ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆಯಲಿರುವ ಕುಂಭಮೇಳದ ಸಂದರ್ಭದಲ್ಲಿ ಭಕ್ತಾದಿಗಳ ವಿಪರೀತ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಪ್ರಯಾಣವನ್ನು ಸುಗಮಗೊಳಿಸಲು ರಾಜ್ಯ ಸರಕಾರ 'ಹೆಲಿ-ಟೂರಿಸಂ ಸರ್ಕ್ಯೂಟ್' ಪ್ರಾರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಕುಂಭಮೇಳದ ಸಮಯದಲ್ಲಿ ಲಕ್ಷಾಂತರ ಭಕ್ತರು ಮತ್ತು ಪ್ರವಾಸಿಗರು ನಾಸಿಕ್‌ಗೆ ಆಗಮಿಸುತ್ತಾರೆ. ಇದರಿಂದ ರಸ್ತೆ ಮತ್ತು ರೈಲು ಸಾರಿಗೆಯ ಮೇಲೆ ವಿಪರೀತ ಒತ್ತಡ ಉಂಟಾಗುತ್ತದೆ. ಈ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಗಣ್ಯ ವ್ಯಕ್ತಿಗಳು, ಹಿರಿಯ ನಾಗರಿಕರು ಹಾಗೂ ತುರ್ತು ಸೇವೆಗಳಿಗಾಗಿ ಹೆಲಿಕಾಪ್ಟರ್ ಸೌಲಭ್ಯವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಗುರಿ.

ಇದನ್ನೂ ಓದಿ: ಜಲಾಂತರ್ಗಾಮಿ ಪ್ರವಾಸಕ್ಕೆ ಮುಂದಾಗಿದೆ ಮಹಾರಾಷ್ಟ್ರ ಸರಕಾರ

ಈ ಸರ್ಕ್ಯೂಟ್ ಅಡಿಯಲ್ಲಿ, ಮುಂಬೈ, ಪುಣೆ ಮತ್ತು ಶಿರಡಿಯಂಥ ಪ್ರಮುಖ ಕೇಂದ್ರಗಳಿಂದ ನಾಸಿಕ್‌ಗೆ ನೇರ ಹೆಲಿಕಾಪ್ಟರ್ ಸೇವೆ ಇರಲಿದೆ. ಈ ಯೋಜನೆಯನ್ನು ಯಶಸ್ವಿಗೊಳಿಸಲು ಸರಕಾರವು ನಾಸಿಕ್ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಹೊಸ ಹೆಲಿಪ್ಯಾಡ್‌ಗಳನ್ನು ನಿರ್ಮಿಸಲಿದೆ. ಹಾಗೆಯೇ ಖಾಸಗಿ ವಿಮಾನಯಾನ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಯಿದೆ.

ಇದರ ಇನ್ನೊಂದು ಅನುಕೂಲ ಎಂದರೆ ಯಾತ್ರಾರ್ಥಿಗಳಿಗೆ ಅನಾರೋಗ್ಯ ಉಂಟಾದಲ್ಲಿ ಅಥವಾ ಅಪಘಾತ ಸಂಭವಿಸಿದಲ್ಲಿ ಏರ್ ಅಂಬ್ಯುಲೆನ್ಸ್ ಆಗಿ ಕೂಡ ಬಳಸಬಹುದು. ಪೊಲೀಸ್ ಮತ್ತು ಜಿಲ್ಲಾಡಳಿತವು ನಿಗಾ ವಹಿಸಲು ಕೂಡ ಈ ವ್ಯವಸ್ಥೆ ಸಹಕಾರಿಯಾಗುತ್ತದೆ.