ಭಾರತದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ಸಮಯದಲ್ಲಿ ಮೊಬೈಲ್ ಫೋನ್‌ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗುತ್ತಿದೆ. ಭಾರತದ ಸುಪ್ರೀಂ ಕೋರ್ಟ್ ನೀಡಿರುವ ಮಹತ್ವದ ಆದೇಶದ ಅನ್ವೇಷಣೆಯಲ್ಲಿ, ದೇಶದ ವನ್ಯಜೀವಿ ಪ್ರವಾಸೋದ್ಯಮದಲ್ಲಿ ಭಾರಿ ಶಿಸ್ತು ಮತ್ತು ಬದಲಾವಣೆಯನ್ನು ತರಲು ಈ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: ಚಿತ್ವಾನ್‌ನಲ್ಲಿ ವೈಲ್ಡ್ ನೇಪಾಳ ಸಫಾರಿ

ಇತ್ತೀಚಿನ ದಿನಗಳಲ್ಲಿ ಸಫಾರಿ ವಾಹನಗಳ ಚಾಲಕರು ಮತ್ತು ಗೈಡ್‌ಗಳು ಕಾಡಿನೊಳಗೆ ಹುಲಿ ಎಲ್ಲಿದೆ ಎಂಬುದನ್ನು ವಾಟ್ಸಾಪ್ ಗ್ರೂಪ್‌ಗಳ ಮೂಲಕ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಇದರಿಂದಾಗಿ ಒಂದು ಕಡೆ ಹುಲಿ ಕಂಡ ತಕ್ಷಣ ಎಲ್ಲ ವಾಹನಗಳು ಒಟ್ಟಿಗೆ ಅತ್ತ ಧಾವಿಸುತ್ತಿದ್ದವು. ಇದು ಕಾಡಿನೊಳಗೆ ಕೃತಕ ಸಂಚಾರ ದಟ್ಟಣೆ ಸೃಷ್ಟಿಸುತ್ತಿತ್ತು. ಮೊಬೈಲ್ ನಿಷೇಧದಿಂದಾಗಿ ಈ ರೀತಿ ಪ್ರಾಣಿಗಳನ್ನು ಬೆನ್ನಟ್ಟುವ ಸಂಸ್ಕೃತಿಗೆ ಬ್ರೇಕ್ ಬೀಳಲಿದೆ.

ಹುಲಿಗಳು ಕಾಣಿಸಿಕೊಂಡಾಗ ಪ್ರವಾಸಿಗರು ರೀಲ್ಸ್, ಲೈವ್ ಸ್ಟ್ರೀಮಿಂಗ್ ಮಾಡಲು ಕಿರುಚಾಡುವುದು ಮತ್ತು ಫೋನ್‌ಗಳ ರಿಂಗ್‌ಟೋನ್‌ಗಳು ಪ್ರಾಣಿಗಳಿಗೆ ತೀವ್ರ ಮಾನಸಿಕ ಒತ್ತಡ ಉಂಟುಮಾಡುತ್ತಿದ್ದವು. ಇತ್ತೀಚೆಗೆ ರಾಜಸ್ಥಾನದ ರಣಥಂಬೋರ್‌ನಲ್ಲಿ ಪ್ರವಾಸಿಗರು ಫೋನ್‌ನಲ್ಲಿ ವಿಡಿಯೋ ಮಾಡಲು ಹುಲಿಯನ್ನು ಸುತ್ತುವರಿದಿದ್ದ ವಿಡಿಯೋ ವೈರಲ್ ಆಗಿದ್ದು ಈ ಕಾನೂನಿಗೆ ಪ್ರಮುಖ ಕಾರಣವಾಯಿತು.

ಸ್ಮಾರ್ಟ್‌ಫೋನ್‌ಗಳಲ್ಲಿ ಹತ್ತಿರದಿಂದ ಫೊಟೋ ಅಥವಾ ಸೆಲ್ಫಿ ತೆಗೆದುಕೊಳ್ಳುವ ಆತುರದಲ್ಲಿ ಪ್ರವಾಸಿಗರು ವಾಹನದಿಂದ ಹೊರಗೆ ಕೈ ಚಾಚುವುದು ಅಥವಾ ಕೆಳಗೆ ಇಳಿಯುವಂಥ ಅಪಾಯಕಾರಿ ಸಾಹಸಗಳನ್ನು ಮಾಡುತ್ತಿದ್ದರು. ಕೆಲವು ಕಡೆ ಪ್ರವಾಸಿಗರು ಕೈಯಿಂದ ಫೋನ್ ಜಾರಿದಾಗ ಅದನ್ನು ಎತ್ತಿಕೊಳ್ಳಲು ಹುಲಿಗಳ ಸಮೀಪವೇ ವಾಹನದಿಂದ ಕೆಳಗಿಳಿದ ಉದಾಹರಣೆಗಳೂ ಇವೆ. ಈ ಅಪಾಯಗಳನ್ನು ತಪ್ಪಿಸಲು ಫೋನ್ ನಿಷೇಧ ಅನಿವಾರ್ಯವಾಗಿದೆ.

ಪ್ರವಾಸಿಗರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡುವಾಗ 'ಜಿಯೋ-ಟ್ಯಾಗಿಂಗ್' (Geotagging - ಲೊಕೇಶನ್ ಹಂಚಿಕೊಳ್ಳುವುದು) ಮಾಡುವುದರಿಂದ, ಹುಲಿಗಳು ಎಲ್ಲೆಲ್ಲಿ ಸಂಚರಿಸುತ್ತಿವೆ ಎಂಬ ನಿಖರ ಮಾಹಿತಿ ಬೇಟೆಗಾರರ ಕೈ ಸೇರುವ ಅಪಾಯವಿತ್ತು. ಮೊಬೈಲ್ ನಿಷೇಧದಿಂದ ವನ್ಯಜೀವಿಗಳ ಭದ್ರತೆ ಹೆಚ್ಚಾಗಲಿದೆ.

ಪ್ರವಾಸಿಗರ ಗಮನಕ್ಕೆ:

  • ಸಫಾರಿ ಕಾರುಗಳನ್ನು ಹತ್ತುವ ಮುನ್ನ ಗೇಟ್‌ಗಳಲ್ಲಿ ಫೋನ್‌ಗಳನ್ನು ಲಾಕರ್‌ಗಳಲ್ಲಿ ಇಡಬೇಕು ಅಥವಾ ಸಫಾರಿ ಮುಗಿಯುವವರೆಗೆ ಸ್ವಿಚ್ ಆಫ್ ಮಾಡಿ ಬ್ಯಾಗ್‌ನೊಳಗೆ ಇಡಬೇಕಾಗುತ್ತದೆ.
  • ಈ ನಿಯಮ ಕೇವಲ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ವೃತ್ತಿಪರ ಡಿಎಸ್‌ಎಲ್‌ಆರ್ (DSLR) ಮತ್ತು ಮಿರರ್‌ಲೆಸ್ ಕ್ಯಾಮೆರಾಗಳನ್ನು ಎಂದಿನಂತೆ ಬಳಸಬಹುದು.
  • ಇದೇ ಆದೇಶದ ಅಡಿಯಲ್ಲಿ ಪ್ರಾಣಿಗಳ ನೆಮ್ಮದಿಗೆ ಭಂಗ ತರುವ ರಾತ್ರಿ ಸಫಾರಿಗಳನ್ನು ಸಹ ಸಂಪೂರ್ಣವಾಗಿ ನಿಷೇಧಿಸಲಾಗಿದೆ.