ಹಬ್ಬದ ಸೀಸನ್ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರೈಲು ಪ್ರಯಾಣಿಕರ ದಟ್ಟಣೆ ಮತ್ತು ಟಿಕೆಟ್ ರಹಿತ ಪ್ರಯಾಣವನ್ನು ತಡೆಯಲು ಭಾರತೀಯ ರೈಲ್ವೇಯು ಅಕ್ಟೋಬರ್ 1 ರಿಂದ ತಿಂಗಳಿಡೀ ವಿಶೇಷ ಟಿಕೆಟ್ ತಪಾಸಣಾ ಅಭಿಯಾನವನ್ನು (Special Ticket Checking Drive) ಆರಂಭಿಸುತ್ತಿದೆ. ವಿಶೇಷವಾಗಿ ರಿಯಾಯಿತಿ ಟಿಕೆಟ್‌ಗಳು, ಕಾಯ್ದಿರಿಸಿದ ಕೋಟಾಗಳು, ರೈಲ್ವೇ ಪಾಸ್‌ಗಳು ಹಾಗೂ ಸಾಮಾನ್ಯ ಟಿಕೆಟ್‌ಗಳ ಅಥೆಂಟಿಸಿಟಿಯನ್ನು ಪರಿಶೀಲಿಸಲು ಈ ಅಭಿಯಾನವನ್ನು ತೀವ್ರಗೊಳಿಸಲಾಗಿದೆ.

ಪ್ರಯಾಣಿಕರು ಯಾವುದೇ ದಂಡ ಅಥವಾ ಕಾನೂನು ಕ್ರಮಕ್ಕೆ ಸಿಲುಕದಂತೆ ಮುನ್ನೆಚ್ಚರಿಕೆ ವಹಿಸಲು ರೈಲ್ವೇ ಇಲಾಖೆಯು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದೆ.

ಇದನ್ನೂ ಓದಿ: ಭಾರತೀಯ ರೈಲ್ವೆಯ ವೈಷ್ಣೋದೇವಿ ದರ್ಶನ ಪ್ಯಾಕೇಜ್: ಪ್ರಯಾಣ ದರ, ಪ್ರಯಾಣದ ವಿವರ ಮತ್ತು ನೀವು ತಿಳಿದುಕೊಳ್ಳಬೇಕಾದದ್ದು

ರಿಯಾಯಿತಿ ದರದ ಟಿಕೆಟ್‌ಗಳು, ನಿರ್ದಿಷ್ಟ ಮೀಸಲಾತಿ ಕೋಟಾಗಳು ಅಥವಾ ಪಾಸ್‌ಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಅಧಿಕೃತ ಗುರುತಿನ ಚೀಟಿಯನ್ನು ತಮ್ಮೊಂದಿಗೆ ಹೊಂದಿರಬೇಕು. ಮೊಬೈಲ್‌ನಲ್ಲಿರುವ ಫೊಟೋ ಅಥವಾ ಜೆರಾಕ್ಸ್ ಪ್ರತಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.

ಒಂದೇ ಟಿಕೆಟ್‌ನಲ್ಲಿ ಅನೇಕ ಪ್ರಯಾಣಿಕರು ಪ್ರಯಾಣಿಸುತ್ತಿರುವಾಗ, ತಪಾಸಣೆಯ ವೇಳೆ ಕನಿಷ್ಠ ಒಬ್ಬರ ಬಳಿಯಾದರೂ ಮಾನ್ಯವಾದ ಅಸಲಿ ಗುರುತಿನ ಚೀಟಿ ಇರುವುದು ಕಡ್ಡಾಯ. ಗುರುತಿನ ಚೀಟಿ ತೋರಿಸಲು ವಿಫಲವಾದರೆ, ನಿಯಮಾವಳಿಗಳ ಪ್ರಕಾರ ಆ ಟಿಕೆಟ್‌ನಲ್ಲಿರುವ ಎಲ್ಲ ಪ್ರಯಾಣಿಕರನ್ನು ʼಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವವರುʼ ಎಂದೇ ಪರಿಗಣಿಸಿ ಭಾರಿ ದಂಡ ವಿಧಿಸಲಾಗುತ್ತದೆ.

ಇ-ಪಾಸ್ ಅಥವಾ ಪಿಟಿಒ ಬಳಸುವ ಪ್ರಯಾಣಿಕರು ನಿಗದಿತ ಮೂಲ ಗುರುತಿನ ಚೀಟಿಯನ್ನು ಹೊಂದುವುದರ ಜತೆಗೆ, ಪ್ರಯಾಣಕ್ಕೂ ಮುನ್ನ ತಮ್ಮ ಪಾಸ್‌ಗಳನ್ನು ಅಧಿಕೃತ ಪ್ರಯಾಣ ಅಧಿಕಾರಿಯಾಗಿ ಸರಿಯಾಗಿ ಪರಿವರ್ತಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಕೇವಲ ಕಾಯ್ದಿರಿಸಿದ ಬೋಗಿಗಳು ಮಾತ್ರವಲ್ಲದೆ, ಕಾಯ್ದಿರದ ಸಾಮಾನ್ಯ ಟಿಕೆಟ್‌ಗಳ ಅಸಲಿತ್ವವನ್ನು ಪರೀಕ್ಷಿಸಲು ಟಿಟಿಇ ಆಪ್ ಬಳಸಿ ವಿಶೇಷ ತಪಾಸಣೆ ನಡೆಸಲಾಗುತ್ತದೆ.