2026ರಲ್ಲಿ ದುಬೈನಲ್ಲಿ ಹಾರಲಿವೆ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಗಳು
ವಾಹನ ದಟ್ಟಣೆಗೆ ಪರಿಹಾರ ಕಾಣುವ ಉದ್ದೇಶದೊಂದಿಗೆ ದುಬೈನ ರಸ್ತೆಗಳು ಮತ್ತು ಸಾರಿಗೆ ಪ್ರಾಧಿಕಾರ (RTA) ಸಹಭಾಗಿತ್ವದಲ್ಲಿ ಜಾಬಿ ಏವಿಯೇಷನ್ ಸಂಸ್ಥೆ ಅಭಿವೃದ್ಧಿಪಡಿಸಿದ ವಿದ್ಯುತ್ ಚಾಲಿತ ವೈಮಾನಿಕ ಟ್ಯಾಕ್ಸಿಯ ಪರೀಕ್ಷಾ ಹಾರಾಟ ನಡೆಸಿ ಯಶಸ್ವಿಗೊಂಡಿದ್ದು, 2026ರ ವೇಳೆಗೆ ಸಾರಿಗೆ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸಾಧಿಸಲಿದೆ.
ವಿದ್ಯುತ್ ಚಾಲಿತ ವೈಮಾನಿಕ ಟ್ಯಾಕ್ಸಿಯ ಪರೀಕ್ಷಾ ಹಾರಾಟ ನಡೆಸಿ ಯಶಸ್ವಿಗೊಂಡಿರುವ ದುಬೈ, ಭವಿಷ್ಯದಲ್ಲಿ ನಗರದ ಸಾರಿಗೆಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲು ಸಿದ್ಧತೆ ನಡೆಸಿದೆ. ದುಬೈನ ರಸ್ತೆಗಳು ಮತ್ತು ಸಾರಿಗೆ ಪ್ರಾಧಿಕಾರ (RTA) ಸಹಭಾಗಿತ್ವದಲ್ಲಿ ಜಾಬಿ ಏವಿಯೇಷನ್ ಅಭಿವೃದ್ಧಿಪಡಿಸಿದ, eVTOL (electric vertical take-off and landing) ವಿಮಾನವು ಗಂಟೆಗೆ 320 ಕಿಮೀ ವೇಗದಲ್ಲಿ160 ಕಿಮೀ ವ್ಯಾಪ್ತಿಯಲ್ಲಿ ಹಾರುವ ಸಾಮರ್ಥ್ಯವನ್ನು ಹೊಂದಿದೆ.
ವಿದ್ಯುತ್ ಚಾಲಿತ ವೈಮಾನಿಕ ಟ್ಯಾಕ್ಸಿಯ ಪರೀಕ್ಷಾ ಹಾರಾಟವನ್ನು ಮರುಭೂಮಿಯಲ್ಲಿ ನಡೆಸಲಾಗಿದ್ದು, ಇದು ನಗರ ವಾಹನ ದಟ್ಟಣೆಗೆ ಪರಿಹಾರ ಕಾಣುವ ಭರವಸೆ ನೀಡಿದೆ. ಈ ವೈಮಾನಿಕ ಟ್ಯಾಕ್ಸಿಗಳು ಆರಂಭದಲ್ಲಿ ಜನದಟ್ಟಣೆಯಿರುವ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಂತಹ ಪರಿಸರಗಳಲ್ಲಿ ಕಾರ್ಯಾರಂಭಗೊಳ್ಳಲಿದ್ದು, ಪ್ರತ್ಯೇಕವಾಗಿ ನಗರದೊಳಗೆ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಅಂದರೆ 45 ನಿಮಿಷಗಳ ಕಾರು ಪ್ರಯಾಣವನ್ನು ಕೇವಲ 12 ನಿಮಿಷಗಳಿಗೆ ಇದು ಇಳಿಸಬಹುದು. ಈ ವಿಮಾನ ಪ್ರಯಾಣ ಕೈಗೊಳ್ಳಲು 2026 ರವರೆಗೂ ಕಾಯಲೇಬೇಕು.