ದುಬೈನಲ್ಲಿ ಎತಿಹಾದ್ ರೈಲು ಪ್ರಯಾಣಿಕ ಸೇವೆ ಆರಂಭ
ದುಬೈ–ಅಬುಧಾಬಿ ಹಾಗೂ ದುಬೈ–ಫುಜೈರಾ ನಡುವೆ ಎತಿಹಾದ್ ರೈಲಿನ ಪ್ರಯಾಣಿಕ ಸೇವೆ ಸೆಪ್ಟೆಂಬರ್ 30ರಿಂದ ಆರಂಭವಾಗಿದ್ದು, ವೇಗದ ರೈಲು ಸಂಪರ್ಕದ ಮೂಲಕ ಯುಎಇಯ ಅಂತರನಗರ ಪ್ರಯಾಣಕ್ಕೆ ಹೊಸ ಆಯ್ಕೆ ದೊರೆತಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್‌ನ ಸಾರಿಗೆ ವ್ಯವಸ್ಥೆಯಲ್ಲಿ ಮಹತ್ವದ ಹೆಜ್ಜೆಯಾಗಿ ದುಬೈನಲ್ಲಿ ಎತಿಹಾದ್ ರೈಲಿನ ಮೊದಲ ಪ್ರಯಾಣಿಕ ರೈಲು ಸೇವೆ ಸೆಪ್ಟೆಂಬರ್ 30ರಿಂದ ಆರಂಭವಾಗಿದೆ. ಅಲ್ ಯಲಾಯಿಸ್ ನಿಲ್ದಾಣದಿಂದ ಅಬುಧಾಬಿ ಹಾಗೂ ಫುಜೈರಾ ನಗರಗಳಿಗೆ ರೈಲು ಸಂಪರ್ಕ ಕಲ್ಪಿಸಲಾಗಿದೆ. ದುಬೈ–ಅಬುಧಾಬಿ ಪ್ರಯಾಣ ಕೇವಲ 64 ನಿಮಿಷಗಳಲ್ಲಿ, ದುಬೈ–ಫುಜೈರಾ ಪ್ರಯಾಣ 70 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ.
ದುಬೈ–ಅಬುಧಾಬಿ ಮಾರ್ಗದಲ್ಲಿ ದಿನಕ್ಕೆ ಐದು ರೈಲುಗಳು ಸಂಚರಿಸಲಿದ್ದು, ದುಬೈನಿಂದ ಬೆಳಗ್ಗೆ 6.14, 7.14, ಮಧ್ಯಾಹ್ನ 1.14, ಸಂಜೆ 5.14 ಹಾಗೂ 6.14ಕ್ಕೆ ರೈಲುಗಳು ಹೊರಡಲಿವೆ. ಅಬುಧಾಬಿಯಿಂದ ದುಬೈಗೆ ಬೆಳಗ್ಗೆ 6.43, 7.43, ಮಧ್ಯಾಹ್ನ 12.43, ಸಂಜೆ 4.43 ಮತ್ತು 5.43ಕ್ಕೆ ಸೇವೆ ಲಭ್ಯವಿದೆ.
ದುಬೈ–ಅಬುಧಾಬಿ ಮಾರ್ಗದ ಕಂಫರ್ಟ್ ಕ್ಲಾಸ್ ದರ 39 ದಿರ್ಹಮ್, ಪ್ರೀಮಿಯಂ ಕ್ಲಾಸ್ 109 ದಿರ್ಹಮ್‌ನಿಂದ ಆರಂಭವಾಗುತ್ತದೆ. ದುಬೈ–ಫುಜೈರಾ ಮಾರ್ಗದಲ್ಲಿ ದರಗಳು ಕ್ರಮವಾಗಿ 29 ಮತ್ತು 89 ದಿರ್ಹಮ್‌ನಿಂದ ಆರಂಭವಾಗುತ್ತವೆ. ಟಿಕೆಟ್‌ಗಳನ್ನು ಎತಿಹಾದ್ ರೈಲ್ ವೆಬ್‌ಸೈಟ್, ಮೊಬೈಲ್ ಆ್ಯಪ್ ಹಾಗೂ ನಿಲ್ದಾಣಗಳಲ್ಲಿನ ಟಿಕೆಟ್ ಯಂತ್ರಗಳ ಮೂಲಕ ಪಡೆಯಬಹುದು. ರೈಲುಗಳು ಗಂಟೆಗೆ ಗರಿಷ್ಠ 200 ಕಿಮೀ. ವೇಗದಲ್ಲಿ ಸಂಚರಿಸಲಿವೆ.