Saturday, August 15, 2026
Saturday, August 15, 2026

ಥೈಲ್ಯಾಂಡಿಗೆ ಹೋಗುವ ಬದಲು ಅಂಡಮಾನಿಗೆ ಹೋಗಿ ಬನ್ನಿ…

ರಾಜಧಾನಿ ನಗರದಲ್ಲೇ ಐತಿಹಾಸಿಕ ಸೆಲ್ಯುಲರ್ ಜೈಲು ಇದೆ. ‘ಕಾಲಾಪಾನಿ’, ‘ಕರಿನೀರಿನ ಶಿಕ್ಷೆ’ ಎಂಬ ಪದಗಳೆಲ್ಲವೂ ಈ ಜೈಲಿನ ಕರಾಳ ಇತಿಹಾಸಕ್ಕೆ ಸಂಬಂಧಪಟ್ಟವು. 1896ರಿಂದ 1906ರವರೆಗೆ ಬ್ರಿಟಿಷರಿಂದ ನಿರ್ಮಿಸಲ್ಪಟ್ಟ ಈ ಜೈಲು, ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ನೋವು, ತ್ಯಾಗ, ಹಿಂಸೆ ಮತ್ತು ದುರಂತ ಕಥೆಗಳಿಗೆ ಇಂದಿಗೂ ಸಾಕ್ಷಿಯಾಗಿ ನಿಂತಿದೆ.

  • ಹಯವದನ

ಸ್ವಲ್ಪ ದಿನಗಳ ಹಿಂದೆ ಪ್ರಧಾನಿ ಮೋದಿ ಅವರು ವಿದೇಶ ಪ್ರಯಾಣವನ್ನು ಕಡಿಮೆ ಮಾಡಿ ಅಂತ ಕೊಟ್ಟ ಕರೆ ನಮ್ಮ ದೇಶದ ದುಡ್ಡು ಹೊರದೇಶಕ್ಕೆ ಹೋಗಬಾರದು ಅನ್ನುವ ಉದ್ದೇಶದಿಂದ ಅನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಸರಿ. ಹೌದು ಅಂಡಮಾನಿಗೆ ಹೋಗಿ ಬಂದರೆ ಬಾಲಿ, ಫುಕೇಟ್‌, ಕ್ರಾಬಿಯ ಸಮುದ್ರಕ್ಕಿಂತ ಸುಂದರವಾದ ಸಮುದ್ರ ತೀರಗಳ ಅನುಭವ ಭಾರತದೊಳಗಿದ್ದೆ ಆಗಲಿದೆ. ಭಾರತದ್ದೆ ಒಂದು ಸ್ವರ್ಗದ ತುಂಡು ಸಾವಿರಾರು ಮೈಲಿ ದೂರದಲ್ಲಿದೆ ಆ ಭೂಮಿಯನ್ನು ತುಳಿಯದೆ ಅದರ ಸೌಂದರ್ಯದ ಅರಿವು ನಮಗಾಗದು. ಆ ದ್ವೀಪಗಳನ್ನು ನೋಡಿ ಬರುವಾಗ ಮನಸು ಬಾರವಾಗದೆ ಇರದು, ನಿಮ್ಮೊಳಗಿನ ದೇಶಪ್ರೇಮ ಕಣ್ಣೀರು ಸುರಿಸದೆ ಇರನು.

ಅಂಡಮಾನಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ, ಆ ಬಲಿದಾನದ ಭೂಮಿಯ ಗಾಳಿ ಬೆಳೆಯುವ ಮಕ್ಕಳಿಗೆ ತಾಗಲಿ. ಸಾವಿರಾರು ವರ್ಷ ದಾಸ್ಯ ಕಂಡ ದೇಶದ ಒಂದು ಕಠಿಣವಾದ ಜೈಲು, ಅದರ ನಿರ್ಮಾಣದ ಹಿಂದಿನ ಉದ್ದೇಶ ಅಲ್ಲಿ ಜೀವ ಸವಿಸಿದ, ಪ್ರಾಣ ಕಳೆದುಕೊಂಡ ಮಹಾತ್ಮರ ಬಗೆಗೆ ನಮಗಿಂತ ಹೆಚ್ಚು ಮಕ್ಕಳು ಅರಿತರೆ ಅದಕ್ಕಿಂತ ಭಾರತೀಯನಾಗುವ ಪರಿ ಇನ್ಯಾವುದಿದೆ..‌

ಇದನ್ನೂ ಓದಿ: ಬುಲವಾಯೋದ ವಿಶಾಲ ಬೀದಿಗಳು ಮತ್ತು ಕಾಲದ ಹೆಜ್ಜೆಗುರುತುಗಳು

ಪೊರ್ಟ್ಬ್ಲೇರ್‌ ಈಗ ಅಧಿಕೃತವಾಗಿ ಶ್ರೀ ವಿಜಯಪುರಂ ಅಂತ ನಾಮಕರಣಗೊಂಡ ರಾಜಧಾನಿ ನಗರದಲ್ಲೇ ಸೆಲ್ಯುಲಾರ್‌ ಜೈಲು ಇರೋದು.

Untitled design (61)

ಕಾಲಾಪಾನಿ, ಕರಿನೀರಿನ ಶಿಕ್ಷೆ ಅನ್ನುವ ಪದಗಳೆಲ್ಲ ಈ ಜೈಲಿಗೆ ಸಂಬಂಧಪಟ್ಟವು, 1896 ರಿಂದ 1906ರವರೆಗೆ ಬ್ರಿಟಿಷರಿಂದ ಕಟ್ಟಲ್ಪಟ್ಟು, ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ಸಾವು ನೋವಿನ ದುರಂತ ಕಥೆಗೆ ಸಾಕ್ಷಿ ಈ ಜೈಲು.

ಹೌದು, ಅಂಡಮಾನಿನ ಸುಂದರ ರಾಧಾನಗರ ಬೀಚ್‌, ಕಾಲಾಪತ್ತರ್‌ ಬೀಚ್‌, ದಟ್ಟವಾದ ಅರಣ್ಯಪ್ರದೇಶ, ಅತೀಸುಂದರವಾದ ಹ್ಯಾವಲಾಕ್‌ ಐಲ್ಯಾಂಡ್‌ ಎಲ್ಲವನ್ನು ಸುತ್ತಾಡಿ, ಸ್ಕೂಬಾ ಡೈವಿಂಗ್‌, ಸ್ಪೀಡ್‌ ಬೋಟ್‌ ರೈಡ್‌, ಇನ್ನಿತರ ಯಾವುದೇ ಚಟುವಟಿಕೆ ಮಾಡಿ, ನೀವು ಇಲ್ಲಿಗೆ ಬಂದರು, ಸೆಲ್ಯುಲಾರ್‌ ಜೈಲಿನ ಈ ಕಪ್ಪು ಕಲ್ಲಿನ ಗೋಡೆಗಳು ನಿಮಗೆ ಸಾವಿರಾರು ಕಥೆಗಳನ್ನು ಹೇಳುತ್ತವೆ. ಯಾರೋ ಮಾಡಿದ ತ್ಯಾಗಕ್ಕೆ ನಾವಿವತ್ತು ಸ್ವಚ್ಛಂದವಾಗಿ ಓಡಾಡುವ ಈ ಬದುಕಿನ ಬಗ್ಗೆ ಹೆಮ್ಮೆ ಬರದೆ ಇರಲಾರದು.

ಏಳು ಉದ್ದನೆಯ ಸಾಲುಗಳು ತಲಾ ನಾಲ್ಕು ಮಹಡಿ, ಒಂದರ ಪಕ್ಕ ಒಂದು ಸೆಲ್‌, ಮುಂದೆ ಸರಳುಗಳಿಂದ ನೋಡಿದರೆ ಮುಂದಿನ ಬ್ಲಾಕಿನ ಗೋಡೆ, ಹಿಂದೆ ಇರುವ ಪುಟ್ಟ ಕಿಂಡಿಯಲ್ಲಿ ಇಣುಕಿದರೆ ವಿಶಾಲ ಸಾಗರ. ಅಕ್ಕ–ಪಕ್ಕ ಯಾರು ಕಾಣಿಸಲ್ಲ, ಒಬ್ಬರಿಗೊಬ್ಬರಿಗೆ ಯಾವೂದೇ ಕಮ್ಯುನಿಕೇಷನ್‌ ಅಸಾಧ್ಯ. ಇದು ಈ ಜೈಲಿನ ನಿರ್ಮಾಣ ವಿನ್ಯಾಸ.

Untitled design (60)

ಸ್ವಾತಂತ್ರ್ಯ ಸಂಗ್ರಾಮ ಅತಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ತೀವ್ರಗಾಮಿ ಹೋರಾಟಗಾರರನ್ನು ನಿಯಂತ್ರಿಸಲು ಬ್ರಿಟಿಷರು ಮಾಡಿದ ಉಪಾಯವೇ ಈ ಜೈಲು. ಸುತ್ತ ಸಾವಿರಾರು ಮೈಲಿ ಸಮುದ್ರ ತಪ್ಪಿಸಿಕೊಂಡು ಹೋಗುವುದು ಅಸಾಧ್ಯದ ಮಾತು, ಹೀಗೆ ವ್ಯವಸ್ಥಿತವಾಗಿ ಮಾಡಿರುವ ಜೈಲಿನಲ್ಲಿ ಎಂಥ ಧೈರ್ಯವಂತನಾಗಿದ್ದರು ಕೂಡ, ತನ್ನ ಆತ್ಮಸ್ಥೈರ್ಯವನ್ನು ಕಳೆದುಕೊಂಡು ಬಿಡಬೇಕು, ತನ್ನಿಂದ ಇನ್ನೇನು ಮಾಡಲು ಸಾಧ್ಯವಿಲ್ಲ ಅನ್ನುವ ಮನಸ್ಥಿತಿಗೆ ಒಬ್ಬ ಹೋರಾಟಗಾರ ಬಂದುಬಿಡಬೇಕು.

ದಟ್ಟವಾದ ಅರಣ್ಯದಲ್ಲಿರು ಗಟ್ಟಿ ಬೆಲೆಬಾಳುವ ಮರಗಳನ್ನು ಕಡೆದು, ಕೊರೆದು ತಮ್ಮ ದೇಶಕ್ಕೆ ಸಾಗಿಸಲು ಇಲ್ಲಿರುವ ಕೈದಿಗಳನ್ನೆ ಬ್ರಿಟಿಷ್‌ರು ಉಪಯೋಗಿಸುತ್ತಿದ್ದರಂತೆ ಮತ್ತು ಜೈಲಿನಲ್ಲಿದ್ದ ಹೋರಾಟಗಾರರಿಗೆ ಅತಿ ಕಠಿಣವಾದ ಎಣ್ಣೆ ತೆಗೆಯುವ ಶಿಕ್ಷೆ ಅಂದರೆ ಎಮ್ಮೆ– ಕೋಣಗಳ ಬದಲಿಗೆ ಗಾಣವನ್ನು ತಮ್ಮ ಕೈಯಿಂದಲೆ ನೋಗವನ್ನು ತಿರುಗಿಸಿ ಸುಮಾರು 14-15ಕೆಜಿಯಷ್ಟು ಎಣ್ಣೆಯನ್ನು ತೆಗೆಯಲೇ ಬೇಕಾದ ಗುರಿಯನ್ನು ನೀಡಿ, ಅದನ್ನ ತಲುಪಲು ಆಗದೆ ಇದ್ದ ಕೈದಿಗಳಿಗೆ ಅಮಾನುಷ ಶಿಕ್ಷೆಗಳನ್ನ ನೀಡುತ್ತಿದ್ದರಂತೆ.

ಆ ಗಾಣದ ನೋಗವನ್ನು ಒಮ್ಮೆ ಕೈಯಿಂದ ಮುಟ್ಟದರೆ, ಆ ಸೆಲ್‌ಗಳ ಕಾರಿಡಾರಿನಲ್ಲಿ ನಡೆಯುತ್ತಿದ್ದರೆ ಮನಸು ಭಾರವಾಗದೆ ಇರದು, ಮೂರನೆಯ ಮಹಡಿಯ ವೀರ್‌ ಸಾವರ್ಕರ್‌ ಸೆಲ್‌ ಒಳಗೆ ಹೋಗಿ, ಕ್ಷಣ ಅಲ್ಲಿ ಕುಳಿತಾಗ ಕಣ್ಣಂಚು ಹಸಿಯಾಗದೆ ಇರದು, ತನ್ನ ಅಣ್ಣ ಗಣೇಶ ಸಾವರ್ಕರ್‌ ಅವರನ್ನು ಈ ಜೈಲಿಗೆ ಬಂದು 9 ತಿಂಗಳ ನಂತರ ಮೊದಲ ಸಲ ನೋಡುವ ವೀರ್‌ ಸಾವರ್ಕರ್‌ ಅವರ ಮನಸು ಎಷ್ಟು ನೊಂದಿರಬೇಡ. ಒಂದೆ ಜೈಲಿನಲ್ಲಿದ್ದ ಅಣ್ಣನಿಗೆ ತನ್ನ ತಮ್ಮನು ಇಲ್ಲಿಗೆ ಬಂದಿರುವ ವಿಷಯ ತಳಿಯಲು 9 ತಿಂಗಳಾಯಿತು ಅಂದರೆ ಈ ಜೈಲಿನಲ್ಲಿ ಅದೆಷ್ಟು ಕಟ್ಟುಪಾಡುಗಳು ಇದ್ದಿರಬೇಡ.

ನೇಣುಗಂಬ ಇರುವ ಕೋಣೆಗೆ ಹೋಗಲು, ನೇಣು ಹಾಕಿದ ನಂತರ ಶವ ನೇತಾಡುವ ನೆಲಮಾಳಿಗೆಯ ಕೋಣೆಗೆ ಹೋಗಲು ಬರಿ ಧೈರ್ಯವಿದ್ದರೆ ಸಾಲದು, ಎಷ್ಟು ಸಾವಿರ ಜೀವಗಳು ಆ ಜಾಗದಲ್ಲಿ ಹೋಗಿರಬೇಡ.

Untitled design (62)

ಈಗ ಈ ಜೈಲು ರಾಷ್ಟ್ರೀಯ ಸ್ಮಾರಕ

ದಿನವು ಸಂಜೆ ನಡೆಯುವ ಸೌಂಡ್‌ ಅಂಡ್‌ ಲೈಟ್‌ ಶೋ ಇಲ್ಲಿನ ಪ್ರವಾಸಿಗರ ಆಕರ್ಷಣೆ. ಶಬ್ದವಿನ್ಯಾಸಕ್ಕೆ ಅನುಗುಣವಾಗಿ ಇಡೀಯ ಜೈಲು ಲೈಟುಗಳ ಆಟದ ಮೂಲಕವೇ ಒಂದು ಪಾತ್ರವಾಗಿ ಹೊರಹೊಮ್ಮುತ್ತದೆ. ಜೈಲಿನ ಮುಖ್ಯದ್ವಾರ ಒಳಗಿರುವ ಆಲದ ಮರವನ್ನೇ ಒಂದು ಪಾತ್ರವಾಗಿ ಕಲ್ಪಿಸಿಕೊಂಡು, ಅದು ನೋಡಿರುವ ಕಥೆಗಳನ್ನ ಅದೇ ವಿವರಿಸುವ ಪರಿ ಅದ್ಭುತ. ಅಂಬರೀಷ್‌ ಪುರಿ ಮತ್ತು ಓಂ ಪುರಿ ಅವರು ಆ ಮರದ ಪಾತ್ರಕ್ಕೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಧ್ವನಿ ನೀಡಿರುವುದು ವಿಶೇಷ, ಅವರಿಬ್ಬರ ಬೇಸ್‌ ವಾಯ್ಸ್‌ನಲ್ಲಿ (ಗಡಸ್ಸು ಧ್ವನಿಯಲ್ಲಿ) ಮೈ ನವಿರೇಳದೆ ಇರದು. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ತಲಾ ಒಂದು ಶೋ ಇದ್ದು. ಭಾಷೆಯ ಆಯ್ಕೆಯ ಮೇಲೆ ನೋಡಬಹುದು.

ಪುಸ್ತಕ ಮತ್ತು ಇಂಟರ್‌ನೆಟ್‌ನಲ್ಲಿಯೆ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ತಿಳಿದಿರುವ ಮಕ್ಕಳನ್ನ ನೇರವಾಗಿ ಇಂಥ ಬಲಿದಾನದ ಭೂಮಿಗೆ ಕರೆದೊಯ್ಯುವುದು ಒಂದು ದೇಶಪ್ರೇಮವೇ. ಅಪ್ರತಿಮ ಸ್ವಾತಂತ್ರ್ಯವೀರರನ್ನು ಅಲ್ಲಿ ಅವರ ಪ್ರತಿಮೆಯ ಮುಂದೆ ನಿಂತು ಸ್ಮರಿಸುವುದೇ ನಾವು ಅವರಿಗೆ ಸಲ್ಲಿಸಬಹುದಾದ ಗೌರವಸಮರ್ಪಣೆ.

ಸುಂದರವಾದ ಬಿಳಿ ಮರಳಿನ ತಿಳಿನೀರಿನ ಸಮುದ್ರ ನೋಡಿ, ಸ್ಕೂಬಾ ಡೈವ್‌ ಮಾಡಿ ಆಳದ ಜಲಚರ ಜೀವರಾಶಿಯನ್ನು ನೋಡಿದ ಖುಷಿಯ ಜತೆ ದೇಶಪ್ರೇಮದ ಬುತ್ತಿಯನ್ನು ಹೊತ್ತು ವಿಮಾನವೇರುವಾಗ, ನಿಮ್ಮ ಬಾಯಲ್ಲಿ ಜೈ ಹಿಂದ್ ಬರದೇ ಇರದು.

--

ಲೇಖಕರು: ಚಿತ್ರನಿರ್ದೇಶಕ

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!