ರಾಜಸ್ಥಾನದ ಪ್ರಮುಖ ಪ್ರವಾಸಿ ನಗರವಾದ ಉದಯಪುರದಲ್ಲಿ ಪ್ರವಾಸಿಗರ ರಕ್ಷಣೆ ಮತ್ತು ತ್ವರಿತ ನೆರವಿಗಾಗಿ ಪೊಲೀಸರು ರಾಜ್ಯದಲ್ಲೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ಆಧಾರಿತ ವಾಟ್ಸ್ಆಪ್ ಚಾಟ್‌ಬಾಟ್ ಸಹಾಯವಾಣಿಯನ್ನು ಆರಂಭಿಸಿದ್ದಾರೆ. ಯಾವುದೇ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬೇಕಾದ ಅಗತ್ಯವಿಲ್ಲದೆ, ಕೇವಲ ವಾಟ್ಸ್ಆಪ್ ಮೂಲಕವೇ ಪ್ರವಾಸಿಗರು ಪೊಲೀಸ್ ನೆರವು ಮತ್ತು ಅಗತ್ಯ ಮಾಹಿತಿಯನ್ನು ಪಡೆಯುವ ವ್ಯವಸ್ಥೆಯನ್ನು ಇದು ಒದಗಿಸುತ್ತದೆ.

ಇದನ್ನೂ ಓದಿ: ಮೋದಿ ಭೇಟಿ ಬಳಿಕ ಜಾಗತಿಕ ಗಮನ ಸೆಳೆದ ಪ್ರಾಂಬನನ್ ದೇವಾಲಯ

ಉದಯಪುರ ಪೊಲೀಸ್ ಕಚೇರಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಉದಯಪುರ ರೇಂಜ್ ಐಜಿ ಗೌರವ್ ಶ್ರೀವಾಸ್ತವ ಹಾಗೂ ಎಸ್‌ಪಿ ಅಮೃತಾ ದುಹಾನ್ ಈ ಸೇವೆಗೆ ಚಾಲನೆ ನೀಡಿದ್ದು, 7300059984 ಸಂಖ್ಯೆಯನ್ನು ಸಹಾಯವಾಣಿಯಾಗಿ ಬಿಡುಗಡೆ ಮಾಡಿದ್ದಾರೆ. ತುರ್ತು ಪರಿಸ್ಥಿತಿ ಎದುರಾದಾಗ ಅಥವಾ ಯಾವುದೇ ಸಹಾಯ ಬೇಕಾದಲ್ಲಿ ಪ್ರವಾಸಿಗರು ಈ ಸಂಖ್ಯೆಗೆ ವಾಟ್ಸ್ಆಪ್‌ನಲ್ಲಿ ಸಂದೇಶ ಕಳುಹಿಸಿದರೆ, ಎಐ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ತಕ್ಷಣವೇ ಪ್ರತಿಕ್ರಿಯಿಸುತ್ತದೆ.

Untitled design (71)

ಐಜಿ ಗೌರವ್ ಶ್ರೀವಾಸ್ತವ ಅವರ ಪ್ರಕಾರ, ಈ ಚಾಟ್‌ಬಾಟ್ ಮೂಲಕ ಪ್ರವಾಸಿಗರು ಸಮೀಪದ ಆಸ್ಪತ್ರೆಗಳು, ಪ್ರಮುಖ ಪ್ರವಾಸಿ ತಾಣಗಳು, ತಮ್ಮ ಸುತ್ತಮುತ್ತಲಿನ ಪ್ರದೇಶದ ಮಾಹಿತಿ ಹಾಗೂ ಯಾವುದೇ ಘಟನೆಗೆ ಸಂಬಂಧಿಸಿದ ವಿವರಗಳನ್ನು ಸುಲಭವಾಗಿ ಪಡೆಯಬಹುದು. ಈ ಸೇವೆಯನ್ನು ಬಳಸಲು ಪ್ರತ್ಯೇಕ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದಾಗಲಿ, ಲಾಗಿನ್ ಮಾಡುವುದಾಗಲಿ ಅಥವಾ ಕರೆ ಮಾಡುವುದಾಗಲಿ ಅಗತ್ಯವಿಲ್ಲ. ವಾಟ್ಸ್ಆಪ್ ಸಂದೇಶ ಕಳುಹಿಸುವುದೇ ಸಾಕು.

ಚಾಟ್‌ಬಾಟ್‌ಗೆ ಬರುವ ಎಲ್ಲ ಸಂದೇಶಗಳನ್ನು ಎಐ ತಂತ್ರಜ್ಞಾನವು ವಿಶ್ಲೇಷಿಸಿ, ಅವುಗಳನ್ನು ವರ್ಗೀಕರಿಸುತ್ತದೆ. ಈ ಮಾಹಿತಿಯನ್ನೆಲ್ಲ ಉದಯಪುರ ಪೊಲೀಸ್ ನಿಯಂತ್ರಣ ಕೊಠಡಿಯ ಡ್ಯಾಶ್‌ಬೋರ್ಡ್‌ನಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತದೆ. ದೂರು ಅಥವಾ ತುರ್ತು ಮಾಹಿತಿ ಬಂದ ತಕ್ಷಣ ಅದನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗೆ ರವಾನಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.

ಎಸ್‌ಪಿ ಅಮೃತಾ ದುಹಾನ್ ಅವರ ಮಾಹಿತಿ ಪ್ರಕಾರ, ಈ ವ್ಯವಸ್ಥೆಯಲ್ಲಿ 12 ವಿವಿಧ ವಿಭಾಗಗಳನ್ನು ರೂಪಿಸಲಾಗಿದೆ. ಸಹಾಯ ಕೋರುವ ವ್ಯಕ್ತಿ ತನ್ನ ಸಮಸ್ಯೆಗೆ ಹೊಂದುವ ವಿಭಾಗವನ್ನು ಆಯ್ಕೆ ಮಾಡಿಕೊಂಡು, ತನ್ನ ಸ್ಥಳದ ಮಾಹಿತಿಯನ್ನು ಹಂಚಿಕೊಳ್ಳಬೇಕು. ಇದರಿಂದ ಪೊಲೀಸ್ ಸಿಬ್ಬಂದಿ ಘಟನಾ ಸ್ಥಳವನ್ನು ತ್ವರಿತವಾಗಿ ತಲುಪಿ ಅಗತ್ಯ ನೆರವು ನೀಡಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ‘ಹೀಲ್ ಇನ್ ರಾಜಸ್ಥಾನ’ ನೀತಿಯಿಂದ ಜಾಗತಿಕ ಗುರಿ

ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಉದಯಪುರದಲ್ಲಿ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಜತೆಗೆ, ತುರ್ತು ಸಂದರ್ಭಗಳಲ್ಲಿ ತಕ್ಷಣದ ಪೊಲೀಸ್ ನೆರವು ಒದಗಿಸುವ ಉದ್ದೇಶದಿಂದ ಈ ಎಐ ಆಧಾರಿತ ವಾಟ್ಸ್ಆಪ್ ಚಾಟ್‌ಬಾಟ್ ಸೇವೆಯನ್ನು ಆರಂಭಿಸಲಾಗಿದೆ. ಈ ತಂತ್ರಜ್ಞಾನವು ಪ್ರವಾಸಿಗರಿಗೆ ಹೆಚ್ಚು ಸುರಕ್ಷಿತ ಮತ್ತು ಸುಗಮ ಪ್ರವಾಸ ಅನುಭವ ನೀಡುವ ಮಹತ್ವದ ಹೆಜ್ಜೆಯಾಗಿದೆ.