ಪ್ಯಾರಿಸ್‌ನ ಪ್ರಸಿದ್ಧ ಐಫೆಲ್ ಟವರ್‌ನಲ್ಲಿ BAPS ಧಾರ್ಮಿಕ ಸಂಘಟನೆಯ ನಿಯೋಗದ ಭೇಟಿಗೆ ಸಂಬಂಧಿಸಿದ ವಿವಾದದ ಕುರಿತು ಭಾರತ ಸರ್ಕಾರ ಸ್ಪಷ್ಟನೆ ನೀಡಿದೆ. ಈ ಪ್ರಕರಣದಲ್ಲಿ ಭಾರತ ಸರ್ಕಾರದ ಯಾವುದೇ ಪಾತ್ರವಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

Untitled design (52)

BAPS ಸಂಘಟನೆಯ ಸನ್ಯಾಸಿಗಳ ನಿಯೋಗ ಐಫೆಲ್ ಟವರ್‌ಗೆ ಭೇಟಿ ನೀಡಿದ ವೇಳೆ ಮಹಿಳಾ ಸಿಬ್ಬಂದಿಯನ್ನು ಕೆಲವು ಪ್ರದೇಶಗಳಿಂದ ದೂರವಿಡುವಂತೆ ಮನವಿ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪದ ಹಿನ್ನೆಲೆಯಲ್ಲಿ ಐಫೆಲ್ ಟವರ್‌ನ ಮಹಿಳಾ ಉದ್ಯೋಗಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಸಿಬ್ಬಂದಿ ಒಂದು ದಿನದ ಮುಷ್ಕರ ನಡೆಸಿದ್ದರು. ಪರಿಣಾಮವಾಗಿ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ಐಫೆಲ್ ಟವರ್ ಒಂದು ದಿನ ಮುಚ್ಚಲಾಗಿತ್ತು.

ಘಟನೆ ಫ್ರಾನ್ಸ್‌ನಲ್ಲಿ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಪ್ಯಾರಿಸ್ ನಗರಾಡಳಿತ ಈ ಕುರಿತು ತನಿಖೆ ಆರಂಭಿಸಿದೆ. ಐಫೆಲ್ ಟವರ್ ನಿರ್ವಹಣಾ ಸಂಸ್ಥೆಯ ಪ್ರಕಾರ, BAPS ನಿಯೋಗದ ಭೇಟಿಯ ಸಂದರ್ಭದಲ್ಲಿ ಮಹಿಳಾ ಸಿಬ್ಬಂದಿಯ ನಿಯೋಜನೆ ಕುರಿತು ನಿರ್ದಿಷ್ಟ ಮನವಿ ಬಂದಿತ್ತು.

ಆದರೆ BAPS ಫ್ರಾನ್ಸ್ ಈ ಆರೋಪವನ್ನು ನಿರಾಕರಿಸಿದೆ. 100ಕ್ಕೂ ಹೆಚ್ಚು ಸದಸ್ಯರಿದ್ದ ನಿಯೋಗದ ಭೇಟಿಯನ್ನು ಸುಗಮವಾಗಿ ನಡೆಸಲು ಮತ್ತು ಉದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲವು ವ್ಯವಸ್ಥೆಗಳನ್ನು ಮಾಡಲಾಗಿತ್ತು ಎಂದು ಸಂಸ್ಥೆ ಹೇಳಿದೆ. ಮಹಿಳೆಯರ ವಿರುದ್ಧ ಯಾವುದೇ ಭೇದಭಾವದ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.

ಈ ವಿವಾದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್ ಸಮೀಪ ನಿರ್ಮಿಸಲಾದ BAPS ದೇವಾಲಯವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದ್ದರು. ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಇಂಥ ಕಾರ್ಯಕ್ರಮಗಳಿಗೆ ಪ್ರಧಾನಿ ಶುಭಾಶಯ ಕೋರುವುದು ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದ್ದಾರೆ.

ಫ್ರಾನ್ಸ್‌ನ ಸಮಾನತೆ ಸಚಿವರು ಮಹಿಳೆಯರನ್ನು ಸಾರ್ವಜನಿಕ ಸ್ಥಳಗಳಲ್ಲಿ ಕಡೆಗಣಿಸುವ ಯಾವುದೇ ಧಾರ್ಮಿಕ ಕಾರಣವನ್ನು ಒಪ್ಪಲಾಗದು ಎಂದು ಹೇಳಿದ್ದಾರೆ. ಐಫೆಲ್ ಟವರ್ ನಿರ್ವಹಣಾ ಸಂಸ್ಥೆಯೂ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದೆ.