ನೇಪಾಳಕ್ಕೆ ಭೇಟಿ ನೀಡುವ ಭಾರತೀಯ ಪ್ರವಾಸಿಗರು ಮತ್ತು ವ್ಯಾಪಾರಿಗಳಿಗೆ ನೇಪಾಳದ ಕೇಂದ್ರ ಬ್ಯಾಂಕ್ ಆದ 'ನೇಪಾಳ ರಾಷ್ಟ್ರ ಬ್ಯಾಂಕ್' ಪ್ರಮುಖ ನಿರ್ಧಾರವೊಂದನ್ನು ಪ್ರಕಟಿಸಿದೆ. 2016ರ ರದ್ಧತಿಯ ನಂತರ ವಿಧಿಸಲಾಗಿದ್ದ ನಿಷೇಧವನ್ನು ಸಡಿಲಗೊಳಿಸಲಾಗಿದ್ದು, ಇನ್ಮುಂದೆ ರು. 200 ಮತ್ತು ರು. 500 ಮುಖಬೆಲೆಯ ನೂತನ ಭಾರತೀಯ ಕರೆನ್ಸಿ ನೋಟುಗಳನ್ನು ನೇಪಾಳದಲ್ಲಿ ಬಳಸಲು ಹಾಗೂ ದೇಶದೊಳಗೆ ತರಲು ಅಧಿಕೃತ ಅನುಮೋದನೆ ನೀಡಲಾಗಿದೆ.

ಇದನ್ನೂ ಓದಿ: ದೆಹಲಿ–ನೇಪಾಳ ರಸ್ತೆ ಪ್ರಯಾಣ ಇನ್ನಷ್ಟು ಸುಲಭ

ಒಬ್ಬ ವ್ಯಕ್ತಿಗೆ ಗರಿಷ್ಠ ರು. 25,000 ಮೌಲ್ಯದ ಭಾರತೀಯ ಕರೆನ್ಸಿಯನ್ನು ಮಾತ್ರ ಕ್ಯಾರಿ ಮಾಡಲು ಅವಕಾಶ ನೀಡಲಾಗಿದೆ. ಭಾರತದಲ್ಲಿ ನವೆಂಬರ್ 9, 2016 ರ ನಂತರ ಆರ್‌ಬಿಐ ಬಿಡುಗಡೆ ಮಾಡಿರುವ ಹೊಸ ವಿನ್ಯಾಸದ ರು. 200 ಮತ್ತು ರು. 500 ನೋಟುಗಳಿಗೆ ಮಾತ್ರ ನೇಪಾಳದಲ್ಲಿ ಕಾನೂನುಬದ್ಧ ಮಾನ್ಯತೆ ಇರಲಿದೆ. 2016 ರ ನವೆಂಬರ್ 8ಕ್ಕಿಂತ ಮೊದಲು ಚಲಾವಣೆಯಲ್ಲಿದ್ದ ಹಳೆಯ ಮಾದರಿಯ ರು. 500 ಮತ್ತು ರು. 1,000 ಮುಖಬೆಲೆಯ ನೋಟುಗಳ ಮೇಲಿನ ಸಂಪೂರ್ಣ ನಿಷೇಧವು ಎಂದಿನಂತೆ ಮುಂದುವರಿಯಲಿದೆ.

ನೇಪಾಳ ರಾಷ್ಟ್ರ ಬ್ಯಾಂಕ್‌ನ ನಿಯಮಾವಳಿಗಳ ಪ್ರಕಾರ, ಭಾರತ ಮತ್ತು ನೇಪಾಳದ ನಡುವಿನ ನೇರ ಪ್ರಯಾಣದ ವೇಳೆ ಮಾತ್ರ ಈ ಭಾರತೀಯ ರುಪಾಯಿಗಳನ್ನು ಬಳಸಬಹುದು. ಭಾರತವನ್ನು ಹೊರತುಪಡಿಸಿ ಮೂರನೆಯ ಯಾವುದೇ ವಿದೇಶದಿಂದ ನೇಪಾಳಕ್ಕೆ ಬರುವಾಗ ಭಾರತೀಯ ಕರೆನ್ಸಿಯನ್ನು ಕೊಂಡೊಯ್ಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.