ಬರಹವೇ ಇರದ ಕಾಲ; ಇತಿಹಾಸ ಬರೆದದ್ದು ಹೀಗೆ
ಭಾರತದಲ್ಲಿ ಹಳೆ ಶಿಲಾಯುಗದ ಮೊದಲ ಪುರಾವೆ ದೊರೆತಿದ್ದು 1863ರಲ್ಲಿ. ತಮಿಳುನಾಡಿನ ಪಲ್ಲಾವರಂನಲ್ಲಿ ರಾಬರ್ಟ್ ಬ್ರೂಸ್ ಫೂಟ್ ಕಲ್ಲಿನ ಕೈಕೊಡಲಿಯನ್ನು ಪತ್ತೆಹಚ್ಚಿದರು. ಇದು ಭಾರತದ ಪ್ರಾಗೈತಿಹಾಸಿಕ ಅಧ್ಯಯನಕ್ಕೆ ಹೊಸ ಆಯಾಮ ನೀಡಿತು. ಕರ್ನಾಟಕದ ಯಾದಗಿರಿ ಜಿಲ್ಲೆಯ ಇಸಂಪುರ, ಕಲಬುರಗಿ ಜಿಲ್ಲೆಯ ಹುನ್ಸಗಿ–ಬೈಚಬಾಳ ಕಣಿವೆ, ಮಧ್ಯಪ್ರದೇಶದ ಭೀಂಬೆಟ್ಕಾ ಮುಂತಾದ ತಾಣಗಳಲ್ಲಿ ಕೈಕೊಡಲಿಗಳು, ಕಲ್ಲಿನ ಸೀಳು ಉಪಕರಣಗಳು ಹಾಗೂ ಪ್ರಾಣಿಗಳ ಮೂಳೆಗಳು ದೊರೆತಿವೆ.
ʻಗತಕಾಲದ ಘಟನೆಗಳು, ಸಮಾಜ, ಸಂಸ್ಕೃತಿ ಮತ್ತು ನಾಗರಿಕತೆಗಳ ಅಧ್ಯಯನವೇ ಇತಿಹಾಸ. ಹಾಗಾಗಿ ಇತಿಹಾಸ ಎಂದರೆ ಕೇವಲ ರಾಜರು, ಯುದ್ಧಗಳು ಮತ್ತು ಸಾಮ್ರಾಜ್ಯಗಳ ಕಥೆಯಲ್ಲ. ಅದಕ್ಕೂ ಮೊದಲು ಅಂದರೆ ಬರವಣಿಗೆಯೇ ತಿಳಿಯದೆ ಬದುಕಿದ ಮಾನವನ ಜೀವನವೂ ಹೌದು. ಒಂದರ್ಥದಲ್ಲಿ ಇತಿಹಾಸದ ಅಧ್ಯಯನ ಆರಂಭವಾಗುವುದೇ ಅಲ್ಲಿಂದ. ಲಿಖಿತ ದಾಖಲೆಗಳೇ ಇಲ್ಲದ ಆ ಕಾಲದ ಕಥೆಯನ್ನು ಇತಿಹಾಸಕಾರರು ಹೇಗೆ ಕಟ್ಟಿಕೊಟ್ಟರು ಗೊತ್ತಾ?
ಇಂದು ನಾವು ಪ್ರವಾಸಕ್ಕೆ ಹೋಗುವ ಅನೇಕ ಪುರಾತತ್ವ ತಾಣಗಳು, ಗುಹೆಗಳು, ಶಿಲಾಶ್ರಯಗಳು ಮತ್ತು ಪ್ರಾಚೀನ ವಸತಿಗಳು ಇದೇ ಇತಿಹಾಸ ಪೂರ್ವ ಕಾಲದ ಕುರುಹುಗಳು. ತಮ್ಮೊಳಗೆ ಅಂದಿನ ಇತಿಹಾಸವನ್ನೂ ಕಾಪಾಡಿಕೊಂಡಿವೆ. ಅವು ಸಾವಿರಾರು ವರ್ಷಗಳ ಹಿಂದಿನ ಮಾನವ ಜೀವನದ ಕುರುಹುಗಳು. ಅವುಗಳನ್ನು ಅಧ್ಯಯನ ಮಾಡಿದ ಸಂಶೋಧಕರು ಮತ್ತು ಇತಿಹಾಸಕಾರರು ಇತಿಹಾಸ ಪೂರ್ವ ಕಾಲದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.
ಇದನ್ನೂ ಓದಿ: ಸಮುದ್ರ ಪ್ರಯಾಣ ಮತ್ತು ಸೀ ಸಿಕ್‌ನೆಸ್!
ಇತಿಹಾಸ ಪೂರ್ವ ಕಾಲ
ಇತಿಹಾಸ ಪೂರ್ವ ಕಾಲವನ್ನು ಇತಿಹಾಸ ಅಧ್ಯಯನದ ಆರಂಭಿಕ ಹಂತ ಎಂದರೂ ತಪ್ಪಾಗದು. ಆಗ ಮಾನವನಿಗೆ ಇನ್ನೂ ಬರವಣಿಗೆಯ ಕಲೆ ತಿಳಿದಿರಲಿಲ್ಲ. ಆದ್ದರಿಂದ ಆ ಕಾಲದ ಜೀವನ, ಸಂಸ್ಕೃತಿ ಹಾಗೂ ನಾಗರಿಕತೆಯನ್ನು ಅರಿಯಲು ಲಿಖಿತ ದಾಖಲೆಗಳು ದೊರೆಯುವುದಿಲ್ಲ. ಪುರಾತತ್ವ ಉತ್ಖನನದಲ್ಲಿ ದೊರೆತ ಪುರಾವೆಗಳೇ ಈ ಕಾಲದ ಅಧ್ಯಯನಕ್ಕೆ ಪ್ರಮುಖ ಆಧಾರಗಳಾಗಿವೆ. ಭಾರತದ ವಿವಿಧ ಭಾಗಗಳಲ್ಲೂ ಇಂಥ ಆಧಾರಗಳು ದೊರೆತಿವೆ. ಅವುಗಳನ್ನು ಆಧರಿಸಿ ಇತಿಹಾಸ ಪೂರ್ವ ಕಾಲವನ್ನು ಮುಖ್ಯವಾಗಿ ಶಿಲಾಯುಗ ಮತ್ತು ಲೋಹಯುಗ ಎಂದು ವಿಂಗಡಿಸಲಾಗಿದೆ.

ಶಿಲಾಯುಗ
- ಹಳೆ ಶಿಲಾಯುಗ
ಮಾನವ ಈ ಕಾಲದಲ್ಲಿ ಹೆಚ್ಚಾಗಿ ಬಳಸಿದ ಕಲ್ಲು ಕ್ವಾರ್ಟಜೈಟ್ ಎಂದು ಪರಿಗಣಿಸಲಾಗಿದೆ. ಭಾರತದಲ್ಲಿ ಹಳೆ ಶಿಲಾಯುಗದ ಮೊದಲ ಪುರಾವೆ ದೊರೆತಿದ್ದು 1863ರಲ್ಲಿ. ತಮಿಳುನಾಡಿನ ಪಲ್ಲಾವರಂನಲ್ಲಿ ರಾಬರ್ಟ್ ಬ್ರೂಸ್ ಫೂಟ್ ಕಲ್ಲಿನ ಕೈಕೊಡಲಿಯನ್ನು ಪತ್ತೆಹಚ್ಚಿದರು. ಇದು ಭಾರತದ ಪ್ರಾಗೈತಿಹಾಸಿಕ ಅಧ್ಯಯನಕ್ಕೆ ಹೊಸ ಆಯಾಮ ನೀಡಿತು. ಕರ್ನಾಟಕದ ಯಾದಗಿರಿ ಜಿಲ್ಲೆಯ ಇಸಂಪುರ, ಕಲಬುರಗಿ ಜಿಲ್ಲೆಯ ಹುನ್ಸಗಿ–ಬೈಚಬಾಳ ಕಣಿವೆ, ಮಧ್ಯಪ್ರದೇಶದ ಭೀಂಬೆಟ್ಕಾ ಮುಂತಾದ ತಾಣಗಳಲ್ಲಿ ಕೈಕೊಡಲಿಗಳು, ಕಲ್ಲಿನ ಸೀಳು ಉಪಕರಣಗಳು ಹಾಗೂ ಪ್ರಾಣಿಗಳ ಮೂಳೆಗಳು ದೊರೆತಿವೆ. ಇವುಗಳಿಂದ ಅಂದಿನ ಮಾನವರು ಬೇಟೆಯಾಡುತ್ತಾ ಅಲೆಮಾರಿ ಜೀವನ ನಡೆಸುತ್ತಿದ್ದರು ಎಂಬುದು ತಿಳಿದುಬಂದಿದೆ.
- ಮಧ್ಯ ಶಿಲಾಯುಗ
ರಾಜಸ್ಥಾನದ ಬಾಗೋರ್ ಪ್ರದೇಶಗಳಲ್ಲಿ ಸೂಕ್ಷ್ಮ ಕಲ್ಲಿನ ಆಯುಧಗಳು ಪತ್ತೆಯಾಗಿವೆ. ಈ ಕಾಲದಲ್ಲಿ ಮಾನವರು ಬೇಟೆಯ ಜತೆಗೆ ಮೀನುಗಾರಿಕೆ ಹಾಗೂ ಆಹಾರ ಸಂಗ್ರಹಣೆಯನ್ನೂ ಮಾಡುತ್ತಿದ್ದರು ಎಂಬ ಮಾಹಿತಿ ದೊರೆಯುತ್ತದೆ.
- ನವಶಿಲಾಯುಗ
ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಬಳ್ಳಾರಿ ಜಿಲ್ಲೆಯ ಸಂಗನಕಲ್ಲು ಮುಂತಾದ ತಾಣಗಳಲ್ಲಿ ನಯಗೊಳಿಸಿದ ಕಲ್ಲಿನ ಕೊಡಲಿಗಳು, ಮಣ್ಣಿನ ಪಾತ್ರೆಗಳು, ಧಾನ್ಯಗಳ ಅವಶೇಷಗಳು ಹಾಗೂ ಸಾಕುಪ್ರಾಣಿಗಳ ಎಲುಬುಗಳು ದೊರೆತಿವೆ. ಇವುಗಳಿಂದ ಅಂದಿನ ಮಾನವ ಕೃಷಿ ಮತ್ತು ಪಶುಸಂಗೋಪನೆಯನ್ನು ಆರಂಭಿಸಿದ್ದ ಹಾಗೂ ಒಂದೇ ಸ್ಥಳದಲ್ಲಿ ಶಾಶ್ವತವಾಗಿ ನೆಲೆಸಿ ಬದುಕಲು ಆರಂಭಿಸಿದ್ದ ಎಂದು ತಿಳಿಯುತ್ತದೆ. ಈ ತಾಣಗಳು ಅಲೆಮಾರಿ ಜೀವನದಿಂದ ನಾಗರಿಕ ಬದುಕಿನತ್ತ ಮಾನವ ಸಾಗಿದ ಪಯಣವನ್ನು ಪರಿಚಯಿಸುತ್ತವೆ.
ಲೋಹಯುಗ
ಮಾನವ ಲೋಹಗಳನ್ನು ಬಳಸಲು ಆರಂಭಿಸಿದ ಕಾಲವೇ ಲೋಹಯುಗ. ಅವನು ಮೊದಲು ಬಳಸಿದ ಲೋಹ ಯಾವುದು ಎಂಬುದರ ಬಗ್ಗೆ ಸಂಶೋಧಕರಲ್ಲಿ ಸಂಪೂರ್ಣ ಒಮ್ಮತವಿಲ್ಲ. ಕಾರಣ, ಉತ್ತರ ಭಾರತದಲ್ಲಿ ತಾಮ್ರಯುಗದ ಪುರಾವೆಗಳು ದೊರೆತರೆ, ದಕ್ಷಿಣ ಭಾರತದಲ್ಲಿ ನೇರವಾಗಿ ಕಬ್ಬಿಣಯುಗದ ಪುರಾವೆಗಳು ಹೆಚ್ಚಾಗಿ ದೊರೆತಿವೆ. ಆದರೂ ಸಾಮಾನ್ಯವಾಗಿ ತಾಮ್ರವೇ ಮಾನವ ಬಳಸಿದ ಮೊದಲ ಲೋಹ ಎಂದು ಪರಿಗಣಿಸಲಾಗಿದೆ.
- ತಾಮ್ರಯುಗ
ರಾಜಸ್ಥಾನದ ಅಹರ್, ಮಧ್ಯಪ್ರದೇಶದ ಕಾಯಥಾ ಹಾಗೂ ಮಹಾರಾಷ್ಟ್ರದ ಇನಾಮಗಾಂವ್ ಮುಂತಾದ ತಾಣಗಳಲ್ಲಿ ತಾಮ್ರದ ಉಪಕರಣಗಳು ಮತ್ತು ಮಣ್ಣಿನ ಪಾತ್ರೆಗಳು ದೊರೆತಿವೆ. ಇವು ಅಂದಿನ ಮಾನವನ ಲೋಹದ ಜ್ಞಾನ, ಅದರ ಬಳಕೆಯ ಆರಂಭ ಹಾಗೂ ಕೃಷಿಯ ಬೆಳವಣಿಗೆಯನ್ನು ತಿಳಿಸುತ್ತವೆ.
- ಕಂಚಿನಯುಗ
ಕಂಚು ತಾಮ್ರ ಮತ್ತು ತವರದ ಮಿಶ್ರಲೋಹ. ತಾಮ್ರಕ್ಕಿಂತಲೂ ಗಟ್ಟಿಯಾದ ಲೋಹ. ಕಲ್ಲಿನ ಉಪಕರಣಗಳ ಜತೆಗೆ ಕಂಚನ್ನು ಮಾನವ ಬಳಸಲು ಆರಂಭಿಸಿದ ಕಾಲವೇ ಕಂಚಿನಯುಗ. ಆಯುಧಗಳು, ಕೃಷಿ ಉಪಕರಣಗಳು ಹಾಗೂ ವಿವಿಧ ಬಳಕೆಯ ವಸ್ತುಗಳ ನಿರ್ಮಾಣ ಈ ಅವಧಿಯಲ್ಲಿ ಬೆಳವಣಿಗೆ ಕಂಡಿತು. ಲೋಹದ ಬಳಕೆಯಿಂದ ಕೃಷಿ, ಕರಕುಶಲ ಹಾಗೂ ವಾಣಿಜ್ಯ ಚಟುವಟಿಕೆಗಳು ಮತ್ತಷ್ಟು ಅಭಿವೃದ್ಧಿಯಾದವು. ಈ ಕಾಲದ ಉತ್ತರಾರ್ಧದಲ್ಲಿ ಸಿಂಧೂ ನಾಗರಿಕತೆಯಂಥ ಮುಂದುವರಿದ ನಗರ ಸಂಸ್ಕೃತಿ ರೂಪುಗೊಂಡಿತು.

ಸಿಂಧೂ ನಾಗರಿಕತೆಯ ಉತ್ಖನನಗಳಲ್ಲಿ ಲಿಪಿಯುಳ್ಳ ಮುದ್ರೆಗಳು ಮತ್ತು ಇತರ ಪುರಾವೆಗಳು ದೊರೆತಿವೆ. ಆದರೆ ಅವುಗಳನ್ನು ಎಲ್ಲರೂ ಒಪ್ಪುವಂತೆ ಓದಲು ಸಾಧ್ಯವಾಗಿಲ್ಲ. ಆದ್ದರಿಂದ ಇದನ್ನು ʻಪ್ರೋಟೋ ಹಿಸ್ಟರಿʼ ಕಾಲ ಎನ್ನಲಾಗಿದೆ. ಹರಪ್ಪಾ, ಮೆಹೆಂಜೊದಾರೊ, ಧೋಲಾವೀರಾ, ಲೋಥಲ್ ಹಾಗೂ ರಾಖಿಗಢಿಗಳಲ್ಲಿ ಕಂಚಿನ ಉಪಕರಣಗಳು, ಮುದ್ರೆಗಳು, ಅಲಂಕಾರಿಕ ವಸ್ತುಗಳು ಕಂಡುಬಂದಿವೆ. ಜತೆಗೆ ನಗರ ಯೋಜನೆ, ಒಳಚರಂಡಿ ವ್ಯವಸ್ಥೆ ಹಾಗೂ ವಾಣಿಜ್ಯ ವಹಿವಾಟಿನ ಪುರಾವೆಗಳೂ ದೊರೆತಿವೆ. ಇವು ವಿಶ್ವದ ಅತ್ಯಂತ ಮುಂದುವರಿದ ನಗರ ನಾಗರಿಕತೆಗಳಲ್ಲಿ ಒಂದಾದ ಸಿಂಧೂ ನಾಗರಿಕತೆಯ ವೈಭವವನ್ನು ಪರಿಚಯಿಸುತ್ತವೆ. ಇಂದಿಗೂ ಧೋಲಾವೀರಾದಂಥ ತಾಣಗಳಿಗೆ ಭೇಟಿ ನೀಡಿದರೆ ಸುಮಾರು ನಾಲ್ಕು ಸಾವಿರ ವರ್ಷಗಳ ಹಿಂದಿನ ನಗರ ಯೋಜನೆ ಮತ್ತು ಜಲ ನಿರ್ವಹಣೆಯ ವ್ಯವಸ್ಥೆಯನ್ನು ಕಣ್ಣಾರೆ ಕಾಣಬಹುದು.
- ಕಬ್ಬಿಣಯುಗ
ಕರ್ನಾಟಕದ ಬ್ರಹ್ಮಗಿರಿ, ಮಸ್ಕಿ, ಹಲ್ಲೂರು, ಕುಮಾರನಹಳ್ಳಿ, ವೀರಾಪುರ, ಪೈಕ್ಲಿಹಾಳ, ತಮಿಳುನಾಡಿನ ಅಡಿಚನಲ್ಲೂರು ಮುಂತಾದ ತಾಣಗಳಲ್ಲಿ ಕಬ್ಬಿಣದ ಆಯುಧಗಳು, ಕೃಷಿ ಉಪಕರಣಗಳು, ಮೆಗಾಲಿಥಿಕ್ ಸಮಾಧಿಗಳು ಹಾಗೂ ಮಡಿಕೆಗಳು ದೊರೆತಿವೆ. ಇವುಗಳಿಂದ ಕಬ್ಬಿಣದ ಬಳಕೆ, ಕೃಷಿಯ ಅಭಿವೃದ್ಧಿ, ಯುದ್ಧೋಪಕರಣಗಳ ನಿರ್ಮಾಣ ಹಾಗೂ ಸಮಾಧಿ ಸಂಪ್ರದಾಯಗಳ ಕುರಿತು ಮಹತ್ವದ ಮಾಹಿತಿ ಲಭ್ಯವಾಗುತ್ತದೆ. ಕರ್ನಾಟಕದ ಬ್ರಹ್ಮಗಿರಿ, ಹಲ್ಲೂರು ಮೊದಲಾದ ತಾಣಗಳು ಇಂದಿಗೂ ಪ್ರಾಗೈತಿಹಾಸಿಕ ಸಂಸ್ಕೃತಿಯನ್ನು ಅರಿಯಲು ಆಸಕ್ತರಿಗೆ ಪ್ರಮುಖ ಪ್ರವಾಸಿ ತಾಣಗಳು.
ಪ್ರವಾಸದ ವೇಳೆ ನಾವು ನೋಡುವ ಪ್ರತಿಯೊಂದು ಪುರಾತತ್ವ ತಾಣವೂ ಒಂದು ತೆರೆದ ಇತಿಹಾಸದ ಪುಸ್ತಕದಂತಿರುತ್ತದೆ. ಅಲ್ಲಿನ ಕಲ್ಲು, ಗುಹೆ, ಮಣ್ಣಿನ ಪಾತ್ರೆ ಅಥವಾ ಸಮಾಧಿ ಕೇವಲ ವಸ್ತುಗಳಲ್ಲ; ಅವು ಮಾನವ ನಾಗರಿಕತೆಯ ಮೊದಲ ಹೆಜ್ಜೆಗಳ ಜೀವಂತ ಸಾಕ್ಷ್ಯಗಳು. ಇಂಥ ತಾಣಗಳಿಗೆ ಭೇಟಿ ನೀಡುವಾಗ ಅವುಗಳ ಹಿನ್ನೆಲೆಯನ್ನು ಅರಿತು ನೋಡಿದರೆ ಪ್ರವಾಸವು ಕೇವಲ ಸುತ್ತಾಟವಾಗದೆ, ಸಾವಿರಾರು ವರ್ಷಗಳ ಹಿಂದಿನ ಮಾನವನ ಬದುಕಿನೊಂದಿಗೆ ನಡೆಸುವ ಅರ್ಥಪೂರ್ಣ ಸಂವಾದವಾಗುತ್ತದೆ.