ಬೆಂಗಳೂರಿನಲ್ಲಿ ‘ಪೋಕೆಮಾನ್ ಟ್ರೆಷರ್ ಹಂಟ್’ಗೆ ಅಸ್ತು ?
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಅವರನ್ನು ಭೇಟಿಯಾದ ಪೋಕೆಮಾನ್ ಕಂಪನಿಯ ಪ್ರತಿನಿಧಿಗಳು, ಕರ್ನಾಟಕದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಬಹುದಾದ ಅನುಭವಾಧಾರಿತ ಕಾರ್ಯಕ್ರಮಗಳು ಪ್ರಸ್ತಾವನೆಗಳನ್ನು ಹಂಚಿಕೊಂಡರು.
ಜಾಗತಿಕವಾಗಿ ಜನಪ್ರಿಯವಾಗಿರುವ ಪೋಕೆಮಾನ್ ಬ್ರ್ಯಾಂಡ್ ನ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ‘ಪೋಕೆಮಾನ್ ಟ್ರೆಷರ್ ಹಂಟ್’ ಸೇರಿದಂತೆ ಹಲವು ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಧ್ಯತೆ ಕುರಿತು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮತ್ತು ಜಪಾನ್‌ನ The Pokémon Company ಪ್ರತಿನಿಧಿಗಳ ನಡುವೆ ಚರ್ಚೆ ನಡೆದಿದೆ.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಅವರನ್ನು ಭೇಟಿಯಾದ ಪೋಕೆಮಾನ್ ಕಂಪನಿಯ ಪ್ರತಿನಿಧಿಗಳು, ಕರ್ನಾಟಕದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಬಹುದಾದ ಅನುಭವಾಧಾರಿತ ಕಾರ್ಯಕ್ರಮಗಳು ಪ್ರಸ್ತಾವನೆಗಳನ್ನು ಹಂಚಿಕೊಂಡರು.
ಇದನ್ನೂ ಓದಿ: ಗಂಗಾನದಿಯ ತಟದಲ್ಲಿ ಹೊಸ ವಸತಿಧಾಮ
ಪ್ರಮುಖವಾಗಿ ಬೆಂಗಳೂರಿನ ವಿವಿಧ ಗುರುತಿಸಲಾದ ಸ್ಥಳಗಳನ್ನು ಸಂಪರ್ಕಿಸುವ ‘Treasure Hunt’ ಮಾದರಿಯ ಕಾರ್ಯಕ್ರಮ ಆಯೋಜಿಸಿ, ಮಕ್ಕಳು, ಯುವಜನರು, ಕುಟುಂಬಗಳು ಹಾಗೂ ಪ್ರವಾಸಿಗರನ್ನು ನಗರದ ವಿವಿಧ ಭಾಗಗಳಿಗೆ ಆಕರ್ಷಿಸುವ ಪರಿಕಲ್ಪನೆ ಕುರಿತು ಚರ್ಚಿಸಲಾಯಿತು.
ಇದರ ಜತೆಗೆ Pokémon Run, Parade ಹಾಗೂ ಇತರೆ ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿ, ಕರ್ನಾಟಕದ ಹೊರಗಿನ ಪ್ರವಾಸಿಗರನ್ನೂ ಬೆಂಗಳೂರಿಗೆ ಸೆಳೆಯುವ ಸಾಧ್ಯತೆಯನ್ನು ಪರಿಶೀಲಿಸಲಾಯಿತು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ʻಜಾಗತಿಕವಾಗಿ ಜನಪ್ರಿಯವಾಗಿರುವ ಬ್ರ್ಯಾಂಡ್‌ಗಳೊಂದಿಗೆ ಅನುಭವಾಧಾರಿತ ಕಾರ್ಯಕ್ರಮಗಳನ್ನು ರೂಪಿಸುವುದರಿಂದ ವಿಶೇಷವಾಗಿ ಯುವಜನರು ಮತ್ತು ಕುಟುಂಬ ಪ್ರವಾಸಿಗರನ್ನು ಹೊಸ ರೀತಿಯಲ್ಲಿ ತಲುಪಲು ಸಾಧ್ಯವಾಗುತ್ತದೆ. ಮಾನ್ಯ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ನಗರ ಪ್ರವಾಸೋದ್ಯಮಕ್ಕೆ ಹೊಸ ಅನುಭವಗಳನ್ನು ಸೇರಿಸುವತ್ತ ನಾವು ಗಮನ ಹರಿಸಿದ್ದೇವೆ. ಪೋಕೆಮಾನ್ ಕಂಪನಿ ವಿವರವಾದ ಪ್ರಸ್ತಾವನೆ ಸಲ್ಲಿಸಿದ ನಂತರ ಸ್ಥಳ, ಸುರಕ್ಷತೆ, ಸಂಚಾರ ಮತ್ತು ಪ್ರವಾಸೋದ್ಯಮದ ಪರಿಣಾಮಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು,ʼ ಎಂದರು.
ಸಭೆಯಲ್ಲಿ The Pokémon Company ಕಾರ್ಪೊರೇಟ್ ಅಧಿಕಾರಿ ಹಾಗೂ Pokémon Singapore ಮತ್ತು Taiwan ನಿರ್ದೇಶಕ ಸುಸುಮು ಫುಕುನಾಗಾ, ಕಂಪನಿಯ ಇತರೆ ಪ್ರತಿನಿಧಿಗಳು ಹಾಗೂ KSTDC ವ್ಯವಸ್ಥಾಪಕ ನಿರ್ದೇಶಕ ಶಿವಪ್ರಸಾದ್ ಪಿ.ಆರ್. ಉಪಸ್ಥಿತರಿದ್ದರು.
ʻಪ್ರವಾಸೋದ್ಯಮವನ್ನು ಸಾಂಪ್ರದಾಯಿಕ ಪ್ರವಾಸಿ ತಾಣಗಳಿಗೆ ಮಾತ್ರ ಸೀಮಿತಗೊಳಿಸದೆ, ಯುವಜನರು ಮತ್ತು ಮಕ್ಕಳನ್ನು ಆಕರ್ಷಿಸುವ ಹೊಸ ಅನುಭವಗಳನ್ನು ರೂಪಿಸಬೇಕಾಗಿದೆ. ಪೋಕೆಮಾನ್‌ನಂತಹ ಜಾಗತಿಕ ಬ್ರ್ಯಾಂಡ್‌ಗಳೊಂದಿಗೆ ಸಹಯೋಗದ ಮೂಲಕ ಬೆಂಗಳೂರಿನಲ್ಲಿ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ, ದೇಶ–ವಿದೇಶದ ಪ್ರವಾಸಿಗರನ್ನು ಸೆಳೆಯುವ ಸಾಧ್ಯತೆಗಳನ್ನು ಪರಿಶೀಲಿಸಲಾಗುವುದು. ಬೆಂಗಳೂರು ಜಾಗತಿಕ ಮಟ್ಟದ ಸಾಂಸ್ಕೃತಿಕ, ಮನರಂಜನಾ ಹಾಗೂ ಅನುಭವಾಧಾರಿತ ಪ್ರವಾಸೋದ್ಯಮದ ಕೇಂದ್ರವಾಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ.ʼ
ಕೆ.ಜೆ. ಜಾರ್ಜ್, ಇಂಧನ ಮತ್ತು ಪ್ರವಾಸೋದ್ಯಮ ಸಚಿವರು