ಪಂಜಾಬ್‌ನ ಅಮೃತಸರದ ಶ್ರೀ ಗುರು ರಾಮ್ ದಾಸ್ ಜೀ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್‌ಜೆಟ್ ಏರ್‌ಲೈನ್ಸ್ ನಿರ್ಲಕ್ಷ್ಯದಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ದುಬೈಗೆ ಹೊರಟಿದ್ದ ಸ್ಪೈಸ್‌ಜೆಟ್ ವಿಮಾನವು ಯಾವುದೇ ಮುನ್ಸೂಚನೆ ಅಥವಾ ಸೂಕ್ತ ಕಾರಣವಿಲ್ಲದೆ ಬರೋಬ್ಬರಿ 18 ಗಂಟೆಗಳ ಕಾಲ ವಿಳಂಬವಾದ ಪರಿಣಾಮ, ಆಕ್ರೋಶಗೊಂಡ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ ನಡೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸ್ಪೈಸ್‌ಜೆಟ್‌ಗೆ 62,000 ರು. ದಂಡ

ದುಬೈಗೆ ತೆರಳಲು ನಿಗದಿಯಾಗಿದ್ದ ವಿಮಾನವು ತಾಂತ್ರಿಕ ಕಾರಣಗಳು ಅಥವಾ ವಿಮಾನ ಸಿಬ್ಬಂದಿಯ ಲಭ್ಯತೆಯ ಕೊರತೆಯಿಂದಾಗಿ ಗಂಟೆಗಟ್ಟಲೆ ವಿಳಂಬವಾಯಿತು. ಆದರೆ ಏರ್‌ಲೈನ್ಸ್ ಸಿಬ್ಬಂದಿ ಪ್ರಯಾಣಿಕರಿಗೆ ಯಾವುದೇ ಸ್ಪಷ್ಟ ಮಾಹಿತಿ ಅಥವಾ ಸಕಾಲಿಕ ಸೌಲಭ್ಯಗಳನ್ನು ನೀಡಲಿಲ್ಲ ಎಂದು ಆರೋಪಿಸಲಾಗಿದೆ.

ಸುಮಾರು 18 ಗಂಟೆಗಳಿಗೂ ಹೆಚ್ಚು ಕಾಲ ವಿಮಾನ ನಿಲ್ದಾಣದಲ್ಲೇ ಕಾಲಹರಣ ಮಾಡುವಂತಾಗಿದ್ದರಿಂದ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ಮಕ್ಕಳು ತೀವ್ರ ತೊಂದರೆ ಅನುಭವಿಸಿದರು. ಬೇಸತ್ತ ಪ್ರಯಾಣಿಕರು ಏರ್‌ಲೈನ್ಸ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದು ಆಕ್ರೋಶ ಹೊರಹಾಕಿದರು.

ವಿಳಂಬಕ್ಕೆ ಕಾರಣವಾದ ತಾಂತ್ರಿಕ ದೋಷವನ್ನು ಸರಿಪಡಿಸುವ ಕಾರ್ಯ ನಡೆದಿರುವುದಾಗಿ ಸ್ಪೈಸ್‌ಜೆಟ್ ಆಡಳಿತ ಮಂಡಳಿ ತಿಳಿಸಿದ್ದು, ತೊಂದರೆಗೊಳಗಾದ ಪ್ರಯಾಣಿಕರಿಗೆ ಹೋಟೆಲ್ ವಾಸ ಹಾಗೂ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಪ್ರತಿಷ್ಠಿತ ವಿಮಾನಯಾನ ಸಂಸ್ಥೆಗಳಲ್ಲಿ ಇಂಥ ನಿರಂತರ ಸೇವಾ ವ್ಯತ್ಯಯಗಳು ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು, ನಾಗರಿಕ ವಿಮಾನಯಾನ ಮಹಾನನಿರ್ದೇಶನಾಲಯ (DGCA) ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.