ಫೆಬ್ರವರಿ 14ರ ಪ್ರೇಮಿಗಳ ದಿನದಂದು ವಿಶ್ವವಿಖ್ಯಾತ ನಂದಿಗಿರಿಧಾಮ ಬಂದ್​ ಆಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಜಿ. ಪ್ರಭು ಅಧಿಕೃತ ಆದೇಶ ಪತ್ರ ಹೊರಡಿಸಿದ್ದಾರೆ. ಪ್ರೇಮಿಗಳ ದಿನ ಶನಿವಾರವಾಗಿರುವುದರಿಂದ 15-20 ಸಾವಿರ ಪ್ರವಾಸಿಗರು, ಪ್ರೇಮಿಗಳು ಹಾಗೂ 5-6 ಸಾವಿರ ವಾಹನಗಳು ಆಗಮಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ನಂದಿ ಗಿರಿಧಾಮದ ಕಡಿದಾದ ತಿರುವುಗಳಿಂದ ಕೂಡಿದ ರಸ್ತೆಗಳಲ್ಲಿ ವಾಹನ ಮತ್ತು ಪ್ರವಾಸಿಗರನ್ನು ನಿಯಂತ್ರಿಸುವುದು ಅತೀ ಕಷ್ಟ. ಅಪಘಾತಗಳಾಗುವ ಸಾಧ್ಯತೆಯೂ ಹೆಚ್ಚು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಯೂಟ್ಯೂಬ್ ಪ್ರವಾಸಿಗರಿಗೆ ಜೈ!

ಅಲ್ಲದೆ, ಪ್ರೇಮಿಗಳ ದಿನವನ್ನು ಆಚರಿಸುವ ಪ್ರಯುಕ್ತ ಹೊರಗಡೆಯಿಂದ ಬರುವ ಪ್ರೇಮಿಗಳು, ಸಾರ್ವಜನಿಕರು ರಾತ್ರಿ ಮದ್ಯಪಾನ ಮತ್ತು ಧೂಮಪಾನ ಮಾಡಿ ಅಸಭ್ಯವಾಗಿ ವರ್ತಿಸುವ ಸಾಧ್ಯತೆ ಇದೆ. ಮಹಿಳೆಯರು ಮತ್ತು ಹುಡುಗಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವುದರಿಂದ ಅಮಲಿನಲ್ಲಿ ಪುಂಡರು ಅಸಭ್ಯವಾಗಿ ವರ್ತಿಸುವುದು, ಇತರ ಪ್ರವಾಸಿಗರಿಗೆ ತೊಂದರೆ ನೀಡುವುದು ಹಾಗೂ ಬೆಟ್ಟದ ಮೇಲೆ ನಿಷೇಧಿತ ಅಪಾಯಕರ ಸ್ಥಳಗಳಿಗೆ ಹೋಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಹೆಚ್ಚಿನ ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ನಿಯೋಜನೆ ಮಾಡಿದರೂ ಅನಾಹುತಗಳಾಗುತ್ತವೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ನಂದಿ ಗಿರಿಧಾಮಕ್ಕೆ ಫೆಬ್ರವರಿ 14ರಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪ್ರವಾಸಿಗರಿಗೆ ಮತ್ತು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ತಿಳಿಸಲಾಗಿದೆ.