Friday, July 10, 2026
Friday, July 10, 2026

ಮೋದಿ ಭೇಟಿ ಬಳಿಕ ಜಾಗತಿಕ ಗಮನ ಸೆಳೆದ ಪ್ರಾಂಬನನ್ ದೇವಾಲಯ

ಭಾರತ ಮತ್ತು ಇಂಡೋನೇಷ್ಯಾ ಸರಕಾರಗಳು ದೇವಾಲಯದ ಸಂರಕ್ಷಣೆ ಹಾಗೂ ಪುನರುಜ್ಜೀವನ ಯೋಜನೆಗೂ ಚಾಲನೆ ನೀಡಿವೆ. ಈ ಭೇಟಿ ಬಳಿಕ ವಿಶ್ವದ ಗಮನ ಮತ್ತೊಮ್ಮೆ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಈ ಅದ್ಭುತ ಹಿಂದೂ ದೇವಾಲಯದತ್ತ ಸೆಳೆದಿದೆ.

ಇಂಡೋನೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಜಾವಾ ದ್ವೀಪದಲ್ಲಿರುವ ಐತಿಹಾಸಿಕ ಪ್ರಾಂಬನನ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇದೇ ವೇಳೆ ಭಾರತ ಮತ್ತು ಇಂಡೋನೇಷ್ಯಾ ಸರಕಾರಗಳು ದೇವಾಲಯದ ಸಂರಕ್ಷಣೆ ಹಾಗೂ ಪುನರುಜ್ಜೀವನ ಯೋಜನೆಗೂ ಚಾಲನೆ ನೀಡಿವೆ. ಈ ಭೇಟಿ ಬಳಿಕ ವಿಶ್ವದ ಗಮನ ಮತ್ತೊಮ್ಮೆ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಈ ಅದ್ಭುತ ಹಿಂದೂ ದೇವಾಲಯದತ್ತ ಸೆಳೆದಿದೆ.

ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯ

Untitled design (66)

ಪ್ರಾಂಬನನ್ ದೇವಾಲಯವು ಇಂಡೋನೇಷ್ಯಾದಲ್ಲಿರುವ ಅತಿದೊಡ್ಡ ಹಿಂದೂ ದೇವಾಲಯವಾಗಿದ್ದು, ಆಗ್ನೇಯ ಏಷ್ಯಾದ ಅತ್ಯುತ್ತಮ ಹಿಂದೂ ವಾಸ್ತುಶಿಲ್ಪದ ಮಾದರಿಗಳಲ್ಲಿ ಒಂದಾಗಿದೆ. 1991ರಲ್ಲಿ ಯುನೆಸ್ಕೋ ವಿಶ್ವ ಪರಂಪರೆ ತಾಣವಾಗಿ ಗುರುತಿಸಲ್ಪಟ್ಟ ಈ ದೇವಾಲಯ ತನ್ನ ಗಗನಚುಂಬಿ ಗೋಪುರಗಳು, ಕಲ್ಲಿನ ಸೂಕ್ಷ್ಮ ಕೆತ್ತನೆಗಳು ಮತ್ತು ರಾಮಾಯಣ ಕಥಾವಸ್ತುವಿನ ಶಿಲ್ಪಗಳಿಂದ ವಿಶ್ವಪ್ರಸಿದ್ಧಿಪಡೆದಿದೆ.

ತ್ರಿಮೂರ್ತಿಗಳಿಗೆ ಸಮರ್ಪಿತ ದೇವಾಲಯ

Untitled design (67)

ಪ್ರಾಂಬನನ್ ದೇವಾಲಯದ ಮುಖ್ಯ ಆಕರ್ಷಣೆ ಎಂದರೆ ತ್ರಿಮೂರ್ತಿಗಳಾದ ಶಿವ, ವಿಷ್ಣು ಮತ್ತು ಬ್ರಹ್ಮ ದೇವರಿಗೆ ಸಮರ್ಪಿತ ಮೂರು ಪ್ರಮುಖ ದೇವಾಲಯಗಳು. ಅವುಗಳಲ್ಲಿ ಸುಮಾರು 47 ಮೀಟರ್ ಎತ್ತರದ ಶಿವನ ಶಿಲ್ಪವು ದೇವಾಲಯದ ಕೇಂದ್ರಬಿಂದುವಾಗಿದೆ. ದೇವಾಲಯದ ಗೋಡೆಗಳ ಮೇಲೆ ಕೆತ್ತಲಾಗಿರುವ ರಾಮಾಯಣದ ದೃಶ್ಯಗಳು ಪ್ರವಾಸಿಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ. ಪ್ರಾಂಬನನ್ ಪ್ರವಾಸದಲ್ಲಿ ಶಿವ, ವಿಷ್ಣು ಮತ್ತು ಬ್ರಹ್ಮ ದೇವಾಲಯಗಳ ಜತೆಗೆ ರಾಮಾಯಣ ಶಿಲ್ಪಗಳು, ಪುರಾತತ್ವ ಅವಶೇಷಗಳು ಹಾಗೂ ಪುನರ್‌ನಿರ್ಮಿಸಲಾದ ಸಣ್ಣ ದೇವಾಲಯಗಳನ್ನು ವೀಕ್ಷಿಸಬಹುದು. ಸಂಜೆ ವೇಳೆಯಲ್ಲಿ ದೇವಾಲಯದ ಆವರಣದಲ್ಲಿ ನಡೆಯುವ ರಾಮಾಯಣ ಬ್ಯಾಲೆ ನೃತ್ಯ ಪ್ರದರ್ಶನ ಸ್ಥಳೀಯ ಸಂಸ್ಕೃತಿಯನ್ನು ಪರಿಚಯಿಸುವ ಪ್ರಮುಖ ಆಕರ್ಷಣೆಯಾಗಿದೆ.

ಸಾವಿರ ವರ್ಷಗಳ ಇತಿಹಾಸ

9ನೆಯ ಶತಮಾನದಲ್ಲಿ ಜಾವಾದ ಸಂಜಯ ವಂಶದ ಆಡಳಿತದ ಅವಧಿಯಲ್ಲಿ ನಿರ್ಮಿಸಲಾದ ಪ್ರಾಂಬನನ್ ದೇವಾಲಯವು ಒಂದು ಕಾಲದಲ್ಲಿ ನೂರಾರು ದೇವಾಲಯಗಳನ್ನು ಒಳಗೊಂಡ ಭವ್ಯ ಸಂಕೀರ್ಣವಾಗಿತ್ತು. ನಂತರ ಭೂಕಂಪಗಳು, ಜ್ವಾಲಾಮುಖಿಗಳಿಂದ ಹಾಗೂ ರಾಜಕೀಯ ಬದಲಾವಣೆಗಳಿಂದ ದೇವಾಲಯ ಹಾನಿಗೊಳಗಾಯಿತು. ಹಲವು ಶತಮಾನಗಳ ನಂತರ ಮರುಶೋಧನೆಯಾದ ಈ ದೇವಾಲಯವನ್ನು ಹಂತ ಹಂತವಾಗಿ ಪುನರುಜ್ಜೀವನಗೊಳಿಸಲಾಗಿದ್ದು, ಇಂದು ವಿಶ್ವದ ಪ್ರಮುಖ ಸಾಂಸ್ಕೃತಿಕ ಸ್ಮಾರಕಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ಭೇಟಿ ನೀಡಲು ಸೂಕ್ತ ಸಮಯ

ಪ್ರಾಂಬನನ್ ದೇವಾಲಯವನ್ನು ವರ್ಷಪೂರ್ತಿ ವೀಕ್ಷಿಸಬಹುದಾದರೂ, ಮೇಯಿಂದ ಅಕ್ಟೋಬರ್‌ವರೆಗಿನ ಅವಧಿ ಪ್ರವಾಸಕ್ಕೆ ಅತ್ಯುತ್ತಮ ಕಾಲವೆಂದು ಪರಿಗಣಿಸಲಾಗಿದೆ. ಬೆಳಗಿನ ಸಮಯದಲ್ಲಿ ಜನಸಂದಣಿ ಕಡಿಮೆಯಿದ್ದು ಹಾಗೂ ಸಂಜೆ ಹೊತ್ತಿನಲ್ಲಿ ದೇವಾಲಯದ ಗೋಪುರಗಳ ಮೇಲೆ ಬೀಳುವ ಮೃದುವಾದ ಬೆಳಕು ಛಾಯಾಗ್ರಹಣಕ್ಕೆ ಅತ್ಯುತ್ತಮ ಅವಕಾಶ ಒದಗಿಸುತ್ತದೆ.

ಇದನ್ನೂ ಓದಿ: ಮೋದಿ ಮನವಿಯ ಎಫೆಕ್ಟ್:‌ ಸ್ವದೇಶಿ ಟೂರಿಸಂಗೆ ಲಾಭದ ನಿರೀಕ್ಷೆ

ಸಾಂಸ್ಕೃತಿಕ ಬಾಂಧವ್ಯದ ಸಂಕೇತ

ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಕೇವಲ ರಾಜತಾಂತ್ರಿಕ ಕಾರ್ಯಕ್ರಮವಾಗಿರದೆ, ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಾವಿರಾರು ವರ್ಷಗಳ ನಾಗರೀಕತೆ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತೊಮ್ಮೆ ಜಗತ್ತಿಗೆ ಪರಿಚಯಿಸಿದೆ. ದೇವಾಲಯದ ಸಂರಕ್ಷಣೆಗೆ ಭಾರತ ಕೈಜೋಡಿಸಿರುವುದು ಎರಡೂ ದೇಶಗಳ ಪರಂಪರೆ ಸಂರಕ್ಷಣೆಯ ಬದ್ಧತೆಯ ಸಂಕೇತವಾಗಿದೆ.

ತಲುಪುದು ಹೇಗೆ?

ಪ್ರಾಂಬನನ್ ದೇವಾಲಯವು ಇಂಡೋನೇಷ್ಯಾದ ಪ್ರಸಿದ್ಧ ಸಾಂಸ್ಕೃತಿಕ ನಗರ ಯೋಗ್ಯಕರ್ತದಿಂದ ಸುಮಾರು 17 ಕಿಮೀ. ದೂರದಲ್ಲಿದೆ. ರಸ್ತೆ, ಟ್ಯಾಕ್ಸಿ, ರೈಡ್-ಹೇಲಿಂಗ್ ಸೇವೆಗಳು ಹಾಗೂ ಸ್ಥಳೀಯ ರೈಲುಗಳ ಮೂಲಕ ಸುಲಭವಾಗಿ ತಲುಪಬಹುದು. ಯೋಗ್ಯಕರ್ತ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದಲೂ ರಸ್ತೆ ಮಾರ್ಗದ ಮೂಲಕ ದೇವಾಲಯಕ್ಕೆ ಹೋಗುವ ವ್ಯವಸ್ಥೆ ಇದೆ.

Admin

Admin

Pravasi Prapancha – A pioneering initiative led by Vishweshwar Bhat, the esteemed journalist and head of the Vishwavani Group. It is the first and only travel-focused publication in Kannada journalism, dedicated exclusively to news, information, and travel narratives about various destinations. The digital media counterpart of this venture is Pravasi Prapancha Digital Channel, which brings travel-related news from across the state, country, and world. It features fascinating insights, traveler experiences, interviews related to travel, entertainment segments, and much more. Editor-in-Chief: Shri Vishweshwar Bhat

ಇದು 1753ರ ಮನೆ, ಗೊತ್ತಿರಲಿ!

Read Previous

ಇದು 1753ರ ಮನೆ, ಗೊತ್ತಿರಲಿ!

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...

Read Next

ಅಚ್ಚರಿ ಮೂಡಿಸುವ ʻಬ್ಲೂ ಡ್ರ್ಯಾಗನ್‌ ನದಿʼ...