Wednesday, September 9, 2026
Wednesday, September 9, 2026

74ರ ಹರೆಯದಲ್ಲಿ ಎಲ್ಬ್ರಸ್ ಶಿಖರ ಜಯಿಸಿದ ಕೇರಳಿಗ

74 ವರ್ಷ, 6 ತಿಂಗಳು ಮತ್ತು 26 ದಿನಗಳ ವಯಸ್ಸಿನಲ್ಲಿ ಈ ಶಿಖರವೇರಿದ ಮಾರ್ಸ್ ಅವರ ಸಾಧನೆಯು ಈ ಯಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ.

ಕೇರಳದ ಇತರ ನಾಲ್ವರೊಂದಿಗೆ ಟಿ.ಜೆ. ಮಾರ್ಸ್ ಅವರು ಎಂಟು ದಿನಗಳ ಕಠಿಣ ಹವಾಮಾನ ಪರಿಸ್ಥಿತಿಯನ್ನು ಎದುರಿಸಿ 5,642 ಮೀಟರ್ (18,510 ಅಡಿ) ಎತ್ತರದ ಮೌಂಟ್ ಎಲ್ಬ್ರಸ್ ಶಿಖರವನ್ನು ಯಶಸ್ವಿಯಾಗಿ ಏರಿದ್ದಾರೆ .ವಯಸ್ಸಾಗುವುದು ಎಂದರೆ ವೇಗ ತಗ್ಗಿಸುವುದಲ್ಲ, ಬದಲಾಗಿ ಹೊಸ ಎತ್ತರಗಳನ್ನು ತಲುಪುವುದು ಎಂಬುದನ್ನು ವಯನಾಡಿನ 74 ವರ್ಷದ ಟಿ.ಜೆ. ಮಾರ್ಸ್ ಸಾಬೀತುಪಡಿಸಿದ್ದಾರೆ. ನಿವೃತ್ತಿಯ ನಂತರದ ಜೀವನಕ್ಕೆ ಹೊಸ ಮೆರುಗು ನೀಡಿರುವ ಇವರು, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ವಿಶ್ವದ 'ಏಳು ಶಿಖರ'ಗಳ (Seven Summits) ಪೈಕಿ ಎರಡನ್ನು ಏರಿ ದಾಖಲೆ ನಿರ್ಮಿಸಿದ್ದಾರೆ.ಕೇರಳದ ಐದು ಮಂದಿಯ ತಂಡದ ಭಾಗವಾಗಿ ಮಾರ್ಸ್ ಅವರು ಯುರೋಪಿನ ಅತ್ಯುನ್ನತ ಶಿಖರವಾದ ಮೌಂಟ್ ಎಲ್ಬ್ರಸ್ ಅನ್ನು ಏರಿದರು. ಎಸ್. ಶೇಷಾದ್ರಿ, ಎಂ.ಪಿ. ಮುರಳೀಧರನ್, ಜಿ.ಜೆ. ಅಘಿನಾ ಸೂರ್ಯ ಮತ್ತು ಪಿ. ಅಥಿಫ್ ಅವರೊಂದಿಗೆ ಮಾರ್ಸ್, ಭಾರತದ 80ನೇ ಸ್ವಾತಂತ್ರ್ಯ ದಿನವಾದ ಆಗಸ್ಟ್ 15, 2026 ರಂದು ಈ ಸಾಧನೆ ಮಾಡಿದರು. ಈ ಯಾತ್ರೆಯ ನೇತೃತ್ವವನ್ನು ಎಸ್. ಶೇಷಾದ್ರಿ ವಹಿಸಿದ್ದರೆ, ತಂಡದ ಏಕೈಕ ಮಹಿಳಾ ಸದಸ್ಯೆ ಅಘಿನಾ ಸೂರ್ಯ ಸಹ-ನಾಯಕಿಯಾಗಿದ್ದರು. ಮಾರ್ಸ್, ಶೇಷಾದ್ರಿ ಮತ್ತು ಮುರಳೀಧರನ್ ವಯನಾಡಿನವರಾಗಿದ್ದರೆ, ಸೂರ್ಯ ಕೋಝಿಕ್ಕೋಡ್ ಮತ್ತು ಅಥಿಫ್ ಮಲಪ್ಪುರಂ ಮೂಲದವರು.

Untitled design (48)

ಅತ್ಯಂತ ಹಿರಿಯ ಭಾರತೀಯ

74 ವರ್ಷ, 6 ತಿಂಗಳು ಮತ್ತು 26 ದಿನಗಳ ವಯಸ್ಸಿನಲ್ಲಿ ಈ ಶಿಖರವೇರಿದ ಮಾರ್ಸ್ ಅವರ ಸಾಧನೆಯು ಈ ಯಾತ್ರೆಯ ಪ್ರಮುಖ ಆಕರ್ಷಣೆಯಾಗಿದೆ. ಆನ್‌ಲೈನ್ ದಾಖಲೆಗಳ ಪ್ರಕಾರ, ರಷ್ಯಾದ ಕಾಕಸಸ್ ಪರ್ವತ ಶ್ರೇಣಿಯಲ್ಲಿರುವ ಮೌಂಟ್ ಎಲ್ಬ್ರಸ್ ಅನ್ನು ಏರಿದ 'ಅತ್ಯಂತ ಹಿರಿಯ ಭಾರತೀಯ' ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ ಎಂದು ತಂಡ ತಿಳಿಸಿದೆ.

ತಂಡದಲ್ಲಿದ್ದ 66 ವರ್ಷದ ಮುರಳೀಧರನ್ ಅವರ ಭಾಗವಹಿಸುವಿಕೆಯೂ ಗಮನ ಸೆಳೆದಿದೆ. ಮಾರ್ಸ್ ಮತ್ತು ಮುರಳೀಧರನ್ ಈ ಹಿಂದೆ ಸೆಪ್ಟೆಂಬರ್ 2025 ರಲ್ಲಿ ಆಫ್ರಿಕಾದ ಅತಿ ಎತ್ತರದ ಶಿಖರವಾದ ಕಿಲಿಮಂಜಾರೋ (5,895 ಮೀಟರ್) ಅನ್ನು ಒಟ್ಟಿಗೆ ಏರಿದ್ದರು ಹಾಗೂ ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣವನ್ನೂ ಪೂರ್ಣಗೊಳಿಸಿದ್ದರು. ಅಥಿಫ್ 2019 ರಲ್ಲಿ ಕಿಲಿಮಂಜಾರೋ ಏರಿದ್ದರು. ಎಲ್ಬ್ರಸ್ ಆರೋಹಣದೊಂದಿಗೆ ಮಾರ್ಸ್, ಮುರಳೀಧರನ್ ಮತ್ತು ಅಥಿಫ್ ಈಗ ವಿಶ್ವದ ಏಳು ಖಂಡಗಳ ಅತ್ಯುನ್ನತ ಶಿಖರಗಳ ಪೈಕಿ ಎರಡನ್ನು ಪೂರ್ಣಗೊಳಿಸಿದಂತಾಗಿದೆ.

ಇದನ್ನು ಓದಿ : ಹಿಮಾಲಯ ಪ್ರವಾಸಕ್ಕೂ ಮುನ್ನ ಎಚ್ಚರ!

'ಚಿಕ್ಕಂದಿನಿಂದಲೂ ನನಗೆ ಟ್ರೆಕ್ಕಿಂಗ್ ಎಂದರೆ ಆಸಕ್ತಿ. ಪ್ರಕೃತಿಯನ್ನು ಹತ್ತಿರದಿಂದ ಅನುಭವಿಸಲು ಬಯಸುತ್ತಿದ್ದೆ. ಪರ್ವತದ ತುದಿಯನ್ನು ತಲುಪಿ ಕೆಳಗೆ ನೋಡಿದಾಗ ಸಿಗುವ ತೃಪ್ತಿಯೇ ಬೇರೆ; ಈ ಸಾಹಸವು ನನಗೆ ಅಪಾರ ಶಕ್ತಿ ನೀಡುತ್ತದೆ. ಇನ್ನೂ ಅನೇಕ ಪರ್ವತಗಳನ್ನು ಏರಬೇಕೆಂಬ ಆಸೆಯಿದೆ, ಆದರೆ ಅದಕ್ಕೆ ಸಾಕಷ್ಟು ಸಿದ್ಧತೆ ಬೇಕು. ಬಹುಶಃ ಮುಂದಿನ ವರ್ಷ ಮತ್ತೊಂದು ದೊಡ್ಡ ಚಾರಣ ಕೈಗೊಳ್ಳಬಹುದು,' ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ನಿವೃತ್ತ ನೌಕರರಾದ ತರಿಯೋಡ್ ಗ್ರಾಮ ಪಂಚಾಯಿತಿಯ ಕಾವುಮನ್ನಂ ನಿವಾಸಿ ಮಾರ್ಸ್ ಹೇಳಿದ್ದಾರೆ.

ತಂಡದ ಪ್ರಕಾರ, ಗಂಟೆಗೆ ಸುಮಾರು 65 ಕಿಮೀ ವೇಗದಲ್ಲಿ ಬೀಸುತ್ತಿದ್ದ ಕೊರೆಯುವ ಚಳಿ ಮತ್ತು ತೀವ್ರ ಗಾಳಿಯಂಥ ಸವಾಲಿನ ಹವಾಮಾನದ ನಡುವೆ ಅವರು ಶಿಖರಾರೋಹಣ ಮಾಡಿದರು. ಅಂತಿಮ ಹಂತದ ಹತ್ತುವಿಕೆ ಮತ್ತು ಇಳಿಯುವಿಕೆಯ ಸಮಯದಲ್ಲಿ ಪರಿಸ್ಥಿತಿ ಅತ್ಯಂತ ಕಠಿಣವಾಗಿತ್ತು.

ʻಶಿಖರವನ್ನು ತಲುಪುವುದು ಯಾತ್ರೆಯ ಒಂದು ಭಾಗ ಮಾತ್ರ. ಸಿದ್ಧತೆ, ಜೊತೆಗಿರುವ ಜನರು, ಸವಾಲುಗಳು ಮತ್ತು ಸುರಕ್ಷಿತವಾಗಿ ಹಿಂತಿರುಗುವುದು ಅಷ್ಟೇ ಮುಖ್ಯ. ಕಾಲ್ನಡಿಗೆಯಲ್ಲಿ ಪರ್ವತಗಳ ಕಡೆಗೆ ಸಾಗುವ ಪ್ರಯಾಣವು ನಮ್ಮಲ್ಲಿ ಪರಿವರ್ತನೆ ತರುತ್ತದೆ. ಎಲ್ಲರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಇಂತಹ ಚಾರಣ ಕೈಗೊಳ್ಳಬೇಕು,ʼ ಎಂದು ತಂಡದ ನಾಯಕ ಶೇಷಾದ್ರಿ ತಿಳಿಸಿದ್ದಾರೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

Read Previous

ದೇಶ ಸುತ್ತಬೇಕಿಲ್ಲ, ಕರ್ನಾಟಕದಲ್ಲೇ ಇವೆ ಅನೇಕ ಡಾಲ್ಫಿನ್‌ ತಾಣಗಳು..

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ  ಹೊತ್ತ ಬೆಟ್ಟಗಳ ತವರೂರ..

Read Next

ನೋಡಬನ್ನಿ ರಾಮನಗರ..ಇತಿಹಾಸವನ್ನು ಒಡಲಲ್ಲಿ ಹೊತ್ತ ಬೆಟ್ಟಗಳ ತವರೂರ..