ಮೌಂಟ್ ಪ್ಲೆಸೆಂಟ್ ಸಿಮೆಟರಿ
ಟೊರೊಂಟೊದ ಗಗನಚುಂಬಿ ಕಟ್ಟಡಗಳು ಮತ್ತು ವೇಗದ ಬದುಕಿನ ನಡುವೆ, ಮೌಂಟ್ ಪ್ಲೆಸೆಂಟ್ ಸಮಾಧಿ ಕ್ಷೇತ್ರವು ಮೌನದ, ಪ್ರಕೃತಿಯ ಹಾಗೂ ಇತಿಹಾಸದ ವಿಶಿಷ್ಟ ಲೋಕವಾಗಿ ತೆರೆದುಕೊಳ್ಳುತ್ತದೆ. ಆರು ತಿಂಗಳ ವಾಸದ ಸಂದರ್ಭದಲ್ಲಿ ಆಗಾಗ ಅಲ್ಲಿಗೆ ವಾಕಿಂಗ್‌ಗೆ ತೆರಳುತ್ತಿದ್ದ ಲೇಖಕರಿಗೆ, ಈ ಸಮಾಧಿ ಕ್ಷೇತ್ರವು ಕ್ರಮೇಣ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಯಿತು. ಮರಗಳ ನೆರಳಿನಲ್ಲಿ, ಸಮಾಧಿಗಳ ನಡುವೆ ನಡೆದ ಆ ನಡಿಗೆಗಳು ಬದುಕು, ಮರಣ ಮತ್ತು ಪ್ರಕೃತಿಯ ನಿರಂತರತೆಯ ಕುರಿತು ಹೊಸ ಚಿಂತನೆಗಳನ್ನು ಮೂಡಿಸಿದವು.
- ಆಮೇಯ್ ಚಂದ್ರಶೇಖರ್
ಕೆನಡಾದ ಟೊರೊಂಟೊ ಎಂದರೆ ಗಗನಚುಂಬಿ ಕಟ್ಟಡಗಳು, ವಿಶಾಲ ರಸ್ತೆಗಳು, ಸರೋವರದ ದಡ, ವೇಗದ ಜನಜೀವನ - ಇವೆಲ್ಲ ಕಣ್ಣ ಮುಂದೆ ಬರುತ್ತವೆ. ಆದರೆ, ಆ ನಗರದ ಹೃದಯದಲ್ಲಿ, ಆಧುನೀಕರಣದ ಗದ್ದಲದಿಂದ ಸ್ವಲ್ಪ ದೂರ, ಮರಗಳ ನೆರಳಿನಲ್ಲಿ ಒಂದು ಬೃಹತ್ ಮೌನದ ಜಗತ್ತು ಇದೆ - ಮೌಂಟ್ ಪ್ಲೆಸೆಂಟ್ ಸಮಾಧಿ ಕ್ಷೇತ್ರ.
ನಾವು ವರ್ಷದ ಹಿಂದೆ ಟೊರೊಂಟೊದಲ್ಲಿ ಸುಮಾರು ಆರು ತಿಂಗಳ ಕಾಲ ಇದ್ದೆವು. ನಗರದ ಮಧ್ಯಭಾಗದಲ್ಲೇ ಇರುವ ಈ ಸಮಾಧಿ ಕ್ಷೇತ್ರಕ್ಕೆ ನಾನು ಆಗಾಗ ವಾಕಿಂಗ್‌ಗಾಗಿ ಹೋಗುತ್ತಿದ್ದೆ. ವಾರಕ್ಕೆ ಕಡಿಮೆ ಎಂದರೂ ಎರಡು ಬಾರಿ. ಹೋಗಿ ಬರುವ ದಾರಿಗಳು ಕ್ರಮೇಣ ನನಗೆ ಎಷ್ಟೊಂದು ಪರಿಚಿತವಾದವು ಎಂದರೆ, ಅಲ್ಲಿನ ಇಂಚಿಂಚೂ ನನ್ನ ನೆನಪಿನಲ್ಲಿ ಉಳಿದಿದೆ. ಅದು ನನಗೆ ಬರಿ ಸಮಾಧಿ ಕ್ಷೇತ್ರವಾಗಿರಲಿಲ್ಲ, ನನ್ನ ದೈನಂದಿನ ಬದುಕಿನ ಒಂದು ಭಾಗವಾಗಿಬಿಟ್ಟಿತ್ತು.
ಇದನ್ನೂ ಓದಿ: ವಿಮಾನ ಪ್ರಯಾಣ ಅಂದರೆ ಗೋಳು, ಬೇಸರ, ಜಂಜಾಟವಾ ಅಥವಾ…?
ಮೊದಲ ಬಾರಿ ನೋಡಿದಾಗಲೇ ಅದರ ವೈಶಲ್ಯವು ನನ್ನನ್ನು ಆಕರ್ಷಿಸಿತ್ತು. ಎತ್ತರಕ್ಕೆ ಬೆಳೆದ ಮರಗಳು, ಹಸಿರು ಹುಲ್ಲು, ತಿರುವು-ತಿರುವಾಗಿ ಸಾಗುವ ರಸ್ತೆಗಳು, ಅಲ್ಲಲ್ಲಿ ಕಾಣಿಸುವ ಕಲ್ಲಿನ ಸಮಾಧಿಗಳು - ಎಲ್ಲವೂ ಸೇರಿ ಅದು ಸಮಾಧಿ ಕ್ಷೇತ್ರಕ್ಕಿಂತಲೂ ಒಂದು ಸುಂದರ ಉದ್ಯಾನದಂತೆ ಕಾಣುತ್ತದೆ.
ಇತಿಹಾಸದ ಪುಟಗಳ ನಡುವೆ ನಡಿಗೆ
19ನೆಯ ಶತಮಾನದ ಮಧ್ಯಭಾಗದಲ್ಲಿ ಟೊರೊಂಟೊ ನಗರವು ವೇಗವಾಗಿ ಬೆಳೆಯುತ್ತಿತ್ತು. ಧಾರ್ಮಿಕ ಭೇದವಿಲ್ಲದೆ ಎಲ್ಲರಿಗೂ ಮುಕ್ತವಾಗಿರುವ ಒಂದು ಸಮಾಧಿ ಪ್ರದೇಶ ಬೇಕೆಂಬ ಕಲ್ಪನೆಯಿಂದ 1876ರಲ್ಲಿ Mount Pleasant Cemetery ಸ್ಥಾಪನೆಯಾಯಿತು.

ಇಂದು ಈ ಸಿಮೆಟರಿ 200ಕ್ಕೂ ಹೆಚ್ಚು ಎಕರೆ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಎತ್ತರದ ಓಕ್, ಮೇಪಲ್, ಪೈನ್ ಮರಗಳು, ಹೂವಿನ ತೋಟಗಳು - ಎಲ್ಲವೂ ಕೂಡಿ ಒಂದು ಬೃಹತ್ ವೃಕ್ಷೋದ್ಯಾನವಾಗಿದೆ (Arboretum). ಬೇಸಗೆಯಲ್ಲಿ ಹೂವಿನ ಬಣ್ಣ, ಶರತ್ಕಾಲದಲ್ಲಿ ಎಲೆಗಳ ಕಂಗೊಳಿಸುವ ಬಣ್ಣ ಬದಲಾವಣೆ, ಚಳಿಗಾಲದಲ್ಲಿ ಹಿಮದ ಹಾಸು - ಇವೆಲ್ಲವೂ ಸೇರಿ ಈ ಸಮಾಧಿ ಕ್ಷೇತ್ರವನ್ನು ಒಂದು ಪ್ರಕೃತಿಧಾಮವನ್ನಾಗಿಸಿವೆ.
ಆದರೆ, ಸ್ವಲ್ಪ ಗಮನಕೊಟ್ಟು ನೋಡಿದರೆ, ಪ್ರತಿಯೊಂದು ಕಲ್ಲಿನ ಹಿಂದೆಯೂ ಒಂದು ಜೀವನದ ಕಥೆ ಅಡಗಿರುವುದು ಗೊತ್ತಾಗುತ್ತದೆ. ಎರಡು ಲಕ್ಷಕ್ಕೂ ಹೆಚ್ಚು ಜನರ ಅಂತಿಮ ವಿಶ್ರಾಂತಿಯ ತಾಣ ಅದು. ಅಂದರೆ, ಒಂದೇ ಸ್ಥಳದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಬದುಕುಗಳ ನೆನಪುಗಳು ಮಲಗಿವೆ.
ಆ ದಾರಿಗಳಲ್ಲಿ ನಡೆಯುವಾಗ ಕೆಲವೊಮ್ಮೆ ನನಗೆ ವಿಚಿತ್ರ ಅನುಭವವಾಗುತ್ತಿತ್ತು - ನಾನು ಸ್ಮಶಾನದೊಳಗೆ ನಡೆಯುತ್ತಿಲ್ಲ, ಕೆನಡಾದ ಇತಿಹಾಸದ ಪುಟಗಳ ನಡುವೆ ನಡೆಯುತ್ತಿದ್ದೇನೆ ಎಂಬ ಭಾವ.
ಇಲ್ಲಿ ಕೆನಡಾದ ಮಾಜಿ ಪ್ರಧಾನಿ, ಆಧುನಿಕ ಕೆನಡಾದ ರಾಜಕೀಯ ಇತಿಹಾಸದಲ್ಲಿ ತಮ್ಮದೇ ಸ್ಥಾನ ಪಡೆದ ವಿಲಿಯಂ ಲಯನ್ ಮೆಕೆಂಜಿ ಕಿಂಗ್ ಚಿರನಿದ್ರೆಯಲ್ಲಿದ್ದಾರೆ. ಅಲ್ಲೇ ಸಂಗೀತ ಲೋಕದ ಅಪೂರ್ವ ಪ್ರತಿಭೆ, ಪಿಯಾನೋ ವಾದನಕ್ಕೆ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಗ್ಲೆನ್ ಗೌಲ್ಡ್ ಅವರ ಸಮಾಧಿಯೂ ಇದೆ. ಒಂದು ಕಡೆ ವಾಣಿಜ್ಯ ಕ್ಷೇತ್ರದಲ್ಲಿ ಒಂದು ಯುಗವನ್ನೇ ನಿರ್ಮಿಸಿದ ಟಿಮೋತಿ ಈಟನ್ ಕೂಡ ಇಲ್ಲಿ ಮಲಗಿದ್ದಾರೆ. ಮತ್ತೊಂದು ಕಡೆ ಮಾನವಕುಲದ ಆರೋಗ್ಯ ಇತಿಹಾಸದಲ್ಲೇ ಮಹತ್ವದ ಹೆಸರಾಗಿರುವ ಸರ್ ಫ್ರೆಡರಿಕ್ ಬ್ಯಾಂಟಿಂಗ್ - ಇನ್ಸುಲಿನ್ ಸಂಶೋಧನೆಯ ಮೂಲಕ ಲಕ್ಷಾಂತರ ಮಧುಮೇಹಿಗಳ ಬದುಕಿಗೆ ಭರವಸೆ ನೀಡಿದವರು.
ಬಹುಸಂಸ್ಕೃತಿಯ ಪ್ರತಿಬಿಂಬ
ಮೌಂಟ್ ಪ್ಲೆಸೆಂಟ್‌ನ ವಿಶೇಷತೆ ಕೇವಲ ಪ್ರಸಿದ್ಧರ ಸಮಾಧಿಗಳಲ್ಲಿ ಮಾತ್ರವಲ್ಲ. ಚೀನೀ ಮೂಲದವರು, ಜಪಾನೀ ಮೂಲದವರು, ವಿವಿಧ ದೇಶಗಳಿಂದ ವಲಸೆ ಬಂದು ಟೊರೊಂಟೊವನ್ನು ತಮ್ಮ ಮನೆಯನ್ನಾಗಿ ಮಾಡಿಕೊಂಡವರು - ಹೀಗೆ ಅನೇಕ ಸಂಸ್ಕೃತಿಗಳ ಜನರು ಇಲ್ಲಿ ಚಿರನಿದ್ರೆಯಲ್ಲಿದ್ದಾರೆ. ಬದುಕಿದ್ದಾಗ ಅವರ ಭಾಷೆ, ಆಹಾರ, ಸಂಪ್ರದಾಯ ಬೇರೆಬೇರೆಯಾಗಿರಬಹುದು. ಆದರೆ, ಇಲ್ಲಿ ಎಲ್ಲರಿಗೂ ಒಂದೇ ಮೌನ, ಒಂದೇ ನೆಲ. ಇದು ಟೊರೊಂಟೊ ನಗರದ ಬಹುಸಾಂಸ್ಕೃತಿಕ ಸ್ವರೂಪವನ್ನೂ ಒಂದು ರೀತಿಯಲ್ಲಿ ಪ್ರತಿಬಿಂಬಿಸುತ್ತದೆ.

ನಾನು ಅಲ್ಲಿನ ದಾರಿಗಳಲ್ಲಿ ನಡೆಯುತ್ತಿದ್ದಾಗ, ಸಮಾಧಿಗಳ ನಡುವೆ ಬೆಳೆದ ಮರಗಳನ್ನೂ ನೋಡುತ್ತಿದ್ದೆ. ಋತು ಬದಲಾದಂತೆ ಆ ಸ್ಥಳವೂ ತನ್ನ ರೂಪ ಬದಲಾಯಿಸುತ್ತಿತ್ತು. ಮರಣದ ನಡುವೆ ಪ್ರಕೃತಿ ತನ್ನ ನಿರಂತರ ಬದುಕನ್ನು ಪ್ರದರ್ಶಿಸುತ್ತಲೇ ಇರುತ್ತಿತ್ತು. ಅದು ನನಗೆ ಒಂದು ಸುಂದರ ಜೀವನಪಾಠವನ್ನು ಹೇಳಿದಂತಾಗುತ್ತಿತ್ತು - ಮನುಷ್ಯ ಹೋಗುತ್ತಾನೆ, ಪ್ರಕೃತಿ ಮುಂದುವರಿಯುತ್ತದೆ.
ನಗರದ ಹೊರಗಡೆ ಜನರು ತಮ್ಮ ಕೆಲಸಗಳಿಗೆ ಓಡುತ್ತಿರುತ್ತಾರೆ. ಕಾರುಗಳು ಓಡುತ್ತವೆ. ಹೊಸ ಕಟ್ಟಡಗಳು ಏಳುತ್ತವೆ. ಆದರೆ, ಇದೇ ನಗರದ ಒಂದು ಮೂಲೆಯಲ್ಲಿ ಲಕ್ಷಾಂತರ ಜನರು ತಮ್ಮ ಅಂತಿಮ ವಿಶ್ರಾಂತಿಯಲ್ಲಿ ಮಲಗಿದ್ದಾರೆ. ಒಂದೆಡೆ ಬದುಕಿನ ಓಟ, ಇನ್ನೊಂದೆಡೆ ಶಾಶ್ವತ ವಿಶ್ರಾಂತಿ. ಇವೆರಡರ ಮಧ್ಯೆ ನಡೆಯುತ್ತಿದ್ದ ನನ್ನ ವಾಕಿಂಗ್, ಕ್ರಮೇಣ ನನ್ನ ಪಾಲಿಗೆ ಒಂದು ಧ್ಯಾನದ ಅನುಭವವಾಗಿತ್ತು.
ಸ್ಮಶಾನ ಎಂದರೆ ಭಯಪಡಬೇಕಾದ ಸ್ಥಳವಲ್ಲ, ಬದುಕನ್ನು ಇನ್ನಷ್ಟು ಅರ್ಥಮಾಡಿಕೊಳ್ಳುವ ಸ್ಥಳವೂ ಆಗಬಹುದು ಎಂಬುದು ನನಗೆ ಅಲ್ಲಿಗೆ ಹೋದಂತೆಲ್ಲ ಹೆಚ್ಚು ಅನಿಸತೊಡಗಿತು.
ಆರು ತಿಂಗಳ ನಂತರ ಟೊರೊಂಟೊವನ್ನು ಬಿಟ್ಟು ಬಂದೆವು. ಆದರೆ, ಮೌಂಟ್ ಪ್ಲೆಸೆಂಟ್ ಅನ್ನು ಮಾತ್ರ ಮನಸಿನಿಂದ ಬಿಟ್ಟು ಬರಲಾಗಲಿಲ್ಲ. ಆದರೆ ಈಗ ಹಿಂದಿರುಗಿ ನೋಡಿದಾಗ ಅನಿಸುತ್ತದೆ - ಆರು ತಿಂಗಳಲ್ಲಿ ನಾನು ಅಲ್ಲಿ ನಡೆದದ್ದು ಕೇವಲ ನೂರಾರು ಕಿಲೋಮೀಟರ್‌ಗಳಲ್ಲ; ನೂರಾರು ವರ್ಷಗಳ ಇತಿಹಾಸದೊಳಗೇ ನಡೆದಿದ್ದೆ.
ಮೌಂಟ್ ಪ್ಲೆಸೆಂಟ್ ನನಗೆ ಒಂದು ಸಮಾಧಿ ಕ್ಷೇತ್ರವಲ್ಲ, ಅದು ಮೌನದಲ್ಲಿ ಮಾತನಾಡುವ ಒಂದು ನಗರ.