ರಾಮೋಜಿ ಫಿಲ್ಮ್ ಸಿಟಿ
ಸಿನಿಮಾ ನಿರ್ಮಾಣಕ್ಕಾಗಿ ರೂಪುಗೊಂಡ ರಾಮೋಜಿ ಫಿಲ್ಮ್ ಸಿಟಿ ಇಂದು ಭಾರತದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲೊಂದಾಗಿ ಬೆಳೆದಿದೆ. ಸುಮಾರು 2,000 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ಈ ವಿಶಾಲ ತಾಣ ತನ್ನ ಚಿತ್ರೀಕರಣದ ಸೆಟ್‌ಗಳು, ಥೀಮ್ ಪಾರ್ಕ್‌ಗಳು, ಉದ್ಯಾನಗಳು, ಪಕ್ಷಿ-ಚಿಟ್ಟೆಗಳ ಲೋಕ, ಆತಿಥ್ಯ ಹಾಗೂ ವಸತಿ ಸೌಲಭ್ಯಗಳಿಂದಾಗಿ ಪ್ರವಾಸಿಗರ ಪಾಲಿನ ಆಕರ್ಷಣೀಯ ತಾಣವೆನಿಸಿಕೊಂಡಿದೆ. ಸಿನಿಮಾ ಮತ್ತು ಪ್ರವಾಸೋದ್ಯಮದ ಅಪೂರ್ವ ಸಂಗಮವಾಗಿ ರೂಪುಗೊಂಡಿರುವ, ರಾಮೋಜಿರಾವ್ ಅವರ ದೂರದೃಷ್ಟಿಯ ಈ ಕನಸಿನ ನಗರದ ಹುಟ್ಟು, ಬೆಳವಣಿಗೆ, ವೈಶಿಷ್ಟ್ಯಗಳು ಮತ್ತು ಪ್ರವಾಸಿಗರನ್ನು ಸೆಳೆಯುವ ಅಂಶಗಳ ಕುರಿತ ಸಮಗ್ರ ನೋಟ ಇಲ್ಲಿದೆ.
ಮಕ್ಕಳಿಗಾಗಿ ಫಂಡುಸ್ತಾನ್
ಮಕ್ಕಳನ್ನು ಕರೆದುಕೊಂಡು ಪ್ರವಾಸಕ್ಕೆ ಹೊರಡುವ ಕುಟುಂಬಗಳಿಗೆ ರಾಮೋಜಿ ಫಿಲ್ಮ್ ಸಿಟಿಯ ದೊಡ್ಡ ಪ್ಲಸ್ ಪಾಯಿಂಟ್ ಫಂಡುಸ್ತಾನ್.
ರೈಡ್‌ಗಳು, ಆಟಗಳು, ಮನೋರಂಜನಾ ಚಟುವಟಿಕೆಗಳು, ಮಕ್ಕಳಿಗಾಗಿ ರೂಪಿಸಿರುವ ವಿಶೇಷ ಪ್ರದೇಶಗಳು ಇವೆಲ್ಲದರಿಂದ ಮಕ್ಕಳು ತಮ್ಮದೇ ಲೋಕದಲ್ಲಿ ಮುಳುಗಿ ಹೋಗುತ್ತಾರೆ.
ದಾದಾಜಿನ್ ಎಂಬ ಮ್ಯಾಸ್ಕಾಟ್ ಮಕ್ಕಳನ್ನು ಆಕರ್ಷಿಸುತ್ತದೆ. ಮತ್ತೊಂದು ಕುತೂಹಲಕಾರಿ ಅನುಭವವೆಂದರೆ ಬೋರಾಸುರ ಎಂಬ ಮಾಯಾಜಾಲದ ವಾತಾವರಣದಲ್ಲಿ ರೂಪಿಸಿರುವ ಥೀಮ್ಡ್ ವಾಕ್-ಥ್ರೂ. ಇದನ್ನು ಮಕ್ಕಳು ಮಾತ್ರವಲ್ಲ ಹಿರಿಯರೂ ಎಂಜಾಯ್ ಮಾಡುತ್ತಾರೆ.
ಇದನ್ನೂ ಓದಿ: ಸಿನಿಮಾ ನಗರಿಯಲ್ಲಿದೆ ಇಡೀ ಜಗತ್ತು!
ಚಿಟ್ಟೆಗಳೂ ಹಕ್ಕಿಗಳೂ!
ರಾಮೋಜಿ ಫಿಲ್ಮ್ ಸಿಟಿಯ ಪ್ರವಾಸದ ನಡುವೆ ಇದ್ದಕ್ಕಿದ್ದಂತೆ ಸಿನಿಮಾ ಲೋಕದಿಂದ ಪ್ರಕೃತಿಯ ಲೋಕಕ್ಕೆ ಪ್ರವೇಶಿಸಿದ ಅನುಭವ ನೀಡುವ ತಾಣವೇ ವಿಂಗ್ಸ್- ಬರ್ಡ್ ಪಾರ್ಕ್. ಇಲ್ಲಿ ವಿವಿಧ ದೇಶಗಳ ಪಕ್ಷಿಗಳೊಂದಿಗೆ ಹಸಿರಿನ ವಾತಾವರಣದಲ್ಲಿ ಸಮಯ ಕಳೆಯಬಹುದು. ವರ್ಣರಂಜಿತ ಪಕ್ಷಿಗಳು, ಹಸಿರು ಸಸ್ಯವರ್ಗ, ಜಲಪಾತದಂಥ ವಿನ್ಯಾಸಗಳು ಪ್ರಕೃತಿ ಪ್ರಿಯರಿಗೆ ವಿಶ್ರಾಂತಿಯ ಅನುಭವ ನೀಡುತ್ತದೆ. ಇದರ ಜತೆಗೆ ಬಟರ್‌ಫ್ಲೈ ಪಾರ್ಕ್, ಹೂವು-ಸಸ್ಯಗಳ ಆಕರ್ಷಣೆಯ ಕಲರ್ಸ್, ಚಿಕ್ಕ ಗಿಡಗಳ ಸೌಂದರ್ಯವನ್ನು ಪರಿಚಯಿಸುವ ವಾಮನ್ ಬೋನ್ಸಾಯ್ ಪಾರ್ಕ್ ಕೂಡ ಪ್ರವಾಸಿಗರ ಗಮನ ಸೆಳೆಯುತ್ತವೆ.

ಫಿಲ್ಮಿ ದುನಿಯಾ-ಇಲ್ಲೇ ಇದೆ ವಿದೇಶ
ವಿದೇಶ ಪ್ರವಾಸಕ್ಕೆ ಹೋಗಲು ಸಾಧ್ಯವಾಗದಿದ್ದರೂ, ಒಂದೇ ದಿನದಲ್ಲಿ ಜಗತ್ತಿನ ವಿವಿಧ ಕಲ್ಪಿತ ತಾಣಗಳನ್ನು ನೋಡಬೇಕೇ? ಫಿಲ್ಮಿ ದುನಿಯಾ ನಿಮ್ಮನ್ನು ಮತ್ತೊಂದು ಕಲ್ಪನಾ ಪ್ರವಾಸಕ್ಕೆ ಕರೆದೊಯ್ಯುತ್ತದೆ. ಐಫೆಲ್ ಟವರ್, ಸ್ಟ್ಯಾಚ್ಯೂ ಆಫ್ ಲಿಬರ್ಟಿ. ರಿಯೋ ಕಾರ್ನಿವಲ್ ಸೇರಿದಂತೆ ವಿಶ್ವದ ಪ್ರಸಿದ್ಧ ದೃಶ್ಯಗಳ ಕಲ್ಪನಾತ್ಮಕ ರೂಪಗಳು ಇಲ್ಲಿ ಮನೋರಂಜನೆಯ ಭಾಗವಾಗಿವೆ.
ಮಕ್ಕಳಿಗೆ ಇದು ಫ್ಯಾಂಟಸಿ. ಯುವಕರಿಗೆ ಫೊಟೋ ಸ್ಪಾಟ್.ಕುಟುಂಬಕ್ಕೆ ನೆನಪಿನ ಕ್ಷಣ.
ಕೃಪಾಳು ಕೇವ್ಸ್ ಎಂಬ ರಹಸ್ಯ ಲೋಕ
ಸಿನಿಮಾ ಸೆಟ್‌ಗಳು, ರೈಡ್‌ಗಳು ಮತ್ತು ಲೈವ್ ಶೋಗಳ ನಡುವೆ ಸ್ವಲ್ಪ ವಿಭಿನ್ನ ಅನುಭವ ಬೇಕಾದರೆ ಕೃಪಾಳು ಗುಹೆಗಳನ್ನು ಮಿಸ್ ಮಾಡುವಂತಿಲ್ಲ. ಬಂಡೆಗಳ ವಿನ್ಯಾಸ, ಕೆತ್ತನೆಗಳು ಮತ್ತು ಗುಹೆಯಂಥ ವಾತಾವರಣ ಪ್ರವಾಸಿಗರಿಗೆ ವಿಭಿನ್ನ ಅನುಭವ ನೀಡುತ್ತದೆ. ಮಂಜುಮೆಲ್ ಬಾಯ್ಸ್ ಚಿತ್ರದ ಗುಣ ಕೇವ್ಸ್ ನೆನಪಾದರೆ ಅಚ್ಚರಿ ಇಲ್ಲ.
ತೋಟಗಳ ನಡುವೆ ಒಂದು ಸಿನಿಮಾ ನಗರ
ರಾಮೋಜಿ ಫಿಲ್ಮ್ ಸಿಟಿಯ ಮತ್ತೊಂದು ದೊಡ್ಡ ವಿಶೇಷತೆ ಅದರ ಥೀಮ್ ಗಾರ್ಡನ್‌ಗಳು ಮತ್ತು ಲ್ಯಾಂಡ್‌ಸ್ಕೇಪ್‌ಗಳು. ಹವಾ ಮಹಲ್, ಮೊಘಲ್ ಗಾರ್ಡನ್, ಸನ್ ಕಾರಂಜಿ, ಜಪಾನೀಸ್ ಗಾರ್ಡನ್, ಭಾಗವತಂ ಸೆಟ್‌ಗಳು ಸೇರಿದಂತೆ ಹಲವು ಪ್ರದೇಶಗಳು ಪ್ರವಾಸಿಗರ ಕಣ್ಣಿಗೆ ಹಬ್ಬ ನೀಡುತ್ತವೆ.

ಸಾಹಸ ಪ್ರಿಯರಿಗೆ ಸಾಹಸ್
ಸಿನಿಮಾ ಸಾಕು, ಈಗ ಸ್ವಲ್ಪ ಅಡ್ವೆಂಚರ್ ಬೇಕು ಎನ್ನುವವರಿಗೆ ರಾಮೋಜಿ ಅಡ್ವೆಂಚರ್@ ಸಾಹಸ್ ಮತ್ತೊಂದು ಆಯ್ಕೆ. ನೈಸರ್ಗಿಕ ಭೂಪ್ರದೇಶವನ್ನು ಬಳಸಿಕೊಂಡು ರೂಪಿಸಿರುವ ಸಾಹಸ ವಲಯದಲ್ಲಿ ವಿವಿಧ ಚಟುವಟಿಕೆಗಳ ಮೂಲಕ ಕುಟುಂಬಗಳು, ಯುವಕರು, ವಿದ್ಯಾರ್ಥಿಗಳು ಮತ್ತು ಕಾರ್ಪೊರೆಟ್ ಗುಂಪುಗಳು ರೋಮಾಂಚನಕಾರಿ ಅನುಭವ ಪಡೆಯಬಹುದು. ರಾಮೋಜಿ ಫಿಲ್ಮ್ ಸಿಟಿ ಇದನ್ನು ಏಷ್ಯಾದ ಪ್ರಮುಖ ಅಡ್ವೆಂಚರ್ ಲ್ಯಾಂಡ್‌ಗಳಲ್ಲಿ ಒಂದಾಗಿ ಪ್ರಚಾರ ಮಾಡುತ್ತಿದೆ.
ಒಂದು ದಿನ ಸಾಕೇ?
ರಾಮೋಜಿ ಫಿಲ್ಮ್ ಸಿಟಿಯನ್ನು ನೋಡಲು ಹೋಗುವ ಪ್ರವಾಸಿಗರಿಗೆ ಅತ್ಯಂತ ಮುಖ್ಯವಾದ ಸಲಹೆ ಎಂದರೆ, ಬೆಳಗ್ಗೆಯೇ ಹೋಗಿ. ಸಂಸ್ಥೆಯ ಅಧಿಕೃತ ಮಾಹಿತಿಯ ಪ್ರಕಾರ, ಪ್ರವಾಸಿಗರಿಗೆ ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಸಿಟಿ ತೆರೆದಿರುತ್ತದೆ. ವಿಶೇಷ ಕಾರ್ನಿವಲ್ ಸಂದರ್ಭಗಳಲ್ಲಿ ಸಮಯ ವಿಸ್ತರಿಸಬಹುದು. ವಾರಾಂತ್ಯ ಮತ್ತು ರಜಾದಿನಗಳಲ್ಲಿ ಹೆಚ್ಚು ಜನಸಂದಣಿ ಇರುವ ಸಾಧ್ಯತೆ ಇರುವುದರಿಂದ ವಾರದ ದಿನಗಳಲ್ಲಿ ಭೇಟಿ ನೀಡುವುದು ಹೆಚ್ಚು ಆರಾಮದಾಯಕವಾಗಬಹುದು. ಒಂದೇ ದಿನದಲ್ಲಿ ಸಾಧ್ಯವಾದಷ್ಟು ಅನುಭವಗಳನ್ನು ಪಡೆಯಬೇಕಾದರೆ, ಪ್ರವಾಸವನ್ನು ಮುಂಚಿತವಾಗಿ ಯೋಜಿಸುವುದು ಉತ್ತಮ.
ವಾಸ್ತವ್ಯ ಉಪಚಾರಕ್ಕೆ ತಾರಾ ಸಿತಾರಾ!
ರಾಮೋಜಿ ಫಿಲ್ಮ್ ಸಿಟಿಯ ಪ್ರವಾಸದ ಮತ್ತೊಂದು ವಿಶೇಷತೆ ಎಂದರೆ, ಪ್ರವಾಸಿಗರಿಗೆ ವಾಸ್ತವ್ಯದ ವ್ಯವಸ್ಥೆಯೂ ಇದೆ. ತಾರಾ, ಸಿತಾರಾ, ಗ್ರೀನ್ ಇನ್ನ್, ಶಾಂತಿನಿಕೇತನ್, ಸಹಾರಾ, ವಸುಂಧರಾ ವಿಲ್ಲಾ ಈ ಆತಿಥ್ಯತಾಣಗಳಲ್ಲಿ ಅದ್ಭುತ ಊಟ ತಿಂಡಿ ಮತ್ತು ವಾಸ್ತವ್ಯಕ್ಕೆ ವ್ಯವಸ್ಥೆ ಇದೆ. ಅದರರ್ಥ ರಾಮೋಜಿ ಫಿಲ್ಮ್ ಸಿಟಿಯನ್ನು ಕೇವಲ ಒಂದು ದಿನದ ಪ್ರವಾಸವಾಗಿ ನೋಡುವ ಅಗತ್ಯವಿಲ್ಲ. ಸಿನಿಮಾ, ಮನೋರಂಜನೆ, ವಸತಿ, ಆಹಾರ, ಶಾಪಿಂಗ್ ಮತ್ತು ಕಾರ್ಯಕ್ರಮಗಳನ್ನು ಒಟ್ಟಿಗೆ ಸೇರಿಸಿ ಪೂರ್ಣ ಅನುಭವದ ಪ್ರವಾಸವನ್ನಾಗಿ ರೂಪಿಸಬಹುದು.

ಸಿನಿಮಾ ಥೀಮ್ ಫುಡ್ ಹಬ್!
ಪ್ರವಾಸದಲ್ಲಿ ಊಟವೂ ಒಂದು ಅನುಭವ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಥೀಮ್ ಆಧಾರಿತ ಮಲ್ಟಿ-ಕ್ಯೂಸಿನ್ ರೆಸ್ಟೋರೆಂಟ್‌ಗಳು ಮತ್ತು ಫುಡ್ ಔಟ್‌ಲೆಟ್‌ಗಳಿವೆ. ಬಾಹುಬಲಿ ಸೆಟ್ ಸಮೀಪದ ಥೀಮ್ ರೆಸ್ಟೋರೆಂಟ್ ಸೇರಿದಂತೆ ವಿಭಿನ್ನ ವಾತಾವರಣದಲ್ಲಿ ಊಟ ಮಾಡುವ ಅವಕಾಶವಿದೆ. ಪ್ರವಾಸ ಮುಗಿಯುವ ಮುನ್ನ ಥೀಮ್ ಬಜಾರ್‌ಗಳಲ್ಲಿ ಸ್ಮರಣಿಕೆಗಳು, ಉಡುಪುಗಳು, ಕರಕುಶಲ ವಸ್ತುಗಳು ಮತ್ತು ರಾಮೋಜಿ ಫಿಲ್ಮ್ ಸಿಟಿಗೆ ಸಂಬಂಧಿಸಿದ ನೆನಪಿನ ವಸ್ತುಗಳನ್ನು ಖರೀದಿಸಬಹುದು.
ಹೈದರಾಬಾದ್‌ಗೆ ಪ್ರವಾಸ ಹೋದಾಗ ಚಾರ್ಮಿನಾರ್, ಗೋಲ್ಕೊಂಡಾ, ಹುಸೇನ್ ಸಾಗರ್‌ಗಳ ಪಟ್ಟಿ ಮಾಡುವಾಗ ಅವೆಲ್ಲಕ್ಕಿಂತ ಪ್ರಥಮ ಆದ್ಯತೆಯಾಗಿ ರಾಮೋಜಿ ಫಿಲ್ಮ್ ಸಿಟಿ ಇಡಿ. ಈ ಪ್ರವಾಸ ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಒಂದು ದಿನದ ಮಟ್ಟಿಗೆ ನಿಮ್ಮದೇ ಸಿನಿಮಾದೊಳಗೆ ನೀವು ಪ್ರವೇಶಿಸುತ್ತೀರಿ. ಖಂಡಿತ.
ಇದು ಯಾರಿಗಾಗಿ?
ರಾಮೋಜಿ ಫಿಲ್ಮ್ ಸಿಟಿಯ ದೊಡ್ಡ ಶಕ್ತಿ ಅದರ ವೈವಿಧ್ಯ.
»ಸಿನಿಮಾ ಪ್ರಿಯರಿಗೆ- ಶೂಟಿಂಗ್ ಸೆಟ್‌ಗಳು, ಬಾಹುಬಲಿ ಸೆಟ್, ಬ್ಯಾಕ್‌ಲಾಟ್ ಟೂರ್ ಮತ್ತು ಸಿನಿಮಾ ನಿರ್ಮಾಣದ ಅನುಭವ.
» ಕುಟುಂಬಗಳಿಗೆ- ಮಕ್ಕಳ ರೈಡ್‌ಗಳು, ಲೈವ್ ಶೋಗಳು, ಗಾರ್ಡನ್‌ಗಳು, ಪಕ್ಷಿಗಳ ಉದ್ಯಾನ ಮತ್ತು ಮನೋರಂಜನೆ.
» ಮಕ್ಕಳಿಗೆ- ಫಂಡುಸ್ತಾನ್, ಫಿಲ್ಮಿ ದುನಿಯಾ, ರೈಡ್ಸ್, ಗೇಮ್ಸ್, ವಿಂಗ್ಸ್ ಬರ್ಡ್ ಪಾರ್ಕ್
» ಯುವಕ ಯುವತಿಯರಿಗೆ- ಭರ್ಜರಿ ಫೊಟೋ ಸ್ಪಾಟ್‌ಗಳು, ರೀಲ್ಸ್ ಸ್ಪಾಟ್ ಗಳು, ಥೀಮ್ ಸೆಟ್‌ಗಳು ಮತ್ತು ಸಾಹಸ ಚಟುವಟಿಕೆಗಳು.
» ಪ್ರಕೃತಿ ಪ್ರಿಯರಿಗೆ- ಬರ್ಡ್ ಪಾರ್ಕ್, ಬಟರ್ ಫ್ಲೈ ಪಾರ್ಕ್, ಬೋನ್ಸಾಯ್ ಪಾರ್ಕ್
» ಕಾರ್ಪೊರೆಟ್‌ಗಳಿಗೆ- ಅನುಭವಾಧಾರಿತ ಕಾರ್ಯಕ್ರಮಗಳು, ಕಾನ್‌ಫರೆನ್ಸ್‌ಗಳು ಮತ್ತು ತಂಡದ ಚಟುವಟಿಕೆಗಳಿಗೆ ಅವಕಾಶ.
» ವಿಶೇಷ ಸಂದರ್ಭಗಳಿಗೆ- ಡೆಸ್ಟಿನೇಶನ್ ವೆಡ್ಡಿಂಗ್, ಪ್ರಿ ವೆಡ್ಡಿಂಗ್ ಫೊಟೋಶೂಟ್ ಮತ್ತು ವಿವಿಧ ಕಾರ್ಯಕ್ರಮಗಳಿಗೆ ಅವಕಾಶ
ಒಟ್ಟಾರೆ ರಾಮೋಜಿ ಫಿಲ್ಮ್ ಸಿಟಿ ಸಿನಿಮಾ, ಪ್ರವಾಸೋದ್ಯಮ, ಆತಿಥ್ಯ, ಸಾಹಸ ಮತ್ತು ಕಾರ್ಯಕ್ರಮಗಳನ್ನು ಒಂದೇ ತಾಣದಲ್ಲಿ ಸಂಯೋಜಿಸಿರುವ ಬಹುಮುಖ ಪ್ರವಾಸಿ ತಾಣವಾಗಿದೆ.
ಪ್ರವಾಸಿಗರು ಮಿಸ್ ಮಾಡಬಾರದ 10 ಅನುಭವಗಳು
- ಸ್ಟುಡಿಯೋ ಟೂರ್
- ಬಾಹುಬಲಿ ಸೆಟ್
- ಬ್ಯಾಕ್ ಲಾಟ್ ಟೂರ್
- ವೈಲ್ಡ್ ವೆಸ್ಟ್ ಸ್ಟಂಟ್ ಶೋ
- ರಾಮೋಜಿ ಮೂವೀ ಮ್ಯಾಜಿಕ್
- ಫಂಡುಸ್ತಾನ್
- ವಿಂಗ್ಸ್ ಬರ್ಡ್ ಪಾರ್ಕ್
- ಬಟರ್ ಫ್ಲೈ ಮತ್ತು ಬೋನ್ಸಾಯ್ ಪಾರ್ಕ್
- ಫಿಲ್ಮಿ ದುನಿಯಾ
- ಥೀಮ್ ಗಾರ್ಡನ್ಸ್ ಮತ್ತು ಸೆಟ್ ಗಳು
ರಾಮೋಜಿ ಫಿಲ್ಮ್ ಸಿಟಿಗೆ ಹೋಗುವವರು ಗಮನಿಸಿ
ಬೆಳಗ್ಗೆ ಬೇಗ ತಲುಪಿ: ಒಂದು ದಿನದ ಪ್ರವಾಸವಾಗಿರುವುದರಿಂದ ಸಮಯವನ್ನು ಗರಿಷ್ಠವಾಗಿ ಬಳಸಿಕೊಳ್ಳಿ.
» ಮುಂಚಿತವಾಗಿ ಯೋಜಿಸಿ: ಮುಖ್ಯ ಆಕರ್ಷಣೆಗಳು ಮತ್ತು ಶೋಗಳ ಸಮಯವನ್ನು ಗಮನಿಸಿ.
» ವಾರದ ದಿನ ಆಯ್ಕೆ ಮಾಡಿದರೆ ಉತ್ತಮ: ವಾರಾಂತ್ಯ ಮತ್ತು ರಜಾದಿನಗಳಲ್ಲಿ ಜನಸಂದಣಿ ಹೆಚ್ಚಾಗಬಹುದು.
» ಆರಾಮದಾಯಕ ಉಡುಪು ಮತ್ತು ಶೂ: ದಿನವಿಡೀ ಸಾಕಷ್ಟು ಸುತ್ತಾಟವಿರುವುದರಿಂದ ಅನುಕೂಲಕರ ಉಡುಪು ಮುಖ್ಯ.
»ಕ್ಯಾಮೆರಾ/ಮೊಬೈಲ್ ಸಿದ್ಧವಾಗಿರಲಿ: ಬಾಹುಬಲಿ ಸೆಟ್‌ನಿಂದ ಥೀಮ್ ಗಾರ್ಡನ್‌ಗಳವರೆಗೆ ಫೊಟೋ ಅವಕಾಶಗಳು ಸಾಕಷ್ಟಿವೆ.
» ಕುಟುಂಬದೊಂದಿಗೆ ಹೋಗಿ: ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಪ್ರತ್ಯೇಕ ಅನುಭವಗಳಿವೆ.
»ಪೂರ್ಣ ದಿನ ಮೀಸಲಿಡಿ: ರಾಮೋಜಿ ಸಿಟಿಯನ್ನು ಕೆಲವು ಗಂಟೆಗಳಲ್ಲಿ ನೋಡಿ ಮುಗಿಸಲಾಗದು. ಇಡೀ ದಿನ ಮೀಸಲಿಡಿ.