ಖಾಸಗಿ ವಿಮಾನ ಪ್ರಯಾಣ ಸಮರ್ಥಿಸಿಕೊಂಡ ಕೇರಳಂ ಸಿಎಂ
ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಮಲಪ್ಪುರಂಗೆ ತೆರಳಲು ಖಾಸಗಿ ವಿಮಾನ ಬಳಸಿದ ವಿಚಾರವನ್ನು ಸಮರ್ಥಿಸಿಕೊಂಡಿದ್ದು, ತಮ್ಮ ಪ್ರಯಾಣಕ್ಕೆ ಸರಕಾರಿ ಬೊಕ್ಕಸದಿಂದ ಯಾವುದೇ ಹಣ ಖರ್ಚಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕೇರಳಂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರು ಮಲಪ್ಪುರಂಗೆ ತೆರಳಲು ಖಾಸಗಿ ವಿಮಾನ ಬಳಸಿದ ವಿಚಾರವನ್ನು ಸಮರ್ಥಿಸಿಕೊಂಡಿದ್ದು, ತಮ್ಮ ಪ್ರಯಾಣಕ್ಕೆ ಸರಕಾರಿ ಬೊಕ್ಕಸದಿಂದ ಯಾವುದೇ ಹಣ ಖರ್ಚಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಗತ್ಯವಿದ್ದಲ್ಲಿ ಭವಿಷ್ಯದಲ್ಲಿಯೂ ಖಾಸಗಿ ವಿಮಾನಗಳಲ್ಲಿ ಪ್ರಯಾಣಿಸುವುದಾಗಿ ಅವರು ಹೇಳಿದ್ದಾರೆ.
ಸೆಪ್ಟೆಂಬರ್ 21ರಂದು ಬೆಂಗಳೂರಿನಿಂದ ಕೋಝಿಕ್ಕೋಡ್‌ಗೆ ಚಾರ್ಟರ್ಡ್ ವಿಮಾನದಲ್ಲಿ ತೆರಳಿದ್ದ ಸತೀಶನ್, ಮಲಪ್ಪುರಂನಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಲು ತೆರಳಿದ್ದರು. ಪರಿಚಯಸ್ಥರೊಬ್ಬರು ವಿಮಾನ ವ್ಯವಸ್ಥೆ ಮಾಡಿಕೊಟ್ಟಿದ್ದು, ಅವರ ಹೆಸರನ್ನು ಬಹಿರಂಗಪಡಿಸುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ದೇಶದ ಹಲವು ಮುಖ್ಯಮಂತ್ರಿಗಳು ಈ ಹಿಂದೆ ಖಾಸಗಿ ವಿಮಾನಗಳಲ್ಲಿ ಪ್ರಯಾಣಿಸಿರುವುದನ್ನು ಉಲ್ಲೇಖಿಸಿದ ಅವರು, ಇಂಥ ಪ್ರಯಾಣದಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದಾರೆ. ಸಚಿವರ ವಿದೇಶ ಪ್ರವಾಸಗಳಿಗೆ ವಿದೇಶದಲ್ಲಿರುವ ಮಲಯಾಳಿ ಸಂಘಟನೆಗಳು ಟಿಕೆಟ್‌ಗಳನ್ನು ಒದಗಿಸುವುದರಲ್ಲಿಯೂ ತಪ್ಪಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇಂಥ ಪ್ರವಾಸಗಳಿಗೆ ತಮ್ಮ ಅನುಮತಿ ಇರುತ್ತದೆ ಎಂದಿದ್ದಾರೆ.
ರಾಜ್ಯ ಸರಕಾರದ ಬಾಡಿಗೆ ಹೆಲಿಕಾಪ್ಟರ್ ಒಪ್ಪಂದದ ಅವಧಿ ಮುಗಿದಿದ್ದು, ತಿಂಗಳಿಗೆ 80 ಲಕ್ಷ ರುಪಾಯಿ ವೆಚ್ಚವಾಗುವ ವ್ಯವಸ್ಥೆಯ ಬದಲಿಗೆ ಕಡಿಮೆ ವೆಚ್ಚದ ಒಪ್ಪಂದಕ್ಕಾಗಿ ಮಾತುಕತೆ ನಡೆಯುತ್ತಿದೆ ಎಂದು ಸತೀಶನ್ ತಿಳಿಸಿದ್ದಾರೆ.
ತುರ್ತು ಕಾರ್ಯಾಚರಣೆಗಳಿಗೆ ಹೆಲಿಕಾಪ್ಟರ್ ಉಳಿಸಿಕೊಳ್ಳುವಂತೆ ಪೊಲೀಸ್ ಮತ್ತು ವಿಪತ್ತು ನಿರ್ವಹಣಾ ಇಲಾಖೆಗಳು ಮನವಿ ಮಾಡಿವೆ.