Saturday, August 15, 2026
Saturday, August 15, 2026

ಸ್ವಾತಂತ್ರ್ಯದ ಹಳಿಗಳಲ್ಲಿ ಸಾಗುವ ಪ್ರವಾಸ…

ಸ್ವಾತಂತ್ರ್ಯದ ನಂತರ ಭಾರತೀಯ ರೈಲ್ವೇಯು ಕೇವಲ ಹಳಿಗಳ ಉದ್ದವನ್ನು ಹೆಚ್ಚಿಸಿಲ್ಲ. ಪ್ರಯಾಣದ ಗುಣಮಟ್ಟವನ್ನೂ ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಆಧುನಿಕ ತಂತ್ರಜ್ಞಾನ, ವೇಗ, ಸುರಕ್ಷತೆಗಳೊಂದಿಗೆ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯವನ್ನು ತುಂಬಿದೆ.

  • ಜ್ಯೋತಿ ಪ್ರಸಾದ್

1947ರಲ್ಲಿ ಸ್ವಾತಂತ್ರ್ಯ ಪಡೆದ ಭಾರತ ಇಂದು ಜಗತ್ತಿನ ಗಮನ ಸೆಳೆಯುವ ರಾಷ್ಟ್ರವಾಗಿ ರೂಪುಗೊಂಡಿರುವುದಕ್ಕೆ ದೇಶದ ಸಾರಿಗೆ ವ್ಯವಸ್ಥೆಯ ಅಭಿವೃದ್ಧಿಯೂ ಪ್ರಮುಖ ಕಾರಣ. ಸ್ವಾತಂತ್ರ್ಯ ನಂತರ ಭಾರತವು ರಸ್ತೆ, ರೈಲು, ವಿಮಾನ ಮತ್ತು ಮೆಟ್ರೋ ವ್ಯವಸ್ಥೆಗಳಲ್ಲಿ ಗಣನೀಯ ಹೂಡಿಕೆ ಮಾಡಿದೆ. ಈ ಮೂಲಸೌಕರ್ಯದ ಅಭಿವೃದ್ಧಿಯು ದೇಶದ ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ನೀಡಿದೆ. ಉತ್ತಮ ಸಂಪರ್ಕ ವ್ಯವಸ್ಥೆಯಿಂದ ಹಲವಾರು ವಿಶೇಷ ತಾಣಗಳು ಇಂದು ಪ್ರವಾಸೋದ್ಯಮದ ನಕ್ಷೆಯಲ್ಲಿ ಸ್ಥಾನ ಪಡೆದಿವೆ. ಇದರಿಂದ ಸ್ಥಳೀಯ ಉದ್ಯೋಗ, ಹೊಟೇಲ್ ಉದ್ಯಮ, ಕೈಗಾರಿಕೆ, ಕರಕುಶಲ ವಸ್ತುಗಳ ಮಾರಾಟ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ.

ಇದನ್ನೂ ಓದಿ: ಮನೆಯಿಂದ ದೂರ, ತ್ರಿವರ್ಣಕ್ಕೆ ಇನ್ನಷ್ಟು ಹತ್ತಿರ!

ನಮಗೆಲ್ಲಾ ತಿಳಿದಂತೆ ಭಾರತೀಯ ರೈಲ್ವೇ, ಭಾರತದ ಜೀವನಾಡಿ. ಒಮ್ಮೆ ಕೇವಲ ಪ್ರಯಾಣದ ಮಾರ್ಗವಾಗಿದ್ದ ಭಾರತೀಯ ರೈಲ್ವೇ, ಇಂದಿನ ದಿನಗಳಲ್ಲಿ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿ, ದೇಶದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ವೈಭವಪೂರ್ಣ ಅನುಭವವಾಗಿ ಮಾರ್ಪಟ್ಟಿದೆ.

Untitled design (84)

ಸ್ವಾತಂತ್ರ್ಯದ ನಂತರ ಭಾರತೀಯ ರೈಲ್ವೇಯು ಕೇವಲ ಹಳಿಗಳ ಉದ್ದವನ್ನು ಹೆಚ್ಚಿಸಿಲ್ಲ. ಪ್ರಯಾಣದ ಗುಣಮಟ್ಟವನ್ನೂ ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಆಧುನಿಕ ತಂತ್ರಜ್ಞಾನ, ವೇಗ, ಸುರಕ್ಷತೆಗಳೊಂದಿಗೆ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯವನ್ನು ತುಂಬಿದೆ. ‘ಆತ್ಮನಿರ್ಭರ ಭಾರತ’ ಮತ್ತು ಆಧುನಿಕತೆಯ ಸಂಕೇತವಾಗಿ ಓಡುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ವಿಸ್ಟಾಡೋಂ ರೈಲುಗಳು ಸ್ವತಂತ್ರ ಭಾರತದ ಪರಿವರ್ತನೆಯ ಶ್ರೇಷ್ಠ ನಿದರ್ಶನಗಳಾಗಿವೆ. ಸ್ವದೇಶಿ ತಂತ್ರಜ್ಞಾನದಡಿಯಲ್ಲಿ ರೂಪುಗೊಂಡ ಈ ರೈಲುಗಳು ಇಂದು ಭಾರತೀಯ ರೈಲ್ವೇಯ ಹೆಮ್ಮೆಯ ಕುರುಹಾಗಿವೆ. ದೇಶದ ಅನೇಕ ಪ್ರಮುಖ ನಗರಗಳನ್ನು ವೇಗವಾಗಿ ಜೋಡಿಸುವುದಷ್ಟೇ ಅಲ್ಲದೆ, ಪ್ರವಾಸಿಗರಿಗೆ ಅಂತಾರಾಷ್ಟ್ರೀಯ ಮಟ್ಟದ ಸೌಕರ್ಯಗಳನ್ನು ಒದಗಿಸುತ್ತಿವೆ.

ವಂದೇ ಭಾರತ್: ನವ ಭಾರತದ ವೇಗ ಮತ್ತು ವೈಭವ

ಇತ್ತೀಚೆಗೆ ಬೆಂಗಳೂರು– ಮೈಸೂರು ನಡುವೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣ ಮಾಡಿದ ನನಗೆ ಆಧುನಿಕ ಭಾರತದ ಆತ್ಮವಿಶ್ವಾಸವನ್ನು ಹತ್ತಿರದಿಂದ ಅನುಭವಿಸಿದಂತಾಯಿತು. ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ರೈಲು ಪ್ರವೇಶಿಸುತ್ತಿದ್ದಂತೆಯೇ ಅದರ ಸೊಗಸಾದ ವಿನ್ಯಾಸ ಗಮನ ಸೆಳೆಯಿತು. ಸ್ವಯಂಚಾಲಿತ ಬಾಗಿಲುಗಳು, ಆರಾಮದಾಯಕ ಆಸನಗಳು, ವಿಶಾಲವಾದ ಒಳಾಂಗಣ, ಡಿಜಿಟಲ್ ಮಾಹಿತಿ ವ್ಯವಸ್ಥೆ, ಸ್ವಚ್ಛತೆ ಮತ್ತು ನಿಶ್ಯಬ್ದ ಸಂಚಾರ – ಇವೆಲ್ಲವೂ ವಿಶ್ವದರ್ಜೆಯ ಪ್ರಯಾಣದ ಅನುಭವವನ್ನು ನೀಡಿದವು. ರೈಲು ನಿಶ್ಯಬ್ದವಾಗಿ ವೇಗ ಪಡೆಯುತ್ತಿದ್ದಂತೆ ಕಿಟಕಿಯಾಚೆ ದೃಶ್ಯಗಳು ಕ್ಷಣಾರ್ಧದಲ್ಲಿ ಹಿಂದೆ ಸರಿಯತೊಡಗಿದವು. ಅತ್ಯಂತ ವೇಗದಲ್ಲಿಯೂ ಒಳಗೆ ಯಾವುದೇ ಕಂಪನ ಅಥವಾ ಗದ್ದಲವಿಲ್ಲದೆ ಸಾಗುತ್ತಿದ್ದ ಅನುಭವ ವಿಶೇಷವಾಗಿ ಮನಸೆಳೆಯಿತು. ಕಡಿಮೆ ಅವಧಿಯಲ್ಲಿ ಗಮ್ಯಸ್ಥಾನವನ್ನು ತಲುಪಿಸುವ ಈ ರೈಲು, ಪ್ರವಾಸಿಗರ ಸಮಯವನ್ನು ಉಳಿಸುತ್ತಾ ವಾರಾಂತ್ಯದ ಪ್ರವಾಸಗಳಿಗೆ ಹೊಸ ಅವಕಾಶವನ್ನೂ ಕಲ್ಪಿಸಿದೆ.

Untitled design (81)

ವಿಸ್ಟಾಡೋಂ ಪಯಣ – ಪ್ರಕೃತಿ ಸೌಂದರ್ಯದ ರಸದೌತಣ

ಇನ್ನೊಂದೆಡೆ, ಬೆಂಗಳೂರಿನಿಂದ ಮಂಗಳೂರಿನವರೆಗೆ ವಿಸ್ಟಾಡೋಂ ರೈಲಿನಲ್ಲಿ ಮಾಡಿದ ಪ್ರಯಾಣವು ನನಗೆ ತೀರಾ ವಿಶಿಷ್ಟವಾದ ಅನುಭವವನ್ನು ನೀಡಿತು. ಇದು ಹೆಜ್ಜೆ ಹೆಜ್ಜೆಗೂ ನಿಸರ್ಗದ ಸೊಬಗನ್ನು ಸವಿಯುವ ಪಯಣ. ಈ ಬೋಗಿಗಳಲ್ಲಿರುವ ಸುತ್ತಲೂ ತಿರುಗುವ ಐಷಾರಾಮಿ ಆಸನಗಳು, ವಿಶಾಲವಾದ ಗಾಜಿನ ಕಿಟಕಿಗಳು, ಪಾರದರ್ಶಕ ಮೇಲ್ಛಾವಣಿಗಳು ಮತ್ತು ಹಿಂಭಾಗದ ‘ಅಬ್ಸರ್ವೇಷನ್ ಲೌಂಜ್’ ನಿಂದ, ರೈಲು ಚಲಿಸುವಾಗ ಸುಂದರ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆಯುತ್ತದೆ. ರೈಲು ಪಶ್ಚಿಮ ಘಟ್ಟದ ಮಡಿಲಿಗೆ ಕಾಲಿಡುತ್ತಿದ್ದಂತೆ ಪ್ರತಿಯೊಂದು ತಿರುವೂ ಹೊಸ ಚಿತ್ರವನ್ನು ತೆರೆದಿಡುತ್ತದೆ. ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ನಡುವಿನ ಘಟ್ಟ ಪ್ರದೇಶವು ಈ ಇಡೀ ಪ್ರಯಾಣದ ಪ್ರಮುಖ ಆಕರ್ಷಣೆ. ಇದನ್ನು ಪ್ರಕೃತಿ ಪ್ರೇಮಿಗಳು 'ಗ್ರೀನ್ ರೂಟ್' ಎಂದೂ ಕರೆಯುತ್ತಾರೆ. ಹಸಿರು ಪರ್ವತಗಳು, ದಟ್ಟ ಕಾಡುಗಳು, ಆಳವಾದ ಕಣಿವೆಗಳು, ಸುರಂಗಗಳು, ಸೇತುವೆಗಳು ಮತ್ತು ಬೆಟ್ಟಗಳ ಮಡಿಲಲ್ಲಿ ಹರಿಯುವ ಜಲಪಾತಗಳು ಪ್ರಕೃತಿಯ ಅದ್ಭುತ ಕಲಾಕೃತಿಯಂತೆ ಭಾಸವಾಗುತ್ತಿದ್ದವು. ಪಶ್ಚಿಮಘಟ್ಟದ ಹಚ್ಚಹಸಿರು ಹೊದಿಕೆ, ಮಳೆಗಾಲದ ಮೋಡಗಳ ಕಣ್ಣಾಮುಚ್ಚಾಲೆ ಮತ್ತು ಮಳೆಯ ಸಿಂಚನ ಮನಸಿಗೆ ವರ್ಣಿಸಲಾಗದ ಆನಂದವನ್ನು ನೀಡಿದವು.

ಒಟ್ಟಾರೆ ಈ ಎರಡು ಪ್ರಯಾಣಗಳು ನನಗೆ ಭಾರತೀಯ ರೈಲ್ವೇಯ ಭವ್ಯತೆಯನ್ನು ಪರಿಚಯಿಸಿದವು. ವಂದೇ ಭಾರತ್ ಮತ್ತು ವಿಸ್ಟಾಡೋಂ ರೈಲುಗಳಲ್ಲಿ ಸಾಗುವ ಪ್ರತಿಯೊಂದು ಮೈಲಿಯೂ ಭಾರತದ ಪ್ರಗತಿಯ ಕಥೆಯನ್ನೇ ಹೇಳುತ್ತದೆ. ದೇಶದ ವೈವಿಧ್ಯಮಯ ಸೌಂದರ್ಯವನ್ನು ಜನರ ಬಳಿಗೆ ತಲುಪಿಸುತ್ತಿರುವ ಈ ರೈಲುಗಳು, ನಿಜಕ್ಕೂ ಸ್ವಾತಂತ್ರ್ಯದ ಹಳಿಗಳ ಮೇಲೆ ಮುನ್ನುಗ್ಗುತ್ತಿರುವ ನವಭಾರತದ ಜೀವಂತ ಸಂಕೇತಗಳಾಗಿವೆ. ಪ್ರವಾಸಿಗರನ್ನು ಅವರ ಗಮ್ಯಸ್ಥಾನಕ್ಕೆ ಕೊಂಡೊಯ್ಯುವುದಷ್ಟೇ ಅಲ್ಲದೇ, ಪ್ರಯಾಣವನ್ನು ಒಂದು ಅವಿಸ್ಮರಣೀಯ ಅನುಭವವನ್ನಾಗಿ ರೂಪಿಸುವ ಈ ರೈಲುಗಳು ಅಭಿವೃದ್ಧಿಯ ಪಥದಲ್ಲಿ ಮುನ್ನುಗ್ಗುತ್ತಿವೆ.

Untitled design (82)

ನಮ್ಮ ಭಾರತದ ಭೂಗೋಳ, ಸಂಸ್ಕೃತಿ ಮತ್ತು ನೈಸರ್ಗಿಕ ವೈವಿಧ್ಯತೆಯನ್ನು ಅನುಭವಿಸಲು ರೈಲು ಪ್ರಯಾಣಕ್ಕಿಂತ ಮಿಗಿಲಾದ ದಾರಿ ಇನ್ನೊಂದಿಲ್ಲ. ಇಂದು ಸುಧಾರಿತ ರೈಲು ಸಂಪರ್ಕದಿಂದ ಅನೇಕ ಪ್ರವಾಸಿ ತಾಣಗಳನ್ನು ದೇಶದ ಮೂಲೆಮೂಲೆಗಳಿಂದ ಸುಲಭವಾಗಿ ತಲುಪಬಹುದಾಗಿದೆ. ಈ ಸ್ವಾತಂತ್ರ್ಯ ದಿನಾಚರಣೆಯ ಸುಸಂದರ್ಭದಲ್ಲಿ, ಕುಟುಂಬ ಮತ್ತು ಸ್ನೇಹಿತರೊಂದಿಗೆ ವಂದೇ ಭಾರತ್ ಅಥವಾ ವಿಸ್ಟಾಡೋಂ ರೈಲಿನಲ್ಲಿ ಒಂದು ಸುಂದರ ಪ್ರಯಾಣವನ್ನು ಯೋಜಿಸಿ, ಭಾರತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.

ಮಾಹಿತಿ ಪೆಟ್ಟಿಗೆ

*ವಿಸ್ಟಾಡೋಂ ಒಂದು ಪೂರ್ಣ ಪ್ರಮಾಣದ ರೈಲಲ್ಲ. ಇದು ಸಾಮಾನ್ಯ ರೈಲುಗಳಿಗೆ ಜೋಡಿಸಲಾಗುವ ವಿಶೇಷ ಬೋಗಿಗಳನ್ನು ಸೂಚಿಸುತ್ತದೆ.

* ಕೆಲವು ರೈಲುಗಳಲ್ಲಿನ ವಿಸ್ಟಾಡೋಂ ಬೋಗಿಗಳು ವಾರದ ನಿರ್ದಿಷ್ಟ ದಿನಗಳಲ್ಲಿ ಮಾತ್ರ ಸಂಚರಿಸುತ್ತವೆ.

* ಜುಲೈನಿಂದ ಜನವರಿ ತಿಂಗಳಿನ ನಡುವಿನ ಅವಧಿಯಲ್ಲಿ ಪಶ್ಚಿಮಘಟ್ಟದ ಸೌಂದರ್ಯ ಅತ್ಯಂತ ರಮಣೀಯವಾಗಿರುತ್ತದೆ.

* ವಿಸ್ಟಾಡೋಂ ಬೋಗಿಗಳ ಸಂಖ್ಯೆ ಸೀಮಿತವಾಗಿರುವುದರಿಂದ, ಪ್ರವಾಸಕ್ಕೂ ಮುನ್ನ ಒಂದೆರಡು ತಿಂಗಳು ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸಬೇಕು.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ವ್ಹಾವ್..ವ್ಹಾವ್..ಗೋವಾ!

Read Previous

ವ್ಹಾವ್..ವ್ಹಾವ್..ಗೋವಾ!

ಮಾರಿಷಸ್‌ ಎಂಬ ಸ್ವರ್ಗಸೀಮೆ!

Read Next

ಮಾರಿಷಸ್‌ ಎಂಬ ಸ್ವರ್ಗಸೀಮೆ!