Sunday, June 15, 2025
Sunday, June 15, 2025

ಹೊಸ ರೂಪ ಪಡೆಯಲಿರುವ ಪಾಸ್‌ ಪೋರ್ಟ್‌ ; ಭಾರತೀಯ ಪಾಸ್‌ಪೋರ್ಟ್‌ ಹೇಗಿರಲಿದೆ ಗೊತ್ತಾ?

2025ರಲ್ಲಿ ಭಾರತೀಯ ಪಾಸ್‌ಪೋರ್ಟ್‌ನಲ್ಲಿ ವಿಶೇಷವಾದ ಬದಲಾವಣೆಗಳು ಕಂಡುಬರಲಿದ್ದು, ಖಾಸಗಿ ವಿಚಾರಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಹಾಗೂ ಭದ್ರತೆಯ ದೃಷ್ಟಿಯಿಂದ ಅನೇಕ ವಿಚಾರಗಳನ್ನು ನವೀಕರಿಸಲಾಗಿದೆ.

ಭದ್ರತೆಯನ್ನು ಹೆಚ್ಚಿಸಲು ಮತ್ತು ದಕ್ಷತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ವಿದೇಶಾಂಗ ಸಚಿವಾಲಯವು (Ministry of External Affairs) 2025ರಲ್ಲಿ ಭಾರತೀಯ ಪಾಸ್‌ಪೋರ್ಟ್‌ನಲ್ಲಿ ಒಂದಷ್ಟು ಬದಲಾವಣೆಗಳನ್ನು ತಂದಿದೆ. ಈ ನವೀಕರಣವು ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಆರಾಮದಾಯಕ ಹಾಗೂ ಸುರಕ್ಷತೆಯಿಂದ ಕೂಡಿದ ಪ್ರಯಾಣವನ್ನು ಕಲ್ಪಿಸಿಕೊಡಲಿದೆ.

ಭಾರತೀಯ ಪಾಸ್‌ಪೋರ್ಟ್‌ನಲ್ಲಿನ ಐದು ಪ್ರಮುಖ ಬದಲಾವಣೆಗಳು

ಇ - ಪಾಸ್‌ಪೋರ್ಟ್ ಬಗ್ಗೆ ತಿಳಿಯಿರಿ

ಈ ವರ್ಷ ಪ್ರಾರಂಭಿಸಲಾದ ಇ - ಪಾಸ್‌ಪೋರ್ಟ್‌ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕಾದುದು ಸಾಕಷ್ಟಿವೆ. ಅವು ಮೊದಲ ನೋಟಕ್ಕೆ ಸಾಮಾನ್ಯ ಪಾಸ್‌ಪೋರ್ಟ್‌ಗಳಂತೆಯೇ ಕಾಣುತ್ತಿದ್ದರೂ, ಜನದಟ್ಟಣೆಯಿರುವ ಅನೇಕ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆಗಳನ್ನು ವೇಗಗೊಳಿಸಲು ಮತ್ತು ಭದ್ರತೆಯನ್ನು ಹೆಚ್ಚಿಸಲು ಇ-ಪಾಸ್‌ಪೋರ್ಟ್‌ ನಲ್ಲಿರುವ ಚಿಪ್‌ಗಳು, ಪಾಸ್‌ಪೋರ್ಟ್ ಹೊಂದಿರುವವರ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುತ್ತವೆ. ನಿಮ್ಮ ಪಾಸ್‌ಪೋರ್ಟ್ ಅವಧಿ ಮುಗಿದ ನಂತರ, ಇ - ಪಾಸ್‌ಪೋರ್ಟ್ ನೀಡಲಾಗುತ್ತದೆ.

ಕಡ್ಡಾಯವಿದೆ ಜನನ ಪ್ರಮಾಣಪತ್ರ

ಜನ್ಮ ದಿನಾಂಕವನ್ನು ಸಾಬೀತುಪಡಿಸುವ ಏಕೈಕ ದಾಖಲೆ ಜನನ ಪ್ರಮಾಣಪತ್ರ. ಈ ನಿಟ್ಟಿನಲ್ಲಿ ಅಕ್ಟೋಬರ್ 1, 2023 ರ ನಂತರ ಜನಿಸಿದ ಅರ್ಜಿದಾರರಿಗೆ ಜನನ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೆ, ಈ ದಿನಾಂಕಕ್ಕಿಂತ ಮೊದಲು ಜನಿಸಿದವರು ತಮ್ಮ ಜನ್ಮ ದಿನಾಂಕವನ್ನು ಸಾಬೀತುಪಡಿಸಲು ಶಾಲಾ ಪ್ರಮಾಣಪತ್ರ, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿಯನ್ನು ಸಲ್ಲಿಸಬಹುದು.

ಪಾಸ್‌ಪೋರ್ಟ್‌ನಲ್ಲಿ ವಿಳಾಸವಿಲ್ಲ

ಈವರೆಗೂ ಪಾಸ್‌ಪೋರ್ಟ್‌ ನ ಕೊನೆಯ ಪುಟದಲ್ಲಿ ವಸತಿ ವಿಳಾಸವಿರುತ್ತಿತ್ತು. ಆದರೆ ಇನ್ನುಮುಂದೆ ಹಾಗಿಲ್ಲ. ಪಾಸ್‌ಪೋರ್ಟ್ ಹೊಂದಿರುವವರ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪಾಸ್‌ಪೋರ್ಟ್‌ನಲ್ಲಿ ವಿಳಾಸವನ್ನು ಮುದ್ರಿಸುವ ಬದಲು, ಬಾರ್‌ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಡಿಜಿಟಲ್ ರೂಪದಲ್ಲಿ ಲಭ್ಯವಾಗುತ್ತದೆ.

ಪೋಷಕರ ಹೆಸರನ್ನು ಹಾಕುವಂತಿಲ್ಲ

ವೈಯಕ್ತಿಕ ಡೇಟಾವನ್ನು ಅನಗತ್ಯವಾಗಿ ಬಹಿರಂಗಪಡಿಸುವುದನ್ನು ತಪ್ಪಿಸಲು ಭಾರತೀಯ ಪಾಸ್‌ಪೋರ್ಟ್‌ಗಳು ಇನ್ನು ಮುಂದೆ ಪೋಷಕರ ಹೆಸರನ್ನು ಒಳಗೊಂಡಿರುವುದಿಲ್ಲ. ತಮ್ಮ ವಿವರಗಳನ್ನು ಖಾಸಗಿಯಾಗಿಡಲು ಆದ್ಯತೆ ನೀಡುವ ಕುಟುಂಬಗಳಿಗೆ ಈ ನವೀಕರಣವು ಪ್ರಯೋಜನಕಾರಿಯಾಗಲಿದೆ.

passport new

ಕಲರ್‌-ಕೋಡೆಡ್ ಪಾಸ್‌ಪೋರ್ಟ್‌ಗಳು

ವಿವಿಧ ರೀತಿಯ ಪಾಸ್‌ಪೋರ್ಟ್‌ಗಳನ್ನು ಸುಲಭವಾಗಿ ಗುರುತಿಸಲು ಕಲರ್-ಕೋಡೆಡ್ ವ್ಯವಸ್ಥೆಯನ್ನು ಪರಿಚಯಿಸಲಾಗುವುದು. ಈ ನವೀಕರಣವು ವಲಸೆ ಮತ್ತು ಭದ್ರತಾ ತಪಾಸಣೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ. ಸಾಮಾನ್ಯ ಪಾಸ್‌ಪೋರ್ಟ್‌ಗಳು ಕಡು ನೀಲಿ ಬಣ್ಣದಲ್ಲಿದ್ದರೆ, ಸರ್ಕಾರಿ ಅಧಿಕಾರಿಗಳಿಗೆ ಬಿಳಿ ಪಾಸ್‌ಪೋರ್ಟ್‌ಗಳನ್ನು ನೀಡಲಾಗುತ್ತದೆ. ರಾಜತಾಂತ್ರಿಕ ಪಾಸ್‌ಪೋರ್ಟ್ ಮರೂನ್ ಬಣ್ಣದ್ದಾಗಿದ್ದರೆ, ಎಮರ್ಜೆನ್ಸಿ ಸರ್ಟಿಫಿಕೇಟ್ ಬೂದು ಬಣ್ಣದ್ದಾಗಿದ್ದು, ವಲಸೆ ಪಾಸ್‌ಪೋರ್ಟ್‌ಗಳು ಕಿತ್ತಳೆ ಬಣ್ಣದ್ದಾಗಿರುತ್ತವೆ.

Bhagyalakshmi N

Bhagyalakshmi N

Travel blogger and adventurer passionate about exploring new cultures and sharing travel experiences.

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!