ಟಿಟಿಜೆ ಟ್ರಾವ್‌ಮಾರ್ಟ್ ಸಮಾವೇಶ ಯಶಸ್ವಿ
ಟಿಟಿಜೆ ಟ್ರಾವ್ಮಾರ್ಟ್ನಂಥ ಕಾರ್ಯಕ್ರಮಗಳ ಮೂಲಕ ವ್ಯವಹಾರದ ಬೆಳವಣಿಗೆಗೆ ಮತ್ತು ಪ್ರವಾಸೋದ್ಯಮ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸಹಕಾರಿಯಾಗುತ್ತಿವೆ.
ಇತ್ತೀಚೆಗೆ ಬೆಂಗಳೂರಿನ 'ದಿ ಚಾನ್ಸರಿ ಪೆವಿಲಿಯನ್'ನಲ್ಲಿ ನಡೆದ ಟಿಟಿಜೆ ಟ್ರಾವ್‌ಮಾರ್ಟ್ ನೂತನ ಆವೃತ್ತಿಯು ಪ್ರವಾಸೋದ್ಯಮ ವೃತ್ತಿಪರರನ್ನು ಒಂದೇ ಸೂರಿನಡಿ ತರುವಲ್ಲಿ ಯಶಸ್ವಿಯಾಯಿತು. ಈ ಕಾರ್ಯಕ್ರಮ ನೆಟ್‌ವರ್ಕಿಂಗ್, ಸಹಯೋಗ ಮತ್ತು ವ್ಯವಹಾರದ ಬೆಳವಣಿಗೆಗೆ ವೇದಿಕೆಯನ್ನು ಕಲ್ಪಿಸಿಕೊಟ್ಟಿತು.
ಈ ಬಗ್ಗೆ ಮಾತನಾಡಿದ ಟಿಟಿಜೆ ಟ್ರಾವ್‌ಮಾರ್ಟ್ ಸಹ-ಸಂಚಾಲಕ ಗುರ್ಜಿತ್ ಸಿಂಗ್ ಅಹುಜಾ, 'ಭಾರತದ ಅತಿದೊಡ್ಡ ಐಟಿ ಹಬ್‌ಗಳಲ್ಲಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಇಲ್ಲಿ ಬರುವವರು ವ್ಯವಾಹರದ ದೃಷ್ಟಿಯಿಂದ ಮಾತ್ರ ಬರುವುದಿಲ್ಲ. ಇಲ್ಲಿ ಬರುವವರು ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳಿಗೂ ಭೇಟಿ ನೀಡುತ್ತಾರೆ. ಇದರಿಂದ ಬೆಂಗಳೂರು ಪ್ರವಾಸೋದ್ಯಮದ ಆದಾಯವೂ ಹೆಚ್ಚುತ್ತದೆ. ಇದು ಇನ್ನಷ್ಟು ಜನರನ್ನು ಬೆಂಗಳೂರಿಗೆ ಬರಲು ಪ್ರೇರೇಪಿಸುತ್ತದೆ. ಅನೇಕರು ಕೆಲಸದ ನಿಮಿತ್ತ ವಿದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ತಾಣಗಳನ್ನು ನೋಡಿ ಬರುತ್ತಾರೆ. ನಂತರ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಅಲ್ಲಿಗೆ ಪ್ರವಾಸ ಹೋಗುತ್ತಿದ್ದಾರೆ. ಅದೇ ರೀತಿ ಬೆಂಗಳೂರಿಗೂ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತದೆʼ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬದಲಾವಣೆಗೆ ಎಐ ಕಾರ್ಯಾಗಾರ
ವಿಯೆಟ್ನಾಂ ಏರ್‌ಲೈನ್ಸ್, ನೇಪಾಳ ಏರ್‌ಲೈನ್ಸ್, ವಿಯೆಟ್‌ಜೆಟ್, ಇಂಡಿಗೋ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವು. ಈ ಕಾರ್ಯಮದಲ್ಲಿ ʼಸಿಐಎಸ್ ದೇಶಗಳು, ಯುರೋಪ್, ದುಬೈ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳು, ನೇಪಾಳ, ಭೂತಾನ್ ಮತ್ತು ಬಾಲಿ ಪ್ರವಾಸೋದ್ಯಮದ ಬಗ್ಗೆ ಮಾಹಿತಿ ನೀಡಲಾಯಿತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವರ್ಗಾವಣೆ ಮತ್ತು ಕೈಲಾಸ ಮಾನಸ ಸರೋವರ ಯಾತ್ರೆಯಂಥ ಧಾರ್ಮಿಕ ಪ್ರವಾಸಗಳನ್ನು ಆಯೋಜಿಸುವ ಸಂಸ್ಥೆಗಳೂ ಭಾಗವಹಿಸಿದ್ದವುʼ ಎಂದು ಗುರ್ಜೀತ್ ಮಾಹಿತಿ ನೀಡಿದರು.
ಟಿಟಿಜೆ ಟ್ರಾವ್‌ಮಾರ್ಟ್, ಟ್ರಾವೆಲ್ ಏಜೆಂಟ್‌ಗಳು ಮತ್ತು ಆಪರೇಟರ್‌ಗಳು ನೇರವಾಗಿ ಸಂವಹನ ನಡೆಸಲು, ಹೊಸ ವ್ಯವಹಾರ ಒಪ್ಪಂದಗಳನ್ನು ಮಾಡಿಕೊಳ್ಳಲು ವೇದಿಕೆ ಒದಗಿಸಿತು ಎಂದು ಹೇಳಿದ ಗುರ್ಜೀತ್, ʼಬೆಂಗಳೂರಿನ ಪ್ರವಾಸೋದ್ಯಮ ವಲಯದಿಂದ 250ಕ್ಕೂ ಹೆಚ್ಚು ಟ್ರಾವೆಲ್ ಏಜೆನ್ಸಿಗಳು ಭಾಗವಹಿಸುವ ನಿರೀಕ್ಷೆಯಿತ್ತು. ಈ ಕಾರ್ಯಕ್ರಮದಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷ. ಹೊಸ ಆಲೋಚನೆಗಳು ಮತ್ತು ಬಲವಾದ ನೆಟ್‌ವರ್ಕಿಂಗ್ ಸಾಮರ್ಥ್ಯದೊಂದಿಗೆ ಯುವ ಉದ್ಯಮಿಗಳು ಈ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುತ್ತಿರುವುದು ಖುಷಿಯ ವಿಷಯ. ಈ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಪ್ರವಾಸೋದ್ಯಮ ಸಂಘಟನೆಗಳಾದ KSTOA, TAAI, TAFI, IATO, ಮತ್ತು ADTOI ಬೆಂಬಲ ನೀಡಿದ್ದವುʼ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಪ್ರವಾಸೋದ್ಯಮದ ಬಗ್ಗೆಯೂ ಚರ್ಚಿಸಲಾಯಿತು. ರಾಜ್ಯದ ಕರಾವಳಿ ಪ್ರದೇಶಗಳು ಮತ್ತು 600 ಕಿಲೋಮೀಟರ್‌ಗಳಿಗಿಂತ ಹೆಚ್ಚು ವ್ಯಾಪಿಸಿರುವ ಗಿರಿಧಾಮಗಳ ಸೌಂದರ್ಯವನ್ನು ಪ್ರಮುಖವಾಗಿ ಚರ್ಚಿಸಲಾಯಿತು. ಈ ತಾಣಗಳು ದೇಶೀಯ ಪ್ರವಾಸೋದ್ಯಮಕ್ಕೆ ಮಾತ್ರವಲ್ಲದೆ, ಅಂತಾರಾಷ್ಟ್ರೀಯ ಹೂಡಿಕೆಗೂ ಉತ್ತಮ ಅವಕಾಶಗಳನ್ನು ನೀಡುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟರು.