Friday, July 10, 2026
Friday, July 10, 2026

ಮ್ಯೂಸಿಯಂ ಆಫ್ ಎಕ್ಸ್‌ಪ್ಲೋರೇಷನ್ ಉದ್ಘಾಟನೆ

ವಾಷಿಂಗ್ಟನ್‌ನಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್‌ನ ಹೊಸ ಮ್ಯೂಸಿಯಂ ಆಫ್ ಎಕ್ಸ್‌ಪ್ಲೋರೇಷನ್ ಉದ್ಘಾಟನೆ ಇದು ತಂತ್ರಜ್ಞಾನ ಮತ್ತು ಅನ್ವೇಷಣೆಯ ಅಪೂರ್ವ ಸಂಗಮವಾಗಿದೆ.

ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಮ್ಯೂಸಿಯಂ ಆಫ್ ಎಕ್ಸ್‌ಪ್ಲೋರೇಷನ್ ಸಾರ್ವಜನಿಕರಿಗಾಗಿ ತೆರೆದಿದ್ದು, ಇದು ವಿಶ್ವದ ಅನ್ವೇಷಣೆ, ವಿಜ್ಞಾನ, ಪ್ರಕೃತಿ ಮತ್ತು ಕಥನ ಪರಂಪರೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪರಿಚಯಿಸುವ ಹೊಸ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಂಡಿದೆ. ಸುಮಾರು ನಾಲ್ಕು ವರ್ಷಗಳ ಪುನರ್‌ನಿರ್ಮಾಣದ ಬಳಿಕ ಆರಂಭಗೊಂಡಿರುವ ಈ ಮ್ಯೂಸಿಯಂ, ಸಾಂಪ್ರದಾಯಿಕ ವಸ್ತುಸಂಗ್ರಹಾಲಯದ ಪರಿಕಲ್ಪನೆಗೆ ಹೊಸ ಆಯಾಮ ನೀಡಿದೆ.

Untitled design (74)

ಸುಮಾರು 1 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾದ ಈ ಸಂಕೀರ್ಣದಲ್ಲಿ ವಿಶಾಲ ಪ್ರದರ್ಶನ ಗ್ಯಾಲರಿಗಳು, 400 ಆಸನಗಳ ಆಧುನಿಕ ಸಭಾಂಗಣ, ಮುಕ್ತಾಂಗಣ ಪ್ಲಾಜಾ, ಶಿಕ್ಷಣ ಕೇಂದ್ರ, ಆಹಾರ ಮಳಿಗೆ ಹಾಗೂ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸ್ಥಳ ಕಲ್ಪಿಸಲಾಗಿದೆ. ಮ್ಯೂಸಿಯಂಗೆ ಭೇಟಿ ನೀಡುವವರು ಕೇವಲ ವಸ್ತುಗಳನ್ನು ವೀಕ್ಷಿಸುವುದಲ್ಲ, ಅವುಗಳ ಹಿಂದಿನ ಸಾಹಸ, ವಿಜ್ಞಾನ ಮತ್ತು ಸಂಶೋಧನಾ ಕಥೆಗಳನ್ನು ಅನುಭವಿಸುವ ಅವಕಾಶ ಪಡೆಯುತ್ತಾರೆ.

ಪ್ರಮುಖ ಆಕರ್ಷಣೆಗಳು

ಮ್ಯೂಸಿಯಂನಲ್ಲಿ ಭೂಮಿಯ ಸಾಗರ ತಳದಿಂದ ಬಾಹ್ಯಾಕಾಶದವರೆಗೆ ಮಾನವ ಅನ್ವೇಷಣೆಯ ಕಥೆಯನ್ನು ಹೇಳುವ ಹಲವು ‌ಇಂಟರ್‌ಆಕ್ಟಿವ್‌ ಪ್ರದರ್ಶನಗಳಿವೆ. ನ್ಯಾಷನಲ್ ಜಿಯೋಗ್ರಾಫಿಕ್‌ನ ಸುಮಾರು 140 ವರ್ಷಗಳ ಛಾಯಾಚಿತ್ರ ಪರಂಪರೆ, ಅಪರೂಪದ ವಸ್ತುಗಳು, ಸಂಶೋಧಕರ ಉಪಕರಣಗಳು ಹಾಗೂ ವಿಶ್ವದ ವಿವಿಧ ಭಾಗಗಳ ಅಧ್ಯಯನದ ದಾಖಲಾತಿಗಳು ಇಲ್ಲಿ ಪ್ರದರ್ಶನಕ್ಕಿವೆ.

Untitled design (75)

ವನ್ಯಜೀವಿ ಛಾಯಾಗ್ರಾಹಕ ಸಂದೇಶ್ ಕದೂರ್ ಬಳಸಿದ್ದ ವಿಶೇಷವಾಗಿ ಮಾರ್ಪಡಿಸಿದ ಮಾರುತಿ ಸುಜುಕಿ ಜಿಪ್ಸಿ ವಾಹನವನ್ನು ಸಹ ಪ್ರದರ್ಶನಕ್ಕೆ ಇಡಲಾಗಿದೆ. ಭಾರತದ ಕಾಡುಗಳಲ್ಲಿ ಹುಲಿ, ಕಿಂಗ್ ಕೋಬ್ರಾ ಸೇರಿದಂತೆ ಅಪರೂಪದ ಜೀವಿಗಳನ್ನು ಚಿತ್ರೀಕರಿಸಲು ಬಳಸಿದ್ದ ಈ ವಾಹನ ಅನ್ವೇಷಣಾ ತಂತ್ರಜ್ಞಾನದ ಉದಾಹರಣೆಯಾಗಿ ಗಮನ ಸೆಳೆಯುತ್ತಿದೆ.

ವಂಡರ್ಸ್ ಆಫ್ ಅವರ್ ವರ್ಲ್ಡ್: ಓಶನ್

ಮ್ಯೂಸಿಯಂನ ಹೊರಾಂಗಣದಲ್ಲಿ ಪ್ರತಿದಿನ ರಾತ್ರಿ "ವಂಡರ್ಸ್ ಆಫ್ ಅವರ್ ವರ್ಲ್ಡ್: ಓಶನ್" ಎಂಬ ಆಕರ್ಷಕ ಡಿಜಿಟಲ್ ಪ್ರದರ್ಶನ ನಡೆಯುತ್ತದೆ. ಗಾಜಿನ ಗೋಡೆಗಳ ಮೇಲೆ ಸಮುದ್ರದ ಜೀವಜಗತ್ತು ಮತ್ತು ಸಾಗರದ ವೈವಿಧ್ಯತೆಯನ್ನು ಬೆಳಕು ಹಾಗೂ ಧ್ವನಿಯ ಸಂಯೋಜನೆಯ ಮೂಲಕ ಜೀವಂತವಾಗಿ ಪ್ರದರ್ಶಿಸಲಾಗುತ್ತದೆ.ಇದು ವಿಶೇಷ ಅನುಭವವನ್ನು ನೀಡುತ್ತದೆ.

ವಿವಿಧ ಕಾರ್ಯಕ್ರಮಗಳು

ಮ್ಯೂಸಿಯಂ ಕೇವಲ ಪ್ರದರ್ಶನಕ್ಕೆ ಸೀಮಿತವಾಗದೆ, ವಾರಾಂತರದಲ್ಲಿ ಸಂಗೀತ ಕಾರ್ಯಕ್ರಮಗಳು, ರೈತ ಮಾರುಕಟ್ಟೆ, ವಿಜ್ಞಾನಿಗಳೊಂದಿಗೆ ಸಂವಾದ, ಮಕ್ಕಳಿಗಾಗಿ ಶಿಕ್ಷಣ ಚಟುವಟಿಕೆಗಳು ಹಾಗೂ ವಿಶೇಷ ಉಪನ್ಯಾಸಗಳನ್ನು ಆಯೋಜಿಸುತ್ತಿದೆ. ಇದರಿಂದ ಇದು ಪ್ರವಾಸಿಗರಷ್ಟೇ ಅಲ್ಲ, ಸ್ಥಳೀಯ ಸಮುದಾಯಕ್ಕೂ ಜೀವಂತ ಸಾಂಸ್ಕೃತಿಕ ಕೇಂದ್ರವಾಗಲಿದೆ.

ಇದನ್ನೂ ಓದಿ: ಇಂಡಿಯನ್‌ ಆರ್ಮಿಯ ವಾರ್‌ ಮ್ಯೂಸಿಯಂ ವಸ್ತುಗಳು ಹೇಳುವ ಕಥೆಗಳ ಕೇಳಿ

ಅನ್ವೇಷಣೆಯ ಹೊಸ ಯುಗ

ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿಯ ಈ ಹೊಸ ಮ್ಯೂಸಿಯಂ, ವಿಜ್ಞಾನ, ಪ್ರಕೃತಿ ಸಂರಕ್ಷಣೆ, ಸಂಶೋಧನೆ ಮತ್ತು ಕಥನ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನ, ನೈಜ ವಸ್ತುಗಳು ಮತ್ತು ಅನುಭವಾತ್ಮಕ ಪ್ರದರ್ಶನಗಳ ಮೂಲಕ ಎಲ್ಲ ವಯೋಮಾನದ ಜನರಲ್ಲಿ ಕುತೂಹಲ ಮತ್ತು ಅನ್ವೇಷಣೆಯ ಮನೋಭಾವ ಬೆಳೆಸುವುದು ಇದರ ಪ್ರಮುಖ ಉದ್ದೇಶವಾಗಿದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...