ಸ್ಮಾರ್ಟ್ ಟ್ರಾವೆಲರ್ ಜೊತೆಗಿರಬೇಕಾದ 10 ವಸ್ತಗಳಿವು..
ನೀವು ಸ್ಮಾರ್ಟ್ ಪ್ರಯಾಣಿಕನಾಗಿ, ಪ್ರವಾಸವನ್ನು ಎಂಜಾಯ್ ಮಾಡಲು ಬಯಸಿದರೆ ಈ 10 ವಸ್ತುಗಳನ್ನು ಲಗೇಜ್ ನ ಜೊತೆಗೆ ಸೇರಿಸಿ, ಸ್ಮಾರ್ಟ್ ಪ್ಯಾಕ್ ಮಾಡಿ.
ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬ ಮಾತಿನಂತೆ ಜಗತ್ತನ್ನು ತಿಳಿಯುವುದಕ್ಕೆ ನಾವು ಅದೆಷ್ಟು ಸುತ್ತಾಡಿದೂ, ಎಷ್ಟು ಓದಿಕೊಂಡರೂ ಕಡಿಮೆಯೇ. ದೇಶ ಸುತ್ತುವ ಆಸೆ ಇಲ್ಲದವರ್ಯಾರು ? ಆದರೆ ಈಗಿನ ಕಾಲದಲ್ಲಿ ಯಾವುದೇ ಪ್ರವಾಸಿ ತಾಣಕ್ಕೆ ಪ್ರವಾಸವನ್ನು ಕೈಗೊಂಡರೂ ಅದಕ್ಕೊಪ್ಪುವಂತೆ ನಾವು ಸಿದ್ಧರಾಗಬೇಕಾಗುತ್ತದೆ. ಅಂದರೆ ನಾವು ಸ್ಮಾರ್ಟ್ ಪ್ರಯಾಣಿಕರಾಗಬೇಕಾಗುತ್ತದೆ. ಮಾರುಕಟ್ಟೆಯಲ್ಲಿ ಪ್ರಯಾಣದ ವೇಳೆ ಬಳಸುವುದಕ್ಕಾಗಿಯೇ ನವೀನ ಗ್ಯಾಜೆಟ್ಗಳು ಮತ್ತು ಟ್ರಾವೆಲ್ ಫ್ರೆಂಡ್ಲಿ ಐಟಂಗಳನ್ನು ಸಾಕಷ್ಟಿದ್ದು, ಅವುಗಳಲ್ಲಿ ಸೂಕ್ತವಾದುದನ್ನು ಆಯ್ಕೆ ಮಾಡಿಕೊಳ್ಳಿ. ಇದು ಪ್ರಯಾಣದ ಅನುಭವವನ್ನು ಇನ್ನಷ್ಟು ಸುಖಕರವಾಗಿಸುತ್ತದೆ.
ಪ್ರತಿಯೊಬ್ಬ ಸ್ಮಾರ್ಟ್ ಪ್ರಯಾಣಿಕ ಜೊತೆಗಿಟ್ಟುಕೊಳ್ಳಬೇಕಾದ ಟಾಪ್ 10 ಐಟಂಗಳು ಯಾವುವು ? ಇಲ್ಲಿದೆ ಮಾಹಿತಿ.
ಸ್ಮಾರ್ಟ್ ಲಗೇಜ್ ಟ್ಯಾಗ್
ಜಿಪಿಎಸ್ ಟ್ರ್ಯಾಕಿಂಗ್ ಹೊಂದಿದ ಸ್ಮಾರ್ಟ್ ಲಗೇಜ್ ಟ್ಯಾಗ್ಗಳನ್ನು ನಿಮ್ಮ ಲಗೇಜ್ ನಲ್ಲಿ ಅಳವಡಿಸಿಕೊಳ್ಳಿ.ಇದರಿಂದ ಲಗೇಜ್ ಇರುವ ಸ್ಥಳದ ಕುರಿತು ತತ್ ಕ್ಷಣದ ಮಾಹಿತಿಯನ್ನು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಪಡೆದುಕೊಳ್ಳಬಹುದು. ಅಲ್ಲದೆ ಲಗೇಜ್ ಕಳೆದುಹೋಗುವುದೆಂಬ ಚಿಂತೆ ಬಿಟ್ಟು ಪ್ರಯಾಣ ಎಂಜಾಯ್ ಮಾಡಬಹುದು.

ಪೋರ್ಟಬಲ್ ಪವರ್ ಬ್ಯಾಂಕ್
ಮೊಬೈಲ್ ಫೋನ್, ಬ್ಲೂ ಟೂತ್ ಇಯರ್ ಪೋನ್, ಸೇರಿದಂತೆ ಅನೇಕ ಎಲೆಕ್ಟ್ರಾನಿಕ್ ವಸ್ತುಗಳನ್ನು ಅಗತ್ಯಬಂದಾಗೆಲ್ಲಾ ಚಾರ್ಜ್ ಮಾಡಲು ಪೋರ್ಟಬಲ್ ಪವರ್ ಬ್ಯಾಂಕ್ನೊಂದಿಗೆ ಪ್ರಯಾಣಿಸುವುದು ಉತ್ತಮ. ಅದರಲ್ಲೂ ವೇಗದ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ ಹಗುರವಾದ ಪವರ್ ಬ್ಯಾಂಕ್ ಅನ್ನು ಆಯ್ದುಕೊಂಡರೆ, ಅಗತ್ಯ ಎಲೆಕ್ಟ್ರಾನಿಕ್ ವಸ್ತುಗಳ ಬ್ಯಾಟರಿ ಖಾಲಿಯಾಗುತ್ತದೆ ಎಂಬ ಚಿಂತೆ ಇರುವುದಿಲ್ಲ.
ನೋಯ್ಸ್ ಕ್ಯಾನ್ಸಲಿಂಗ್ ಹೆಡ್ಫೋನ್
ಪ್ರಯಾಣದ ವೇಳೆ ಸದ್ದು, ಗದ್ದಲಗಳು ಸಾಮಾನ್ಯ. ಇದರಿಂದ ಬೇಗನೆ ಕಿರಿಕಿರಿಯೆನ್ನಿಸುವುದಾದರೆ ನೋಯ್ಸ್ ಕ್ಯಾನ್ಸಲಿಂಗ್ ಹೆಡ್ಫೋನ್ಗಳನ್ನು ಜೊತೆಗಿಟ್ಟುಕೊಳ್ಳಿ. ಹಾಯಾಗಿ ಹಾಡುಗಳನ್ನು ಕೇಳುತ್ತಾ, ಪಾಡ್ಕಾಸ್ಟ್ಗಳು ಅಥವಾ ಆಡಿಯೊ ಬುಕ್ಗಳನ್ನು ಆಲಿಸುತ್ತಾ ಪ್ರಯಾಣವನ್ನು ಆನಂದಿಸಿ.
ಯುನಿವರ್ಸಲ್ ಟ್ರಾವೆಲ್ ಅಡಾಪ್ಟರ್
ಪ್ರಯಾಣದ ವೇಳೆ ಟ್ರಾವೆಲ್ ಅಡಾಪ್ಟರ್ ಅತೀ ಅಗತ್ಯವಾಗಿ ನಿಮ್ಮೊಂದಿಗೆ ಇಟ್ಟುಕೊಳ್ಳಿ. ಕ್ಯಾಮರಾಗಳಿಂದ ಫೋಟೋಗಳನ್ನು ಲ್ಯಾಪ್ ಟಾಪ್ ಗೆ ಹಾಕಿಕೊಳ್ಳುವುದು ಸೇರಿದಂತೆ ಅನೇಕ ಸಂದರ್ಭಗಳಿಗೆ ಬಳಕೆಗೆ ಬರುತ್ತದೆ. ಎಲ್ಲ ದೇಶಗಳಿಗೆ ಹೊಂದಿಕೊಳ್ಳುವಂತಹ ಮಲ್ಟಿ ಪ್ಲಗ್ ವಿಧಗಳಿದ್ದರೆ ಇನ್ನೂ ಒಳ್ಳೆಯದು.
ಕಾಂಪ್ಯಾಕ್ಟ್ ಟ್ರಾವೆಲ್ ಪಿಲ್ಲೊ
ಪ್ರಯಾಣದ ವೇಳೆ ಅನೇಕರು ಕುತ್ತಿಗೆ ನೋವಿನ ಸಮಸ್ಯೆಗೆ ಒಳಗಾಗುತ್ತಾರೆ. ಇದರಿಂದ ಮುಕ್ತಿ ಹೊಂದಲು ಕುತ್ತಿಗೆಗೆ ಬೆಂಬಲವಾಗಿ ಕಾಂಪ್ಯಾಕ್ಟ್ ಟ್ರಾವೆಲ್ ದಿಂಬನ್ನು ಬಳಸಿ ಆರಾಮದಾಯಕ ಪ್ರಯಾಣವನ್ನು ಮಾಡಬಹುದು.

ಮಲ್ಟಿ ಫಂಕ್ಷನಲ್ ಟ್ರಾವೆಲ್ ಬ್ಯಾಕ್ಪ್ಯಾಕ್
ಲ್ಯಾಪ್ಟಾಪ್, ಟ್ಯಾಬ್ಲೆಟ್, ನೀರಿನ ಬಾಟಲ್ಗಳು, ಬಟ್ಟೆ ಸೇರಿದಂತೆ ನಿಮ್ಮ ಎಲ್ಲಾ ಅಗತ್ಯ ವಸ್ತುಗಳನ್ನು ಅನುಕೂಲಕರವಾಗಿ ಕೊಂಡೊಯ್ಯಲು ಸೂಕ್ತವಾದ ಬ್ಯಾಕ್ ಪ್ಯಾಕನ್ನು ಕೊಂಡುಕೊಳ್ಳಿ. ಇದರಿಂದ ಅಗತ್ಯ ವಸ್ತುಗಳಿಗಾಗಿ ಎಲ್ಲೆಂದರಲ್ಲಿ ಹುಡುಕಾಡುವುದನ್ನು ತಪ್ಪಿಸಿಕೊಳ್ಳಬಹುದು.
ಪೋರ್ಟಬಲ್ ವೈ-ಫೈ ಹಾಟ್ಸ್ಪಾಟ್
ಪ್ರಯಾಣದ ವೇಳೆ ಪೋರ್ಟಬಲ್ ವೈ-ಫೈ ಹಾಟ್ಸ್ಪಾಟನ್ನು ಇಟ್ಟುಕೊಳ್ಳಿ. ಇದರಿಂದ ಸಾರ್ವಜನಿಕ ವೈ-ಫೈ ನೆಟ್ವರ್ಕ್ಗಳನ್ನು ಅವಲಂಭಿಸದೆ ಎಲ್ಲೇ ಹೋದರೂ ಇಂಟರ್ನೆಟ್ ಸಂಪರ್ಕದಲ್ಲಿರಲು ಸಾಧ್ಯವಾಗುತ್ತದೆ.
ಪ್ರಯಾಣ ಯೋಗ್ಯ ನೀರಿನ ಬಾಟಲ್
ಈಗ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಟ್ರಾವೆಲ್ ಬ್ಯಾಗ್ ನಲ್ಲಿ ಅನಗತ್ಯವಾಗಿ ಜಾಗವನ್ನು ತುಂಬಿಕೊಳ್ಳುವ ವಸ್ತುಗಳನ್ನು ಮಡಚಿಕೊಂಡು ಅಗತ್ಯವಿದ್ದಾಗ ಬಳಕೆಯೋಗ್ಯವಾಗುವಂತೆ ಮಾಡುವ ಅವಕಾಶವಿದೆ. ಅಂತಹ ವಸ್ತುಗಳಲ್ಲಿ ವಾಟರ್ ಬಾಟಲ್ ಸಹ ಒಂದು. ಫೋಲ್ಡೇಬಲ್ ವಾಟರ್ ಬಾಟರ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಪ್ರವಾಸಕ್ಕಿದು ಅತೀ ಅಗತ್ಯ ವಸ್ತು.

ಪ್ರಥಮ ಚಿಕಿತ್ಸಾ ಕಿಟ್
ತುರ್ತು ಪರಿಸ್ಥಿತಿಗಳಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಜೊತೆಗಿರಿಸಿಕೊಂಡರೆ ಒಳ್ಳೆಯದು. ಬ್ಯಾಂಡೇಜ್ಗಳು, ಹತ್ತಿ, ನೋವು ನಿವಾರಕಗಳು ಮತ್ತು ಅಗತ್ಯ ಔಷಧಿಗಳನ್ನು ಕಿಟ್ನಲ್ಲಿ ಸೇರಿಸಿಕೊಳ್ಳಿ. ಇದರಿಂದ ಪ್ರಯಾಣದಲ್ಲಿ ಸಣ್ಣಪುಟ್ಟ ಗಾಯಗಳಾದರೆ, ಅನಾರೋಗ್ಯ ಸಂಭವಿಸಿದರೆ ತತ್ ಕ್ಷಣದಲ್ಲಿ ಮುಕ್ತಿ ಹೊಂದಬಹುದು.
ಕಾಂಪ್ಯಾಕ್ಟ್ ಟ್ರಾವೆಲ್ ಆರ್ಗನೈಸರ್
ನಿಮ್ಮ ಚಿಕ್ಕ ಪುಟ್ಟ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟುಕೊಳ್ಳಲು, ಮೇಕಪ್ ಸಂಬಂಧಿತ ವಸ್ತುಗಳನ್ನು ಒಂದೇ ಕಡೆ ಸಿಗುವಂತೆ ಮಾಡಲು ಕಾಂಪ್ಯಾಕ್ಟ್ ಟ್ರಾವೆಲ್ ಆರ್ಗನೈಸರ್ ಬಳಕೆ ಮಾಡುವುದು ಒಳ್ಳೆಯದು. ಪಾಸ್ಪೋರ್ಟ್ಗಳು, ಬೋರ್ಡಿಂಗ್ ಪಾಸ್ಗಳು, ಕರೆನ್ಸಿ ಮತ್ತು ಪ್ರಯಾಣ ದಾಖಲೆಗಳನ್ನು ಬೇರೆ ಬೇರೆ ಕಡೆಗಳಲ್ಲಿಟ್ಟುಕೊಂಡು ಕಳೆದುಕೊಳ್ಳುವುದಕ್ಕಿಂತ ಎಲ್ಲವನ್ನೂ ಕಾಂಪ್ಯಾಕ್ಟ್ ಟ್ರಾವೆಲ್ ಆರ್ಗನೈಸರ್ನಲ್ಲಿ ಇಟ್ಟುಕೊಂಡರೆ ಸುಲಭದಲ್ಲಿ ಕೈಗೆ ಸಿಗುವಂತಾಗುತ್ತದೆ.
ನೀವು ಸ್ಮಾರ್ಟ್ ಪ್ರಯಾಣಿಕನಾಗಿ, ಪ್ರವಾಸವನ್ನು ಎಂಜಾಯ್ ಮಾಡಲು ಬಯಸಿದರೆ ಈ 10 ವಸ್ತುಗಳನ್ನು ಲಗೇಜ್ ನ ಜೊತೆಗೆ ಸೇರಿಸಿ, ಸ್ಮಾರ್ಟ್ ಪ್ಯಾಕ್ ಮಾಡಿ. ಮತ್ಯಾಕೆ ತಡ ಹೊಸ ಗಮ್ಯದೆಡೆಗೆ ಮುಂದಿನ ಪ್ರಯಾಣಕ್ಕೆ ಸಿದ್ಧರಾಗಿ ಬಿಡಿ..