ಭಾರತದಲ್ಲಿ ದೇಶೀಯ ಪ್ರವಾಸ ಎಂದರೆ ಕೇವಲ ಪ್ರವಾಸೋದ್ಯಮ ಅಥವಾ ಮನೋರಂಜನೆಗಾಗಿ ಮಾತ್ರವಲ್ಲ, ಆರೋಗ್ಯ ಮತ್ತು ವೈದ್ಯಕೀಯ ಚಿಕಿತ್ಸೆಯೂ ಪ್ರಮುಖ ಪ್ರಯಾಣದ ಕಾರಣವಾಗಿದೆ.

ಕಳೆದ ಒಂದು ವರ್ಷದ ದೇಶೀಯ ರಾತ್ರಿ ವಾಸದ ಪ್ರವಾಸಗಳ ಕುರಿತು ನಡೆಸಿದ ಸಮೀಕ್ಷೆಯ ಪ್ರಕಾರ, ಪ್ರತಿ 100 ಪ್ರವಾಸಗಳಲ್ಲಿ ಸುಮಾರು 30 ಪ್ರವಾಸಗಳು ಆರೋಗ್ಯ ಮತ್ತು ವೈದ್ಯಕೀಯ ಉದ್ದೇಶಕ್ಕಾಗಿ ನಡೆದಿವೆ ಎಂದು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.

ರಾಷ್ಟ್ರೀಯ ಅಂಕಿಅಂಶ ಕಚೇರಿ ನಡೆಸಿದ Domestic Tourism Expenditure Survey (DTES)ನಲ್ಲಿ ಈ ಮಾಹಿತಿ ಹೊರಬಿದ್ದಿದೆ. ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯಕೀಯ ಉದ್ದೇಶದ ಪ್ರವಾಸಗಳ ಪ್ರಮಾಣ ಇನ್ನೂ ಹೆಚ್ಚಿದ್ದು, ಪ್ರತಿ 100 ಪ್ರವಾಸಗಳಲ್ಲಿ 38.4ರಷ್ಟಿದೆ. ಧಾರ್ಮಿಕ ಮತ್ತು ತೀರ್ಥಯಾತ್ರೆ ಪ್ರವಾಸಗಳು ಶೇ.48ರೊಂದಿಗೆ ಮೊದಲ ಸ್ಥಾನದಲ್ಲಿವೆ.

ಆರೋಗ್ಯ ಮತ್ತು ವೈದ್ಯಕೀಯ ಪ್ರವಾಸಗಳು ದೇಶದಲ್ಲೇ ಅತ್ಯಧಿಕ ಸರಾಸರಿ ವೆಚ್ಚ ಹೊಂದಿರುವ ಪ್ರವಾಸಗಳಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಪ್ರವಾಸಕ್ಕೆ ಸರಾಸರಿ 29,454 ರು. ಹಾಗೂ ನಗರ ಪ್ರದೇಶದಲ್ಲಿ 41,649 ರು. ವೆಚ್ಚವಾಗಿದೆ.

ನಗರ ಪ್ರದೇಶಗಳಲ್ಲಿ ರಜೆ, ಮನರಂಜನೆ ಮತ್ತು ವಿಶ್ರಾಂತಿ ಪ್ರವಾಸಗಳು ಶೇ.36.4ರಷ್ಟಿವೆ. ದೇಶೀಯ ಪ್ರವಾಸಗಳಲ್ಲಿ ಉತ್ತರ ಪ್ರದೇಶ ಶೇ.15.7ರೊಂದಿಗೆ ಅತಿ ಹೆಚ್ಚು ಪ್ರವಾಸಿಗರ ಪಾಲು ಹೊಂದಿದ್ದು, ತಮಿಳುನಾಡು ಶೇ.13.4 ಮತ್ತು ರಾಜಸ್ಥಾನ ಶೇ.8ರೊಂದಿಗೆ ನಂತರದ ಸ್ಥಾನದಲ್ಲಿವೆ.