ದೆಹಲಿ ಮೆಟ್ರೋ ನೋಡಿ ಮನಸೋತ ಯುಕೆ ಪ್ರಯಾಣಿಕ
ಯುಕೆ ಮೂಲದ ಅಲೆಕ್ಸ್ ದೆಹಲಿ ಮೆಟ್ರೋದಲ್ಲಿ ಸವಾರಿ ಮಾಡಿ ಒಂದು ಸಣ್ಣ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲರ ಗಮನಸೆಳೆದಿದೆ.
ದೆಹಲಿ ಮೆಟ್ರೋದಲ್ಲಿ ವಿಚಿತ್ರ ವರ್ತನೆ, ಅಶಿಸ್ತು ತೋರಲಾಯಿತು ಎಂಬಂಥ ನಕಾರಾತ್ಮಕ ವೈರಲ್ ವಿಡಿಯೋಗಳನ್ನೇ ನೋಡಿ ಸಾಕಾಗಿಬಿಟ್ಟಿದೆಯಾ...ಆದರೆ ಈಗ ದೆಹಲಿ ಮೆಟ್ರೋವನ್ನು ಹಾಡಿ ಹೊಗಳುವಂಥ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಭಾರಿ ಸುದ್ದಿ ಮಾಡಿದೆ.
ಹೌದು, ಯುಕೆ ಮೂಲದ ಕಂಟೆಂಟ್ ಕ್ರಿಯೇಟರ್ ಅಲೆಕ್ಸ್, ಇತ್ತೀಚೆಗಷ್ಟೇ ಭಾರತಕ್ಕೆ ಭೇಟಿ ನೀಡಿದಾಗ ದೆಹಲಿಯನ್ನು ಸುತ್ತಾಡಿ ಬಂದಿದ್ದ. ಅಲ್ಲದೆ ದೆಹಲಿಯ ಮೆಟ್ರೋದಲ್ಲಿ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ರೈಲನ್ನು ಪ್ರವೇಶಿಸಿ, ಒಂದಷ್ಟು ಕಡೆ ಸವಾರಿ ಮಾಡಿದ್ದ. ಅದಕ್ಕಿಂತ ಹೆಚ್ಚಾಗಿ ಆ ಮೆಟ್ರೋ ಪ್ರಯಾಣವನ್ನು ಮೆಚ್ಚಿಕೊಂಡು "ವಾವ್" ಎಂದು ಹೇಳುತ್ತಾನೆ.

ಸ್ವಚ್ಛ ಮತ್ತು ವಿಶಾಲವಾದ ಪ್ಲಾಟ್‌ಫಾರ್ಮ್, ಉತ್ತಮವಾಗಿ ನಿರ್ವಹಿಸಲ್ಪಟ್ಟ ಕಿಯೋಸ್ಕ್, ಸುಗಮವಾಗಿ ಚಲಿಸುವ ಎಸ್ಕಲೇಟರ್‌ಗಳು, ರೈಲು ಹತ್ತುವ ಪ್ರಯಾಣಿಕರು ಮತ್ತು ಮುಚ್ಚುತ್ತಿರುವ ಮೆಟ್ರೋ ಗೇಟ್ ಗಳನ್ನು ವಿಡಿಯೋ ಮೂಲಕ ಚಿತ್ರೀಕರಿಸಿಕೊಂಡು, " ದೆಹಲಿಯ ಮೆಟ್ರೋ ಲಂಡನ್ ಅಂಡರ್‌ಗ್ರೌಂಡ್‌ಗಿಂತ ಉತ್ತಮವಾಗಿದೆ” ( POV: Delhi’s metro is nicer than the London Underground ) ಎಂಬುದಾಗಿ ಹೇಳಿಕೊಂಡಿದ್ದಾನೆ.
ವೈರಲ್ ವೀಡಿಯೊವನ್ನು ಇಲ್ಲಿ ನೋಡಿ:
ಯುಕೆ ಮೂಲದ ಅಲೆಕ್ಸ್ ಶೇರ್ ಮಾಡಿಕೊಂಡಿದ್ದ ಈ ವಿಡಿಯೋ ತುಣುಕು ಎಲ್ಲರ ಗಮನ ಸೆಳೆಯಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಶೀಘ್ರದಲ್ಲೇ ಅದು ಆರು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿತು. ದೆಹಲಿ ಮೆಟ್ರೋವನ್ನು ದೇಶದ ಹೊರಗಿನಿಂದ ಬಂದ ಯಾರೋ ಹೊಗಳುತ್ತಿರುವುದನ್ನು ನೋಡಿ ಭಾರತೀಯರಿಗಂತೂ ರೋಮಾಂಚವೇ ಉಂಟಾಗಿತ್ತು. ಈ ವಿಡಿಯೋಕ್ಕೆ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿದ್ದು, "ಕೊನೆಗೂ, ಯಾರೋ ಅದನ್ನು ಹೇಳಿದರು" ಎಂದು ಒಬ್ಬಾತ ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬ, "ದೆಹಲಿ ಮೆಟ್ರೋ ನೀವು ಕಂಡಿರುವುದಕ್ಕೂ ಹೆಚ್ಚಾಗಿಯೇ ಚೆನ್ನಾಗಿದೆ” ಎಂದು ಹೇಳಿದ್ದಾನೆ.
ಮತ್ತೂ ಒಂದು ಕಾಮೆಂಟ್ ನಲ್ಲಿ "ಭಾರತೀಯನಾಗಿರುವುದಕ್ಕೆ ಹೆಮ್ಮೆಯಿದೆ. ನಾವು ಮೆಟ್ರೋ ಹಾಗೂ ಸುತ್ತಲ ಪರಿಸರದಲ್ಲಿ ಕಸ ಹಾಕದೆ, ಕೊಳಕು ಮಾಡದೆ, ಎಲ್ಲೆಂದರಲ್ಲಿ ಉಗುಳದೆ ಸ್ವಚ್ಛವಾಗಿ ಇಟ್ಟುಕೊಂಡರೆ ಒಳ್ಳೆಯದು. ಸಾರ್ವಜನಿಕ ಸಾರಿಗೆಯಲ್ಲಿ ಜೋರಾಗಿ ಮಾತನಾಡುವುದು, ಫೋನ್‌ನಲ್ಲಿ ಮಾತನಾಡುವುದನ್ನು ನಿಲ್ಲಿಸಿದರೆ ಇನ್ನೂ ಒಳ್ಳೆಯದು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇನ್ನೂ ಹೆಚ್ಚಿನ ಬೆಳವಣಿಗೆಯ ಅಗತ್ಯವಿದೆ. ಇದು ಮೊದಲ ಹೆಜ್ಜೆಯಷ್ಟೇ” ಎಂಬುದಾಗಿ ಹೇಳಲಾಗಿದೆ.

ಈ ಹೊಗಳಿಗೆ ಇದೇ ಮೊದಲಲ್ಲ...
ವಿದೇಶಿಗರು ಭಾರತದ ನೆಲದಲ್ಲಿ ಕುಳಿತು, ಇಲ್ಲಿನ ಸೌಕರ್ಯ, ಸವಲತ್ತುಗಳನ್ನು ಹೊಗಳುವುದು, ಅದರಲ್ಲೂ ಭಾರತದ ಮೆಟ್ರೋ ಸಂಪರ್ಕ, ಸೌಲಭ್ಯಗಳನ್ನು ಮನಸಾರೆ ಹೊಗಳುವುದು ಇದೇ ಮೊದಲ ಸಲವಲ್ಲ. ಇದಕ್ಕೂ ಮೊದಲು, ಜರ್ಮನ್ ವ್ಲಾಗರ್ ಒಬ್ಬಇದೇ ರೀತಿಯಲ್ಲಿ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ಅವರು ತಮ್ಮ ವೀಡಿಯೊದಲ್ಲಿ, "ಭಾರತದ ಮೆಟ್ರೋ ಪಶ್ಚಿಮ ಯುರೋಪ್‌ಗಿಂತ ಉತ್ತಮವಾಗಿದೆ" ಎಂದು ಹೇಳಿಕೊಂಡಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿತ್ತು.