ತಮಿಳುನಾಡಿನ ಹೊಸೂರನ್ನು ಬೆಂಗಳೂರಿನ ಬೊಮ್ಮಸಂದ್ರ ಮೆಟ್ರೋ ಜಾಲಕ್ಕೆ ಸಂಪರ್ಕಿಸುವ ಪ್ರಸ್ತಾವಿತ 23 ಕಿಮೀ. ಮೆಟ್ರೋ ಮಾರ್ಗದ ಕುರಿತು ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಸಮಗ್ರ ವೈಜ್ಞಾನಿಕ ಅಧ್ಯಯನ ನಡೆಸಬೇಕು ಎಂದು ಸಾರಿಗೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಈ ಯೋಜನೆಯ ಕಾರ್ಯಸಾಧ್ಯತಾ ವರದಿ ಅಂತಿಮ ಹಂತದಲ್ಲಿದೆ. ಆದರೆ, ಪ್ರಯಾಣಿಕರ ಬೇಡಿಕೆ, ಗರಿಷ್ಠ ಸಂಚಾರದ ಪ್ರಮಾಣ ಹಾಗೂ ಮಾರ್ಗದ ಅಗತ್ಯಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿದ ನಂತರವೇ ಮೆಟ್ರೋ, ಮೆಟ್ರೋ ಲೈಟ್, ಉಪನಗರ ರೈಲು ಅಥವಾ ಪ್ರಾದೇಶಿಕ ವೇಗದ ಸಾರಿಗೆ ವ್ಯವಸ್ಥೆ (RRTS) ಯಾವುದು ಸೂಕ್ತ ಎಂಬುದನ್ನು ನಿರ್ಧರಿಸಬೇಕು ಎಂದು ಐಐಎಸ್‌ಸಿಯ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಯೋಜಕ ಪ್ರೊ. ಆಶಿಷ್ ವರ್ಮಾ ಹೇಳಿದ್ದಾರೆ.

ಬೇಡಿಕೆ ಇಲ್ಲದೆ ಹಲವು ನಗರಗಳಲ್ಲಿ ಮೆಟ್ರೋ ನಿರ್ಮಿಸಿರುವ ಪರಿಣಾಮ ಕಡಿಮೆ ಪ್ರಯಾಣಿಕರು ಮತ್ತು ಅಪೂರ್ಣ ಬಳಕೆಯ ಸಮಸ್ಯೆ ಎದುರಾಗಿದೆ ಎಂದೂ ಅವರು ಎಚ್ಚರಿಸಿದರು. ಮತ್ತೊಂದೆಡೆ, ರೈಲು ತಜ್ಞ ಸಂಜೀವ್ ದ್ಯಾಮಣ್ಣವರ ಅವರು ಹೊಸೂರಿಗೆ ಮೆಟ್ರೋ ವಿಸ್ತರಣೆಯ ಬದಲು ಹೀಲಲಿಗೆ–ಹೊಸೂರು ಉಪನಗರ ರೈಲು ಮಾರ್ಗವನ್ನು ವಿಸ್ತರಿಸುವುದು ಹೆಚ್ಚು ಸಾಮರ್ಥ್ಯ, ಕಡಿಮೆ ವೆಚ್ಚ ಮತ್ತು ದೀರ್ಘದೂರ ಪ್ರಯಾಣಕ್ಕೆ ಹೆಚ್ಚು ಅನುಕೂಲಕರವಾಗಲಿದೆ ಎಂದು ಸಲಹೆ ನೀಡಿದ್ದಾರೆ.