವುದಷ್ಟೇ ಅಲ್ಲ, ಪಕ್ಕದೂರಿಂದೋ, ಹಳ್ಳಿಯದ್ದೋ ಗುಡಿಗೆ ಹೋದರೆ ಅದೂ ಪ್ರವಾಸವೇ! ಎಷ್ಟು ಪ್ರವಾಸ ಮಾಡಿದರೇನು, ಮನೆ ಪಕ್ಕದ ಹನುಮಂತನಗುಡಿಯ ಇತಿಹಾಸದ ಬಗ್ಗೆ ಒಂದು ಸಣ್ಣ ಮಾಹಿತಿ ಇಲ್ಲದಿದ್ದರೆ?
ಸರಿಯಾಗಿ ಹೇಳಬೇಕೆಂದರೆ, ಪ್ರವಾಸದ ಡೆಫಿನಿಷನ್ ಒಬ್ಬರಿಂದ ಒಬ್ಬರಿಗೆ ಬದಲಾಗುತ್ತಾ ಹೋಗುತ್ತೆ. ಕೆಲವರಿಗೆ ಪ್ರವಾಸದ ಸ್ಥಳದಲ್ಲಿ ಶಾಂತಿಯಿಂದ ಆರಾಮವಾಗಿ ಕಾಲ ಕಳೆಯಬೇಕೆನಿಸಿದರೆ, ಇನ್ನೂ ಕೆಲವರಿಗೆ ಜನ ಜಂಗುಳಿಯಿಂದ ತುಂಬಿದ ಬೀಚ್ ಅಥವಾ ಕ್ಯಾಸಿನೋಗಳಿಗೆ ಹೋಗಿ ಮಜ ಮಾಡುವುದು ಪ್ರವಾಸ ಅನಿಸುತ್ತದೆ. ಕೆಲವರಿಗೆ ಪ್ರವಾಸದಲ್ಲಿ ರೆಸ್ಟ್ ಬೇಕಿದ್ದರೆ, ಇನ್ನೂ ಕೆಲವರಿಗೆ ಅಡ್ವೆಂಚರ್ ಬೇಕಿರುತ್ತದೆ. ಕೆಲವರಿಗೆ ʼಫೇಮಸ್ʼ ಸ್ಥಳಕ್ಕೆ ಹೋಗಿ ಸ್ಟೋರಿ, ಸ್ಟೇಟಸ್ ಅಪ್‌ಡೇಟ್ ಮಾಡುವುದೇ ಪ್ರವಾಸವಾದರೆ, ಯಾರಿಗೂ ತಿಳಿಯದಂತೆ ಸುಳ್ಳು ಹೇಳಿ ಊರಿಂದ ಊರಿಗೆ ಹೋಗುವುದೂ ಕೆಲವರ ಪಾಲಿನ ಪ್ರವಾಸವೇ.

ಇನ್‌ಫ್ಯಾಕ್ಟ್, ವಿಮಾನದಲ್ಲೋ, ಕಾರಿನಲ್ಲೋ ಆರಾಮವಾಗಿ ಹೋಗುವುದಷ್ಟೇ ಪ್ರವಾಸವಾ? ಖಂಡಿತ ಅಲ್ಲ. ಇನ್ನು ಬೈಕ್ ರೈಡ್ ಅಂತ, ಸೈಕ್ಲಿಂಗ್ ಅಂತ ಪ್ರವಾಸ ಮಾಡಿದವರ ಸಂಖ್ಯೆ ಕಮ್ಮಿಯೇನಿಲ್ಲ. ಆದರೆ, ಇತಿಹಾಸಕ್ಕೆ ಹೋಗಿ ಒಂದು ಸಣ್ಣ ಆಲೋಚನೆ ಮಾಡಿ ನೋಡಿ. ಆಗ ಹೇಗೆಲ್ಲ ಪ್ರವಾಸ ಮಾಡುತ್ತಿದ್ದರು? ಹೇಗೆ ರಾಮ ಅಯೋಧ್ಯೆಯಿಂದ ಲಂಕೆಯವರೆಗೆ ಹೋದ? ಹೇಗೆ ಬುದ್ಧ ಹಲವಾರು ರಾಜ್ಯಗಳ ಪ್ರವಾಸ ಮಾಡಿದ. ಹೇಗೆ ಅಲೆಕ್ಸಾಂಡರ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುತ್ತಾ ಭಾರತದೆಡೆಗೆ ಬಂದ? ಹೇಗೆ ಹ್ಯುಯೆನ್ ತ್ಸಾಂಗ್ ಚೀನಾದಿಂದ ಭಾರತಕ್ಕೆ ಬಂದು 19 ವರ್ಷಗಳ ಕಾಲ 25 ಸಾವಿರಕ್ಕೂ ಅಧಿಕ ಕಿಲೋ ಮೀಟರ್ ನಡೆದ? ಹೇಗೆ ವಾಸ್ಕೋ ಡಗಾಮ ಭಾರತಕ್ಕೆ ದಾರಿಯನ್ನು ಕಂಡುಹಿಡಿದ? ಹೇಗೆ ಕ್ರಿಸ್ಟೋಫರ್ ಕೊಲಂಬಸ್ ಅಮೆರಿಕದ ಸಮುದ್ರಮಾರ್ಗ ಕಂಡು ಹಿಡಿದ? ಹೇಗೆ ಸಾವಿರಾರು ವರ್ಷಗಳ ಹಿಂದೆ ಏಷಿಯನ್ನರು ಅಮೆರಿಕಕ್ಕೆ ವಲಸೆ ಹೋಗಿ ಇಂಡಿಜಿನಸ್ ಪೀಪಲ್ ಅಥವಾ ಇಂಡಿಯನ್ಸ್ ಎಂದು ಹೆಸರು ಪಡೆದುಕೊಂಡರು? ಹೇಗೆ ಆರ್ಯನ್ನರು ಭಾರತಕ್ಕೆ ಬಂದರು? ಹೇಗೆ ಆಫ್ರಿಕದಲ್ಲಿ ಹುಟ್ಟಿದ ಮೊದಲ ಹೊಮೋ ಸೇಪಿಯನ್ 3 ಲಕ್ಷ ವರ್ಷಗಳ ಹಿಂದೆ ಹುಟ್ಟಿ ವಿಶ್ವಾದ್ಯಂತ ವಲಸೆ ಹೋದರು? ಉಫ್!
ಏನೆಲ್ಲ ದೃಷ್ಟಿಕೋನಗಳಲ್ಲಿ ಪ್ರವಾಸವನ್ನು ನೋಡಬಹುದು, ಅಲ್ವಾ? ಒಬ್ಬೊಬ್ಬರದು ಒಂದೊಂಥರ ಪ್ರವಾಸ. ಈಗಲೂ ವ್ಯಾಪಾರ ಕುದುರಿಸಲು ಪ್ರವಾಸ ಮಾಡುವವರ ಸಂಖ್ಯೆ ಕಡಿಮೆಯಿದೆಯಾ? ಊರಲ್ಲಿ ಹುಷಾರಿಲ್ಲದ ಮನೆಯವರನ್ನು ನೋಡಲು ಬರುವ ಮಕ್ಕಳ ಪ್ರಯಾಣದಲ್ಲಿ ಸಂಖ್ಯೆ ಕಡಿಮೆಯಿದೆಯಾ? ಊರ ಹಬ್ಬಕ್ಕೋ, ಜಾತ್ರೆಗೋ, ಆಧಾರ್ ಕಾರ್ಡ್ ವೆರಿಫಿಕೇಷನ್ ಅಂತಾನೋ, ಪಾಸ್‌ಪೋರ್ಟ್ ವೆರಿಫಿಕೇಷನ್ ಅಂತಾನೋ ಪ್ರಯಾಣ ಬೆಳೆಸುವವರ ಸಂಖ್ಯೆ ಎಂದೂ ಕಡಿಮೆಯಿಲ್ಲ. ಯಾವುದಾದರೂ ಹಬ್ಬಕ್ಕೂ ಮೊದಲು ಮೆಜೆಸ್ಟಿಕ್‌ನಲ್ಲಿ ಜನ ಜಾತ್ರೆ ಸೇರಿರುತ್ತಲ್ಲ, ಅವರೆಲ್ಲ ಪ್ರಯಾಣಿಕರು ಅಲ್ಲವೆ? ಯಾರಾದರೂ ಪ್ರಾಣಬಿಟ್ಟ ಮೇಲೆ ʼಜೀವನ ಪ್ರಯಾಣ ಮುಗಿಸಿದʼ, ʼಇಹಲೋಕ ಪ್ರಯಾಣ ಮುಗಿಸಿದʼ ಅಂತ ಬರೆಯುವುದನ್ನೂ ನೋಡಿದ್ದೇವೆ. ಈ ಸಂದರ್ಭದಲ್ಲಿ ಒಂದಷ್ಟು ವಿಭಿನ್ನ ಪ್ರವಾಸಗಳ ಬಗ್ಗೆ ಹೇಳಬೇಕೆನಿಸುತ್ತಿದೆ.
ಅಶೋಕನ ಪ್ರವಾಸದಿಂದ ಪ್ರಾರಂಭಿಸೋಣ. ಭಾರತದ ಇತಿಹಾಸವನ್ನು ತೆರೆದರೆ, ಮೌರ್ಯ ಸಾಮ್ರಾಜ್ಯದ ಅಶೋಕನ ಬಗ್ಗೆ ಹೇಳದೆ ಮುಗಿಯುವುದೇ ಇಲ್ಲ. ಹಲವಾರು ಇತಿಹಾಸಕಾರರ ಪ್ರಕಾರ ಅಶೋಕ ರಾಜನಾಗುವ ಮುನ್ನ ಇಡೀ ದೇಶ ಪ್ರಯಾಣ ಮಾಡಿದ್ದನಂತೆ. ಎಲ್ಲೆಲ್ಲಿ ತಾಮ್ರ, ಬಂಗಾರ ಹೀಗೆ ಒಂದು ರಾಜ್ಯ ನಡೆಸಲು ಬೇಕಾದ ಲೋಹ ಹಾಗೂ ಇನ್ನಿತರ ಅದಿರುಗಳ ಬಗ್ಗೆ ಮೊದಲೇ ತಿಳಿದು, ತಾನು ರಾಜ್ಯಾಳ್ವಿಕೆ ಮಾಡುವಾಗ ಅದನ್ನು ಬಳಸಿದ್ದ. ಅದರ ಜತೆಗೆ ಕಳಿಂಗ ಯುದ್ಧದ ನಂತರ ಬೌದ್ಧ ಧರ್ಮವನ್ನು ಸ್ವೀಕರಿಸಿ ಅದರ ಪ್ರಚಾರಕ್ಕಾಗಿ ಹಲವಾರು ಪ್ರಯಾಣ ಮಾಡಿದ. ಮುಂದೆ ತನ್ನ ಮಕ್ಕಳನ್ನೂ ಬೌದ್ಧ ಪ್ರಚಾರಕ್ಕಾಗಿ ದೇಶ ವಿದೇಶಕ್ಕೆ ಕಳುಹಿಸಿದ ಎಂದೂ ಹೇಳುತ್ತಾರೆ. ಅವನು ಪ್ರಯಾಣ ಮಾಡದೇ ಇದ್ದಿದ್ದರೆ, ಅವನು ಅಷ್ಟು ದೊಡ್ಡ ಸಾಮ್ರಾಜ್ಯ ಕಟ್ಟುತ್ತಿದ್ದನೇ?
ಇನ್ನು ಯುರೋಪಿಯನ್ನರ ಪ್ರವಾಸಗಳು. ನಮ್ಮ ಈ ಇತ್ತೀಚಿನ ಎಲ್ಲ ಜನಜೀವನ ಇದೇ ಯೂರೋಪಿಯನ್ನರು, ಬ್ರಿಟಿಷರು, ಡಚ್ಚರು, ಫೋರ್ಚುಗೀಸರು ಮಾಡಿದ ಪ್ರವಾಸದ ಮೇಲೆ ನಿಂತಿದೆ. ಆ ಒಂದು ಕಾಲದಲ್ಲಿ ಹಡಗಿನ ಕ್ಯಾಪ್ಟನ್‌ಗೆ ಇನ್ನಿಲ್ಲದ ಮರ್ಯಾದೆ, ಹಡಗಿಗೆ ಹತ್ತಿ ಬೇರೆ ದೇಶಕ್ಕೆ ಹೋಗಿ ಜೀವನವನ್ನು ಕಟ್ಟಿಕೊಳ್ಳುವುದಕ್ಕೆ ಆಗಿನ ಕಾಲದ ಯುವಕರು ಪರಿತಪಿಸುತ್ತಿದ್ದರು. ಬ್ರಿಟನ್‌ನಿಂದ ಭಾರತಕ್ಕೆ ಬರುವ ಹಡಗಿಗೆ ಎಷ್ಟೊಂದು ಯುವಕರು ಓಡಿ ಬರುತ್ತಿದ್ದರು? ಟೈಟಾನಿಕ್ ಸಿನಿಮಾದಲ್ಲಿ ತಮ್ಮ ದೇಶವನ್ನು ಬಿಟ್ಟು ಬೇರೆ ದೇಶದಲ್ಲಿ ಜೀವನ ಮಾಡಲು, ಓಡಿಹೋಗುತ್ತಿದ್ದ ಯುವಕರನ್ನು ನೋಡಿರುತ್ತೇವೆ. ಅದೇ ರೀತಿ ತೇಜೋತುಂಗಭದ್ರಾ ಕಾದಂಬರಿಯಲ್ಲೂ ಅಷ್ಟೆ; ಪೋರ್ಚುಗೀಸರ ಹಡಗಿನಲ್ಲಿ ಭಾರತಕ್ಕೆ ಓಡಿ ಬರುವ ಜನರೆಷ್ಟೋ.
ಆಗಿನ ಯುರೋಪಿಯನ್ನರ ಪ್ರವಾಸಗಳು 3 ʼಜಿʼಗಳ ಮೇಲೆ ನಡೆಯುತ್ತಿತ್ತು. ಅದು ಗೋಲ್ಡ್, ಗ್ಲೋರಿ, ಗಾಡ್. ಎಲ್ಲೆಡೆಯೂ ಕ್ರಿಸ್ಚಿಯನ್ ಧರ್ಮವನ್ನು ಸಾರಲು. ಸಿಕ್ಕಾಪಟ್ಟೆ ದುಡ್ಡನ್ನು ಮಾಡಿಕೊಳ್ಳಲು, ಹಾಗೇ ಚರಿತ್ರೆಯಲ್ಲಿ ತಮ್ಮ ಹೆಸರನ್ನು ಉಳಿಸಿಕೊಳ್ಳಲು ಅವರು ಮಾಡಿದ ಸಾಹಸಗಳೇನೂ ಕಮ್ಮಿ ಇರಲಿಲ್ಲ. ಇಂಥ ಯುರೋಪಿಯನ್ನರ ಪ್ರವಾಸಗಳಿಂದ ಆದಂಥ ಹಲವಾರು ಅನುಕೂಲ ಮತ್ತು ಅನಾನುಕೂಲಗಳಲ್ಲಿ ಮೊದಲನೇ ಸ್ಥಾನ ಗ್ಲೋಬಲೈಸೇಷನ್! ಅಂದ್ರೆ, ತಮ್ಮ ವಸ್ತುಗಳನ್ನು ಬೇರೆ ದೇಶದವರಿಗೆ ಮಾರಿ, ಅಲ್ಲಿನ ಸ್ಥಳೀಯ ವಸ್ತುಗಳನ್ನು ನಾಶ ಮಾಡಿದ್ದು. ಇದೇ ಭಾರತದಲ್ಲಿ ತಮ್ಮ ಪಾಲಿಸ್ಟರ್ ಅಥವಾ ಬೇರೆ ಯಾವುದೋ ಬಟ್ಟೆಗಳನ್ನು ತಂದು, ಅವುಗಳು ಇಲ್ಲಿ ಸೇಲ್ ಆಗದೇ ಇರುವಂಥ ಸಮಯದಲ್ಲಿ ಭಾರತದ ಗುಡಿ ಕೈಗಾರಿಕೆಯ ಮೇಲೆ ಕಣ್ಣು ಹಾಕಿ ಅದನ್ನೆಲ್ಲ ಧ್ವಂಸ ಮಾಡಲು ಶುರು ಮಾಡಿದರು. ಇದೇ ಬಂಗಾಳ ಪ್ರದೇಶದಲ್ಲಿ ಮಸ್ಲಿನ್ ಬಟ್ಟೆಯ ನೇಕಾರರ ಕಥಗಳನ್ನು ಕತ್ತರಿಸಿದರು. ಅದರ ಮೇಲೆ ಭಾರೀ ಪ್ರಮಾಣದ ಸುಂಕವನ್ನು ವಿಧಿಸಿದರು. ನೇಕಾರರಿಗೆ ಹತ್ತಿಯೇ ಸಿಗದಹಾಗೆ ಮಾಡಿ, ಕೊನೆಗೆ ಮಸ್ಲಿನ್ ಬಟ್ಟೆ ಯನ್ನು ನೇಯುವುದೇ ಬಿಟ್ಟು ಆಗಿನ ಕಾಲದ ನೇಕಾರರು ತಮ್ಮ ನೆಲದಲ್ಲೇ ಭಿಕ್ಷುಕರಾಗಿ ಜೀವನ ನಡೆಸಿದರು. ಆಗಿನ ಕಾಲದಲ್ಲಿ ವಿಶ್ವದಲ್ಲೇ ಪ್ರಖ್ಯಾತಿ ಹೊಂದಿದ್ದ ಮಸ್ಲಿನ್ ಬಟ್ಟೆಗಳು; ಇಂದಿಗೆ ಅದನ್ನು ನೇಯುವುದು ಯಾರಿಗೂ ಗೊತ್ತಿಲ್ಲ. ಬರೀ ಇಷ್ಟೇ ಅಲ್ಲ, ಅಮೆರಿಕಕ್ಕೆ ಹೋದ ಇವರು ಅಮೆರಿಕದ ಇಂಡಿಜಿನಸ್ ಜನರು ಅಥವಾ ರೆಡ್ ಇಂಡಿಯನ್‌ರನ್ನು ಅವರ ದೇಶದಿಂದಲೇ ಖಾಲಿ ಮಾಡುವಲ್ಲಿ ಯಶಸ್ವಿಯಾದರು. ಅಮೆರಿಕವನ್ನು ʼಲ್ಯಾಂಡ್ ಆಫ್ ಆಪರ್ಚುನಿಟಿʼ ಎಂದು ಕರೆಯುವಾಗ, ಅಲ್ಲಿನ ಮೂಲ ನಿವಾಸಿಗಳು ಆ ಲ್ಯಾಂಡ್‌ನಲ್ಲಿ ಬದುಕದೇ ಇರುವ ಹಾಗೆ ಮಾಡಿದರು.
ಇಂಥ ಪ್ರವಾಸದಿಂದ ಅಥವಾ ಗ್ಲೋಬಲೈಸೇಷನ್‌ನಿಂದ ಬೇರೆ ಬೇರೆ ದೇಶದ ಹಲವಾರು ರೀತಿಯ ಖಾದ್ಯ ಅಥವಾ ವಸ್ತುಗಳು ಮತ್ತಿತರ ದೇಶಕ್ಕೆ ಹಬ್ಬ ತೊಡಗಿದವು. ನಾವೆಲ್ಲರೂ ಮೈಕೈಗೆ ಹಚ್ಚಿಕೊಂಡು ತಿನ್ನುವ ಅಲ್ಫ್ಯಾನ್ಸೋ ಮಾವಿನ ಹಣ್ಣು ಭಾರತದ್ದಲ್ಲವೇ ಅಲ್ಲ, ಅದು ಭಾರತಕ್ಕೆ ಬಂದಿದ್ದು ಪೋರ್ಚುಗೀಸರಿಂದ ಆ ಅಲ್ಫಾನ್ಸೋಗೆ ಹೆಸರು ಬಂದಿದ್ದೂ ಪೋರ್ಚುಗೀಸನವನಿಂದ ಅವನ ಹೆಸರು ಅಲ್ಫೆಂಜೋ ಡಿ ಅಲ್ಬುಕರ್ಕ್!
ಸ್ವಲ್ಪ ಪುರಾಣ ಕಾಲದತ್ತ ಹೋಗಿ ನಾರದರ ಪ್ರವಾಸ ನೋಡೋಣ. ಹಿಂದೂ ಸಂಸ್ಕೃತಿಯಲ್ಲಿ ನಾರದರ ಪ್ರವಾಸದ ಬಗ್ಗೆ ಮಾತನಾಡದೇ ಪುರಾಣ ಮುಗಿಯುವುದೇ ಇಲ್ಲ. ʼನಾರಾಯಣ ನಾರಾಯಣʼ ಎನ್ನುತ್ತ ಮೂರು ಲೋಕಗಳಿಗು ಸುತ್ತುತ್ತ ಅಲ್ಲಿನ ಸುದ್ದಿ ಇಲ್ಲಿಗೆ ಹಬ್ಬಿಸಿ, ಇಲ್ಲಿನ ಸುದ್ದಿ ಅಲ್ಲಿಗೆ ಹಬ್ಬಿಸುತ್ತಿದ್ದ ಇವರಿಗೆ ಮೊದಲನೇ ಪತ್ರಕರ್ತ ಎಂದೂ ಕರೆಯುತ್ತಾರೆ. ಆಗ ನಾರದ ಪ್ರವಾಸವೇ ಇರದಿದ್ದರೆ, ಮೂರು ಲೋಕದ ನ್ಯೂಸ್ ಗೊತ್ತಾಗುತ್ತಿದ್ದುದು ಹೇಗೆ ಹೇಳಿ?
ಪ್ರಧಾನಿ ಮೋದಿಯವರ ಪ್ರವಾಸದ ಬಗ್ಗೆ ಮಾತನಾಡದೇ ಲೇಖನ ಪೂರ್ಣ ಹೇಗೆ ಆದೀತು? ನರೇಂದ್ರ ಮೋದಿ ಪ್ರಧಾನ ಮಂತ್ರಿ ಆದಾಗಿನಿಂದ ಹಲವಾರು ದೇಶಗಳಿಗೆ ಪ್ರವಾಸ ಮಾಡಿದ್ದಾರೆ. ವಿರೋಧ ಪಕ್ಷದವರು ಮೋದಿಯನ್ನು ಭಾರತದಲ್ಲಿ ಜಾಸ್ತಿ ಇರುವುದೇ ಇಲ್ಲ ಎಂದು ಕೂಗಾಡುತ್ತಿದ್ದರು. ಮೋದಿ ಪ್ರವಾಸದಿಂದಾಗಿ, ಗೊತ್ತಿರದ ಎಷ್ಟೋ ರಾಷ್ಟ್ರಗಳು ಭಾರತೀಯರಿಗೆ ಗೊತ್ತಾದವು. ರಾಜತಾಂತ್ರಿಕತೆಯಿಂದ ಭಾರತ ಮುಂದೆ ನಡೆದಿದ್ದು, ಹಲವಾರು ದೇಶಗಳ ಜತೆ ರಾಜತಾಂತ್ರಿಕ ಸಂಬಂಧವನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದು ಮೋದಿ ಪ್ರವಾಸದಿಂದಲೇ ಅಲ್ವಾ?
ಪರೋಕ್ಷ ಪ್ರವಾಸಗಳ ಕೆಲವು ಉದಾಹರಣೆಗಳು ಇವು. ಪ್ರವಾಸವೆನಿಸದ ಇಂಥ ಪ್ರವಾಸದಿಂದ ಏನೇನೆಲ್ಲ ಆಗಬಹುದು ನೋಡಿ. ಒಂದು ಕಾಲದಲ್ಲಿ ಮನುಷ್ಯ ಗಡ್ಡೆಗೆಣಸನ್ನು ಹುಡುಕುತ್ತಾ ಹೊರಟರೆ, ಎಲ್ಲಿಗೆ ಹೋಗಿದ್ದ ಎನ್ನುವುದನ್ನೇ ಮರೆಯುತ್ತಿದ್ದ. ಹಾಗೇ, ಪಕ್ಷಿಗಳು ಸಂತಾನೋತ್ಪತ್ತಿಯನ್ನು ಮಾಡಲೋ, ಬೇಸಿಗೆಯಿಂದ ಬಚಾವಾಗಲೋ ಖಂಡಾಂತರ ಹೊರಡುವುದಂತೂ ನಮಗೆಲ್ಲ ಗೊತ್ತೇ ಇದೆ. ಪ್ರವಾಸ ಹೋಗುವುದು ಸುಮ್ಮನೆ ಸ್ಟೇಟಸ್ ಹಾಕುವುದಕ್ಕೋ ಅಥವಾ ಪ್ರವಾಸಿ ಪ್ರಪಂಚದ ಸೆಲ್ಫೀ ಸ್ಟಿಕರ್ ಗೋ ಕಳಿಸುವುದಕ್ಕಷ್ಟೇ ಅಲ್ಲ! ಪ್ರವಾಸವೆಂಬುದು ಎಲ್ಲವನ್ನೂ ಮೀರಿದ್ದು. ಅದೊಂದು ಅತಿ ಗಂಭೀರ ಅಧ್ಯಯನಯೋಗ್ಯ ಸಂಗತಿ