ಮೇಘಾಲಯದ ಪ್ರಸಿದ್ಧ ಸಾವಯವ ಅನಾನಸ್‌ಗಳಿಗೆ ರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಆಯೋಜಿಸಲಾದ ನಾಲ್ಕನೆಯ ಮೇಘಾಲಯ ಪೈನಾಪಲ್ ಫೆಸ್ಟಿವಲ್ ದೆಹಲಿಯ ದಿಲ್ಲಿ ಹಾಟ್‌ನಲ್ಲಿ ಭರ್ಜರಿಯಾಗಿ ನಡೆಯಿತು. "Bigger, Better, Bolder" ಎಂಬ ಘೋಷವಾಕ್ಯದೊಂದಿಗೆ ನಡೆದ ಈ ಉತ್ಸವದಲ್ಲಿ ರೈತರು, ಉದ್ಯಮಿಗಳು, ಆಹಾರ ತಜ್ಞರು, ವ್ಯಾಪಾರಿಗಳು ಹಾಗೂ ಪ್ರವಾಸಿಗರು ಒಂದೇ ವೇದಿಕೆಯಲ್ಲಿ ಸೇರಿ ಮೇಘಾಲಯದ ಕೃಷಿ ಮತ್ತು ಸಂಸ್ಕೃತಿಯ ವೈಭವವನ್ನು ಅನುಭವಿಸಿದರು.

ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮೇಘಾಲಯದ ರಿ-ಭೋಯಿ ಮತ್ತು ಗ್ಯಾರೋ ಹಿಲ್ಸ್ ಪ್ರದೇಶಗಳಿಂದ ಬಂದ ರೈತರು ತಮ್ಮ ಸಾವಯವ ಕೃಷಿ ಪದ್ಧತಿ ಹಾಗೂ ಅನಾನಸ್ ಬೆಳೆಗಾರಿಕೆಯ ವೈಶಿಷ್ಟ್ಯಗಳನ್ನು ನೇರವಾಗಿ ಸಾರ್ವಜನಿಕರೊಂದಿಗೆ ಹಂಚಿಕೊಂಡರು. ಇದರಿಂದ ಗ್ರಾಹಕರು ಉತ್ಪನ್ನದ ಗುಣಮಟ್ಟವನ್ನು ತಿಳಿಯುವ ಅವಕಾಶ ಪಡೆದರೆ, ರೈತರಿಗೆ ಹೊಸ ಮಾರುಕಟ್ಟೆಗಳನ್ನು ತಲುಪುವ ದಾರಿಯೂ ತೆರೆಯಿತು.

Untitled design (70)

ಈ ಉತ್ಸವದಲ್ಲಿ ವಿಶೇಷ ಬಿಸಿನೆಸ್-ಟು-ಬಿಸಿನೆಸ್ (B2B) ವೇದಿಕೆಯನ್ನು ಕೂಡ ಏರ್ಪಡಿಸಲಾಗಿತ್ತು. ಇಲ್ಲಿ ರೈತರ ಸಂಘಗಳು, ಆಹಾರ ಸಂಸ್ಕರಣಾ ಸಂಸ್ಥೆಗಳು, ಚಿಲ್ಲರೆ ವ್ಯಾಪಾರಿಗಳು ಹಾಗೂ ಸಾಂಸ್ಥಿಕ ಖರೀದಿದಾರರು ಪರಸ್ಪರ ಸಂಪರ್ಕ ಸಾಧಿಸಿ ವ್ಯಾಪಾರ ವಿಸ್ತರಣೆಯ ಬಗ್ಗೆ ಚರ್ಚಿಸಿದರು. ಇದೇ ವೇಳೆ ಫ್ಲಿಪ್‌ಕಾರ್ಟ್ ಹಾಗೂ ನ್ಯಾಷನಲ್ ಇ-ಮಾರ್ಕೆಟ್ಸ್ ಲಿಮಿಟೆಡ್ (NeML) ಜತೆಗೆ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಮೇಘಾಲಯದ ಅನಾನಸ್‌ಗಳಿಗೆ ದೇಶವ್ಯಾಪಿ ಹಾಗೂ ಡಿಜಿಟಲ್ ಮಾರುಕಟ್ಟೆ ಪ್ರವೇಶ ಮತ್ತಷ್ಟು ಬಲಗೊಳ್ಳಲಿದೆ.

ಆಹಾರ ಪ್ರಿಯರಿಗಾಗಿ ಆಯೋಜಿಸಿದ್ದ 'ಶೆಫ್ ಎಕ್ಸ್‌ಪೀರಿಯನ್ಸ್' ವಿಭಾಗದಲ್ಲಿ ಅನಾನಸ್‌ನಿಂದ ತಯಾರಿಸಿದ ವಿವಿಧ ವಿಶೇಷ ಖಾದ್ಯಗಳು ಎಲ್ಲರ ಗಮನ ಸೆಳೆದವು. ರೋಸ್ಟ್ ಮಾಡಿದ ಅನಾನಸ್, ಸಲಾಡ್, ಚಟ್ನಿ ಸೇರಿದಂತೆ ಹಲವು ವಿಭಿನ್ನ ರುಚಿಗಳನ್ನು ಸವಿದ ಪ್ರವಾಸಿಗರು ಮೇಘಾಲಯದ ಆಹಾರ ವೈವಿಧ್ಯವನ್ನು ಮೆಚ್ಚಿದರು.

Untitled design (71)

ಸಂಜೆಯ ವೇಳೆಗೆ ಉತ್ಸವವು ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಕಂಗೊಳಿಸಿತು. ಮೆಘಾಲಯ ಗ್ರಾಸ್‌ರೂಟ್ಸ್ ಮ್ಯೂಸಿಕ್ ಪ್ರೋಗ್ರಾಂ (MGMP) ಅಡಿಯಲ್ಲಿ ಸ್ಥಳೀಯ ಕಲಾವಿದರು ಹಾಗೂ ಬ್ಯಾಂಡ್‌ಗಳು ಗ್ಯಾರೋ ಭಾಷೆಯ ಹಾಡುಗಳನ್ನು ಪ್ರಸ್ತುತಪಡಿಸಿ ದೆಹಲಿ ಪ್ರೇಕ್ಷಕರ ಮನ ಗೆದ್ದರು. ಉತ್ಸವವು ಮೇಘಾಲಯದ ಕೃಷಿ ಉತ್ಪನ್ನಗಳಷ್ಟೇ ಅಲ್ಲದೆ ಅಲ್ಲಿನ ಸಂಸ್ಕೃತಿ, ಸಂಗೀತ ಮತ್ತು ಪರಂಪರೆಯನ್ನು ದೇಶದಾದ್ಯಂತ ಪರಿಚಯಿಸುವ ವೇದಿಕೆಯಾಗಿಯೂ ಗಮನ ಸೆಳೆಯಿತು.