ಬಿಹಾರದ ಐತಿಹಾಸಿಕ ನಗರವಾದ ರಾಜಗೀರ್, ಈಗ ತನ್ನ ಸಾಂಪ್ರದಾಯಿಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಜತೆಗೆ ಅಂತಾರಾಷ್ಟ್ರೀಯ ಮಟ್ಟದ ಸಾಹಸ ಪ್ರವಾಸಿ ತಾಣವಾಗಿ ಮಾರ್ಪಡುತ್ತಿದೆ. ಈಗಾಗಲೇ ಅತ್ಯಂತ ಜನಪ್ರಿಯವಾಗಿರುವ ಗ್ಲಾಸ್ ಸ್ಕೈವಾಕ್‌ನ ಯಶಸ್ಸಿನ ನಂತರ, ಬಿಹಾರ ಸರಕಾರವು ದೇಶದ ಮೊದಲ 'ಕ್ಲಿಫ್ ವಾಕ್' ಯೋಜನೆಯನ್ನು ಪರಿಚಯಿಸುವ ಮೂಲಕ ಸಾಹಸ ಪ್ರಿಯರಿಗೆ ಹೊಸ ಉಲ್ಲಾಸ ನೀಡಲು ಸಜ್ಜಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಸಾಹಸ ಪ್ರವಾಸೋದ್ಯಮ ನೀತಿ

ಸುಮಾರು 100 ಮೀಟರ್ ಉದ್ದದ ಈ ಕ್ಲಿಫ್ ವಾಕ್ ಭಾರತದಲ್ಲೇ ಮೊದಲನೆಯದಾಗಿದೆ. ಇದು ಕಡಿದಾದ ಪರ್ವತದ ಅಂಚಿನಲ್ಲಿ ನಿರ್ಮಿಸಲಾಗುತ್ತಿದ್ದು, ಪ್ರವಾಸಿಗರಿಗೆ ಗಾಳಿಯಲ್ಲಿ ಅಥವಾ ಬೆಟ್ಟದ ಅಂಚಿನಲ್ಲಿ ನಡೆಯುತ್ತಿರುವಂತಹ ರೋಚಕ ಅನುಭವವನ್ನು ನೀಡಲಿದೆ. ಈ ಯೋಜನೆಯನ್ನು ಜೇತಿಯನ್‌ ಪರ್ವತ ಶ್ರೇಣಿಯ ಕಡಿದಾದ ಕಲ್ಲುಬಂಡೆಗಳ ಮೇಲೆ ನಿರ್ಮಿಸಲಾಗುತ್ತಿದೆ. ಇದು ನೇಚರ್‌ ಸಫಾರಿ ಪಾರ್ಕ್‌ ರಾಜಗಿರ್‌ಗೆ ಹತ್ತಿರದಲ್ಲಿದ್ದು, ಇಲ್ಲಿನ ದಟ್ಟವಾದ ಅರಣ್ಯ ಮತ್ತು ಆಳವಾದ ಕಣಿವೆಗಳ ವಿಹಂಗಮ ನೋಟವನ್ನು ಪ್ರವಾಸಿಗರು ಸವಿಯಬಹುದಾಗಿದೆ.

ಪರ್ವತದ ಮಣ್ಣು ಮತ್ತು ಬಂಡೆಗಳ ದೃಢತೆಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪರೀಕ್ಷಿಸಿದ ನಂತರವೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎನ್ನಲಾಗಿದೆ. ಭದ್ರವಾದ ರೇಲಿಂಗ್‌ಗಳು ಮತ್ತು ಅತ್ಯಾಧುನಿಕ ಸುರಕ್ಷತಾ ಮಾನದಂಡಗಳನ್ನು ಇಲ್ಲಿ ಅಳವಡಿಸಲಾಗುತ್ತಿದ್ದು, ರೋಚಕತೆಯ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ.