ಮಕ್ಕಳೆ ಪ್ರವಾಸ ಮಾಡಿಬನ್ನಿ
ಬೇಸಗೆಯ ಸಮಯಕ್ಕೆ ಹಂಪಿಯಲ್ಲಿ ಸುತ್ತಾಡುವುದು ಕಷ್ಟ. ಆದರೆ, ನೀವು ಸಾಹಸ ಪ್ರಿಯರಲ್ವಾ? ಹಾಗಾಗಿ ರಜೆಯ ನಡುವೆಯೇ ಹಂಪಿಗೆ ಒಮ್ಮೆ ಹೋಗಿಬನ್ನಿ. ಇತಿಹಾಸ ಓದುವುದಕ್ಕಿಂತ ನೋಡುವುದರಲ್ಲೇ ಮಜಾ ಹೆಚ್ಚು. ವಿಜಯ ವಿಠ್ಠಲ ದೇವಾಲಯದಲ್ಲಿ ಕಲ್ಲಿನ ರಥ ನೋಡಿ, ಸಂಗೀತ ಕಂಬಗಳ ಸರಿಗಮಪದನಿ ಆಲಿಸಿ. ರಾಮ-ಲಕ್ಷ್ಮಣರ ದೇವಾಲಯಕ್ಕೆ ಪುಟ್ಟ ಚಾರಣ ಮಾಡಿ, ಅಲ್ಲಿನ ತುಂಗಾಭದ್ರ ನದಿಯಲ್ಲಿ ತೆಪ್ಪ ಸವಾರಿ ಮಾಡಿ. ವಿರೂಪಾಕ್ಷನ ದರ್ಶನ ಮಾಡಿ, ಬೆಳಕಿಂಡಿಯಲ್ಲಿ ತಲೆ ಕೆಳಗಾಗಿ ಕಾಣುವ ಗೋಪುರದ ನೆರಳನ್ನು ಕಣ್ತುಂಬಿಕೊಳ್ಳಿ.
ಮಕ್ಕಳೇ ಬೇಸಗೆ ರಜೆ ನಿಮಗೆ ಪ್ರವಾಸ ಮಾಡಲು ಇರುವ ದೊಡ್ಡ ಅವಕಾಶ. ತಿಂಗಳುಗಳ ರಜೆಯಿದೆ. ಮನೆಯಲ್ಲಿದ್ದು ಮಾಡುವುದೇನು. ಪ್ರವಾಸಕ್ಕೆ ಹೊರಟುಬಿಡಿ. ಚಾರಣ ಮಾಡೋದು, ಸಾಹಸ ಚಟುವಟಿಕೆಗಳಲ್ಲಿ ಭಾಗವಹಿಸುವುದು, ಐತಿಹಾಸಿಕ ತಾಣಗಳಲ್ಲಿ ಓಡಾಡುವುದು, ಪ್ರಾಣಿಗನ್ನು ಸಮೀಪದಿಂದ ನೋಡುವುದೆಂದರೂ ನಿಮಗೂ ಇಷ್ಟ ಅಲ್ವಾ? ಈ ತಾಣಗಳು ನಿಮಗಾಗಿ ಕಾಯುತ್ತಿವೆ.
ಇದನ್ನೀ ಓದಿ: ಜೋಳಿಗೆ ತುಂಬ ತಂದ ಚಾರಣದ ಕಥೆಗಳು
ಹಕ್ಕಿ ಹಾಡಿಗೆ ರಂಗನತ್ತಿಟ್ಟು
ʻರೆಂಬೆ ಕೊಂಬೆಯ ಮ್ಯಾಲೆ ಗೂಡು ಕಟ್ಟಿದಾವ ರೆಕ್ಕೆ ಬಲಿತ ಹಕ್ಕಿʼ ಪದ್ಯ ನೆನಪಿದೆ ತಾನೆ? ವಿದೇಶಿ ಹಕ್ಕಿಗಳು ಈ ಪದ್ಯ ನೆನಪಿಸಲು ರಂಗನತ್ತಿಟ್ಟು ಪಕ್ಷಿಧಾಮದಲ್ಲಿ ನಿಮಗಾಗಿ ಕಾಯುತ್ತಿವೆ. ಅವುಗಳಿಗೆ ಮಕ್ಕಳೆಂದರೆ ಇಷ್ಟ. ಹಾಗಾಗಿ ನಿಮ್ಮ ರಜೆ ಸಮಯದಲ್ಲೇ ಅವು ರಂಗನತ್ತಿಟ್ಟಿಗೆ ಬಂದಿದ್ದು, ಮೇ ತಿಂಗಳು ಮುಗಿಯುವ ತನಕ ಇಲ್ಲೇ ಇರಲಿವೆ. ಮೈಸೂರು ವೈಲ್ಡ್‌ಲೈಫ್ ವಿಭಾಗ ನೋಡಿಕೊಳ್ಳುತ್ತಿರುವ ಈ ಪಕ್ಷಿಧಾಮ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಡಿಕೊಂಡಿದೆ. ಕಾವೇರಿ ನದಿಯ ದ್ವೀಪವಾಗಿ ಈ ಪಕ್ಷಿಧಾಮ ನಿರ್ಮಾಣವಾಗಿದೆ. ಹಾಗಾಗಿ ಇಲ್ಲಿ ನೀವು ದೋಣಿ ವಿಹಾರ ಮಾಡಬಹುದು. ಜತೆಗೆ ಮರದ ಕೊಂಬೆಗಳಲ್ಲಿ ಕುಳಿತಿರುವ ಅಸಂಖ್ಯಾತ ಪಕ್ಷಿಗಳನ್ನೂ ಕಣ್ತುಂಬಿಕೊಳ್ಳಬಹುದು. 221ಕ್ಕಿಂತ ಹೆಚ್ಚು ಪ್ರಭೇದಗಳ ಹಕ್ಕಿಗಳು ಇಲ್ಲಿವೆ. ಅವುಗಳ ಬಗ್ಗೆ ಮಾಹಿತಿಗಳನ್ನು ಚಿತ್ರ ಸಮೇತ ನಿಮಗೆ ಅರ್ಥೈಸಲು ಪಕ್ಷಿಪ್ರೇಮಿ ಸಲೀಂ ಅಲಿ ಅವರ ಹೆಸರಿನ ಮಾಹಿತಿ ಕೇಂದ್ರವಿದೆ. ನಿಮ್ಮನ್ನು ನೋಡಲಿಕ್ಕೆ ವಿದೇಶಿ ಹಕ್ಕಿಗಳು ಬಂದಿವೆ, ಅವುಗಳನ್ನು ನೋಡಲಿಕ್ಕೆ ನೀವೂ ಹೋಗುತ್ತೀರಿ ಅಲ್ವಾ?

ಹತ್ತಿರದಲ್ಲೇ ಟಿಪ್ಪು ಸುಲ್ತಾನ ಬೇಸಗೆಯಲ್ಲಿ ಉಳಿದುಕೊಳ್ಳಲು ನಿರ್ಮಿಸಿದ್ದ ದರಿಯಾ ದೌಲತ್ ಬಾಗ್, ಕಾವೇರಿ ಜಲಾಶಯ ಮತ್ತು ಅಲ್ಲಿನ ಬೃಂದಾವನ ಗಾರ್ಡನ್, ಮೈಸೂರು ಅರಮನೆ ಇವೆ.
ಆನೆ ಜತೆಗೆ ಆಟಕ್ಕೆ ದುಬಾರೆ ಶಿಬಿರ
ಆನೆ ಬಂತೊಂದಾನೆ ಅಂತ ನೀವು ಕಂಠಪಾಠ ಹೊಡೆದಿದ್ದೀರಿ. ಅವುಗಳನ್ನು ಹಿಂಡು ಹಿಂಡಾಗಿ ನೋಡೋದು ಯಾವಾಗ? ಕೊಡಗಿನಲ್ಲಿ ಈಗ ಕರ್ನಾಟಕದ ಉಳಿದೆಲ್ಲ ಭಾಗಗಳಿಗಿಂತ ಬಿಸಿಲು ಸ್ವಲ್ಪ ಕಡಿಮೆ. ಕೊಡಗಿನ ಕಾವೇರಿ ನದಿ ತೀರದಲ್ಲಿ ಈ ದುಬಾರೆ ಆನೆ ಶಿಬಿರವಿದೆ. ನೀವು ಇಲ್ಲಿಗೆ ಬಂದರೆ ಆನೆಗಳೊಂದಿಗೆ ಆಟವಾಡಬಹುದು, ಸ್ನಾನ ಮಾಡಿಸಬಹುದು. ಅವುಗಳ ಆಹಾರ ಕ್ರಮ, ದಿನಚರಿ, ಆರೋಗ್ಯದ ಬಗೆಗೂ ತಿಳಿದುಕೊಂಡು ಆನೆಯ ಜತೆಗೆ ಸೆಲ್ಪೀಯನ್ನೂ ತೆಗೆಸಿಕೊಳ್ಳಬಹುದು.
ದುಬಾರೆಗೆ ಹೋದಾಗ ಜೆಎಲ್ಆರ್‌ನ ಕ್ಯಾಂಪಿನಲ್ಲಿ ಉಳಿಯಲು ಮರೆಯಬೇಡಿ. ಅಲ್ಲಿ ಅರಣ್ಯ ಸಫಾರಿ, ನೇಚರ್ ವಾಕ್ ಮಾಡುವ, ಕಾಡಿನ ಕತೆಗಳನ್ನು ಕೇಳುವ ಅವಕಾಶಗಳಿರುತ್ತವೆ.

ಸಾಹಸ ಮತ್ತು ಇತಿಹಾಸಕ್ಕೆ ಹಂಪಿ
ಮಾತುಂಗಾ ಪರ್ವತ, ಅದರಲ್ಲಿನ ದೇವಾಲಯಗಳನ್ನು ನೋಡಲು ಮರೆಯಬೇಡಿ. ಹೀಗೆ ಸುಮಾರು 40-50 ತಾಣಗಳನ್ನು ಹಂಪಿಯಲ್ಲಿ ನೋಡಬಹುದು. ಚಾರಣ, ದೋಣಿ ಸವಾರಿ, ಸ್ಪೀಡ್ ಬೋಟಿಂಗ್, ಹೆರಿಟೇಜ್ ಟೂರ್, ಆರ್ಕಿಟೆಕ್ಚರ್ ಟೂರ್ ಎಲ್ಲದಕ್ಕೂ ಇಲ್ಲಿ ಅವಕಾಶವಿದೆ. ಆಂಜನೇಯ ಹುಟ್ಟಿದ ಸ್ಥಳ ಅಂಜನಾದ್ರಿ ಮತ್ತು ತುಂಗಭದ್ರಾ ಜಲಾಶಯ ಹತ್ತಿರದಲ್ಲಿವೆ.
ಮಳೆಕಾಡು ಆಗುಂಬೆ
ಮಳೆಕಾಡುಗಳಲ್ಲಿ ಓಡಾಡುವ ಆಸೆ ನಿಮಗಿದೆ ಅಲ್ವಾ? ಆಗುಂಬೆ ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ. ಇಲ್ಲಿ ಹಾವುಗಳ ರಾಜ ಕಾಳಿಂಗಗಳು ವಾಸಿಸುತ್ತವೆ. ಆನೆ, ಮಂಗ ಮತ್ತಿತರ ಪ್ರಾಣಿಗಳು ಅಲ್ಲಿದ್ದು, ಅದೃಷ್ಟವಿದ್ದರೆ ಅವು ನಿಮಗೆ ದರ್ಶನ ನೀಡಬಲ್ಲವು. 3000 ಅಡಿಗಳ ಎತ್ತರದಿಂದ ಸುಂದರ ಕಾಡನ್ನು ನೋಡಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತ ಅಲ್ಲಿ ಮನಮೋಹಕವಾಗಿದ್ದು, ಅವನ್ನು ಮಿಸ್ ಮಾಡಿಕೊಳ್ಳಬೇಡಿ. ಕಾನನದ ಹಸಿರನ್ನು ನೋಡುವುದು ಕಣ್ಣಿಗೂ ಒಳ್ಳೆಯದು.
ಇವಿಷ್ಟೇ ಅಲ್ಲದೆ ಕರ್ನಾಟಕದಲ್ಲಿ ಇಂಥ ನೂರಾರು ತಾಣಗಳಿವೆ. ಆಯ್ಕೆ ನಿಮ್ಮದು.. ಹಾಗಾದರೆ ನೀವು ಯಾವ ತಾಣಕ್ಕೆ ಪ್ರವಾಸ ಮಾಡುತ್ತೀರಿ?