ಪರಿಸರ ಸ್ನೇಹಿ ಹಸಿರು ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಿಮಾಚಲ ಪ್ರದೇಶ ನೂತನ ಕ್ರಮಕ್ಕೆ ಮುಂದಾಗಿದೆ. ಇದರ ಭಾಗವಾಗಿ ಹಿಮಾಚಲ ಪ್ರದೇಶ ಪ್ರವಾಸೋದ್ಯಮ ನಿಗಮದ ಹೊಟೇಲ್‌, ರೆಸಾರ್ಟ್‌ ಸೇರಿ ಹಲವು ಪ್ರಾಪರ್ಟಿಗಳಲ್ಲಿ ಪ್ರವಾಸಿಗರ ಬಳಕೆಗೆ ಬ್ಯಾಟರಿ ಚಾಲಿತ ವಾಹನಗಳನ್ನು ನಿಯೋಜಿಸಲು ಮುಂದಾಗಿದೆ.

HPTDC

ಈ ಕುರಿತು ಹಿಮಾಚಲ ಪ್ರದೇಶ ಪ್ರವಾಸೋದ್ಯಮ ನಿಗಮದ (HPTDC) ವ್ಯವಸ್ಥಾಪಕ ನಿರ್ದೇಶಕ ಸಚಿವ ರಾಜೀವ್‌ ಕುಮಾರ್‌ ಮಾತನಾಡಿದ್ದು, ಹೊಟೇಲ್ ದಿ ಪ್ಯಾಲೇಸ್, ಚೈಲ್; ಟೀ ಬಡ್, ಪಾಲಂಪುರ್; ದೇವದಾರ್, ಖಜ್ಜಿಯಾರ್; ಮತ್ತು ನ್ಯೂ ರೋಸ್ ಕಾಮನ್, ಕಸೌಲಿ ಸೇರಿದಂತೆ ಪ್ರಮುಖ HPTDC ಪ್ರಾಪರ್ಟಿಗಳಲ್ಲಿ ಈ ಬ್ಯಾಟರಿ ಚಾಲಿತ ವಾಹನಗಳು ಓಡಾಡಲಿವೆ. ಇವು ಪ್ರವಾಸಿಗರು ಮತ್ತು ಸಂದರ್ಶಕರಿಗೆ ಸುರಕ್ಷಿತ, ಸುಲಭ ಮತ್ತು ಅನುಕೂಲಕರ ಸಂಚಾರ ಸೌಲಭ್ಯ ಒದಗಿಸಲಿದ್ದು, ನಡೆಯಲು ತೊಂದರೆ ಇರುವವರಿಗೆ, ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಜತೆಗೆ ಈ ವಾಹನಗಳು ಒಮ್ಮೆ ಪೂರ್ಣ ಚಾರ್ಜ್‌ ಆದ ನಂತರ 60ಕಿಮೀ ದೂರದವರೆಗೂ ಸಾಗಬಲ್ಲವು. ಶಬ್ದ ಮಾಲಿನ್ಯ, ಪರಿಸರ ಮಾಲಿನ್ಯವನ್ನು ತಡೆಯುವುದರೊಂದಿಗೆ ಪರಿಸರ ಸ್ನೇಹಿಯಾಗಿವೆ ಎಂದು ಮಾಹಿತಿ ನೀಡಿದ್ದು, ಶೀಘ್ರದಲ್ಲೇ ವಾಹನಗಳ ಚಾಲನೆಗೆ ಸಿಬ್ಬಂದಿಗಳಿಗೆ ತರಬೇತಿ ನೀಡಿ ಈ ವಾಹನಗಳ ಪ್ರಾಯೋಗಿಕ ಓಡಾಟ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.