ಜನರ ನೆನಪಿನ ಬೆನ್ನೇರಿದಾಗ ಕಂಡ ನಕ್ಷೆಯಲ್ಲಿಲ್ಲದ ದೇಶ
ʼಈ ರಸ್ತೆಗಳನ್ನು ಇನ್ನೂ ಯಾಕೆ ಸರಿಪಡಿಸಿಲ್ಲ?ʼ ಎಂದು ಟ್ಯಾಕ್ಸಿ ಚಾಲಕನನ್ನು ಕೇಳಿದೆ. ರಸ್ತೆಯ ಮೇಲೆಯೇ ಕಣ್ಣಿಟ್ಟುಕೊಂಡು ಅವನು ಮೂರೇ ಪದಗಳಲ್ಲಿ ಉತ್ತರಿಸಿದ, ಕೆಲವು ಹಾಗೆಯೇ ಉಳಿಯಬೇಕು ಎಂದು ನಗುತ್ತಲೇ ಹೇಳಿದ ಆ ವಾಕ್ಯ, ತಮಾಷೆನೋ, ಅಥವಾ ಅಂತರಂಗದಿಂದ ಬಂದ ಭಾವನೇನೋ, ಗೊತ್ತಿಲ್ಲ.
- ವಿಜಯ್ ಕೊಪ್ಪ
‘ನಾನು ಹುಟ್ಟಿದ್ದು ಅವಿಭಜಿತ ಭಾರತದಲ್ಲಿ... ಈಗ ಅದು ಪಾಕಿಸ್ತಾನ.’ ಈ ಮಾತನ್ನು ನಾವು ಸಿನಿಮಾಗಳಲ್ಲಿ, ಸಾಕ್ಷ್ಯಚಿತ್ರಗಳಲ್ಲಿ, ಹಿರಿಯರ ನೆನಪುಗಳಲ್ಲಿ ಎಷ್ಟೋ ಬಾರಿ ಕೇಳಿದ್ದೇವೆ. ದೇಶ ಬದಲಾಗುತ್ತದೆ, ಗಡಿ ಬದಲಾಗುತ್ತದೆ, ಧ್ವಜವೂ ಬದಲಾಗುತ್ತದೆ. ಆದರೆ, ಮನುಷ್ಯನ ಬಾಲ್ಯ? ಅವನು ಓಡಾಡಿದ ಬೀದಿ, ಶಾಲೆಗೆ ಹೋದ ರಸ್ತೆ, ಮನೆಯ ಹಿತ್ತಲಿನ ಮರ ಇವೆಲ್ಲವೂ ಅವನ ನೆನಪಿನಲ್ಲಿ ಹಳೆಯ ದೇಶದ ಭಾಗವಾಗಿಯೇ ಉಳಿದುಬಿಡುತ್ತವೆ.
ಇಂಥ ಕಥೆಗಳು ನಮ್ಮಲ್ಲಷ್ಟೇ ನಡೆದವೆಯೇ? ಜಗತ್ತಿನ ಬೇರೆ ಭಾಗಗಳಲ್ಲೂ ಜನ ತಮ್ಮ ಕಳೆದುಹೋದ ದೇಶಗಳನ್ನು ಹೀಗೆಯೇ ನೆನಪಿಸಿಕೊಳ್ಳುತ್ತಾರೆಯೇ? ಒಬ್ಬ ಗೆಳೆಯನ ಜತೆ ಮಾತನಾಡುವಾಗ ಆದ ಈ ಕುತೂಹಲ, ಮುಂದೊಂದು ದಿನ ಪ್ರವಾಸದ ಭಾಗವಾಯಿತು.
ಇದನ್ನೂ ಓದಿ: ಯುನೆಸ್ಕೋ ಪಟ್ಟಿಗೆ 5 ಹೊಸ ತಾಣಗಳ ಸೇರ್ಪಡೆ
ನನ್ನ ಬಾಲ್ಯದ ರೇಡಿಯೋ ದಿನಗಳಲ್ಲಿ ಆಗಾಗ ಕೇಳಿಬರುತ್ತಿದ್ದ ಒಂದು ಹೆಸರು ʼಯುಗೋಸ್ಲಾವಿಯಾʼ. ರಾತ್ರಿ ಎಂಟು ಗಂಟೆಯ ಸುದ್ದಿಯಲ್ಲಿ ʼಯುಗೋಸ್ಲಾವಿಯಾ ಬಿಕ್ಕಟ್ಟುʼ, ʼಬಾಲ್ಕನ್ ಪ್ರದೇಶʼ, ʼಸರಯೇವೋʼ, ʼಜನಾಂಗೀಯ ಸಂಘರ್ಷʼ ಎಂಬ ಪದಗಳು ಕೇಳಿಸುತ್ತಿದ್ದವು. ಆಗ ಅವುಗಳ ಅರ್ಥ ತಿಳಿಯುವ ವಯಸ್ಸಿರಲಿಲ್ಲ. ಆದರೆ, ಆ ಹೆಸರು ಮನಸಿನ ಯಾವುದೋ ಮೂಲೆಯಲ್ಲಿ ಉಳಿದುಕೊಂಡಿತ್ತು. ವರ್ಷಗಳು ಕಳೆದಂತೆ ಅನೇಕ ದೇಶಗಳನ್ನು ಸುತ್ತುತ್ತ, ಯುಗೋಸ್ಲೋವಿಯಾ ಅನ್ನೋ ʼಪ್ರಾಂತ್ಯʼ ನೋಡುವ ಹಂಬಲ ನನ್ನನ್ನು ಬೋಸ್ನಿಯಾದ ರಾಜಧಾನಿ 'ಸರಯೇವೋ'ಗೆ ಕರೆದೊಯ್ದಿತು.
ಕೆಲವು ಗಾಯಗಳು ಹಾಗೆಯೇ ಉಳಿಯಬೇಕು...
ಸರಯೇವೋ ವಿಮಾನ ನಿಲ್ದಾಣದಲ್ಲಿ ಇಳಿದು ಟ್ಯಾಕ್ಸಿ ಹಿಡಿದು ನಗರಕ್ಕೆ ಹೊರಟಾಗ, ಮೊದಲ ಹದಿನೈದು ನಿಮಿಷ ಎಲ್ಲವೂ ಸಾಮಾನ್ಯ ಯುರೋಪಿಯನ್ ನಗರದಂತೆಯೇ ಕಂಡಿತು. ಆದರೆ, ನಿಧಾನವಾಗಿ ನಗರ ತನ್ನ ನೈಜ ಮುಖವನ್ನು ತೆರೆದಿಡಲಾರಂಭಿಸಿತು. ಹೊಸದಾಗಿ ನಿರ್ಮಾಣವಾದ ಹೊಳೆಯುವ ಕಟ್ಟಡಗಳ ಪಕ್ಕದಲ್ಲೇ, ಗುಂಡಿನ ಗುರುತುಗಳಿಂದ ಜರಡಿಯಂತಾದ ಹಳೆಯ ಗೋಡೆಗಳು. ಮೊದಲಿಗೆ ಅವು ಸಿಮೆಂಟ್ ಕಿತ್ತುಹೋದ ಗುರುತುಗಳಂತೆ ಕಂಡರೂ, ಹತ್ತಿರದಿಂದ ನೋಡಿದಾಗ ಮೈಜುಮ್ಮೆನ್ನಿಸಿತು.
ʼಇವುಗಳನ್ನು ಇನ್ನೂ ಯಾಕೆ ಸರಿಪಡಿಸಿಲ್ಲ?ʼ ಎಂದು ಟ್ಯಾಕ್ಸಿ ಚಾಲಕನನ್ನು ಕೇಳಿದೆ. ರಸ್ತೆಯ ಮೇಲೆಯೇ ಕಣ್ಣಿಟ್ಟುಕೊಂಡು ಅವನು ಮೂರೇ ಪದಗಳಲ್ಲಿ ಉತ್ತರಿಸಿದ: "Some should remain..." (ಕೆಲವು ಹಾಗೆಯೇ ಉಳಿಯಬೇಕು). ನಗುತ್ತಲೇ ಹೇಳಿದ ಆ ವಾಕ್ಯ, ತಮಾಷೆನೋ, ಅಥವಾ ಅಂತರಂಗದಿಂದ ಬಂದ ಭಾವನೇನೋ, ಗೊತ್ತಿಲ್ಲ. ಮುಂದಿನ ತಲೆಮಾರುಗಳು ಯುದ್ಧದ ಭೀಕರತೆಯನ್ನು ಮರೆಯಬಾರದು ಎಂಬ ಎಚ್ಚರಿಕೆ ಆ ಮೂರು ಪದಗಳಲ್ಲಿದ್ದವು.
ನಗರದೊಳಗೆ ಹೋದಂತೆ ಮತ್ತೊಂದು ದೃಶ್ಯ ಎದೆ ಝಲ್ಲೆನಿಸಿತು. ಸ್ಮಶಾನಗಳು! ರಸ್ತೆ ಬದಿಯಲ್ಲಿ, ಮನೆಗಳ ಮಧ್ಯೆ, ಗುಡ್ಡದ ಇಳಿಜಾರಿನಲ್ಲಿ. ಎಲ್ಲೆಲ್ಲೂ ಬಿಳಿ ಸಮಾಧಿ ಕಲ್ಲುಗಳು. ನಮ್ಮಲ್ಲಿ ಸ್ಮಶಾನಗಳು ಊರ ಹೊರಗಿದ್ದರೆ, ಇಲ್ಲಿ ಅವು ನಗರದ ಬದುಕಿನ ಭಾಗವಾಗಿದ್ದವು. ಬೆಳಗ್ಗೆ ಅಝಾನ್, ಮಧ್ಯಾಹ್ನ ಚರ್ಚ್ ಗಂಟೆ ಕೇಳುವುದು ಇಲ್ಲಿನ ಜನರಿಗೆ ಹೊಸದೇನಲ್ಲ. ಇದೇ ವೈವಿಧ್ಯ ಒಮ್ಮೆ ಈ ನಗರದ ಶಕ್ತಿಯಾಗಿತ್ತು, ಮತ್ತೊಮ್ಮೆ ದೊಡ್ಡ ಗಾಯವೂ ಆಯಿತು.

ಕಾಫಿ ಮೇಜಿನ ಮೇಲೆ ಒಡೆದ ದೇಶ
ಪ್ರವಾಸದಲ್ಲಿ ನನಗೆ ಮ್ಯೂಸಿಯಂಗಳಿಗಿಂತ, ಸ್ಥಳೀಯರು ಕೂರುವ ಕಾಫಿ ಅಂಗಡಿಗಳೇ ಹೆಚ್ಚು ಇಷ್ಟ. ಅಂಥದ್ದೇ ಒಂದು ಅಂಗಡಿಯಲ್ಲಿ ಪರಿಚಯವಾದ ವ್ಯಕ್ತಿ ಮಜವಾಗಿ ಕತೆಯನ್ನೇ ಹೇಳಲಾರಂಭಿಸಿದ. ಮಾತಿನ ಮಧ್ಯೆ ಆತ ಅತ್ಯಂತ ಸಹಜವಾಗಿ, ʼನಾನು ಯುಗೋಸ್ಲಾವಿಯಾದಲ್ಲಿ ಹುಟ್ಟಿದ್ದೆ... ಈಗ ಆ ದೇಶ ಇಲ್ಲ.ʼ ಎಂದ. ಈ ಯುಗೋಸ್ಲಾವಿಯಾ ನನ್ನ ಪ್ರಕಾರ ಒಂದು ದೇಶ ಅಲ್ಲ, ಒಂದು ಪ್ರಾಂತ್ಯ ಅನ್ಕೊಂಡಿದ್ದೆ. ಸ್ಕ್ಯಾಂಡಿನೇವಿಯಾನ್ ತರಹ. “It’s a big story. (ಒಂದು ಕಾಫಿಯಲ್ಲಿ ಹೇಳಲು ಆಗದಷ್ಟು ದೊಡ್ಡ ಕಥೆ ಅದು)” ಎಂದು ನಕ್ಕ ಆತ. ಹಾಗೆ ಟೇಬಲ್ ಮೇಲೆ ಇಡುವ ಸಕ್ಕರೆ ಪ್ಯಾಕೆಟ್‌ಗಳನ್ನ ತಗೊಂಡು "ಇದು ಸ್ಲೋವೇನಿಯಾ, ಇದು ಕ್ರೊಯೇಶಿಯಾ, ಇದು ಬೋಸ್ನಿಯಾ, ಸರ್ಬಿಯಾ, ಮಾಂಟೆನೆಗ್ರೋ, ಮ್ಯಾಸಿಡೋನಿಯಾ..." ಅಂತ ಜೋಡಿಸಿಟ್ಟ. "ಇವೆಲ್ಲವೂ ಒಮ್ಮೆ ಒಂದೇ ದೇಶವಾಗಿದ್ದವು ಎಂದ.
"ನನ್ನ ಶಾಲೆಯ ಮೊದಲ ಪುಸ್ತಕದಲ್ಲಿ ಯುಗೋಸ್ಲಾವಿಯಾ ಇತ್ತು. ಆದರೆ, ಈಗಿನ ಮಕ್ಕಳಿಗೆ ನಾನು ಹುಟ್ಟಿದ ದೇಶವನ್ನು ನಕ್ಷೆಯಲ್ಲಿ ತೋರಿಸಲು ಆಗುವುದಿಲ್ಲ" ಎಂಬ ಆತನ ಮಾತು ನಕ್ಷೆಯಲ್ಲಿ ಇರುವ ಅಂತರವನ್ನು ವಿವರಿಸುತ್ತಿತ್ತು. ಇದೆಲ್ಲದರ ನಡುವೆ ಆತ ಸರಯೇವೋ ರೋಸಸ್ (Sarajevo Roses) ಬಗ್ಗೆ ಹೇಳಿದ.
ಇದನ್ನೂ ಓದಿ: ಜೆನ್ ಜೀ಼ಗಳ ಜತೆ ಶ್ರೀಲಂಕಾ ಸುತ್ತಿ ಇಪ್ಪತ್ತು ವರ್ಷ ಚಿಕ್ಕವಳಾದೆ!
ಒಂದೇ ರಸ್ತೆ, ಎರಡು ವೀಸಾ ಮತ್ತು ಒಡೆದ ನಕ್ಷೆ!
ಸರಯೇವೋದ ಪ್ರಮುಖ ಸ್ಥಳಗಳನ್ನು ನೋಡಿ, ಅಲ್ಲಿನ ಮೂಸೆಯಂನಲ್ಲಿ ಸ್ವಲ್ಪ ಕಾಲ ಕಳೆದು ಮತ್ತೆ ಅಲ್ಲಿಂದ ಅಡ್ರಿಯಾಟಿಕ್ ಸಮುದ್ರದ (ಕ್ರೊಯೇಷಿಯಾ) ಕಡೆ ಹೊರಡಲು ನಾನು ಬಸ್ಸಿನ ಬದಲು ಒಂದು ಕಾರನ್ನು ಬಾಡಿಗೆಗೆ (Hired car) ಪಡೆದೆ. ಕಾರಿನ ಬಳಿ ಒಬ್ಬರು ಸ್ಥಳೀಯರು ನನ್ನ ನಿಲ್ಲಿಸಿ, where are you from, India? Where in India? ಅಂತ ಕೇಳಿದರು. ಬೆಂಗಳೂರು ಅಂದೇ. ಅವರು ತಕ್ಷಣ "ಹೇಗಿದ್ದೀರಾ, ಊಟ ಆಯ್ತಾ" ಅಂತ ಕೇಳಿದರು! ನನಗೆ ಆಶ್ಚರ್ಯ, ಆ ನಂತರ ತಿಳಿಯಿತು ಆತ ಕುಂದಾಪುರದಲ್ಲಿ ಸ್ವಲ್ಪ ಸಮಯ ಕೆಲಸಕ್ಕೆ ಇದ್ದರಂತೆ.
ಒಂದೇ ರಸ್ತೆಯಲ್ಲಿ ಒಂದು ದೇಶ ದಾಟಿ, ಸ್ವಲ್ಪ ದೂರಕ್ಕೆ ಮತ್ತೆ ಅದೇ ದೇಶಕ್ಕೆ ಬರುವ ಅನುಭವ ತೀರಾ ಕಡಿಮೆ. ಅದನ್ನ ಈ ಕ್ರೊಯೇಷಿಯಾ ರಸ್ತೆಯಲ್ಲಿ ಪಡೆಯಬಹುದು. ಆದರೆ, ಇದು ಕ್ರೊಯೇಶಿಯನ್ ಜನಕ್ಕೆ ದಿನನಿತ್ಯದ ಸಮಸ್ಯೆ ಆಗಬಹುದು. ಪೆಲ್ಯೆಶಾಟ್ಸ್ ಬ್ರಿಡ್ಜ್ ಎಂಬ ಈ ಸೇತುವೆ ಸುಮಾರು ಎರಡು ಕಿಲೋಮೀಟರು ಉದ್ದ. ವಿಶೇಷ ಅಂದರೆ 'ನ್ಯೂಮ್ ಕಾರಿಡಾರ್' ಇಪ್ಪತ್ತು ಕಿಲೋಮೀಟರು ಸುತ್ತಿ ಬರುವ ಸಮುದ್ರ ಬದಿ ರಸ್ತೆಯನ್ನು ಈ ಸೇತುವೆ ಬರಿ ಎರಡು ಕಿಲೋಮೀಟರ್‌ನಲ್ಲಿ ನೇರವಾಗಿ ಸಮುದ್ರದ ಮೇಲೆ ದಾಟುತ್ತದೆ.

ಡುಬ್ರೋವ್ನಿಕ್‌ನ ಕೆಂಪು ಚಾವಣಿಗಳು ಮತ್ತು ಸ್ಪ್ಲಿಟ್‌ನ ಹಳೆಯ ನೆನಪು
ಪಾಸ್‌ಪೋರ್ಟ್‌ನಲ್ಲಿ ಶೆಂಗೆನ್ ಮುದ್ರೆ ಬಿದ್ದ ಕೆಲವೇ ಹೊತ್ತಿನಲ್ಲಿ ಅಡ್ರಿಯಾಟಿಕ್ ಸಮುದ್ರದ ನೀಲಿ ಬಣ್ಣ ಕಣ್ಣಿಗೆ ಕಾಣಿಸುತ್ತದೆ. ಕ್ರೊಯೇಶಿಯಾದ ಪ್ರಸಿದ್ಧ ಕರಾವಳಿ ನಗರ ಡುಬ್ರೋವ್ನಿಕ್ (Dubrovnik). ಸಮುದ್ರದ ಅಂಚಿನಲ್ಲಿ ಕಲ್ಲಿನಿಂದ ಕೆತ್ತಿದ ಕೋಟೆಯಂತೆ ಕಾಣುವ ಈ ನಗರ, ಪ್ರವಾಸಿಗರ ಸ್ವರ್ಗ. ಕೋಟೆಗೋಡೆಯ ಮೇಲೆ ನಡೆದುಕೊಂಡು ಹೋಗುವಾಗ, ಒಂದು ಕಡೆ ನೀಲಿ ಸಮುದ್ರ, ಮತ್ತೊಂದು ಕಡೆ ಕಣ್ಣುಹಾಯಿಸಿದಷ್ಟು ದೂರ ಕೆಂಪು ಚಾವಣಿಗಳ (Red roofs) ಮನೆಗಳು. ಅಲ್ಲಿ ನನಗೆ ಸಿಕ್ಕ ಸ್ಥಳೀಯ ಮಾರ್ಗದರ್ಶಿಯೊಬ್ಬ ಆ ಸೌಂದರ್ಯದ ಹಿಂದಿನ ಕರಾಳ ಸತ್ಯವನ್ನು ಬಿಚ್ಚಿಟ್ಟ. ಅವನ ಕೈಯಲ್ಲೊಂದು ಹಳೆಯ ನಕ್ಷೆಯಿತ್ತು. ಇಡೀ ಡುಬ್ರೋವ್ನಿಕ್ ಹಳೆಯ ನಗರದ ನಕ್ಷೆಯ ತುಂಬಾ ಕಪ್ಪು ತ್ರಿಕೋನಗಳ ಮುದ್ರೆಗಳಿದ್ದವು. "ಈ ಕಪ್ಪು ಗುರುತುಗಳೇನು ಗೊತ್ತಾ?" ಎಂದು ಕೇಳಿದ. "1991-92ರ ಯುದ್ಧದಲ್ಲಿ ಸರ್ಬಿಯನ್-ಮಾಂಟೆನೆಗ್ರಿನ್ ಪಡೆಗಳು ನಮ್ಮ ಈ ಐತಿಹಾಸಿಕ ಕೋಟೆಯ ಮೇಲೆ ಹಾಕಿದ ಬಾಂಬ್‌ಗಳ ಗುರುತುಗಳು. ಯುದ್ಧದ ನಂತರ ನಾವು ಪ್ರತಿಯೊಂದು ಮನೆಯ ಚಾವಣಿಯನ್ನು ಮರುನಿರ್ಮಿಸಿದೆವು." ಗಾಯಗಳ ಮೇಲೂ ಸೌಂದರ್ಯವನ್ನು ಕಟ್ಟಬಹುದು ಎಂಬುದಕ್ಕೆ ಡುಬ್ರೋವ್ನಿಕ್ ಸಾಕ್ಷಿಯಾಗಿತ್ತು. ನನ್ನ ಪ್ರಯಾಣ ಮುಂದುವರಿದು ತಲುಪಿದ್ದು ಕ್ರೊಯೇಶಿಯಾದ ಮತ್ತೊಂದು ವಿಸ್ಮಯ ನಗರ ಸ್ಪ್ಲಿಟ್ (Split).
ದೇಶಗಳು ಸಾಯುವುದಿಲ್ಲ, ರೂಪ ಬದಲಿಸುತ್ತವೆ ಅಷ್ಟೇ
ಸರಯೇವೋ ಮೌನ, ಕಾರಿನ ಕಿಟಕಿಯಾಚೆ ಕಂಡ ಬೋಸ್ನಿಯಾ- ಕ್ರೊಯೇಶಿಯಾದ ವಿಚಿತ್ರ ಗಡಿಗಳು, ಡುಬ್ರೋವ್ನಿಕ್‌ನ ಹೊಸ ಚಾವಣಿಗಳು ಮತ್ತು ಸ್ಪ್ಲಿಟ್‌ನ ಹಳೆಯ ಫುಟ್ಬಾಲ್ ನೆನಪುಗಳನ್ನು ಪ್ಯಾಕ್ ಮಾಡಿಕೊಂಡು ಅಲ್ಲಿಂದ ಮುಂದಿನ ಕೆಲಸಕ್ಕೆ ವಿಮಾನ ಹಿಡಿದು ಹೊರಟೆ. ಇನ್ನೊಂದು ಕತೆ ನಾನು ಈ ಪ್ರವಾಸದಲ್ಲಿ ಕೇಳಿದ್ದು, ಯುಗೋಸ್ಲಾವಿಯ ವಿಭಜನೆಯಾಗಲಿಕ್ಕೆ ಜರ್ಮನಿ ಕೈವಾಡವಿತ್ತು ಅಂತ. ಕ್ರೊಯೇಷಿಯಾ ಮತ್ತು ಸ್ಲೊವೇನಿಯಾ ಬಾಗದಲ್ಲಿ ಸ್ವತಂತ್ರ ಹೋರಾಟ ಜೋರಾದಾಗ 1992ರಲ್ಲಿ ಜರ್ಮನಿ ಆ ಹೋರಾಟಗಾರರ ಸಮರ್ಥನೆಗೆ ನಿಂತಿದ್ದು ಯುದ್ಧದ ಒಂದು ಕಾರಣ.
ಇದನ್ನೂ ಓದಿ: ವೈ-ಫೈಗೆ ವಿರಾಮ, ಆರೋಗ್ಯಕ್ಕೆ ಆದ್ಯತೆ
ನಮ್ಮ ಭಾರತದಲ್ಲೂ ವೈವಿಧ್ಯ ಎಂಬುದು ದೈನಂದಿನ ಬದುಕಿನ ಭಾಗ. ಭಾಷೆಗಳು, ಧರ್ಮಗಳು, ಸಂಸ್ಕೃತಿಗಳ ನಡುವೆ ಭಿನ್ನಾಭಿಪ್ರಾಯಗಳೂ ಇವೆ. ಆದರೆ, ಬಾಲ್ಕನ್ ಪ್ರದೇಶದ ಈ ಪ್ರಯಾಣ ಕಲಿಸಿದ ಪಾಠ, ವೈವಿಧ್ಯವೇ ಸಮಸ್ಯೆಯಲ್ಲ; ಆ ವೈವಿಧ್ಯವನ್ನು ರಾಜಕೀಯದ ಆಯುಧವಾಗಿಸಿದಾಗ ಸಮಸ್ಯೆ ಆರಂಭವಾಗುತ್ತದೆ.
ನಾನು ಅಂದುಕೊಂಡ ಪ್ರಾಂತ್ಯ (ಆ ಹಳೆಯ ದೇಶ ಯುಗೋಸ್ಲಾವಿಯಾ) ನಕ್ಷೆಯಲ್ಲಿ ಸಿಗಲಿಲ್ಲ. ಆದರೆ, ಈ ಪ್ರಯಾಣದ ಕಥೆಗಳಲ್ಲಿ ಅದು ಜೀವಂತವಾಗಿತ್ತು. ಹೊಸ ತಲೆಮಾರಿನವರ ಬಗ್ಗೆ ಗೊತ್ತಿಲ್ಲ. ದೇಶಗಳು ಭೂಪಟದಿಂದ ಅಳಿದುಹೋಗಬಹುದು, ಧ್ವಜಗಳು, ಪಾಸ್‌ಪೋರ್ಟ್‌ಗಳು ಬದಲಾಗಬಹುದು. ಆದರೆ, ಒಂದು ತಲೆಮಾರಿನ ನೆನಪುಗಳಲ್ಲಿ ಬದುಕಿರುವ ದೇಶವನ್ನು ಯಾವ ಭೂಪಟವೂ ಸಂಪೂರ್ಣವಾಗಿ ಅಳಿಸಲಾರದು.