ಶಿವಮೊಗ್ಗಕ್ಕೆ ಬರಲಿದೆ 2 ವಂದೇ ಭಾರತ್, 5 ಹೊಸ ರೈಲು!
ಜನಸಾಮಾನ್ಯರ ಜೀವನಾಡಿಯಾಗಿರುವ ಭಾರತೀಯ ರೈಲ್ವೆಯನ್ನು ಅಭಿವೃದ್ಧಿ ಪಡಿಸುವತ್ತ ಕೇಂದ್ರ ಗಮನಹರಿಸಿದ್ದು, ರೈಲ್ವೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಅಲ್ಲದೆ ರೈಲ್ವೆ ಸಂಪರ್ಕವನ್ನೂ ಅಭಿವೃದ್ಧಿಪಡಿಸಿದ್ದು, ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದೆ. ಅದರಲ್ಲೂ ಶಿವಮೊಗ್ಗ ರೈಲ್ವೆ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಜನವರಿಯಿಂದ ಎರಡು ವಂದೇ ಭಾರತ್ ರೈಲುಗಳು ಸೇರಿದಂತೆ ಐದು ಹೊಸ ರೈಲುಗಳು ಇಲ್ಲಿ ಸಂಚಾರ ಆರಂಭಿಸಲಿವೆ.
ಶಿವಮೊಗ್ಗ: ಭಾರತದಾದ್ಯಂತ ಉತ್ತಮ ರೈಲ್ವೆ ಸಂಪರ್ಕವನ್ನು ಕಲ್ಪಿಸುವ ಉದ್ದೇಶದೊಂದಿಗೆ ದೇಶದ ರೈಲ್ವೆ ಇಲಾಖೆ ದಿಟ್ಟ ಹೆಜ್ಜೆಯಿಟ್ಟಿದೆ. ಮುಂದಿನ ಜನವರಿಯಿಂದ ಶಿವಮೊಗ್ಗ ಜಿಲ್ಲೆಯ ರೈಲ್ವೆ ಭವಿಷ್ಯವೇ ಬದಲಾಗಲಿದೆ. ಜಿಲ್ಲೆಯ ಜನರಿಗೆ ಗುಡ್‌ನ್ಯೂಸ್ ಎನ್ನುವ ರೀತಿಯಲ್ಲಿ ಜನವರಿ ವೇಳೆಗೆ ಶಿವಮೊಗ್ಗದಿಂದ 2 ವಂದೇ ಭಾರತ್ ರೈಲುಗಳು ಕಾರ್ಯಾಚರಣೆ ಆರಂಭಿಸಲಿದ್ದರೆ, ಒಟ್ಟು 5 ಹೊಸ ರೈಲುಗಳು ಶಿವಮೊಗ್ಗದಿಂದ ಸಂಚಾರ ನಡೆಯಲಿದೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ.

ಅಂದಾಜಿನ ಪ್ರಕಾರ, 2026ರ ಜನವರಿ ಕೊನೆಯ ವೇಳೆಗೆ ಶಿವಮೊಗ್ಗದ ಹೊರವಲಯದಲ್ಲಿರುವ ಕೋಟೆಗಂಗೂರಿನಲ್ಲಿ ರಾಜ್ಯದ 4ನೇ ರೈಲ್ವೆ ಕೋಚಿಂಗ್ ಡಿಪೋ ಆರಂಭವಾಗಲಿದೆ. ಇದು ಜಿಲ್ಲೆಯ ರೈಲ್ವೆಕ್ರಾಂತಿಗೆ ಕಾರಣವಾಗಲಿದೆ. ಬೆಂಗಳೂರು ಹಾಗೂ ಮೈಸೂರಿನ ರೈಲ್ವೆ ನಿಲ್ದಾಣಗಳ ಮೇಲಿನ ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ. ಅದಕ್ಕಾಗಿ ಬಹಳಷ್ಟು ರೈಲುಗಳು ಬೆಂಗಳೂರು ಮತ್ತು ಮೈಸೂರು ಬದಲಾಗಿ ಶಿವಮೊಗ್ಗದಿಂದ ಸಂಚಾರ ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ವಂದೇ ಭಾರತ್ ರೈಲುಗಳ ವೇಳಾಪಟ್ಟಿ ಹಾಗೂ ರೈಲು ಸಂಖ್ಯೆಯನ್ನೂ ಇಲಾಖೆ ಪ್ರಕಟ ಮಾಡಿದೆ.
ಶಿವಮೊಗ್ಗ-ತಿರುಪತಿ ವಂದೇ ಭಾರತ್ ರೈಲು ಮುಂಜಾನೆ 4.30ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12.30ಕ್ಕೆ ತಿರುಪತಿ ತಲುಪುತ್ತದೆ. ಮತ್ತೆ ಸಂಜೆ 4.30ಕ್ಕೆ ಹೊರಟು ರಾತ್ರಿ 12.30ಗಂಟೆಗೆ ಶಿವಮೊಗ್ಗ ತಲುಪುತ್ತದೆ.

ಮತ್ತೊಂದು ವಂದೇ ಭಾರತ್ ರೈಲು ಶಿವಮೊಗ್ಗ- ಬೆಂಗಳೂರು ನಡುವೆ ಸಂಚರಿಸಲಿದೆ. ಇದಲ್ಲದೆ ಶಿವಮೊಗ್ಗ-ಎರ್ನಾಕುಲಂ(ಕೇರಳ), ಶಿವಮೊಗ್ಗ-ಭಾಗಲ್ಪುರ(ಬಿಹಾರ), ಶಿವಮೊಗ್ಗ- ಜಮ್‌ಶೆಡ್‌ಪುರ್ (ಜಾರ್ಖಂಡ್), ಶಿವಮೊಗ್ಗ-ಚಂಡೀಗಢ, ಶಿವಮೊಗ್ಗ-ಗುವಾಹಟಿ (ಅಸ್ಸಾಂ) ನಡುವೆ ಸಂಚಾರ ನಡೆಸಲು ರೈಲುಗಳು ಜನವರಿ ಅಥವಾ ಫೆಬ್ರವರಿ ವೇಳೆಯಲ್ಲಿ ಸಂಚಾರ ಆರಂಭ ಮಾಡಬಹುದು ಎನ್ನಲಾಗಿದೆ.