Thursday, October 8, 2026
Thursday, October 8, 2026

ಲಂಡನ್‌ ಐ... ಕನ್ನಡಿಗರ ಹೆಮ್ಮೆ

ಜಯಂಟ್‌ ವೀಲ್‌ ಎಂದರೆ ಭಯಪಡುತ್ತಿದ್ದ ನಮ್ಮ ತಂಡಕ್ಕೆ, ಲಂಡನ್‌ನ ನಿಧಾನಗತಿಯ ‘ಲಂಡನ್‌ ಐ’ ಹೊಸ ಅನುಭವದ ಬಾಗಿಲು ತೆರೆಯಿತು. ಥೇಮ್ಸ್‌ ನದಿ, ಬಿಗ್‌ ಬೆನ್‌, ಸಂಸತ್‌ ಭವನ ಸೇರಿದಂತೆ ಲಂಡನ್‌ನ ವಿಹಂಗಮ ನೋಟವನ್ನು ಕಣ್ತುಂಬಿಕೊಂಡ ಈ ಪಯಣ ರೋಚಕ ನೆನಪಾಗಿ ಉಳಿಯಿತು. ಅದಕ್ಕಿಂತಲೂ ಅಚ್ಚರಿ, ಪ್ರವಾಸದ ಕೊನೆಯಲ್ಲಿ ಥೇಮ್ಸ್‌ ನದಿ ದಡದಲ್ಲಿ ನಮ್ಮ ಬಸವಣ್ಣನವರ ಪ್ರತಿಮೆಯನ್ನು ಕಂಡ ಕ್ಷಣ!

- ವಿ. ಶ್ರೀನಿವಾಸ

ಸುಮಾರು 50–60 ವರ್ಷಗಳ ಹಿಂದೆ ಜಾತ್ರೆ ಸಂತೆಗಳಲ್ಲಿ ʼತಿರುಗುವ ತೊಟ್ಟಿಲುʼ ಒಂದು ಪ್ರಮುಖ ಆಕರ್ಷಣೆಯಾಗಿತ್ತು. ಆತ ಕೈಗಳಿಂದಲೇ ತಿರುಗಿಸುತ್ತಿದ್ದ ಮರದ ನಾಲ್ಕು ತೊಟ್ಟಿಲುಗಳಿರುತ್ತಿದ್ದ ಆ ತಿರುಗಣಿ ಮಕ್ಕಳಿಗೆ ನೀಡುತ್ತಿದ್ದ ರೋಮಾಂಚನಕ್ಕೆ ಸರಿಸಾಟಿಯಿರಲಿಲ್ಲ. (ಈಗಲೂ ಹಳ್ಳಿ ಜಾತ್ರೆಗಳಲ್ಲಿ ಇರಬಹುದು) ನಂತರ ಅದರ ಪರಿಕಲ್ಪನೆ ದೊಡ್ಡದಾಗಿ ಮೇಳಗಳಲ್ಲಿ ದೊಡ್ಡ ʼಜಯಂಟ್‌ ವೀಲ್‌ʼಗಳು ರಾರಾಜಿಸಲಾರಂಭಿಸಿದವು. ಮೋಟಾರ್‌ ಯಂತ್ರದ ಶಕ್ತಿಯಿಂದ ತಿರುಗುವ ಇವುಗಳು ʼವೇಗʼವನ್ನು ಬಯಸುವವರ ಸಾಹಸ ಕ್ರೀಡೆಯಾಯಿತು. ಬಹಳಷ್ಟು ಜನರಿಗೆ ಇದರಲ್ಲಿ ಕುಳಿತುಕೊಳ್ಳಲು ಭಯ! ವೃತ್ತಾಕಾರವಾಗಿ ತಿರುಗುವುದು, ತಿರುಗುತ್ತ ಎತ್ತರೆತ್ತರಕ್ಕೆ ಹೋಗುವುದು ರಭಸದಿಂದ ಕೆಳಗಿಳಿಯುವುದು ಕೆಲವರಿಗೆ ಮಾನಸಿಕವಾಗಿ, ದೈಹಿಕವಾಗಿ ಆಗಿಬರುವುದಿಲ್ಲ. ಆದರೂ ಅಂಥವರು ಗೆಳೆಯ ಗೆಳತಿಯರು ಒತ್ತಾಯಕ್ಕೆ ಕಟ್ಟುಬಿದ್ದು, ಜಯಂಟ್‌ ವೀಲ್‌ನಲ್ಲಿ ಪಯಣಿಸಿ ಮೇಲಿನಿಂದ ಕೆಳಗಿನವರಿಗೆ ವಾಂತಿಯ ಅಭಿಷೇಕ ಗೈದಿರುವುದೂ ಅಪರೂಪವೇನಲ್ಲ. ಈ ಸಂಚಾರಿ ಜೈಯಂಟ್‌ ವೀಲುಗಳು ಈಗಲೂ ಮೇಳಗಳಲ್ಲಿ ಸ್ಥಾನ ಪಡೆದಿವೆ ಹಾಗೆಯೇ ಥೀಮ್‌ ಪಾರ್ಕುಗಳಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟು, ಈ ರೀತಿಯ ಮನೋರಂಜನಾ ಕ್ರೀಡೆಯಲ್ಲಿ ಅಗ್ರಸ್ಥಾನ ಪಡೆದಿವೆ.

ಇದನ್ನೂ ಓದಿ: ಮೌಂಟ್ ಪ್ಲೆಸೆಂಟ್ ಸಿಮೆಟರಿ

ಈ ರೀತಿಯ ಜಯಂಟ್‌ ವೀಲುಗಳನ್ನಷ್ಟೇ ಕಂಡಿದ್ದ ನಮಗೆ ನಮ್ಮ ಯೂರೋಪ್‌ ಪ್ರವಾಸದಲ್ಲಿ ಲಂಡನ್‌ನ ಬಿಗ್‌ ಬೆನ್‌ ನೋಡಿಕೊಂಡು ಥೇಮ್ಸ್‌ ನದಿ ಸೇತುವೆ ಮೇಲೆ ನಡೆಯುತ್ತಾ ದಾಟುತ್ತಿದ್ದ ಹಾಗೆ ನಮ್ಮ ಮಾರ್ಗದರ್ಶಿ ʼನಾವು ಮುಂದೆ ಪಯಣಿಸಲಿರುವುದು ಅಗೋ ಅಲ್ಲಿ ಕಾಣುತ್ತಿದೆಯಲ್ಲ ʼಲಂಡನ್‌ ಐʼ ಅದರಲ್ಲಿ ಎಂದು ಹೇಳಿದಾಗ, ಜೈಯಂಟ್‌ ವೀಲುಗಳ ಫೋಬಿಯಾ ಹೊಂದಿದ್ದ ನಮ್ಮ ಗುಂಪಿನ ಸದಸ್ಯರಲ್ಲಿ ಗುಸು ಗುಸು, ಪಿಸು ಪಿಸು ಆರಂಭವಾಯಿತು. ʼನಾನ್‌ ಬರಲ್ಲಪ್ಪ, ನಾನ್‌ ಬರಲ್ಲಪ್ಪʼ ಎಂದು ಒಬ್ಬರು ಧೈರ್ಯವಾಗಿ ಬಾಯಿ ಬಿಟ್ಟು ಹೇಳಿದ ಮೇಲೆ ಹಲವರು ʼನಂಗಾಲಪ್ಪ, ನಾನೂ ಬರಲ್ಲʼ ಎಂದು ದನಿಗೂಡಿಸಿದರು. ನಮ್ಮ ಮಾರ್ಗದರ್ಶಿ ʼಇದು ನಮ್ಮೂರಿನ್‌ ಜಯಂಟ್‌ ವೀಲಿನ ಹಾಗಲ್ಲ. ಬಹಳ ನಿಧಾನವಾಗಿ ಚಲಿಸುತ್ತದೆ. ನಿಮಗೆ ಚಲನೆಯ ಅನುಭವವೇ ಆಗೋದಿಲ್ಲ. ಬರದಿದ್ದರೆ ನೀವೊಂದು ಅದ್ಭುತ ಅನುಭವವನ್ನು ಮಿಸ್‌ ಮಾಡ್ಕೋತೀರಿʼ ಎಂದು ಹೇಳಿದ ಮೇಲೂ ಕೆಲವರ ಪಿಸಿ ಪಿಸಿ ನಿಲ್ಲಲಿಲ್ಲ. ಆಗ ಮಾರ್ಗದರ್ಶಿ ʼನೋಡಿ ಈಗಾಗಲೇ ಇದಕ್ಕೆ ದುಬಾರಿ ಪ್ರವೇಶ ಶುಲ್ಕ ಕೊಟ್ಟು ಮುಂಗಡ ಬುಕಿಂಗ್‌ ಮಾಡಲಾಗಿದೆ. ಈಗ ಅದರ ರೀಫಂಡ್‌ ಕೂಡ ಸಿಗುವುದಿಲ್ಲ. ನೀವು ಜೀವನದಲ್ಲೊಮ್ಮೆ ಸಿಗಬಹುದಾದ ಅನುಭವವನ್ನು ಕಳೆದುಕೊಳ್ಳುವುದಲ್ಲದೆ, ಹಣವನ್ನು ಕಳೆದುಕೊಳ್ಳುತ್ತೀರʼ ಎಂದು ಅಂತಿಮ ಅಸ್ತ್ರ ಪ್ರಯೋಗಿಸಿದ. ನಂತರ ಎಲ್ಲರೂ ಸುಮಾರು ಎರಡುಗಂಟೆಗಳ ಕಾಲ ಸರದಿಯಲ್ಲಿ ಕಾದು ʼಲಂಡನ್‌ ಐʼ ಏರಿದೆವು.

Untitled design - 2026-10-08T183103.202

ಮೂಲತಃ ಮಿಲೆನಿಯಂ ವೀಲ್‌ ಎಂದಿದ್ದ ಈ ವೀಕ್ಷಣಾ ಚಕ್ರ ಹಲವಾರು ಆಡಳಿತ ಬದಲಾವಣೆಗಳಾಗಿ ಈಗ “ಲಂಡನ್‌ ಐ” ಎಂದು ಪ್ರಖ್ಯಾತವಾಗಿ ಲಂಡನ್‌ ನಗರದ ಆಧುನಿಕ ಐಕಾನ್‌ ಆಗಿದೆ. (ಲಂಡನ್‌ ಬ್ರಿಡ್ಜ್‌, ಬಿಗ್‌ ಬೆನ್‌ ಗಡಿಯಾರ ಮುತಾಂದವು ಹಳೆಯ ಐಕಾನ್‌ಗಳು) 1 ರಿಂದ 33 ಸಂಖ್ಯೆಯ ಅಂಡಾಕಾರದ ಹವಾ ನಿಯಂತ್ರಿತ 32 ಗಾಜಿನ ಗೋಲಗಳೊಂದೊಂದರಲ್ಲಿ 25 ಜನರಿಗೆ ಕುಳಿತುಕೊಳ್ಳಲು ಅವಕಾಶವಿದೆ. 1 ರಿಂದ 33 ಸಂಖ್ಯೆಯ 32 ಗೋಲ ಎಂದು ಹೇಳಿದಾಗ ಇಲ್ಲೇನೋ ಲೆಕ್ಕ ತಪ್ಪಿತಲ್ಲ?! ಹೌದು. ಬ್ರಿಟಿಷರ ಮೂಢನಂಬಿಕೆಯ ಪ್ರಕಾರ 13 ಸಂಖ್ಯೆ ಅಪಶಕುನವಾದ್ದರಿಂದ 13ನೆಯ ಸಂಖ್ಯೆಯೇ ಇಲ್ಲ! ಈ ಗಾಜಿನ ಗೋಲಗಳನ್ನು ಕ್ಯಾಪ್ಸೂಲ್‌ ಗಳೆಂದು ಕರೆಯುತ್ತಾರೆ. 32 ಕ್ಯಾಪ್ಸೂಲುಗಳು ಲಂಡನ್‌ ನಗರದ 32 ಬರೋಗಳನ್ನು ಪ್ರತಿನಿಧಿಸುತ್ತವೆಯಂತೆ. ( ಬರೋಗಳೆಂದರೆ ಲಂಡನ್ ನಗರದ ವಿಭಾಗಗಳು, ಜಿಲ್ಲೆಗಳು ಅಥವಾ ಏರಿಯಗಳು).

ಗಾಜಿನ ಗೋಳದಲ್ಲಿ ನಾವು ಹತ್ತಿ ಕುಳಿತು ನಮ್ಮ ಗುಂಪಿನವರು ಯಾರು ಯಾರು ಬಂದಿದ್ದಾರೆ, ಬೇರೆಯವರು ಯಾರು ಯಾರು ಇದ್ದಾರೆ ಎಂದು ನೋಡಿಕೊಳುವಷ್ಟರಲ್ಲಿ ನಮ್ಮ ಗೋಳ ಸಾಕಷ್ಟು ಮೇಲೇರಿದ್ದು ನಮಗೆ ಗೊತ್ತೇ ಆಗಿರಲಿಲ್ಲ. ಥೇಮ್ಸ್‌ ನದಿ, ಅದರ ಮೇಲಿನ ಸೇತುವೆಗಳು, ನದಿಯಲ್ಲಿ ಚಲಿಸುತ್ತಿರುವ ಬೋಟುಗಳು , ಆ ಕಡೆ ಬಿಗ್‌ ಬೆನ್‌ ಗಡಿಯಾರ ಗೋಪುರ, ಬ್ರಿಟನ್‌ ನ ಪಾರ್ಲಿಮೆಂಟ್‌ ಭವನ, ಎಲ್ಲವೂ ಗೋಚರಿಸತೊಡಗಿದವು. ಈ ಚಕ್ರ ಒಂದು ಸೆಕೆಂಡಿಗೆ ಹತ್ತು ಇಂಚು ಚಲಿಸುವುದರಿಂದ ಚಲನೆ ಗೊತ್ತಾಗುವುದಿಲ್ಲ. ಜನರನ್ನು ಇಳಿಸುವುದಕ್ಕೂ, ಹತ್ತಿಸಿಕೊಳ್ಳುವುದಕ್ಕೂ ಇದು ನಿಲ್ಲುವುದೇ ಇಲ್ಲ. ಅದು ಚಲಿಸುವಾಗಲೇ ಹತ್ತುವುದು, ಇಳಿಯುವುದು ಸರಾಗವಾಗಿ ನಡೆಯುತ್ತಲೇ ಇರುತ್ತದೆ. ಚಕ್ರಗಳ ವ್ಯಾಸ 120 ಅಡಿ ಇದ್ದು, ಒಂದು ಸುತ್ತು ಬರಲು 30 ನಿಮಿಷಗಳಾಗುತ್ತದೆ. ಗಂಟೆಗೆ 1600 ಜನ ಪ್ರಯಾಣಿಸಬಹುದಾದ ಇದರಲ್ಲಿ ಸವಾರಿಗಾಗಿ ವಾರ್ಷಿಕವಾಗಿ ಸುಮಾರು ಮೂರು ಮಿಲಿಯನ್‌ ಗಿಂತಲೂ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿದೆಯಂತೆ. ಇದರ ಎಂಜಿನಿಯರಿಂಗ್‌ ಕೌಶಲ್ಯದ ವೈಶಿಷ್ಟ್ಯವೆಂದರೆ ಇದು ಚಕ್ರದ ಎರಡೂ ಬದಿಯಲ್ಲಿ ಆಧಾರ ಸ್ತಂಭಗಳಿಲ್ಲ. ಬದಲಾಗಿ ಒಂದೇ ಬದಿಯಲ್ಲಿ ಇಂಗ್ಲೀಷಿನ ಎ ಆಕಾರದ ಬಾಗಿದ ಕಂಬಗಳ ಆಧಾರದಲ್ಲಿ ನಿಂತಿದೆ , ಒಂದು ಬದಿಯಲ್ಲಿ ಕಡ್ಡಿಗೆ ಸಿಕ್ಕಿಸಿರುವ ಗಿರಿಗಿಟ್ಲೆಯಂತೆ !. ತಾಂತ್ರಿಕವಾಗಿ ಇದನ್ನು ʼಕ್ವಾಂಟಿಲಿವರ್‌ʼ ಎನ್ನುತ್ತಾರೆ. ಬಾಗಿರುವ ಕಂಬಗಳನ್ನು ಬಲವಾದ ಲೋಹದ ಹಗ್ಗಗಳಿಂದ ಹಿಡಿದಿಡಲಾಗಿದೆ. ಹಾಗಾಗಿ ಕಂಬಗಳು ದಡದಲಿದ್ದು, ತಿರುಗುವ ಚಕ್ರವು ನದಿ ಪಾತ್ರದೊಳಗೆ ಚಾಚಿಕೊಂಡಿದ್ದು ಅತ್ಯಂತ ವಿಶೇಷ ಎಂಜಿನಿಯರಂಗ್‌ ಕೌಶಲವಾಗಿದೆ.

ನಮ್ಮ ಚಕ್ರ ಮೇಲೆ ಮೇಲೆ ಹೋಗುತ್ತಿದ್ದಂತೆ ಲಂಡನ್‌ ನಗರದ ವಿಹಂಗಮ ನೋಟ ಅದ್ಭುತ ಅನುಭವ ನೀಡಿತು. ನಮ್ಮ ಮಾರ್ಗದರ್ಶಿ ಹೇಳಿದ ಹಾಗೆ ಇದು ಜೀವನದಲ್ಲೊಮ್ಮೆ ಸಿಗುವ ರೋಚಕ ಅನುಭವ. 135 ಮೀಟರ್‌ ಎತ್ತರದ ಚಕ್ರವು 2000 ನೇ ಇಸವಿಯಲ್ಲಿ ಆರಂಭವಾದಾಗ ಲಂಡನ್‌ ನ ಅತಿ ಎತ್ತರದ ವೀಕ್ಷಣಾ ಸ್ಥಳ, ಹಾಗೂ ಜಗತ್ತಿನ ಅತಿ ಎತ್ತರದ ಫೆರ್ರಿಸ್ ವೀಲ್‌ ಆಗಿತ್ತು. ನಂತರ ಲಂಡನ್‌ ನ ಇನ್ನೊಂದು ವೀಕ್ಷಣಾ ಡೆಕ್‌ ಹಾಗೂ 2006 ರಲ್ಲಿ ಚೀನಾದ 525 ಅಡಿ ಎತ್ತರದ ಫೆರ್ರಿಸ್‌ ವೀಲ್‌ ಇದನ್ನು ಎತ್ತರದಲ್ಲಿ ಮೀರಿಸಿದವು. ಆದರೂ ಈ ಲಂಡನ್‌ ಐ ನ ಜನಪ್ರಿಯತೆಗೆ ಏನೂ ಕೊರತೆಯಾಗಿಲ್ಲ. ಹೊಸ ವರ್ಷಾಚರಣೆಯ ಬಾಣ ಬಿರುಸು ಪ್ರದರ್ಶನ ಅತಿ ಹೆಚ್ಚು ಜನರನ್ನು ಆಕರ್ಷಿಸುತ್ತಿದೆ. ವಿಶೇಷವೆಂದರೆ ಇದುವರೆಗೂ ಸುಮಾರು 6000 ಕ್ಕೂ ಹೆಚ್ಚು ಯುವ ಜೋಡಿಗಳು ಇಲ್ಲಿ ಮದುವೆಗೆ ʼಪ್ರಪೋಸ್‌ʼ ಮಾಡಿಕೊಂಡಿದ್ದಾರಂತೆ !!

Untitled design - 2026-10-08T183114.399

ನೋಡ ನೋಡುತ್ತಿದ್ದಂತೆ ನಮ್ಮ ಗೋಳ ಇಳಿಯತೊಡಗಿತು. ಅರೆ ಮರೆತೇ ಬಿಟ್ಟೆವಲ್ಲ ಎಂದು ಸೆಲ್ಫಿಗಳನ್ನು, ಜೊತೆಯವರೊಂದಿಗೆ ಫೋಟೋಗಳನ್ನು, ಫಾರಿನ್ನಿಗೆ ಬಂದದಕ್ಕೆ ಸಾಕ್ಷಿಯಾಗಿರಲಿ ಎಂದು ಅಲ್ಲೇ ಇದ್ದ ಸುಂದರ ಯುವಕ ಯುವತಿಯನ್ನು ಕೋರಿ, ನಗೆಮೊಗದಿಂದ ಒಪ್ಪಿದ ಆ ಫಾರಿನ್‌ ಜೋಡಿಯೊಂದಿಗೂ ಪಟ ತೆಗೆಸಿಕೊಳ್ಳುತ್ತಿರುವಂತೆ ಇಳಿಯುವ ಸಮಯ ಬಂದೇ ಬಿಟ್ಟಿತು. ಎರಡು ಎರಡೂವರೆ ಗಂಟೆ ಸರದಿಯಲ್ಲಿ ಕಾದು ಕೇವಲ ಅರ್ಧ ಗಂಟೆಯಲ್ಲಿ ಮುಗಿದೇ ಹೋಯಿತಲ್ಲ ಎನಿಸಿತು. ನಂತರ ನಮ್ಮ ಮಾರ್ಗದರ್ಶಿ ನಿಮಗೊಂದು ಅಚ್ಚರಿಯ ಸ್ಥಳ ತೋರಿಸುತ್ತೇನೆ ಬನ್ನಿ ಎಂದು ವೆಸ್ಟ್‌ ಮಿನಿಷ್ಟರ್‌ ಸೇತುವೆಯ ಇನ್ನೊಂದು ಪಕ್ಕಕ್ಕೆ ನಡೆದುಕೊಂಡೇ ಕರೆದೊಯ್ದರು. ಈ ಮಾರ್ಗದರ್ಶಿಗಳು ಹೀಗೆ ಎಲ್ಲದಕ್ಕೂ ಅತಿ ಎನ್ನುವಷ್ಟು ಉತ್ಪ್ರೇಕ್ಷೆ ಮಾಡಿ ಹೇಳುತ್ತಾರೆ ಎಂದುಕೊಂಡು ಹೋದೆವು. ಆದರೆ ಕನ್ನಡಿಗರಾದ ನಮಗೆ ಅಚ್ಚರಿ, ಹೆಮ್ಮೆ, ಸಂತೋಷ ಉಂಟಾಗಿದ್ದು ನಿಜ. ಅಲ್ಲಿ ನಾವು ಕಂಡಿದ್ದು ನಮ್ಮ ಬಸವಣ್ಣ ನವರ ಪ್ರತಿಮೆಯನ್ನು.

ಬ್ರಿಟನ್‌ ನ ಲಂಡನ್‌ ಬರೋ ಆಫ್‌ ಲ್ಯಾಂಬೆತ್‌ ನ ಮಾಜಿ ಮೇಯರ್‌ ಡಾ. ನೀರಜ್‌ ಪಾಟೀಲ್‌ ಅವರ ಪರಿಶ್ರಮದಿಂದ ಬಸವಣ್ಣನವರ ಎದೆಯೆತ್ತರದ ಪ್ರತಿಮೆ ಲಂಡನ್‌ ನ ಥೇಮ್ಸ್‌ ನದಿ ದಂಡೆಯ ಮೇಲಿನ ಪ್ರಮುಖ ಸ್ಥಳದಲ್ಲಿ ಸ್ಥಾಪನೆಯಾಗಿದೆ. 2015 ನವೆಂಬರ್‌ 14 ರಂದು ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಇದನ್ನು ಲೋಕಾರ್ಪಣೆ ಗೊಳಿಸಿದರು. ಡಾ. ನೀರಜ್‌ ಪಾಟೀಲ್‌ ಅವರು ಯಾವ ಕಾರಣಕ್ಕಾಗಿ ಒಂದೇ ರೀತಿಯ ಎರಡು ಬಸವಣ್ಣ ನವರ ಪ್ರತಿಮೆಯನ್ನು ಮಾಡಿಸಿದ್ದರೋ ಗೊತ್ತಿಲ್ಲ. ಒಂದನ್ನು ಲಂಡನ್ ನಲ್ಲಿ ಸ್ಥಾಪಿಸಿ ಇನ್ನೊಂದನ್ನು ಶಿವಮೊಗ್ಗಕ್ಕೆ ಕೊಡುಗೆ ಯಾಗಿ ನೀಡಿದ್ದಾರೆ. ಶಿವಮೊಗ್ಗದಲ್ಲಿ ಮಹಾತ್ಮ ಗಾಂಧಿ ಉದ್ಯಾನದ ಎದುರು ಬಸವೇಶ್ವರ ವೃತ್ತದಲ್ಲಿ ಇದನ್ನು ಸ್ಥಾಪಿಸಲಾಗಿದೆ. ನಾವು ದಿನ ನಿತ್ಯವೂ ಅದರೆದುರು ಓಡಾಡುವಾಗ ನಮಗೆ ಲಂಡನ್‌, ಥೇಮ್ಸ್‌ ನದಿ, ದಡದ ಬಸವೇಶ್ವರ ಪ್ರತಿಮೆ ಎಲ್ಲವೂ ನೆನಪಾಗುತ್ತದೆ.!

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...