ಬೆಂಗಳೂರಿನಿಂದ ವಿಜಯಪುರಕ್ಕೆ ರೈಲು ಸಂಚಾರ ದೀರ್ಘ ಸಮಯ ತೆಗೆದುಕೊಳ್ಳುತ್ತದೆ, ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗುತ್ತದೆ. ಹೀಗಾಗಿ ಬೆಂಗಳೂರಿನಿಂದ ವಿಜಯಪುರಕ್ಕೆ ಎಕ್ಸ್‌ಪ್ರೆಸ್‌ ರೈಲು ಆರಂಭಿಸಬೇಕು ಎಂದು ಕೇಂದ್ರ ರೈಲ್ವೇ ಸಚಿವರಿಗೆ ರಾಜ್ಯದ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಪತ್ರ ಬರೆದಿದ್ದಾರೆ. ಈ ಬಗ್ಗೆ ಸಚಿವರು ಟ್ವೀಟ್‌ ಮಾಡಿದ್ದಾರೆ.

ಏನಿದೆ ಟ್ವೀಟ್‌ನಲ್ಲಿ?

ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್‌ ಹಾಗೂ ಕೇಂದ್ರ ರೈಲ್ವೇ ರಾಜ್ಯ ಸಚಿವರಾದ ಸೋಮಣ್ಣ ಅವರಿಗೆ ಬೆಂಗಳೂರು ಮತ್ತು ವಿಜಯಪುರದ ನಡುವೆ ನೇರ ಎಕ್ಸ್‌ಪ್ರೆಸ್‌ ರೈಲು ಶುರು ಮಾಡಲು ಪತ್ರ ಬರೆದು ಮನವಿ ಮಾಡಿದ್ದೇನೆ.

ಇದನ್ನೂ ಓದಿ: ಗೋವಾ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿಗರಿಗೆ ಶಿಸ್ತಿನ ಪಾಠ

ಆಲ್ಮಟ್ಟಿ-ವಂಡಲ್‌ ನಡುವಿನ 9.6 ಕಿ.ಮೀ ಉದ್ದದ ರೈಲು ಸಂಪರ್ಕ ಕೆಲಸಗಳು ಗದಗ-ಹೊಟ್ಗಿ ಡಬಲ್‌ ಟ್ರ್ಯಾಕ್‌ ಯೋಜನೆಯಡಿ ಮಾರ್ಚ್‌ 25, 2026ರಂದು ಪೂರ್ಣಗೊಂಡಿದ್ದು, ಉತ್ತರ ಕರ್ನಾಟಕದ ರೈಲು ಸಂಚಾರ ಇನ್ನಷ್ಟು ಸುಲಭವಾಗಿದೆ. ಆದಾಗ್ಯೂ, ಬೆಂಗಳೂರು ಹಾಗೂ ವಿಜಯಪುರದ ನಡುವೆ 15 ಗಂಟೆಗಳ ಪ್ರಯಾಣ ಅವಧಿಯಿದೆ. ವಿದ್ಯಾಭ್ಯಾಸ, ಆರೋಗ್ಯ, ವ್ಯಾಪಾರ ಸೇರಿದಂತೆ ಹಲವು ಉದ್ದೇಶಗಳಿಂದ ಪ್ರಯಾಣಿಸುವ ಸಾವಿರಾರು ಪ್ರಯಾಣಿಕರಿಗೆ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಹೊಸ ರೈಲು ಸಂಚಾರ ಮಾರ್ಗವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮಧ್ಯಂತರ ಸ್ಟಾಪ್‌ಗಳನ್ನು ಕಡಿಮೆ ಮಾಡಿ, ಹುಬ್ಬಳ್ಳಿ ಹಾಗೂ ಗದಗ ಬೈಪಾಸ್‌ ಮಾರ್ಗದಲ್ಲಿ ಪ್ರಯಾಣದ ಸಮಯವನ್ನು 10 ಗಂಟೆಗೆ ಇಳಸಿಬಹುದು.

ಬೆಂಗಳೂರು ಹಾಗೂ ವಿಜಯಪುರದ ನಡುವೆ ನೇರ ಹಾಗೂ ಎಕ್ಸ್‌ಪ್ರೆಸ್‌ ರೈಲು ತಕ್ಷಣದ ಅನಿವಾರ್ಯತೆಯಾಗಿದೆ.