ವ್ಯಾಲೆಂಟೈನ್ಸ್‌ ಡೇ ಸ್ಪೆಷಲ್

  • ಶಿವರಾಜ ಸೂ. ಸಣಮನಿ, ಮದಗುಣಕಿ

ಫೆಬ್ರವರಿ ತಿಂಗಳು ಬಂತೆಂದರೆ ಸಾಕು, ಗಾಳಿಯಲ್ಲಿ ಏನೋ ಬದಲಾವಣೆ. ಬಿಸಿಲಿನ ಝಳದ ನಡುವೆಯೂ ತಂಪಾದ ಪ್ರೀತಿಯ ಅಲೆಗಳು ಬೀಸತೊಡಗುತ್ತವೆ. ಇದಕ್ಕೆ ಕಾರಣ ಫೆಬ್ರವರಿ 14 - 'ವಿಶ್ವ ಪ್ರೇಮಿಗಳ ದಿನ'. ಸಾಮಾನ್ಯವಾಗಿ ಈ ದಿನದಂದು ಕೆಂಪು ಗುಲಾಬಿ, ಚಾಕೊಲೇಟ್ ಅಥವಾ ದುಬಾರಿ ಉಡುಗೊರೆಗಳನ್ನು ನೀಡುವುದು ವಾಡಿಕೆ. ಹೂವು ಬಾಡಿ ಹೋಗುತ್ತದೆ, ಚಾಕೊಲೇಟ್ ಖಾಲಿಯಾಗುತ್ತದೆ ಆದರೆ, ನಿಮ್ಮ ಪ್ರಿಯತಮೆ ಅಥವಾ ಸಂಗಾತಿಯ ಜತೆಗೆ ಕಳೆದ ಸುಂದರ ಕ್ಷಣಗಳು? ಅವು ಅಜರಾಮರ.

ಒಬ್ಬ ಪ್ರವಾಸಿಗನ ದೃಷ್ಟಿಯಲ್ಲಿ ಹೇಳುವುದಾದರೆ, ಜಗತ್ತಿನಲ್ಲಿ ಪ್ರೀತಿಯನ್ನು ವ್ಯಕ್ತಪಡಿಸಲು 'ಪ್ರವಾಸ'ಕ್ಕಿಂತ ದೊಡ್ಡ ಮಾಧ್ಯಮ ಇನ್ನೊಂದಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ʼಐ ಲವ್ ಯೂʼ ಎನ್ನುವುದಕ್ಕೂ, ಅಸ್ತಮಿಸುವ ಸೂರ್ಯನ ಸಾಕ್ಷಿಯಾಗಿ, ಕಡಲ ತೀರದಲ್ಲಿ ಕೈಹಿಡಿದು ನಡೆಯುತ್ತಾ ಮೌನವಾಗಿಯೇ ಪ್ರೀತಿ ಹಂಚಿಕೊಳ್ಳುವುದಕ್ಕೂ ಆಕಾಶ ಭೂಮಿಯಷ್ಟು ವ್ಯತ್ಯಾಸವಿದೆ.

ಇದನ್ನೂ ಓದಿ: ಜಗತ್ತು ಸುತ್ತುವ ಸಂಗೀತ ಅವಳಲ್ಲೇ ಜಗತ್ತು ಕಂಡ ಪ್ರಸನ್ನ

ಸಂಗಾತಿಯನ್ನು ಅರಿಯಲು ಪಯಣವೇ ದಾರಿ

​ʼಒಬ್ಬ ವ್ಯಕ್ತಿಯನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ ಅವರ ಜತೆ ಒಂದು ದೀರ್ಘ ಪ್ರವಾಸ ಹೋಗಿ’ ಎಂಬ ಮಾತಿದೆ. ಇದು ನೂರಕ್ಕೆ ನೂರು ಸತ್ಯ. ಮನೆಯಲ್ಲಿದ್ದಾಗ ನಾವು ದಿನನಿತ್ಯದ ಜವಾಬ್ದಾರಿಗಳು, ಕಚೇರಿಯ ಒತ್ತಡ ಮತ್ತು ಮೊಬೈಲ್ ಫೋನ್‌ಗಳ ಹಾವಳಿಯಲ್ಲಿ ಕಳೆದುಹೋಗಿರುತ್ತೇವೆ. ಪಕ್ಕದಲ್ಲೇ ಇದ್ದರೂ, ನಮ್ಮ ಮನಸುಗಳು ದೂರವಿರುತ್ತವೆ. ಆದರೆ, ಯಾವಾಗ ನಾವು ಬ್ಯಾಗ್ ಪ್ಯಾಕ್ ಮಾಡಿಕೊಂಡು ಅಪರಿಚಿತ ಊರಿಗೆ ಕಾಲಿಡುತ್ತೇವೋ, ಆಗ ಜಗತ್ತು ಚಿಕ್ಕದಾಗುತ್ತದೆ ಮತ್ತು ಸಂಗಾತಿ ಹತ್ತಿರವಾಗುತ್ತಾರೆ. ಬಸ್ ತಪ್ಪಿದಾಗ ಆಗುವ ಸಿಟ್ಟು, ಸುಂದರ ದೃಶ್ಯ ಕಂಡಾಗ ಆಗುವ ಸಂತೋಷ, ದಾರಿ ತಪ್ಪಿದಾಗ ಹುಡುಕುವ ಸಾಹಸ - ಇವೆಲ್ಲವೂ ನಿಮ್ಮ ಬಾಂಧವ್ಯದ ಗಟ್ಟಿತನವನ್ನು ಪರೀಕ್ಷಿಸುತ್ತವೆ ಮತ್ತು ಹೆಚ್ಚಿಸುತ್ತವೆ. ಆದ್ದರಿಂದ ಈ ಪ್ರೇಮಿಗಳ ದಿನದಂದು, ನಿಮ್ಮ ಸಂಗಾತಿಗೆ ಬಂಗಾರದ ಸರ ಕೊಡುವ ಬದಲು, ಒಂದು ಪುಟ್ಟ ಪ್ರವಾಸದ 'ಟಿಕೆಟ್' ಕೊಡಿ. ಆ ಟಿಕೆಟ್ ನಿಮ್ಮಿಬ್ಬರ ಹೊಸ ನೆನಪಿನ ಬಾಗಿಲು ತೆರೆಯಲಿ.

Untitled design (64)

ಕರ್ನಾಟಕದ ರೊಮ್ಯಾಂಟಿಕ್ ತಾಣಗಳು

ಪ್ರೀತಿಯನ್ನು ಸಂಭ್ರಮಿಸಲು ಪ್ಯಾರಿಸ್ ಅಥವಾ ಸ್ವಿಟ್ಜರ್‌ಲ್ಯಾಂಡ್ ಹೋಗಬೇಕಿಲ್ಲ. ನಮ್ಮ ಕರ್ನಾಟಕದಲ್ಲೇ ಸ್ವರ್ಗ ಸದೃಶ ತಾಣಗಳಿವೆ. ನಿಮ್ಮ ಅಭಿರುಚಿಗೆ ತಕ್ಕಂತೆ ಇಲ್ಲಿವೆ ಕೆಲವು ಆಯ್ಕೆಗಳು:

ಮಂಜಿನ ನಗರಿ ಕೊಡಗು

ನೀವು ಗದ್ದಲ ಇಷ್ಟಪಡದ, ಏಕಾಂತ ಬಯಸುವ ಜೋಡಿಯಾಗಿದ್ದರೆ, ಕೂರ್ಗ್ ಅಥವಾ ಸಕಲೇಶಪುರ ಅತ್ಯುತ್ತಮ ಆಯ್ಕೆ. ಅಲ್ಲಿನ ಕಾಫಿ ತೋಟಗಳ ಮಧ್ಯೆ ಇರುವ ಹೋಂಸ್ಟೇಗಳಲ್ಲಿ, ಬೆಳಗಿನ ಜಾವದ ಮಂಜಿನಲ್ಲಿ ಕಾಫಿ ಕುಡಿಯುತ್ತಾ ಕುಳಿತುಕೊಳ್ಳುವುದು ಎಂಥ ರೋಚಕ ಅನುಭವ! ಮಾಂದಲಪಟ್ಟಿಯ ಬೆಟ್ಟದ ತುದಿಯಲ್ಲಿ ನಿಂತು ಮೋಡಗಳನ್ನು ಮುಟ್ಟುವಾಗ, ನಿಮ್ಮಿಬ್ಬರ ನಡುವಿನ ಮೌನವೂ ಮಾತನಾಡತೊಡಗುತ್ತದೆ. ದುಬಾರೆ ಆನೆ ಶಿಬಿರದಲ್ಲಿ ಕಾವೇರಿ ನದಿಯ ದಡದಲ್ಲಿ ಕುಳಿತು ಹರಿಯುವ ನೀರನ್ನು ನೋಡುವುದೇ ಒಂದು ಧ್ಯಾನ.

ಉಡುಪಿ ಮತ್ತು ಕಾಪು

ʼಪ್ರೀತಿ ಮತ್ತು ಸಮುದ್ರ ಎರಡೂ ಆಳವಾದಷ್ಟು ಸುಂದರʼ. ಕರಾವಳಿಯ ಪ್ರವಾಸ ಯಾವಾಗಲೂ ರೊಮ್ಯಾಂಟಿಕ್. ಅದರಲ್ಲೂ ಉಡುಪಿಯ ಬಳಿ ಇರುವ 'ಕಾಪು ಬೀಚ್' ಮತ್ತು ಅಲ್ಲಿನ ಲೈಟ್ ಹೌಸ್ ಪ್ರೇಮಿಗಳ ನೆಚ್ಚಿನ ತಾಣ. ಸಂಜೆಯ ಹೊತ್ತು ಆ ಲೈಟ್ ಹೌಸ್ ಮೆಟ್ಟಿಲುಗಳನ್ನು ಹತ್ತಿ, ಮೇಲೆ ನಿಂತು ಅರಬ್ಬೀ ಸಮುದ್ರದ ವಿಸ್ತಾರವನ್ನು ನೋಡುವುದು, ಸೂರ್ಯ ಸಮುದ್ರದಲ್ಲಿ ಮುಳುಗುವ ದೃಶ್ಯವನ್ನು ಸಂಗಾತಿಯ ಹೆಗಲ ಮೇಲೆ ತಲೆ ಇಟ್ಟು ನೋಡುವುದು... ಆಹಾ! ಈ ದೃಶ್ಯವನ್ನು ಯಾವ ಕ್ಯಾಮೆರಾ ಕೂಡ ಸಂಪೂರ್ಣವಾಗಿ ಸೆರೆಹಿಡಿಯಲಾರದು, ಅದನ್ನು ಕಣ್ಣಲ್ಲಿ ತುಂಬಿಕೊಳ್ಳಬೇಕು ಅಷ್ಟೇ.

Untitled design (66)

ಮೈಸೂರು

ಸ್ವಲ್ಪ ಕ್ಲಾಸಿಕ್ ಮತ್ತು ಸಾಂಪ್ರದಾಯಿಕ ಅಭಿರುಚಿ ನಿಮ್ಮದಾಗಿದ್ದರೆ, ಸಾಂಸ್ಕೃತಿಕ ನಗರಿ ಮೈಸೂರಿಗೆ ಭೇಟಿ ನೀಡಿ. ಸಂಜೆಯ ಹೊತ್ತು ಅರಮನೆಯ ದೀಪಾಲಂಕಾರದ ಮುಂದೆ, ಅಥವಾ ಕಾರಂಜಿ ಕೆರೆಯ ದಡದಲ್ಲಿ ಕೈಹಿಡಿದು ನಡೆಯುವುದು ಒಂದು ಸುಂದರ ಅನುಭೂತಿ. ಮೈಸೂರಿನ ರಸ್ತೆಗಳಲ್ಲಿ ಟಾಂಗಾ ಸವಾರಿ ಮಾಡುತ್ತಾ ನಗರ ಸುತ್ತುವುದು ನಿಮ್ಮ ಪ್ರವಾಸಕ್ಕೆ ಹಳೆಯ ಕಾಲದ 'ವಿಂಟೇಜ್' ಸ್ಪರ್ಶ ನೀಡುತ್ತದೆ.

ಹಂಪಿ

ಇತಿಹಾಸ ಪ್ರಿಯರಿಗೆ ಹಂಪಿ ಹೇಳಿ ಮಾಡಿಸಿದ ಜಾಗ. ತುಂಗಭದ್ರಾ ನದಿ ತಟದ ಬಂಡೆಗಳ ಮೇಲೆ ಕುಳಿತು, ನೂರಾರು ವರ್ಷಗಳ ಹಿಂದಿನ ದೇವಾಲಯಗಳನ್ನು ನೋಡುತ್ತಿದ್ದರೆ, ʼನಮ್ಮ ಪ್ರೀತಿಯೂ ಈ ಶಿಲೆಗಳಂತೆ ಶಾಶ್ವತವಾಗಿರಲಿʼ ಎನಿಸದೇ ಇರದು. ಹೇಮಕೂಟ ಬೆಟ್ಟದ ಮೇಲಿನ ಸೂರ್ಯಾಸ್ತ ಜಗತ್ಪ್ರಸಿದ್ಧ. ಅಲ್ಲಿನ ಹವಳದ ಬಣ್ಣದ ಆಕಾಶದ ಕೆಳಗೆ ನಿಮ್ಮ ಪ್ರಿಯತಮೆಯ ಫೊಟೋ ಕ್ಲಿಕ್ಕಿಸಿದರೆ, ಅದಕ್ಕಿಂತ ದೊಡ್ಡ ಉಡುಗೊರೆ ಇನ್ನೊಂದಿಲ್ಲ.

ಕೇವಲ ಜಾಗವಲ್ಲ, 'ಸಮಯ' ಮುಖ್ಯ

​ಅನೇಕರು ಪ್ರವಾಸಕ್ಕೆ ಹೋದಾಗಲೂ ಮೊಬೈಲ್ ಫೋನ್‌ನಲ್ಲೇ ಮುಳುಗಿರುತ್ತಾರೆ ಅಥವಾ ಫೊಟೋ ತೆಗೆಯುವುದರಲ್ಲೇ ಬ್ಯುಸಿಯಾಗಿರುತ್ತಾರೆ. ದಯವಿಟ್ಟು ಹಾಗೆ ಮಾಡಬೇಡಿ. ಈ 'ವ್ಯಾಲೆಂಟೈನ್ಸ್ ಟ್ರಿಪ್'ನಲ್ಲಿ ಒಂದು ನಿಯಮ ಮಾಡಿಕೊಳ್ಳಿ - ʼನೋ ಫೋನ್ ಜೋನ್ʼ.

  • ​ ಒಟ್ಟಿಗೆ ಕುಳಿತು ಊಟ ಮಾಡಿ, ಕೇವಲ ರುಚಿಯ ಬಗ್ಗೆ ಮಾತ್ರವಲ್ಲ, ನಿಮ್ಮ ಕನಸುಗಳ ಬಗ್ಗೆ ಮಾತನಾಡಿ.
  • ​ಬೈಕ್ ಅಥವಾ ಕಾರಿನಲ್ಲಿ ಲಾಂಗ್ ಡ್ರೈವ್ ಹೋಗಿ, ಎಫ್.ಎಂ ರೇಡಿಯೋ ಆಫ್ ಮಾಡಿ, ನೀವೇ ಹಾಡು ಗುನುಗುತ್ತಾ ಸಾಗಿ.
  • ​ಸಣ್ಣ ಪುಟ್ಟ ಅಂಗಡಿಗಳಲ್ಲಿ ಬೀದಿ ಬದಿಯ ಚಾಟ್ಸ್ ತಿನ್ನಿ. ಐಷಾರಾಮಿ ಹೋಟೆಲ್‌ನಲ್ಲಿ ಸಿಗದ ಖುಷಿ, ಒಂದೇ ಪ್ಲೇಟ್‌ನಲ್ಲಿ ಮಸಾಲೆ ಪುರಿ ಹಂಚಿ ತಿನ್ನುವಾಗ ಸಿಗುತ್ತದೆ.

ದಾಂಪತ್ಯ ಎಂಬ ಸುದೀರ್ಘ ಪಯಣ

​ಇದು ಕೇವಲ ಹೊಸ ಪ್ರೇಮಿಗಳಿಗಲ್ಲ, ಮದುವೆಯಾಗಿ ವರ್ಷಗಳೇ ಕಳೆದ ದಂಪತಿಗಳಿಗೂ ಅನ್ವಯಿಸುತ್ತದೆ. ಸಂಸಾರದ ಜಂಜಾಟ, ಮಕ್ಕಳ ಓದು, ಸಾಲದ ಚಿಂತೆಗಳ ನಡುವೆ ನಿಮ್ಮ ಪ್ರೀತಿ ಎಲ್ಲೋ ಮರೆಯಾಗಿರಬಹುದು. ಈ ಪ್ರೇಮಿಗಳ ದಿನದಂದು ಅದಕ್ಕೆ ಮತ್ತೆ ಜೀವ ತುಂಬಿ. ಮಕ್ಕಳನ್ನು ಹಿರಿಯರ ಬಳಿ ಬಿಟ್ಟು, ಅಥವಾ ಮಕ್ಕಳನ್ನೂ ಕರೆದುಕೊಂಡು ಒಂದು ಚಿಕ್ಕ ಔಟಿಂಗ್ ಹೋಗಿ ಬನ್ನಿ.

​ʼನಮ್ಮಿಬ್ಬರಿಗಾಗಿ ನಾವಿದ್ದೇವೆʼ ಎಂಬ ಭಾವನೆಯೇ ಸಂಸಾರ ನೌಕೆಗೆ ಸುಭದ್ರವಾದ ಅಡಿಪಾಯ. ಪ್ರವಾಸ ಆ ಭಾವನೆಯನ್ನು ಗಟ್ಟಿಗೊಳಿಸುತ್ತದೆ.

Untitled design (65)

ಜೇಬಿಗೆ ಹೊರೆಯಾಗದ ಪ್ರೀತಿ

​ಪ್ರೀತಿ ಎಂದರೆ ಖರ್ಚಲ್ಲ. ನಿಮ್ಮ ಸಂಗಾತಿಗೆ ಬೇಕಿರುವುದು ನಿಮ್ಮ ಸಮಯ (Time), ನಿಮ್ಮ ಕ್ರೆಡಿಟ್ ಕಾರ್ಡ್ ಅಲ್ಲ.

  • ​ ದೂರದ ಊರಿಗೆ ಹೋಗಲು ಆಗದಿದ್ದರೆ, ನಿಮ್ಮ ಊರಿನ ಹೊರವಲಯದಲ್ಲಿರುವ ಯಾವುದಾದರೂ ಕೆರೆಗೆ ಅಥವಾ ಪಾರ್ಕ್‌ಗೆ ಹೋಗಿ ಬನ್ನಿ.
  • ​ಮನೆಯಲ್ಲೇ ಇಬ್ಬರೂ ಸೇರಿ ಅಡುಗೆ ಮಾಡಿ, ಟೆರೇಸ್ ಮೇಲೆ ಕುಳಿತು ತಿನ್ನಿ.
  • ​ಮುಂಜಾನೆ ಬೇಗ ಎದ್ದು, ಸೂರ್ಯೋದಯ ನೋಡಲು ಹತ್ತಿರದ ಬೆಟ್ಟ ಹತ್ತಿ.

​ನೆನಪಿಡಿ, ತಾಜ್‌ಮಹಲ್ ಕಟ್ಟಿಸಿದ ಶಹಜಹಾನ್ ಒಬ್ಬ ಪ್ರೇಮಿ ನಿಜ, ಆದರೆ ಕೈಯಲ್ಲಿ ಹತ್ತು ರೂಪಾಯಿಯ ಕಡಲೆಕಾಯಿ ಹಿಡಿದು ಪಾರ್ಕ್ ಬೆಂಚ್ ಮೇಲೆ ಕುಳಿತು ಹರಟೆ ಹೊಡೆಯುವ ಕಾಲೇಜು ಹುಡುಗನೂ ಪ್ರೇಮಿಯೇ. ಪ್ರೀತಿಗೆ ಬಡವ-ಶ್ರೀಮಂತ ಎಂಬ ಭೇದವಿಲ್ಲ, ಅದಕ್ಕೆ ಬೇಕಿರುವುದು ಸ್ಪಂದನೆ ಮಾತ್ರ.

ಈಗಲೇ ಪ್ಲಾನ್ ಮಾಡಿ!

​ಸ್ನೇಹಿತರೆ, ಜೀವನ ತುಂಬಾ ಚಿಕ್ಕದು. ನಾವು ಗಳಿಸಿದ ಆಸ್ತಿ, ಅಂತಸ್ತು ಯಾವುದೂ ಕೊನೆಗೆ ಉಳಿಯುವುದಿಲ್ಲ. ಉಳಿಯುವುದು ನಾವು ಕಳೆದ ಸುಂದರ ಕ್ಷಣಗಳು ಮತ್ತು ನಮ್ಮವರು ನಮ್ಮ ಬಗ್ಗೆ ಇಟ್ಟುಕೊಂಡಿರುವ ಪ್ರೀತಿಯ ನೆನಪುಗಳು ಮಾತ್ರ. ಈ ಫೆಬ್ರವರಿ 14 ರಂದು, ನಿಮ್ಮ ಪ್ರಿಯತಮೆಯ/ಪ್ರಿಯತಮನ ಕಣ್ಣಲ್ಲಿ ಕಣ್ಣಿಟ್ಟು, ʼಮುಂದಿನ ಎಲ್ಲ ಪಯಣಗಳಲ್ಲೂ ನೀನೇ ನನ್ನ ಸಂಗಾತಿಯಾಗುʼ ಎಂದು ಹೇಳಿ. ಬ್ಯಾಗ್ ಪ್ಯಾಕ್ ಮಾಡಿ, ಬಸ್ಸೋ, ಕಾರೋ, ಬೈಕೋ ಏರಿ ಹೊರಟುಬಿಡಿ. ದಾರಿ ಯಾವುದಾದರೇನು? ಗುರಿ ಪ್ರೀತಿಯಾಗಿರುವಾಗ, ಪಯಣ ಸುಂದರವಾಗಿಯೇ ಇರುತ್ತದೆ. 'ಪ್ರವಾಸಿ ಪ್ರಪಂಚ'ದ ಸಮಸ್ತ ಓದುಗರಿಗೂ ವಿಶ್ವ ಪ್ರೇಮಿಗಳ ದಿನದ ಹಾರ್ಧಿಕ ಶುಭಾಶಯಗಳು. ನಿಮ್ಮ ಪಯಣ ಸುಖಕರವಾಗಿರಲಿ, ಪ್ರೀತಿ ಹಿತಕರವಾಗಿರಲಿ!