ಕೊಲ್ಹಾಪುರದ 'ಹೊಸ ಅರಮನೆ'
ಈ ಅರಮನೆಯ ಇತಿಹಾಸದಲ್ಲಿ ಛತ್ರಪತಿ ರಾಜರ್ಷಿ ಶಾಹು ಮಹಾರಾಜರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯುವಂಥದ್ದು. ಇವರು ಕೇವಲ ರಾಜರಾಗಿರದೆ, ಒಬ್ಬ ಮಹಾನ್ ಸಮಾಜ ಸುಧಾರಕರಾಗಿದ್ದರು. 1902ರಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಶಿಕ್ಷಣ ಪ್ರೇಮಿ. ಬಡ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ಗಳನ್ನು ನಿರ್ಮಿಸಿದರು. ಉಚಿತ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತಂದರು. ಕ್ರೀಡಾ ಪೋಷಕರಾಗಿ ಕೊಲ್ಹಾಪುರವನ್ನು ಕುಸ್ತಿಯ ಕೇಂದ್ರವನ್ನಾಗಿ ಮಾಡಿದರು.
- ಡಾ. ಕೆ. ಬಿ. ಸೂರ್ಯ ಕುಮಾರ್, ಮಡಿಕೇರಿ
ಕರ್ನಾಟಕ-ಮಹಾರಾಷ್ಟ್ರ ಗಡಿಯ ಸನಿಹದಲ್ಲಿನ ಕೊಲ್ಹಾಪುರ ಎಂದೊಡನೆ ನಮಗೆ ನೆನಪಾಗುವುದು ಜಗತ್ಪ್ರಸಿದ್ಧ ಮಹಾಲಕ್ಷ್ಮಿ ದೇವಾಲಯ. ಆದರೆ, ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ಅನೇಕ ಪ್ರವಾಸಿಗರಿಗೆ ಅಲ್ಲಿಗೆ ಅತ್ಯಂತ ಸಮೀಪದಲ್ಲಿರುವ ಮರಾಠ ಸಾಮ್ರಾಜ್ಯದ ಶೌರ್ಯದ ಸಂಕೇತ 'ಹೊಸ ಅರಮನೆ' ಬಗ್ಗೆ ತಿಳಿದಿರುವುದು ಕಡಿಮೆ. ಮರಾಠ ಅರಸರ ಜೀವನಶೈಲಿ, ಕಲೆ ಮತ್ತು ಸಂಸ್ಕೃತಿಯನ್ನು ಪಸರಿಸುವ ಈ ಅರಮನೆ ಇಂದಿಗೂ ಒಂದು ಜೀವಂತ ಸ್ಮಾರಕವಾಗಿ ನಿಂತಿದೆ.
ಇದನ್ನೂ ಓದಿ: ʻಕರ್ನಾಟಕದ ಕೊಲ್ಹಾಪುರʼ ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇಗುಲ
ಇತಿಹಾಸ
ಕ್ರಿಶ 1707ರಲ್ಲಿ ಮರಾಠ ಸಾಮ್ರಾಜ್ಯದ ಉತ್ತರಾಧಿಕಾರಿ ಸ್ಥಾನಕ್ಕಾಗಿ ಸಂಘರ್ಷ ಏರ್ಪಟ್ಟಾಗ, ಛತ್ರಪತಿ ಶಿವಾಜಿ ಮಹಾರಾಜರ ಸೊಸೆ ಮಹಾರಾಣಿ ತಾರಾಬಾಯಿ ಅವರು ತಮ್ಮ ಪುತ್ರ ಎರಡನೆಯ ಶಿವಾಜಿಯನ್ನು ರಾಜನನ್ನಾಗಿ ಘೋಷಿಸಿ ಕೊಲ್ಹಾಪುರದಲ್ಲಿ ಪ್ರತ್ಯೇಕ ಗಾದಿಯನ್ನು ಸ್ಥಾಪಿಸಿದರು. ಕಾಲಾಂತರದಲ್ಲಿ ಅಲ್ಲಿನ 'ಹಳೆಯ ಅರಮನೆ' ಬೆಂಕಿಗೆ ಆಹುತಿಯಾದಾಗ, ಅಂದಿನ ಕಾಲದ ಅಗತ್ಯಕ್ಕೆ ತಕ್ಕಂತೆ ಬ್ರಿಟಿಷ್ ವಾಸ್ತುಶಿಲ್ಪಿ ಚಾರ್ಲ್ಸ್ ಮ್ಯಾಂಟ್ ಅವರ ವಿನ್ಯಾಸದೊಂದಿಗೆ 1877 - 1884ರ ನಡುವೆ ಈ 'ಹೊಸ ಅರಮನೆ'ಯನ್ನು ನಿರ್ಮಿಸಲಾಯಿತು. ಅಂದಿನ ಕಾಲಕ್ಕೆ ಸುಮಾರು 7 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡ, ಇಂದಿಗೂ ಆಕರ್ಷಣೆಯ ಕೇಂದ್ರಬಿಂದು.

ಆಧುನಿಕ ಕೊಲ್ಹಾಪುರದ ಶಿಲ್ಪಿ
ಈ ಅರಮನೆಯ ಇತಿಹಾಸದಲ್ಲಿ ಛತ್ರಪತಿ ರಾಜರ್ಷಿ ಶಾಹು ಮಹಾರಾಜರ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯುವಂಥದ್ದು. ಇವರು ಕೇವಲ ರಾಜರಾಗಿರದೆ, ಒಬ್ಬ ಮಹಾನ್ ಸಮಾಜ ಸುಧಾರಕರಾಗಿದ್ದರು. 1902ರಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಶಿಕ್ಷಣ ಪ್ರೇಮಿ. ಬಡ ವಿದ್ಯಾರ್ಥಿಗಳಿಗಾಗಿ ಹಾಸ್ಟೆಲ್‌ಗಳನ್ನು ನಿರ್ಮಿಸಿದರು. ಉಚಿತ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತಂದರು. ಕ್ರೀಡಾ ಪೋಷಕರಾಗಿ ಕೊಲ್ಹಾಪುರವನ್ನು ಕುಸ್ತಿಯ ಕೇಂದ್ರವನ್ನಾಗಿ ಮಾಡಿದರು. ಅರಮನೆಯ ಸಮೀಪದ ಬೃಹತ್ 'ಖಾಸ್ಬಾಗ್ ಮೈದಾನ' ಇವರ ಕ್ರೀಡಾ ಪ್ರೇಮಕ್ಕೆ ಸಾಕ್ಷಿ.
ಪ್ರಸ್ತುತ, ಶಿವಾಜಿ ಮಹಾರಾಜರ 13ನೆಯ ವಂಶಸ್ಥರು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಶ್ರೀಮಂತ ಛತ್ರಪತಿ ಶಾಹು ಮಹಾರಾಜರು ಇದೇ ಅರಮನೆಯಲ್ಲಿ ವಾಸಿಸುತ್ತಿದ್ದಾರೆ.
ವಾಸ್ತುಶಿಲ್ಪದ ವೈಭವ
ಭಾರತೀಯ ಮತ್ತು ಬ್ರಿಟಿಷ್ ಶೈಲಿಗಳ ಸಮ್ಮಿಶ್ರಣವಾಗಿರುವ ಈ ಅರಮನೆಯನ್ನು ಹೊಳೆಯುವ ಕಪ್ಪು ಶಿಲೆಯಿಂದ ನಿರ್ಮಿಸಲಾಗಿದೆ. ಅರಮನೆಯ ಮಧ್ಯಭಾಗದಲ್ಲಿನ ಎಂಟು ಕೋನಗಳ ಗೋಪುರ ಮತ್ತು ಅದರಲ್ಲಿನ 1877ರ ಪುರಾತನ ಗಡಿಯಾರ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಅರಮನೆಯ ಕಿಟಕಿಗಳ ಮೇಲೆ ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಪ್ರಮುಖ ಘಟನೆಗಳನ್ನು ಬಣ್ಣದ ಗಾಜಿನ ಮೂಲಕ ಅತ್ಯಂತ ಕಲಾತ್ಮಕವಾಗಿ ಚಿತ್ರಿಸಲಾಗಿದೆ.

ಅರಮನೆಯಲ್ಲಿ ಸಂಗ್ರಹಾಲಯ
ಅರಮನೆಯ ನೆಲಮಹಡಿಯನ್ನು ಶ್ರೀ ಛತ್ರಪತಿ ಶಾಹು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿ ರಾಜವೈಭವದ ಅಪರೂಪದ ವಸ್ತುಗಳಿವೆ.
ಶಸ್ತ್ರಾಸ್ತ್ರ ವಿಭಾಗದಲ್ಲಿ ರಾಜರು ಬಳಸುತ್ತಿದ್ದ ಖಡ್ಗಗಳು, ಬಂದೂಕುಗಳು ಹಾಗೂ ಪ್ರಮುಖವಾಗಿ ಮೊಘಲ್ ಚಕ್ರವರ್ತಿ ಔರಂಗಜೇಬನ ಖಡ್ಗ ಇರುವುದು ವಿಶೇಷ.
ದರ್ಬಾರ್ ಹಾಲ್‌ನಲ್ಲಿನ ಅದ್ಭುತ ಕೆತ್ತನೆಯ ತೇಗದ ಮರದ ಪೀಠೋಪಕರಣಗಳು, ಭವ್ಯ ಸಿಂಹಾಸನ ಮತ್ತು ಪಟ್ಟಾಭಿಷೇಕದ ಚಿತ್ರಗಳು ರಾಜಗಾಂಭೀರ್ಯವನ್ನು ಹೆಚ್ಚಿಸಿವೆ.
ಅಂದಿನ ಕಾಲದಲ್ಲಿ ಬೇಟೆ ರಾಜಮನೆತನದ ಹವ್ಯಾಸವಾಗಿತ್ತು. ಶಾಹು ಮಹಾರಾಜರು ಮತ್ತು ಅವರ ನಂತರದ ರಾಜರು ಪ್ರಾಣಿ ಪ್ರೇಮಿಗಳೂ ಆಗಿದ್ದು ಚಿರತೆಗಳನ್ನು ಸಾಕಿ ಬೇಟೆಯಾಡಲು ತರಬೇತಿ ನೀಡುತ್ತಿದ್ದರು. ಮ್ಯೂಸಿಯಂನಲ್ಲಿ ಚಿರತೆಗಳನ್ನು ಬಳಸಿ ಬೇಟೆಯಾಡುವ ಅಪರೂಪದ ಫೊಟೋಗಳಿವೆ. ಬೇಟೆಯ ಹವ್ಯಾಸದ ನೆನಪಿಗಾಗಿ ಹುಲಿ, ಸಿಂಹ, ಚಿರತೆ ಹಾಗೂ ಕರಡಿಗಳ ಸಂರಕ್ಷಿತ ಚರ್ಮ ಮತ್ತು ತಲೆಗಳನ್ನುಇಲ್ಲಿನ ವನ್ಯಜೀವಿಗಳ ವಿಭಾಗದಲ್ಲಿ ಪ್ರದರ್ಶಿಸಲಾಗಿದೆ.
ಈ ಬಾರಿ ಕೊಲ್ಹಾಪುರಕ್ಕೆ ಭೇಟಿ ನೀಡಿದಾಗ ಇಲ್ಲಿನ ಭವ್ಯ ಇತಿಹಾಸವನ್ನು ಕಣ್ಣಾರೆ ಕಾಣಲು, ಈ 'ಹೊಸ ಅರಮನೆ'ಗೆ ಒಮ್ಮೆ ಭೇಟಿನೀಡಿ.
ಮಾಹಿತಿಗಾಗಿ
- ಸ್ಥಳ: ಕಸಬಾ ಬಾವಡಾ ರಸ್ತೆ, ಭವಾನಿ ಮಂಟಪದ ಹತ್ತಿರ, ಕೊಲ್ಹಾಪುರ.
- ಸಮಯ: ಬೆಳಗ್ಗೆ 9:00 - ಮಧ್ಯಾಹ್ನ 1:00 ಮತ್ತು ಮಧ್ಯಾಹ್ನ 2:30 - ಸಂಜೆ 6:00ರವರೆಗೆ.
- ಪ್ರತಿ ಸೋಮವಾರದಂದು ರಜೆ ಇರುತ್ತದೆ.
- ಅರಮನೆಯ ಒಳಗೆ ಛಾಯಾಗ್ರಹಣ ನಿಷೇಧಿಸಲಾಗಿದೆ.
- ಪ್ರವೇಶ ದರ: ವಯಸ್ಕರಿಗೆ 40 ರು. ಮಕ್ಕಳಿಗೆ 20 ರು. (ಶುಲ್ಕಗಳು ಬದಲಾಗಬಹುದು)
- ಅರಮನೆಯ ಆವರಣದಲ್ಲಿನ ಸಣ್ಣ ಮೃಗಾಲಯ ಹಾಗೂ ಕೆರೆಯಲ್ಲಿ ನವಿಲು ಮತ್ತು ಜಿಂಕೆಗಳನ್ನು ಕಾಣುವುದು ಅದ್ಭುತವಾಗಿರುತ್ತದೆ.