Wednesday, July 22, 2026
Wednesday, July 22, 2026

ಕತಾರ್‌ ಏರ್‌ವೇಸ್‌ಗೆ 10 ಲಕ್ಷ ದಂಡ

ದೋಹಾದಲ್ಲಿ ಕನೆಕ್ಟಿಂಗ್ ಫ್ಲೈಟ್ ಏರುವಾಗ, ಕತಾರ್ ಏರ್‌ವೇಸ್ ಸಿಬ್ಬಂದಿ ಬೋರ್ಡಿಂಗ್ ಪಾಸ್ ಕೈಯಲ್ಲಿದ್ದರೂ ಸಣ್ಣ ಮಗುವಿನ ದಾಖಲೆ ಸರಿಯಿಲ್ಲವೆಂದು ಸುಮಾರು 10 ಗಂಟೆಗಳ ಕಾಲ ಕಾಯಿಸಿ ವಿಮಾನ ಹತ್ತಲು ಬಿಡಲಿಲ್ಲ!

ಬೋರ್ಡಿಂಗ್ ಪಾಸ್ ನೀಡಿದ ಹೊರತಾಗಿಯೂ, ಕೊನೆಯ ಕ್ಷಣದಲ್ಲಿ ಪ್ರಯಾಣ ದಾಖಲೆಗಳ ನೆಪವೊಡ್ಡಿ ದಂಪತಿಯ ಇಬ್ಬರು ಅಪ್ರಾಪ್ತ ಮಕ್ಕಳನ್ನು ವಿಮಾನ ಹತ್ತದಂತೆ ತಡೆದು, ನವಜಾತ ಶಿಶುವನ್ನು ಭಾರತದಲ್ಲೇ ಬಿಟ್ಟು ತೆರಳುವಂತೆ ಮಾಡಿದ್ದ ಜಾಗತಿಕ ವಿಮಾನಯಾನ ಸಂಸ್ಥೆ ಕತಾರ್ ಏರ್‌ವೇಸ್‌ಗೆ ಗ್ರಾಹಕ ಆಯೋಗವು ಭಾರಿ ದಂಡ ವಿಧಿಸಿದೆ. ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರ ಪದ್ಧತಿ ಎಸಗಿದ್ದಕ್ಕಾಗಿ ಸಂತ್ರಸ್ತ ದಂಪತಿಗೆ ರು.10 ಲಕ್ಷ ಪರಿಹಾರ ಹಾಗೂ ರು. 25,000 ನ್ಯಾಯಾಲಯದ ವೆಚ್ಚವನ್ನು ಪಾವತಿಸುವಂತೆ ಕೇರಳದ ಎರ್ನಾಕುಲಂ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.

ಇದನ್ನೂ ಓದಿ: ಆನ್‌ಲೈನ್ ಬುಕಿಂಗ್ ಸಂಸ್ಥೆಗೆ 10,000 ರು. ದಂಡ ವಿಧಿಸಿದ ಗ್ರಾಹಕ ನ್ಯಾಯಾಲಯ!

ಇಟಲಿಯಲ್ಲಿ ಉದ್ಯೋಗದಲ್ಲಿರುವ ಭಾರತೀಯ ದಂಪತಿಯು ವೆನಿಸ್‌ನಿಂದ ಕೊಚ್ಚಿಗೆ ಕತಾರ್ ಏರ್‌ವೇಸ್ ಮೂಲಕ ತಮ್ಮ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದರು. ಆಗಮಿಸುವಾಗ ಇಟಲಿ ಮತ್ತು ಭಾರತೀಯ ಅಧಿಕಾರಿಗಳು ಎಲ್ಲಾ ಪ್ರಯಾಣ ದಾಖಲೆಗಳನ್ನು ಪರಿಶೀಲಿಸಿ ಅನುಮತಿ ನೀಡಿದ್ದರು.

ಆದರೆ, ಡಿಸೆಂಬರ್ 3, 2018 ರಂದು ಕೊಚ್ಚಿಯಿಂದ ಇಟಲಿಗೆ ಹಿಂತಿರುಗುವಾಗ, ವಿಮಾನಯಾನ ಸಂಸ್ಥೆಯು ಕೌಂಟರ್‌ನಲ್ಲಿ ಸುಮಾರು 2.5 ಗಂಟೆಗಳ ಕಾಲ ಕಾಯಿಸಿದ್ದಾರೆ. ಜತೆಗೆ, ಹಿರಿಯ ಮಗುವಿಗೆ ಸ್ವತಂತ್ರ ಇಟಾಲಿಯನ್ ವೀಸಾ ಇಲ್ಲ ಎಂದು ಹೇಳಿ ಬೋರ್ಡಿಂಗ್ ನಿರಾಕರಿಸಲಾಯಿತು. ಉದ್ಯೋಗದ ನಿಮಿತ್ತ ಇಟಲಿಗೆ ಹಿಂದಿರುಗುವುದು ಕಡ್ಡಾಯವಾಗಿದ್ದರಿಂದ, ದಂಪತಿ ಬೇರೆ ದಾರಿಯಿಲ್ಲದೆ ಹಿರಿಯ ಮಗುವನ್ನು ಕೇರಳದಲ್ಲಿದ್ದ ಸಂಬಂಧಿಕರ ಬಳಿ ಬಿಟ್ಟು, ಹಾಲುಣಿಸುವ ಸಣ್ಣ ಮಗುವಿನೊಂದಿಗೆ ವಿಮಾನ ಹತ್ತಿದರು.

ದೋಹಾದಲ್ಲಿ ಕನೆಕ್ಟಿಂಗ್ ಫ್ಲೈಟ್ ಏರುವಾಗ, ಕತಾರ್ ಏರ್‌ವೇಸ್ ಸಿಬ್ಬಂದಿ ಬೋರ್ಡಿಂಗ್ ಪಾಸ್ ಕೈಯಲ್ಲಿದ್ದರೂ ಸಣ್ಣ ಮಗುವಿನ ದಾಖಲೆ ಸರಿಯಿಲ್ಲವೆಂದು ಸುಮಾರು 10 ಗಂಟೆಗಳ ಕಾಲ ಕಾಯಿಸಿ ವಿಮಾನ ಹತ್ತಲು ಬಿಡಲಿಲ್ಲ!

ಕೊನೆಗೆ ತಾಯಿ ಮಾತ್ರ ಇಟಲಿಗೆ ಒಬ್ಬಂಟಿಯಾಗಿ ವಿಮಾನವೇರಿದರು. ತಂದೆ ಕಂಗೆಟ್ಟು ಮಗುವಿನೊಂದಿಗೆ ಮತ್ತೆ ಕೊಚ್ಚಿಗೆ ವಾಪಸ್ ಬರಬೇಕಾಯಿತು. ತದನಂತರ ತಂದೆಯು ಹಿರಿಯ ಮಗುವಿಗೆ ವೀಸಾ ಮಾಡಿಸಿ ಇಟಲಿಗೆ ಕರೆದೊಯ್ದರಾದರೂ, ಹಾಲುಣಿಸುವ ಸಣ್ಣ ಮಗುವನ್ನು ಕೇರಳದಲ್ಲೇ ಸಂಬಂಧಿಕರ ಆಶ್ರಯದಲ್ಲಿ ಬಿಟ್ಟು ಹೋಗಬೇಕಾದ ದೈನ್ಯ ಸ್ಥಿತಿ ಎದುರಾಯಿತು.

ʼಒಮ್ಮೆ ಪ್ರಯಾಣಿಕರ ದಾಖಲೆಗಳನ್ನು ಮಾನ್ಯ ಮಾಡಿ ಮುಂಭಾಗದ ಪ್ರಯಾಣಕ್ಕೆ ಅನುಮತಿ ನೀಡಿದ ನಂತರ, ಅದೇ ದಾಖಲೆಗಳ ಮೇಲೆ ಹಿಂದಿರುಗುವ ಪ್ರಯಾಣವನ್ನು ನಿರಾಕರಿಸಲು ವಿಮಾನಯಾನ ಸಂಸ್ಥೆಗೆ ಯಾವುದೇ ಹಕ್ಕಿಲ್ಲ. ಹಾಲುಣಿಸುವ ಮಗುವನ್ನು ತಾಯಿಯಿಂದ ದೂರ ಮಾಡಿ ಭಾರತದಲ್ಲೇ ಬಿಟ್ಟು ಹೋಗುವಂತೆ ಮಾಡಿದ್ದು ಪೋಷಕರಿಗೆ ತೀವ್ರ ಮಾನಸಿಕ ಯಾತನೆ ಮತ್ತು ಭಾವನಾತ್ಮಕ ಆಘಾತವನ್ನುಂಟು ಮಾಡಿದೆ. ಇದು ವಿಮಾನಯಾನ ಸಂಸ್ಥೆಯ ಕಡೆಯಿಂದ ಆದ ಸೇವಾ ಲೋಪವಾಗಿದೆ.ʼ ಅದಕ್ಕಾಗಿ ಕತಾರ್ ಏರ್‌ವೇಸ್ ಸಂಸ್ಥೆಯು ದಂಪತಿಗೆ ರು. 10 ಲಕ್ಷ ಪರಿಹಾರ ಹಾಗೂ ರು. 25,000 ಕಾನೂನು ವೆಚ್ಚವನ್ನು 45 ದಿನಿಗಳ ಒಳಗೆ ಎಂದು ತೀರ್ಪು ನೀಡಿದೆ. ತಪ್ಪಿದ್ದಲ್ಲಿ, ದೂರು ದಾಖಲಾದ ದಿನಾಂಕದಿಂದ ವಾರ್ಷಿಕ 9% ಬಡ್ಡಿಯೊಂದಿಗೆ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಆಯೋಗವು ಜುಲೈ 14 ರ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

Pramod Mohan Hegde

Pramod Mohan Hegde

A media professional with four years of experience in journalism, having worked with leading Kannada publications such as Vistara, Vijayavani, and Vijaya Karnataka as a cinema journalist. Also an author with a keen interest in travel and cinema. Currently serving as Senior Sub Editor at Pravasi Prapancha, contributing editorial expertise and engaging storytelling to the media industry.

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

Read Previous

ಮೇ 1 ರಿಂದ ವಿದೇಶಿ ಪ್ರವಾಸಿಗರಿಗೆ ಥಾಯ್ಲೆಂಡ್‌ನಲ್ಲಿ ಡಿಜಿಟಲ್ ಆಗಮನ ಕಾರ್ಡ್ ಕಡ್ಡಾಯ

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ

Read Next

ಬೇಸಿಗೆಯ ಪ್ರವಾಸಕ್ಕಿದು ಸೂಕ್ತ ಸಮಯ; ತೆರಳುವ ಮುನ್ನ ಪೊಲೀಸರ ಈ ಸಲಹೆಗಳನ್ನು ಪಾಲಿಸಿ