ಭಾರತ ಮತ್ತು ಸಿಂಗಾಪುರ ನಡುವಿನ ವಿಮಾನ ಪ್ರಯಾಣವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ಏರ್ ಇಂಡಿಯಾ ಮತ್ತು ಸಿಂಗಾಪುರ ಏರ್‌ಲೈನ್ಸ್ (SIA) ತಮ್ಮ ವಾಣಿಜ್ಯ ಸಹಭಾಗಿತ್ವವನ್ನು ವಿಸ್ತರಿಸಿವೆ. 2026ರ ಜನವರಿಯಲ್ಲಿ ಸಹಿ ಮಾಡಲಾದ ವಾಣಿಜ್ಯ ಸಹಕಾರ ಒಪ್ಪಂದದಡಿ ಮೊದಲ ಹಂತದ ಯೋಜನೆಗಳು ಅಕ್ಟೋಬರ್ 15ರಿಂದ ಜಾರಿಗೆ ಬರಲಿವೆ. ಇದರೊಂದಿಗೆ ಪ್ರಯಾಣಿಕರಿಗೆ ಎರಡೂ ವಿಮಾನಯಾನ ಸಂಸ್ಥೆಗಳ ಬುಕ್ಕಿಂಗ್ ಚಾನೆಲ್‌ಗಳ ಮೂಲಕ ಹೆಚ್ಚಿನ ವಿಮಾನ ಮತ್ತು ಪ್ರಯಾಣ ಆಯ್ಕೆಗಳು ಲಭ್ಯವಾಗಲಿವೆ.

ಸಿಂಗಾಪುರ ಮತ್ತು ಭಾರತದ ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೊಚ್ಚಿ, ಕೋಲ್ಕತ್ತಾ ಹಾಗೂ ಮುಂಬಯಿ ನಡುವೆ ವಾರಕ್ಕೆ ಒಟ್ಟು 126 ವಿಮಾನಗಳ ಸಂಪರ್ಕವಿದೆ. ಇನ್ನು ಮುಂದೆ ಅರ್ಹ ಕೋಡ್‌ಶೇರ್ ವಿಮಾನವನ್ನು ಬುಕ್ ಮಾಡಲು ಮತ್ತೊಂದು ಸಂಸ್ಥೆಯ ವಿಮಾನವನ್ನೂ ಕಡ್ಡಾಯವಾಗಿ ಸೇರಿಸಬೇಕಿಲ್ಲ. ಪ್ರಯಾಣಿಕರು ಎರಡೂ ಸಂಸ್ಥೆಗಳ ವೆಬ್‌ಸೈಟ್, ಮೊಬೈಲ್ ಆ್ಯಪ್ ಹಾಗೂ ಅಧಿಕೃತ ಟ್ರಾವೆಲ್ ಏಜೆನ್ಸಿಗಳ ಮೂಲಕ ಪ್ರತ್ಯೇಕವಾಗಿ ವಿಮಾನಗಳನ್ನು ಕಾಯ್ದಿರಿಸಬಹುದು.

ಏಪ್ರಿಲ್‌ನಲ್ಲೇ ಎರಡೂ ಸಂಸ್ಥೆಗಳ Maharaja Club ಮತ್ತು KrisFlyer ಸದಸ್ಯರಿಗೆ ಮೈಲೇಜ್ ಗಳಿಕೆಯ ಸೌಲಭ್ಯ ವಿಸ್ತರಿಸಲಾಗಿತ್ತು. 2027ರ ಎರಡನೆಯ ತ್ರೈಮಾಸಿಕದಿಂದ ಹೆಚ್ಚುವರಿ ಪ್ರಯೋಜನಗಳು, ಆದ್ಯತೆಯ ಚೆಕ್-ಇನ್, ಬೋರ್ಡಿಂಗ್ ಮತ್ತು ಹೆಚ್ಚುವರಿ ಬ್ಯಾಗೇಜ್ ಸೌಲಭ್ಯಗಳು ದೊರೆಯಲಿವೆ.