ಭಾರತದ ರೈಲು ಪ್ರಯಾಣದ ಅನುಭವ ಪಡೆದ ಫಿಲಿಪ್ ಗ್ರೀನ್
ಭಾರತದ ರೈಲು ಪ್ರಯಾಣದ ಅನುಭವ ಪಡೆಯಲು ಆಸ್ಟ್ರೇಲಿಯಾದ ಹೈಕಮಿಷನರ್ ಫಿಲಿಪ್ ಗ್ರೀನ್ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ನವದೆಹಲಿಯಿಂದ ಚಂಡೀಗಢಕ್ಕೆ ಪ್ರಯಾಣಿಸಿದ್ದಾರೆ.
ಆಸ್ಟ್ರೇಲಿಯಾದ ಹೈಕಮಿಷನರ್ ಫಿಲಿಪ್ಸ್ ಗ್ರೀನ್ ಅವರು ಭಾರತದ ದೈನಂದಿನ ಜೀವನವನ್ನು ಹತ್ತಿರದಿಂದ ಅನುಭವಿಸುವ ಉದ್ದೇಶದಿಂದ ನವದೆಹಲಿಯಿಂದ ಚಂಡೀಗಢಕ್ಕೆ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಸೆಪ್ಟೆಂಬರ್ 9ರಂದು ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಯಾಣದ ವಿಡಿಯೋ ಹಂಚಿಕೊಂಡಿದ್ದು, ರೈಲು ಪ್ರಯಾಣವನ್ನು ʻತುಂಬಾ ಸಂತೋಷದಿಂದ ಅನುಭವಿಸಿದೆʼ ಎಂದು ಹೇಳಿದ್ದಾರೆ.
ಭಾರತವನ್ನು ಅರ್ಥಮಾಡಿಕೊಳ್ಳಲು ರೈಲು ಪ್ರಯಾಣ ಮಾಡಬೇಕು ಎಂಬ ಆಸ್ಟ್ರೇಲಿಯಾ ಪ್ರಧಾನಿ ಅಂಥೋನಿ ಅಲಬಾನೆಸ್ ಅವರ ಹಿಂದಿನ ಮಾತನ್ನು ಫಿಲಿಪ್ ಗ್ರೀನ್ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ರೈಲಿನಲ್ಲಿ ಪ್ರಯಾಣಿಸುವಾಗ ಭಾರತದ ಜನರೊಂದಿಗೆ ನೇರವಾಗಿ ಮಾತನಾಡಲು, ಅವರ ಜೀವನಶೈಲಿಯನ್ನು ತಿಳಿದುಕೊಳ್ಳಲು ಉತ್ತಮ ಅವಕಾಶ ಸಿಗುತ್ತದೆ ಎಂಬುದು ಅವರ ಅಭಿಪ್ರಾಯ.
ಪ್ರಯಾಣದ ವೇಳೆ ಸಹ ಪ್ರಯಾಣಿಕರೊಂದಿಗೆ ಮಾತುಕತೆ ನಡೆಸುವುದು ತಮ್ಮ ರೈಲು ಪ್ರಯಾಣದ ವಿಶೇಷ ಅನುಭವಗಳಲ್ಲಿ ಒಂದಾಗಿದೆ ಎಂದು ಗ್ರೀನ್ ಹೇಳಿದ್ದಾರೆ. ಸಾಮಾನ್ಯವಾಗಿ ಮಾತುಕತೆಗಳು ಕ್ರಿಕೆಟ್‌ನಿಂದ ಆರಂಭವಾಗುತ್ತವೆ ಎಂದು ಅವರು ಹಾಸ್ಯಮಿಶ್ರಿತವಾಗಿ ಹೇಳಿದ್ದು, ಕೆಲವೊಮ್ಮೆ ಭಾರತೀಯ ಕುಟುಂಬಗಳು ತಮ್ಮೊಂದಿಗೆ ಆಹಾರವನ್ನೂ ಹಂಚಿಕೊಳ್ಳುತ್ತವೆ ಎಂದು ತಿಳಿಸಿದ್ದಾರೆ. “ಭಾರತದಲ್ಲಿ ಮತ್ತು ರೈಲುಗಳಲ್ಲಿ ಹೀಗೇ ಇರುತ್ತದೆ” ಎಂಬ ಅವರ ಮಾತು ಭಾರತೀಯರ ಆತಿಥ್ಯವನ್ನು ಮೆಚ್ಚಿಕೊಂಡಿರುವುದನ್ನು ತೋರಿಸಿದೆ.
My Prime Minister, @AlboMP, often says the best way to get to know 🇮🇳 is by travelling on its trains🚆. So it was fitting to arrive in Chandigarh by train - a journey I thoroughly enjoyed. Looking forward to exploring opportunities in Punjab & Haryana to further deepen 🇦🇺🇮🇳 ties. https://t.co/55jPPStbAx
— Philip Green OAM (@AusHCIndia) September 9, 2026
ಚಂಡೀಗಢ ತಲುಪಿದ ಬಳಿಕ ಗ್ರೀನ್ ಅವರು ಪಂಜಾಬ್ ಮತ್ತು ಹರಿಯಾಣದಲ್ಲಿ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಹೂಡಿಕೆ, ನವೋದ್ಯಮ, ಹಸಿರು ಇಂಧನ, ಕೃಷಿ, ಕ್ರೀಡೆ ಮತ್ತು ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರದ ಅವಕಾಶಗಳನ್ನು ಅನ್ವೇಷಿಸುವುದಾಗಿ ಹೇಳಿದ್ದಾರೆ. ಸೆಪ್ಟೆಂಬರ್ 9ರಂದು ಹರಿಯಾಣ ಮುಖ್ಯಮಂತ್ರಿ ನಾಯಬ್ ಸಿಂಗ್ ಸೈನಿ ಅವರೊಂದಿಗೆ ನಡೆದ ಸಭೆಯಲ್ಲಿಯೂ ಈ ವಿಷಯಗಳ ಕುರಿತು ಚರ್ಚೆ ನಡೆದಿದೆ.
ಒಟ್ಟಿನಲ್ಲಿ, ಹೈಕಮಿಷನರ್ ಅವರ ಈ ರೈಲು ಪ್ರಯಾಣವು ಕೇವಲ ಒಂದು ನಗರದಿಂದ ಮತ್ತೊಂದು ನಗರಕ್ಕೆ ತೆರಳುವ ಪ್ರಯಾಣವಾಗಿರದೆ, ಭಾರತೀಯ ಜನಜೀವನ, ಆತಿಥ್ಯ ಮತ್ತು ಸಂಸ್ಕೃತಿಯನ್ನು ನೇರವಾಗಿ ಅನುಭವಿಸುವ ರಾಜತಾಂತ್ರಿಕ ಪ್ರಯತ್ನವಾಗಿಯೂ ಗಮನ ಸೆಳೆದಿದೆ. ಜೊತೆಗೆ ಭಾರತ–ಆಸ್ಟ್ರೇಲಿಯಾ ನಡುವಿನ ಜನ-ಜನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಸಂದೇಶವನ್ನೂ ಇದು ನೀಡಿದೆ.