ಗ್ರ್ಯಾಂಡ್ ಟೂರಿಸಂ ಉತ್ಸವಕ್ಕೆ ವೇದಿಕೆ ಸಿದ್ದಪಡಿಸುತ್ತಿದೆ ಮಹಾರಾಷ್ಟ್ರದ ಮಹಾಬಲೇಶ್ವರ
ಮಹಾರಾಷ್ಟ್ರ ಪ್ರವಾಸೋದ್ಯಮ ಇಲಾಖೆ ಇದೇ ಮೊದಲ ಬಾರಿಗೆ ಮೇ 2 ರಿಂದ ಮೇ 4, 2025 ರವರೆಗೆ ಮಹಾಬಲೇಶ್ವರ ಪರ್ಯಟನ್ ಮಹೋತ್ಸವವನ್ನು ಆಯೋಸಿದೆ. ಪ್ರಕೃತಿ, ಸಾಹಸ ಮತ್ತು ಸಂಸ್ಕೃತಿಯ ಸಮ್ಮಿಲನದೊಂದಿಗೆ ಆಯೋಜಿಸಲಾಗುವ ಈ ಉತ್ಸವವು ಪ್ರವಾಸೋಧ್ಯಮ ರಂಗದಲ್ಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟದ ಮಹಾದೇವ ಪರ್ವತ ಶ್ರೇಣಿಯಲ್ಲಿರುವ ಮಹಾಬಲೇಶ್ವರವು, ಕೃಷ್ಣ ನದಿಯ ಉಗಮ ಸ್ಥಾನದಲ್ಲಿದೆ. ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯಲ್ಲಿರುವ ಈ ಪ್ರೇಕ್ಷಣೀಯ ಗಿರಿಧಾಮವು ಪ್ರವಾಸಿಗರ ಸ್ವರ್ಗವೆಂದೇ ಗುರುತಿಸಿಕೊಂಡಿದೆ. ಆದರೆ ಸದ್ಯ ಮಹಾಬಲೇಶ್ವರವು ಸುದ್ದಿಯಲ್ಲಿರುವುದು ಬೇರೆಯದೇ ವಿಚಾರಕ್ಕೆ..ಹೌದು, ಇದೇ ಮೊದಲ ಬಾರಿಗೆ ಇಲ್ಲಿ ಮಹಾಬಲೇಶ್ವರ ಪರ್ಯಟನ್ ಮಹೋತ್ಸವ 2025 ರನ್ನು ಹಮ್ಮಿಕೊಂಡಿದ್ದು ಪ್ರವಾಸಿಗರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

'ಮಹಾಬಲೇಶ್ವರ ಪರ್ಯಟನ್ ಮಹೋತ್ಸವ' ಯಾವಾಗ ?
ಪ್ರವಾಸೋದ್ಯಮ ಇಲಾಖೆಯ ನೇತೃತ್ವದಲ್ಲಿ ಮೇ 2 ರಿಂದ ಮೇ 4 ರವರೆಗೆ ನಡೆಯಲಿರುವ ಮಹಾಬಲೇಶ್ವರ ಪರ್ಯಟನ್ ಮಹೋತ್ಸವದ ಹಿನ್ನೆಲೆಯಲ್ಲಿ ಅಲ್ಲಿ 100 ಕ್ಕೂ ಹೆಚ್ಚು ಅತ್ಯಾಧುನಿಕ ಹಾಗೂ ಐಷಾರಾಮಿ ಟೆಂಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ಈ ಸಂಭ್ರಮದಲ್ಲಿ ಭಾಗವಹಿಸುವ ಪ್ರವಾಸಿಗರಿಗೆ ಹಾಗೂ ಗಣ್ಯರಿಗೆ ವಿಶಿಷ್ಟ ವಸತಿಯ ಜೊತೆಗೆ ಪ್ರವಾಸೋದ್ಯಮದ ಹೊಚ್ಚ ಹೊಸ ಅನುಭವವನ್ನು ನೀಡುವ ಉದ್ದೇಶವನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ.
ಉತ್ಸವದ ವಿಶೇಷತೆಗಳೇನು ?
ಮಹಾರಾಷ್ಟ್ರದಲ್ಲಿ ಮೊದಲಬಾರಿಗೆ ನಡೆಯುತ್ತಿರುವ ಈ ಉತ್ಸವದಲ್ಲಿ ಅನೇಕ ವಿಶಿಷ್ಟ ಕಾರ್ಯಕ್ರಮಗಳು ಪ್ರವಾಸಿಗರನ್ನು ಸೆಳೆಯಲಿವೆ. ಅದರಲ್ಲಿ ವೆನ್ನಾ ಸರೋವರದಲ್ಲಿ ಆಕರ್ಷಕ ಡ್ರೋನ್ ಲೇಸರ್ ಪ್ರದರ್ಶನದ ದೃಶ್ಯ ವೈಭವವು ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಲಿದೆ.

ಸಾಹಸವನ್ನು ಬಯಸುವವರಿಗೆ, ವೆನ್ನಾ ಸರೋವರವು ವಿವಿಧ ಜಲ ಕ್ರೀಡೆಗಳು ಮತ್ತು ಹೊರಾಂಗಣ ಚಟುವಟಿಕೆಗಳನ್ನು ಸಹ ಆಯೋಜಿಸಲಾಗುತ್ತದೆ. ಅಲ್ಲದೆ ಭಾರತದಾದ್ಯಂತ ಪ್ರವಾಸೋದ್ಯಮ ತಜ್ಞರು ಮತ್ತು ಪ್ರಯಾಣ ಏಜೆಂಟ್‌ಗಳನ್ನು ಒಳಗೊಂಡ ವಿಶೇಷವಾಗಿ ಆಯೋಜಿಸಲಾದ ವಿಚಾರ ಸಂಕಿರಣವು ಮಾಹಿತಿಪೂರ್ಣ ವೇದಿಕೆಯಿಂದ ಲಭ್ಯವಾಗಲಿದೆ.
ಮೇ 3 ರಂದು, ಉತ್ಸವವು ಸುಂದರವಾದ ಸೇಬಲ್ ರಸ್ತೆಯಲ್ಲಿ ವರ್ಣರಂಜಿತ ದಿಂಡಿ ಮೆರವಣಿಗೆಯನ್ನು ಆಯೋಜಿಸುವುದಾಗಿ ಪ್ರವಾಸೋದ್ಯಮ ಇಲಾಖೆ ಮಾಹಿತಿ ನೀಡಿದೆ. ಇದರಲ್ಲಿ ಭಾಗವಹಿಸುವುದರ ಮೂಲಕ ಈ ಪ್ರದೇಶದ ಸಾಂಸ್ಕೃತಿಕ ಚಿತ್ರಣ, ಸಂಪ್ರದಾಯಗಳು ಮತ್ತು ಪರಂಪರೆಯ ಬಗೆಗಿನ ಮಾಹಿತಿ ಸಿಗುವಂತಾಗುತ್ತದೆ.
ಒಟ್ಟಿನಲ್ಲಿ ಪ್ರಕೃತಿ, ಸಾಹಸ ಮತ್ತು ಸಂಸ್ಕೃತಿಯ ಸಮ್ಮಿಲನದೊಂದಿಗೆ, ಮಹಾಬಲೇಶ್ವರ ಪರ್ಯಟನ್ ಮಹೋತ್ಸವವು ಪ್ರವಾಸೋಧ್ಯಮ ರಂಗದಲ್ಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಮೂಲಕ ಮಹಾರಾಷ್ಟ್ರ ಪ್ರವಾಸೋದ್ಯಮವನ್ನು ದೇಶದ ಗಡಿಯಾಚೆಗೆ ತಲುಪುವಂತೆ ಮಾಡಿ, ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಪ್ರಯತ್ನ ಪ್ರವಾಸೋದ್ಯಮ ಇಲಾಖೆಯದ್ದು.