Tuesday, October 13, 2026
Tuesday, October 13, 2026

ಪಾಂಡವರ ಮಹಾಪ್ರಸ್ಥಾನದ ಹೆಜ್ಜೆ ಗುರುತುಗಳು

ಷೇಕ್ಸ್‌ಪಿಯರ್ ಪ್ರಕಾರ, ನಮ್ಮ ಕಲ್ಪನೆಗೂ ಮೀರಿದ ಅನೇಕ ವಿಸ್ಮಯಗಳು ಈ ಭೂಮಿಯಲ್ಲಿವೆ. ಮಾನಾ ಆ ವಿಸ್ಮಯಗಳಲ್ಲಿ ಒಂದಾಗಿದೆ. ಇದು ಪುರಾಣದ ಮೊದಲ ಪುಟ, ಭಕ್ತಿಯ ಮೊದಲ ಹೆಜ್ಜೆ ಮತ್ತು ಸ್ವರ್ಗದತ್ತ ಸಾಗಿದ ಪಾಂಡವರ ಕೊನೆಯ ನೆನಪು. ಹಿಮಾಲಯದ ಮೌನದಲ್ಲಿ ಇಂದಿಗೂ ಅವರ ಹೆಜ್ಜೆಗಳ ಪ್ರತಿಧ್ವನಿ ಕೇಳಿಬರುತ್ತದೆ. ನಿಜಕ್ಕೂ, ಮಾನಾ ಒಂದು ಗ್ರಾಮವಲ್ಲ, ಅದು ಭಾರತದ ಆತ್ಮದೊಂದಿಗೆ ನಡೆಸುವ ಒಂದು ಅಪೂರ್ವ ಸಂವಾದ.

  • ವೆಂಕಟೇಶ್ ಮುದಗಲ್

ದೇಶದ ವಿಖ್ಯಾತ 4 ಪವಿತ್ರ ಧಾಮ್‌ಗಳಲ್ಲಿ ಒಂದಾದ ಬದರಿನಾಥ ಧಾಮ್‌ನಿಂದ ಉತ್ತರಕ್ಕೆ ಸುಮಾರು 3 ಕಿಮೀ. ದೂರದಲ್ಲಿರುವ ಹಿಮಾಲಯದ ಸೆರಗಿನಲ್ಲಿರುವ ಪುಟ್ಟ ಗ್ರಾಮವೇ ‘ಮಾನಾ’ ಅಥವಾ ‘ಮಾಣಾ’. ಹಿಮಾಲಯದ ಹಿಮಶಿಖರಗಳ ನಡುವೆ, ಮೋಡಗಳೊಂದಿಗೆ ಜುಗಲ್ಬಂದಿಯಾಡುವ ಪರ್ವತಗಳ ಮಡಿಲಲ್ಲಿ, ಸರಸ್ವತಿ ನದಿಯ ನಾದದ ನಡುವೆ ನೆಲೆಸಿರುವ ಈ ಪುಟ್ಟ ಗ್ರಾಮವು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿದೆ. ಬದರಿನಾಥ ಕ್ಷೇತ್ರದಿಂದ ಕಾಲುನಡಿಗೆಯ ದೂರದಲ್ಲಿರುವ ಈ ಗ್ರಾಮ ಇಂದು ʼಭಾರತದ ಮೊದಲ ಗ್ರಾಮʼ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದು ಕಾಲದಲ್ಲಿ ʼಭಾರತದ ಕೊನೆಯ ಗ್ರಾಮʼ ಎಂದೂ ಕರೆಯಲ್ಪಡುತ್ತಿದ್ದ ಮಾನಾ, ಇಂದು ದೇಶದ ಉತ್ತರದ ಹೆಬ್ಬಾಗಿಲಾಗಿ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಪ್ರತೀಕವಾಗಿ ಹೊಸ ಗುರುತನ್ನು ಪಡೆದಿದೆ. ಆದರೆ, ಅದರ ನಿಜವಾದ ವೈಭವ ಭೌಗೋಳಿಕತೆಯಲ್ಲ, ಮಹಾಭಾರತದ ಅಮರ ನೆನಪುಗಳಲ್ಲಿದೆ.

ಇದನ್ನೂ ಓದಿ: ಪರಾಶರ ಪರ್ವತ: ಹಿಮದ ನಾಡಲ್ಲಿ ಅಧ್ಯಾತ್ಮದ ಲಯ

ಪಾಂಡವರ ಮಹಾಪ್ರಸ್ಥಾನ

ಕುರುಕ್ಷೇತ್ರ ಯುದ್ಧದ ಬಳಿಕ ಪಾಂಡವರು ರಾಜ್ಯಭಾರವನ್ನು ಪರಿಕ್ಷಿತನಿಗೆ ಒಪ್ಪಿಸಿ, ಭೌತಿಕ ಬದುಕಿನ ಮೋಹವನ್ನು ತ್ಯಜಿಸಿ ಮಹಾಪ್ರಸ್ಥಾನಕ್ಕೆ ಹೊರಟರು. ಜನಪ್ರತೀತಿಯಂತೆ, ಅವರ ಅಂತಿಮ ಸ್ವರ್ಗಯಾತ್ರೆ ಆರಂಭವಾದದ್ದು ಇದೇ ಮಾನಾದಿಂದ. ಮಾನಾದಿಂದ ಮುಂದುವರಿಯುವ ಸ್ವರ್ಗಾರೋಹಿಣಿ ಮಾರ್ಗವೇ ಪಾಂಡವರು ನಡೆದ ದಾರಿ ಎನ್ನಲಾಗುತ್ತದೆ. ದ್ರೌಪದಿ ಮತ್ತು ನಾಲ್ವರು ಪಾಂಡವರು ಕ್ರಮೇಣ ಕುಸಿದು ಬೀಳುತ್ತಾ, ಕೊನೆಗೆ ಧರ್ಮರಾಜ ಯುಧಿಷ್ಠಿರನು ತನ್ನ ನಿಷ್ಠಾವಂತ ಶ್ವಾನದೊಂದಿಗೆ ಮಾತ್ರ ಸ್ವರ್ಗವನ್ನು ತಲುಪಿದನೆಂದು ಮಹಾಭಾರತದಲ್ಲಿ ತಿಳಿಸಲಾಗಿದೆ. ಅದರ ಕುರುಹಾಗಿ, ಇಲ್ಲಿ ದ್ರೌಪದಿ, ಐದು ಪಾಂಡವರ ಹಾಗೂ ಜತೆಗಾರ ನಾಯಿಯ ವಿಗ್ರಹಗಳನ್ನು ನಿಲ್ಲಿಸಲಾಗಿದ್ದು, ಇವುಗಳು, ತಮ್ಮ ದಿವ್ಯ ಮೋಹಕತೆಯಿಂದ ಗಮನ ಸೆಳೆಯುತ್ತದೆ.

Untitled Design

ಬಲ ಮತ್ತು ಭಕ್ತಿಯ ಪ್ರತೀಕ

ಮಾನಾದ ಪ್ರಮುಖ ಆಕರ್ಷಣೆಯಾದ ಭೀಮ್‌ಪುಲ್ ಪುರಾಣದ ಜೀವಂತ ಸಾಕ್ಷಿಯಾಗಿದೆ. ಸರಸ್ವತಿ ನದಿಯ ಪ್ರವಾಹವನ್ನು ದಾಟಲು ದ್ರೌಪದಿಗೆ ಸಾಧ್ಯವಾಗದಾಗ, ಭೀಮನೊಬ್ಬನೇ ಬೃಹತ್ ಶಿಲೆಯನ್ನು ಎತ್ತಿ ನದಿಗೆ ಅಡ್ಡಲಾಗಿ ಇರಿಸಿದನೆಂಬ ನಂಬಿಕೆ ಇಂದಿಗೂ ಅಚಲವಾಗಿದೆ. ಆ ಕಲ್ಲಿನ ಸೇತುವೆ ಇಂದು ಸಾವಿರಾರು ಯಾತ್ರಿಕರಿಗೆ ಭಕ್ತಿ ಮತ್ತು ಸಾಹಸದ ಸಂಕೇತವಾಗಿದೆ.

ಮಹಾಭಾರತ ಹುಟ್ಟಿದ ನೆಲ

ಮಾನಾದ ವ್ಯಾಸಗುಹೆಯಲ್ಲಿ ಮಹರ್ಷಿ ವೇದವ್ಯಾಸರು ಮಹಾಭಾರತವನ್ನು ವಾಚಿಸಿದರೆಂದು, ಪಕ್ಕದ ಗಣೇಶಗುಹೆಯಲ್ಲಿ ಶ್ರೀಗಣೇಶನು ಅದನ್ನು ಬರೆದನೆಂದು ಜನಪ್ರತೀತಿ ಇದೆ. ಹೀಗಾಗಿ, ಮಹಾಭಾರತದ ಸೃಷ್ಟಿಗೂ, ಅದರ ನಾಯಕರ ಅಂತಿಮ ಯಾತ್ರೆಗೂ ಸಾಕ್ಷಿಯಾದ ಅಪರೂಪದ ಪುಣ್ಯಭೂಮಿಯಾಗಿದೆ ಮಾನಾ. ಈ ಎರಡು ಗುಹೆಗಳನ್ನು ತಪ್ಪದೆ ವೀಕ್ಷಿಸುವುದು ಅಗತ್ಯ. ಈ ಕಾರಣದಿಂದಲೋ ಏನೋ, ಮಾನಾ ಗ್ರಾಮ ಯಾವಾಗಲು ಪ್ರವಾಸಿಗರಿಂದ ತುಂಬಿರುತ್ತದೆ.

Untitled Design (2)

ನಿಗೂಢ ಸರಸ್ವತಿ ನದಿ

ಮಾನಾದ ಇನ್ನೊಂದು ವಿಶೇಷತೆ, ಸರಸ್ವತಿ ನದಿಯ ಸಾಕ್ಷಾತ ದರ್ಶನ. ಉತ್ತರ ಪ್ರದೇಶದ ಪ್ರಯಾಗ ರಾಜ್‌ನ ತ್ರಿವೇಣಿ ಸಂಗಮದಲ್ಲಿ ಗುಪ್ತಗಾಮಿನಿಯಾಗಿ ಹರಿದು ಗಂಗೆ, ಯಮುನೆಯರ ಸಂಗಮವನ್ನು ಸೇರುವ ಈ ಸರಸ್ವತಿ ನದಿ, ಇಲ್ಲಿ ವೇಗವಾಗಿ ಹರಿದು ಕೆಲವೇ ಅಂತರದಲ್ಲಿ ಭೂಗರ್ಭದಲ್ಲಿ ಅಂತರ್ಧಾನಳಾಗುತ್ತಾಳೆ. ಈ ನಿಗೂಢತೆ, ಶತಮಾನಗಳಿಂದ ಪ್ರವಾಸಿಗರು ಮತ್ತು ಸಂಶೋಧಕರ ಕುತೂಹಲವನ್ನು ಕೆರಳಿಸಿದೆ. ರಭಸದ ಹರಿವಿನ ತುಂತುರು ಹನಿಗಳ ಸಿಂಚನ ಆಹ್ಲಾದಕರ ಆನಂದ ನೀಡುತ್ತದೆ ಎಂಬ ನಂಬಿಕೆಯೂ ಇದೆ. ಸರಸ್ವತಿ ನದಿಯ ಭೋರ್ಗರೆತ ಕಿವಿಗೆ ಅಪ್ಪಳಿಸುತ್ತದೆ. ಅಲ್ಲಿಯೇ ಇರುವ ಶ್ರೀ ಸರಸ್ವತಿ ವಿಗ್ರಹವುಳ್ಳ ದೇವಾಲಯ ಮನಮೋಹಕವಾಗಿದೆ. ಹತ್ತಿರದಲ್ಲಿಯೇ ಇರುವ ವಸುಧಾರಾ ಜಲಪಾತವು ತನ್ನ ಸೌಂದರ್ಯದಿಂದ ಯಾತ್ರಿಕರನ್ನು ಸೆಳೆದು ಮಂತ್ರಮುಗ್ಧರನ್ನಾಗಿಸುತ್ತದೆ. ಪುಣ್ಯವಂತರಿಗೆ ಮಾತ್ರ ಅದರ ನೀರಿನ ಹನಿಗಳು ತಾಗುತ್ತವೆ ಎಂಬ ನಂಬಿಕೆ ಇದೆ.

ಭೋಟಿಯಾ ಜನರ ಬದುಕು

ಮಾನಾ ಗ್ರಾಮದ ಸುಮಾರು 560 ಮನೆಗಳಲ್ಲಿ ವಾಸಿಸುವ ಭೋಟಿಯಾ ಸಮುದಾಯವು ತನ್ನ ವಿಶಿಷ್ಟ ಸಂಸ್ಕೃತಿ ಮತ್ತು ಜೀವನಶೈಲಿಗೆ ಹೆಸರುವಾಸಿಯಾಗಿದೆ. ಟಿಬೆಟ್‌ನೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದ ಇವರು ಉಣ್ಣೆಯ ಉತ್ಪನ್ನಗಳು, ಕೈಮಗ್ಗ ವಸ್ತುಗಳು ಮತ್ತು ಸಂಪ್ರದಾಯಗಳನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಇವರು ವಾಸಿಸುವ ಕಲ್ಲಿನ ಮನೆಗಳು ಮತ್ತು ಸರಳ ಜೀವನಶೈಲಿ ಹಿಮಾಲಯದ ಕಠಿಣ ಪರಿಸ್ಥಿತಿಯಲ್ಲಿಯೂ ಮಾನವ ಬದುಕಿನ ಸಾಮರ್ಥ್ಯವನ್ನು ತೋರಿಸುತ್ತವೆ.

Untitled Design (3)

ಮಾಹಿತಿ ಪೆಟ್ಟಿಗೆ

ಮಾಣಾ ಗ್ರಾಮ ಸಮುದ್ರಮಟ್ಟದಿಂದ 3,200 ಮೀಟರ್ ಎತ್ತರದಲ್ಲಿದೆ. ಗ್ರಾಮದ ವೀಕ್ಷಣೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ನಡೆಯಲಾಗದವರು ತಲೆಯ ಮೇಲೆ ಹೊತ್ತು ಸಾಗುವ ‘ಪಿಟ್ಟು’ವಿನ ಸೇವೆ ಪಡೆಯಬಹುದು. ಭೇಟಿಗೆ ಸೂಕ್ತ ಸಮಯ, ಮೇ–ನವೆಂಬರ್. ಭೇಟಿಯ ಅವಧಿ: ಬೆಳಗ್ಗೆ 6 ರಿಂದ ಸಂಜೆ 6ರವರೆಗೆ.

ನೋಡಲೇಬೇಕಾದ ತಾಣಗಳು:

ಭೀಮ್‌ಪುಲ್, ವ್ಯಾಸಗುಹೆ, ಗಣೇಶಗುಹೆ, ಸರಸ್ವತಿ ನದಿ ಉಗಮ ಸ್ಥಳ, ವಸುಧಾರಾ ಜಲಪಾತ, ಪಾಂಡವರ ಸ್ವರ್ಗಾರೋಹಿಣಿ ಪಥ ಹಾಗೂ ಭಾರತದ ಮೊದಲ ಚಹಾ ಅಂಗಡಿ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

Read Previous

ಗೋವಾ ಹೋದರೆ ಈ ಬೀಚ್‌ಗಳನ್ನು ಮಿಸ್‌ ಮಾಡಿಕೊಳ್ಳಲೇಬೇಡಿ!

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ

Read Next

ತತ್ಕಾಲ್ ಬುಕಿಂಗ್ ಸಮಯದಲ್ಲಿ ಬದಲಾವಣೆಗಲಿಲ್ಲ: IRCTC ಸ್ಪಷ್ಟನೆ