- ಜಯಶ್ರೀ ದೇಶಪಾಂಡೆ

ಹೆಲ್ಸಿಂಕಿಯಿಂದ ಮೂರೂವರೆ ಗಂಟೆಗಳ ಬಾಲ್ಟಿಕ್ ಸಮುದ್ರದ ಕ್ರೂಸ್ ಯಾನ ನಮ್ಮನ್ನು‌ ಬಾಲ್ಟಿಕ್ ಸಾಗರದಂಚಿನ ಎಸ್ಟೋನಿಯಾದ ರಾಜಧಾನಿ ತಾಲೀನ್‌ನ ಸಾಗರತಟಕ್ಕೆ ತಂದಿಳಿಸಿದಾಗ ಇಳಿಮಧ್ಯಾಹ್ನದ ಮಂದಮಂದ ತಂಗಾಳಿ ವೆಲ್‌ಕಮ್ ಅಂದಿತು. ಅನತಿ ದೂರದಲ್ಲಿ ಉದ್ದಗಲಕ್ಕೆ ಚಾಚಿಕೊಂಡ ಸಿಟಿಯ ಕಟ್ಟಡಗಳು ಇನ್ನಷ್ಟು ಬಣ್ಣ ಮೆತ್ತಿಕೊಂಡ ಹಾಗಿತ್ತು, ಅಷ್ಟು ಆಕರ್ಷಕವಾಗಿತ್ತು. ನಾರ್ಡಿಕ್ ದೇಶಗಳನ್ನು ಆದಷ್ಟು ಹೆಚ್ಚು ನೋಡುವ ನನ್ನ ಹಂಬಲಕ್ಕೆ ಸದಾ ಇಂಬು ಕೊಡುವ ನನ್ನ ಮಗಳು ವರ್ಷಾ! ಅವಳು ಫಿನ್‌ಲ್ಯಾಂಡ್ ನಿವಾಸಿ. ಅವಳ ಜತೆಯಲ್ಲಿ ತಾಲಿಂಕ್ ಎಂಬ ಹೆಸರಿನ ಕ್ರೂಸ್ ಏರಿದ್ದೆ. ಗಲ್ಫ್ ಆಫ್ ಫಿನ್‌ಲ್ಯಾಂಡ್ ಬಾಲ್ಟಿಕ್ ಸಾಗರವನ್ನಪ್ಪಿಕೊಳ್ಳುತ್ತ ಗಲ್ಫ್ ಆಫ್ ರಿಗಾ ಮತ್ತು ಪೋಲೆಂಡಿನ ಗ್ಡಾನ್ಸ್ಕ್ ಗಾಲ್ಫ್‌ನತ್ತ ಅರಳಿಕೊಂಡಿದೆ.

ಇದನ್ನೂ ಓದಿ: ಕರ್ನಾಟಕದ ಪ್ರವಾಸೋದ್ಯಮಕ್ಕೆ ಹೊಸ ದಿಕ್ಕು - ಸಚಿವರ ದೂರದೃಷ್ಟಿಯ ನಾಯಕತ್ವ

ಕಣ್ಣಿಗೆ ಹಬ್ಬವಾದ ತಾಲೀನ್

ಪುಟ್ಟಪುಟ್ಟ ಹಸಿರು ದ್ವೀಪಗಳು ನಮ್ಮನ್ನು ನೀರಿಗೆ ಇಳಿಯಿರೆಂದು ಆಹ್ವಾನಿಸುತ್ತವೆ. ಮೂರೂವರೆ ಗಂಟೆಗಳ ಆ ಪುಟ್ಟ ಪ್ರಯಾಣ ಡೆಕ್‌ನ ಆರಾಮಾಸನಗಳಲ್ಲಿ‌ ಜ್ಯೂಸ್ ಮತ್ತು ಸ್ನ್ಯಾಕ್ಸ್ ಗಳಲ್ಲೇ ಕಳೆಯಿತು. ಪ್ರಪಂಚ ಅಸಂಖ್ಯಾತ ವಿಸ್ಮಯಗಳಿಂದ ತುಂಬಿದೆ ಎನ್ನುವುದು ತಾಲೀನ್ ಎಂಬ ನಗರವನ್ನು ಕಂಡಾಗ ಅನಿಸುತ್ತದೆ.

ಹಳೆಯೂರಿನ ನೆಮ್ಮದಿ

'ಎಸ್ಟೋನಿಯಾ' ಎಂಬ ಪುಟ್ಟ ಯುರೋಪಿಯನ್ ದೇಶದ ಪುಟ್ಟ ರಾಜಧಾನಿ ಇದೆ. ಅಲ್ಲಿಗೆ ಹೋದರೆ ಎಲ್ಲೋ ನಮ್ಮ ಹಿಂದಿನ ಊರಿಗೆ ಹೋದಂತೆ, ಗೌಜು ಗಲಾಟೆಗಳಿಂದ ದೂರವಿದ್ದು, ಯಾವುದೇ ಸ್ಥಳದಲ್ಲಿಯೂ ಧ್ಯಾನಕ್ಕೆ ಕೂರಬಹುದಾದಂಥ ನಿರ್ಮಲ ವಾತಾವರಣದ ಸ್ವಚ್ಛ ನೆಲ ನಮ್ಮ ಮನಸಿಗೆ ತಂಪು ನೀಡುತ್ತದೆ. ಇಲ್ಲಿ ಜನಸಂಖ್ಯೆ ಕಡಿಮೆ. ಸ್ವಚ್ಛತೆಯನ್ನು ಸ್ವಭಾವದಲ್ಲೇ ಅಳವಡಿಸಿಕೊಂಡಿರುವ ಜನರನ್ನು ಕಂಡರೆ ಸಂತಸವಾಗುತ್ತದೆ.

Untitled design (63)

ಚಿನ್ನದ ಗರಿಗಳ ತಾಲೀನ್

ತಾಲೀನ್ ಅಪ್ಪಟ ಉತ್ತರ ಯುರೋಪಿನ ಅರ್ಥಾತ್ 'ನಾರ್ಡಿಕ್ ದೇಶ'ಗಳದೇ ಹವಾಗುಣವನ್ನು ಹೊಂದಿದ್ದರೂ ಇಲ್ಲಿ ಹಿಮ ಶೇಖರಣೆಯಾಗಿ ರಾಶಿಗಟ್ಟುವುದು ಕಡಿಮೆ. ಭೌಗೋಳಿಕವಾಗಿ ಕೇವಲ 61 ಚದರ ಮೈಲಿಗಳ ಪುಟ್ಟ ನಾಡು. ಆದರೆ, ಇಲ್ಲಿನ 'ಓಲ್ಡ್ ಟೌನ್' ಎಂಬ ಸ್ಥಳ ಯುನೆಸ್ಕೋದ ಜಾಗತಿಕ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿದ್ದು, ಪ್ರವಾಸಿಗರಿಗೆ ಮುಖ್ಯ ಆಕರ್ಷಣಾಬಿಂದುವಾಗಿದೆ. ಜಾಗತಿಕ ನಗರ, ಜಾಗತಿಕ ಡಿಜಿಟಲ್ ನಗರ ಅಲ್ಲದೇ ಫಿನ್‌ಲ್ಯಾಂಡಿನ ತುರ್ಕು ಎಂಬ ಊರಿನ ಜತೆ ಇದು 'ಯುರೋಪಿಯನ್ ಸಾಂಸ್ಕೃತಿಕ ರಾಜಧಾನಿ' ಎಂಬ ಹಲವು ಹೊಳೆವ ಚಿನ್ನದ ಗರಿಗಳನ್ನು ತನ್ನ ಮುಡಿಯಲ್ಲಿ ಧರಿಸಿದ್ದರೂ ಇಲ್ಲಿ ಹೋಗಿ ನೋಡುತ್ತಿರುವಾಗ ಇಷ್ಟೆಲ್ಲಾ ಪ್ರಸಿದ್ಧಿ ಈ ಸಣ್ಣ ಊರಿಗಿದೆಯೇ ಎಂಬುದೇ ಅಚ್ಚರಿ ಮೂಡಿಸುತ್ತದೆ.

ಕೋಟೆ–ಗೋಪುರಗಳ ಕಥೆ

ಬಾಲ್ಟಿಕ್ ಸಾಗರದ ಅಂಚಿನಲ್ಲಿ, ಗಲ್ಫ್ ಆಫ್ ಫಿನ್‌ಲ್ಯಾಂಡಿನ ದಕ್ಷಿಣ ತುದಿಯಲ್ಲಿದೆ ತಾಲೀನ್. 15ನೆಯ ಶತಮಾನದಲ್ಲಿ ಕಟ್ಟಲಾಗಿರುವ Kiek in de Kök ಎಂಬ ಹೆಸರಿರುವ ಒಂದು ಎತ್ತರವಾದ ಗೋಪುರ ವೈರಿಗಳ ಆಕ್ರಮಣದ ಸಮಯದಲ್ಲಿ ಇಲ್ಲಿನ ಜನತೆಯ ಭದ್ರಕವಚವಾಗಿ ಮುಖ್ಯವಾಗಿತ್ತು. ನಾಜಿ ಆಕ್ರಮಣ ಯುರೋಪಿನ ಉಳಿದ ಭಾಗಗಳಂತೆ ಇಲ್ಲಿಯೂ ಕಾಲಿಟ್ಟು ಈ ದೇಶವನ್ನು ಆಕ್ರಮಿಸಿತ್ತು. ಮೂರರಿಂದ ಐದು ಸಾವಿರ ವರ್ಷಗಳ ಹಿಂದೆ ಇಲ್ಲಿ ಜನವಸತಿ, ನಾಗರೀಕತೆ ಇತ್ತು ಎಂಬ ಕುರುಹುಗಳನ್ನು ಇಲ್ಲಿ ಸಿಕ್ಕ ಮಣ್ಣು, ಲೋಹದ ವಸ್ತುಗಳಿಂದಾಗಿ ಹೇಳುತ್ತಾರೆ. 1050ರಲ್ಲಿ ಕಟ್ಟಲಾಗಿರುವ ಟೂಂಬೂ ಕೋಟೆ ಇನ್ನೂ ಗಟ್ಟಿಮುಟ್ಟಾಗಿ ನಿಂತು ತನ್ನ ಇತಿಹಾಸ ಹೇಳುತ್ತಿದೆ.

ಪುಟ್ಟ ದೇಶದ ದೊಡ್ಡ ಕೊಡುಗೆಗಳು

ಹತ್ತಿರದ ಹಾಗೂ ನೆರೆಯ ದೇಶಗಳಾದ ರಷ್ಯಾ, ಡೆನ್ಮಾರ್ಕ್, ಸ್ವೀಡನ್ ಇತ್ಯಾದಿಗಳು ಇಲ್ಲಿ ಬಂದಿಳಿದು ವ್ಯಾಪಾರ, ವ್ಯವಹಾರಗಳನ್ನು ಪ್ರಾರಂಭಿಸಿ ಮುಂದೆ ಈ ಪ್ರದೇಶವನ್ನು ಕೈವಶ ಪಡಿಸಿಕೊಳ್ಳಲು ಪ್ರಯತ್ನಿಸಿದವು. ಜರ್ಮನಿಯೂ ಇದರಲ್ಲಿ ಭಾಗಿಯಾಗಿತ್ತು. ಮುಂದೆ ನಡೆದ ಹೋರಾಟಗಳ ಜಾಡು ಕೊನೆಗೆ 1918ರಲ್ಲಿ ಮುಗಿದಂತಾಗಿ 1920ಯಲ್ಲಿ ಎಸ್ಟೋನಿಯಾ ಸ್ವತಂತ್ರ ರಾಷ್ಟ್ರವಾಯ್ತು. ಈಗ ಇಲ್ಲಿಯೂ ಭಾರತದ ಹಾಗೆಯೇ ಬಹುಪಕ್ಷ ರಾಜಕಾರಣವಿದೆ, ಅಲ್ಲದೆ ಎಸ್ಟೋನಿಯಾ ನ್ಯಾಟೋದ ಸದಸ್ಯ. ಮೊನ್ನೆಮೊನ್ನೆಯವರೆಗೂ ನಾವೆಲ್ಲ ನಾಲ್ಕಾರು ಜನ ಸೇರಿ ವಿಡಿಯೋ, ಆಡಿಯೋ‌ ಚಾಟ್ ಮಾಡ್ತಾ ಇದ್ದ ಸ್ಕೈಪ್ (Skype) App ಇದೇ ನಾಡಿನ ಕೊಡುಗೆ, Bolt, ಡಿಸ್ನಿ ಅನಿಮೇಶನ್, ಎಐ ವೆಬ್ ಡೆವಲಪ್‌ಮೆಂಟ್ ಪ್ಲಾಟ್‌ಫಾರ್ಮ್‌ ಕೂಡ ಇಲ್ಲಿನದ್ದೇ.

ಬೀದಿ ತುಂಬಾ ಸ್ಥಳೀಯ ಸೊಗಡು

ಓಲ್ಡ್ ಟೌನ್ ಹಾಗೂ ಟೌನ್ ಹಾಲ್ ಸ್ಕ್ವೇರ್‌ನ ದಾರಿಯುದ್ದಕ್ಕೂ ಸಾಲುಗಟ್ಟಿದ ಅಂಗಡಿಗಳಲ್ಲಿ ಚಂದದ ಉಣ್ಣೆಯ ಶಾಲುಗಳು, ಸ್ವೆಟರ್, ಟೋಪಿ, ಕೈಗೌಸು, ಗೌನು, ಮಾರಾಟಕ್ಕಿರುತ್ತವೆ. ಕೆಲವರು ಎಸ್ತೋನಿಯನ್ ಸಾಂಪ್ರದಾಯಿಕ ವೇಷ ಭೂಷಣಗಳನ್ನು ಧರಿಸಿ ಓಡಾಡುತ್ತಿರುವುದು ನೋಡಲು ಬಲು ಚೆಂದ. ಎಡಬಲದಲ್ಲಿ ಸಾಲುಸಾಲಿನ ಮಳಿಗೆಗಳ ತುಂಬ ಬಣ್ಣ ಬಣ್ಣದ ಹೂಗಳು ಕೈ ಬೀಸುತ್ತವೆ.

Untitled design (65)

ವಿದೇಶದಲ್ಲಿ ದೇಶೀಯ ಸವಿ

ರೆಸ್ಟೋರೆಂಟ್‌ಗಳ ಹೊರಭಾಗದಲ್ಲಿ ಇಲ್ಲಿನ ಶಾಂತಿಯನ್ನು ಆನಂದಿಸುತ್ತ ತಿನ್ನಲು, ಕುಡಿಯಲು ಜನ ತುಂಬಿರುತ್ತಾರೆ. ದೇಶ ಪುಟ್ಟದೇ ಆದರೂ ಭಾರತದ ಊಟ ಸಿಕ್ಕರೆ ಖುಷಿಯಲ್ಲವೇ? ಭಾರತೀಯ ಊಟದ ಹೊಟೇಲ್ ನಮ್ಮನ್ನು ಎದುರುಗೊಂಡಿತ್ತು. ನಮಗಂತೂ ಅಲ್ಲಿ ಕಾಲಿಟ್ಟ ಕೂಡಲೆ ವೆಲ್‌ಕಮ್ ಡ್ರಿಂಕ್ ಅಂತ ಸಿಕ್ಕ ರುಚಿಯಾದ ಮಲ್ಟಿ ಫ್ರೂಟ್ ಶರಬತ್ ಸುತ್ತಾಡಿದ ಆಯಾಸವನ್ನೆಲ್ಲ ನೀಗಿಸಿದ್ದು ಮರೆಯಲಾಗದು.

ಹಳೆಯ ವೈಭವದೊಂದಿಗೆ ತಾಲೀನ್ ಹೊಸತನ್ನೂ ಅಳವಡಿಸಿಕೊಂಡು ಮುನ್ನಡೆದಿದೆ. ಗಗನಚುಂಬಿ ಕಟ್ಟಡಗಳಿದ್ದಂತೆಯೇ ಇಲ್ಲಿನ ಶಾಪಿಂಗ್ ಮಾಲ್ ಗಳು, ಉದ್ಯಮಗಳು, ಆಧುನಿಕ ಐಷಾರಾಮಿ ಸಾಮಗ್ರಿಗಳ ಮಾರುಕಟ್ಟೆಯಾಗಿ ಬೆಳೆದು ನಿಂತಿವೆ.

ಸಾಹಸ ಪಯಣ

ಒಂದು ಸಾವಿರದ ಮೂವತ್ತು ಅಡಿ ಎತ್ತರವಿರುವ ಅದ್ಭುತ ಟಿವಿ‌ ಟವರ್ ಇಲ್ಲಿದೆ. ಆಕರ್ಷಕವಾದ ಅದರ ಸುರುಳಿ ಮೆಟ್ಟಿಲುಗಳನ್ನೇರಿದ್ದೂ ನಮ್ಮ ಒಂದು ಸಾಹಸವೇ!