ರಾಮೋಜಿ ಫಿಲ್ಮ್ ಸಿಟಿ ; ಪ್ರವಾಸಿಗರಿಗೆ ಹಾಲಿಡೇ ಡಿಸ್ಟಿನೇಷನ್
ರಾಮೋಜಿ ಫಿಲ್ಮ್ ಸಿಟಿ ಕೇವಲ ಪ್ರವಾಸಿ ತಾಣವೂ ಅಲ್ಲ.. ಫಿಲ್ಮ್ ಸ್ಟುಡಿಯೋವೂ ಅಲ್ಲ. ಇಲ್ಲಿ ಕಾರ್ಪೊರೆಟ್ ಕಾರ್ಯಕ್ರಮಗಳು, ಸಮ್ಮೇಳನಗಳು, ಎಕ್ಸಿಬಿಷನ್ ಗಳು, ಡೆಸ್ಟಿನೇಷನ್ ವೆಡ್ಡಿಂಗ್ ಮತ್ತು ಹನಿಮೂನ್ ಗಳೂ ನಡೆಯುತ್ತವೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದು ಫನ್ ಜೊತೆ ಅಧ್ಯಯನ ಕೇಂದ್ರ ಕೂಡ. ಇಂಥ ಅದ್ಭುತ ಸ್ಟುಡಿಯೋ ಭಾರತದಲ್ಲಿದೆ ಎಂಬುದು ಹೆಮ್ಮೆಯ ಸಂಗತಿ.
- ನವೀನ್ ಸಾಗರ್
ಭಾರತದಲ್ಲಿ ನೂರಾರು ಸಿನಿಮಾ ಸ್ಟುಡಿಯೋಗಳಿವೆ. ಹೊರಾಂಗಣ ಮತ್ತು ಒಳಾಂಗಣ ಚಿತ್ರೀಕರಣ ತಾಣಗಳಿವೆ. ಎಕರೆಗಟ್ಟಲೆ ಜಾಗದಲ್ಲಿ ನರ‍್ಮಿಸಿದ ಸ್ಟುಡಿಯೋಗಳಿವೆ. ಕೇವಲ ಭಾರತದಲ್ಲಿ ಮಾತ್ರವಲ್ಲ ಇಡೀ ಜಗತ್ತು ಸುತ್ತಿ ಬಂದರೂ ನಿಮಗೆ ಇಂಥ ಫಿಲ್ಮ್ ಸಿಟಿ ನೋಡಲು ಸಿಗುವುದಿಲ್ಲ. ಹಾಲಿವುಡ್ ನಂಥ ಹಾಲಿವುಡ್ ಕೂಡ ಬೆರಗುಗಣ್ಣಿನಿಂದ ನೋಡುವ, ವಿದೇಶೀ ಚಿತ್ರಕರ್ಮಿಗಳೂ ತಮ್ಮ ಚಿತ್ರದ ಚಿತ್ರೀಕರಣಕ್ಕಾಗಿ ಭೇಟಿ ನೀಡುವ ಅದ್ಭುತ ಸ್ಟುಡಿಯೋ ಅಂದ್ರೆ ಅದು ರಾಮೋಜಿ ಫಿಲ್ಮ್ ಸಿಟಿ!
ಅಕ್ಷರಶಃ ಇದೊಂದು ಮಾಯಾಲೋಕ. ಇದು ಕೇವಲ ಫಿಲ್ಮ್ ಸಿಟಿ ಅಲ್ಲ. ಜಗತ್ತಿನ ಪ್ರವಾಸಿಗರೆಲ್ಲ ಹಾತೊರೆದು ಭೇಟಿ ನೀಡುವ ಹಾಲಿಡೇ ಡಿಸ್ಟಿನೇಷನ್. ಅಂದರೆ ರಜಾದಿನದ ನೆಚ್ಚಿನ ಪ್ರವಾಸಿ ತಾಣ.
ಹೌದು. ರಾಮೋಜಿ ಫಿಲ್ಮ್ ಸಿಟಿ ಸಿನಿಮಾ ನಿರ್ಮಾಪಕರ ಪಾಲಿನ ಸ್ವಪ್ನಲೋಕ. ಅದೇ ಹೊತ್ತಿಗೆ ಸಿನಿಮಾಲೋಕದ ಹೊರಗಿನವರಿಗೆ ಇದು ವಿಸ್ಮಯ ಎನಿಸುವ ಪ್ರವಾಸಿಸ್ಥಳ.

ಒಂದಲ್ಲ ಎರಡಲ್ಲ .. ಬರೋಬ್ಬರಿ ಎರಡು ಸಾವಿರ ಎಕರೆಯಲ್ಲಿ ಸೃಷ್ಟಿಯಾಗಿರುವ ಈ ವಿಶಾಲ ಮಾಯಾಲೋಕ ಈಗಾಗಲೇ ವಿಶ್ವದ ಅತಿ ದೊಡ್ಡ ಸಿನಿಮಾ ಸ್ಟುಡಿಯೋ ಎಂದು ಗಿನ್ನೆಸ್ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಇಲ್ಲಿ ಚಿತ್ರೀಕರಣಗೊಂಡ ಸಿನಿಮಾಗಳ ಸಂಖ್ಯೆ ಮೂರೂವರೆ ಸಾವಿರಕ್ಕೂ ಹೆಚ್ಚು! ಆದರಲ್ಲಿ ಹಾಲಿವುಡ್ ಮತ್ತು ಬಾಲಿವುಡ್ ನ ಬಿಗ್ ಬಜೆಟ್ ಸೂಪರ್ ಹಿಟ್ ಚಿತ್ರಗಳೂ ಇವೆ. ಬಾಹುಬಲಿ ಆರ್ ಆರ್ ಆರ್ ನಂಥ ದಾಖಲೆ ಚಿತ್ರಗಳೂ ಇವೆ.
ತೆಲುಗು ಚಿತ್ರರಂಗದ ದಿಗ್ಗಜ, ಸ್ಟಾರ್ ನಿರ್ಮಾಪಕ ರಾಮೋಜಿ ರಾವ್ ಅವರ ಕನಸಿನ ಕೂಸು ಇಂದು ಇಡೀ ಜಗತ್ತು ತಿರುಗಿ ನೋಡುವಂತೆ ಬೆಳೆದಿದೆ. ಇಲ್ಲಿ ಹಾಕುವ ಅದ್ದೂರಿ ಸಿನಿಮಾ ಸೆಟ್ ಗಳೇ ಪ್ರವಾಸಿಗರ ಕಣ್ಣಿಗೆ ಪ್ರಮುಖ ಆಕರ್ಷಣೆ. ತೆರೆಯ ಮೇಲೆ ನೋಡಿರುವ ಸಿನಿಮಾಗಳ ಬೃಹತ್ ಸೆಟ್ ಗಳು ನೇರವಾಗಿ ನೋಡಲು ಸಿಕ್ಕಾಗ ಆಗುವ ಅಚ್ಚರಿ ಸಣ್ಣದಲ್ಲ.
ಬಾಹುಬಲ್ ಚಿತ್ರಕ್ಕಾಗಿ ನಿರ್ಮಿಸಿದ್ದ ಸೆಟ್ ಈಗಾಗಲೇ ಏಳೆಂಟು ವರ್ಷ ಹಳತು. ಆದರೆ ಅದನ್ನು ಪ್ರವಾಸಿಗರಿಗಾಗಿ ಯಥಾಸ್ಥಿತಿಯಲ್ಲಿ ಸಂರಕ್ಷಿಸಿ ಅಂದಗೊಳಿಸಿ ಉಳಿಸಿಕೊಂಡಿದ್ದಾರೆ. ಮಕ್ಕಳಿಗೋಸ್ಕರ ಅಲ್ಲೊಂದು ಫಂಡುಸ್ತಾನ್ ಎಂಬ ಗೇಮ್ ಜೋನನ್ನೇ ನಿರ್ಮಿಸಿಟ್ಟಿದ್ದಾರೆ. ಪರಿಸರ ಕಾಳಜಿಯಿಂದ ಒಂದು ಎಕೋ ಜೋನ್, ಆರೋಗ್ಯಕ್ಕೋಸ್ಕರ ವೆಲ್ ನೆಸ್ ಸೆಂಟರ್, ಅದ್ಭುತ ಹೊಟೇಲ್ಸ್.. ಏನಿದೆ ..ಏನಿಲ್ಲ?

ರಾಮೋಜಿ ಫಿಲ್ಮ್ ಸಿಟಿಗೆ ಬಂದರೆ ನಿಮ್ಮನ್ನು ಸಾಲು ಸಾಲು ಆಕರ್ಷಣೆಗಳು ಕೂಗಿ ಕರೆಯುತ್ತವೆ.
ಯೂರೇಕಾ – ಗೇಟ್ ವೇ ಆಫ್ ಫನ್
ಇಲ್ಲಿಗೆ ಬಂದರೆ ಸಂಗೀತ ನೃತ್ಯಗಳ ಮಾಯಾಪ್ರಪಂಚದಲ್ಲಿ ಕಳೆದು ಹೋಗಿಬಿಡುತ್ತೀರಿ. ಮೆಜೆಸ್ಟಿಕ್ ಪೋರ್ಟ್ ಮತ್ತು ಪೆವಿಲಿಯನ್ ಗಳು ಥೀಮ್ಯಾಟಿಕ್ ಬಜಾರ್‌ಗಳು, ರೆಸ್ಟೋರೆಂಟ್‌ಗಳು, ಆಟದ ಮ್ಯೂಸಿಕಲ್ ರೈಡ್ಸ್‌ಗಳು. ಹಳೆಯ ಮತ್ತು ಹೊಸ ಸಂಸ್ಕೃತಿಯ ಬೆಸುಗೆ ಹೊಸೆದ ರಸಾನುಭವಗಳು ನಿಮ್ಮನ್ನು ಮೋಡಿಗೆ ಒಳಪಡಿಸಿಬಿಡುತ್ತವೆ.
ರಾಮೋಜಿ ಮೂವಿ ಮ್ಯಾಜಿಕ್
ಸಿನಿಮಾ ಲೋಕದ ಅಚ್ಚರಿಗಳನ್ನು ಒಂದು ಪ್ಯಾಕೇಜಿನಲ್ಲಿ ಕಟ್ಟಿ ಕೊಡುವ ಆಕ್ಷನ್ ಶೋ, ಫಿಲ್ಮಿ ದುನಿಯಾ ದಂಥ ಕಾರ್ಯಕ್ರಮಗಳು,‘ ರಾಮೋಜಿ ಸ್ಪೇಸ್ ಯಾತ್ರಾ’ – ಎಂಬ ಅಂತರಿಕ್ಷ ಪ್ರಯಾಣದ ಅನುಭವ ನೀಡುವ ಶೋ ಸೇರಿದಂತೆ ರಾಮೋಜಿ ಮೂವಿ ಮ್ಯಾಜಿಕ್ ಗೆ ಹೋದರೆ ಕಿನ್ನರ ಲೋಕಕ್ಕೆ ಹೋಗಿಬಂದ ಅನುಭವವಾಗುವುದು ಖಚಿತ.
ಫಂಡುಸ್ತಾನ್ – ಇದು ಮಕ್ಕಳ ಮೋಜಿನ ಲೋಕ
ಇಲ್ಲಿಗೆ ಬರುವ ಮಕ್ಕಳಿಗೆ ನಿರಾಸೆಯ ಮಾತೇ ಇಲ್ಲ. ಎಂಟರ್ಟೇನ್ ಮೆಂಟ್ ಝೋನ್‌ನಲ್ಲಿ ಆಟ, ಥ್ರಿಲ್ಲಿಂಗ್ ರೈಡ್, ಬೋರಾಸುರಾ ಮಾಂತ್ರಿಕನ ಶೋ ಸೇರಿದಂತೆ ಮಕ್ಕಳನ್ನು ರೋಮಾಂಚನಗೊಳಿಸುವ ಆಟಗಳಿವೆ.
ದೈನಂದಿನ ಲೈವ್ ಶೋಗಳು
ಇದು ರಾಮೇಜಿ ಫಿಲ್ಮ್ ಸಿಟಿಯ ಪ್ರಮುಖ ಆಕರ್ಷಣೆ ಅಂದರೆ ಉತ್ಪ್ರೇಕ್ಷೆ ಅಲ್ಲ. ದೇಶದ ಮತ್ತು ವಿಶ್ವದ ಪ್ರಖ್ಯಾತ ಕಲಾವಿದರು ಇಲ್ಲಿ ಲೈವ್ ಶೋ ನೀಡುತ್ತಾರೆ. ಅದನ್ನು ವೀಕ್ಷಿಸಲೆಂದೇ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಈ ಕಾರ್ಯಕ್ರಮದ ಹೆಸರು ‘ಸ್ಪಿರಿಟ್ ಆಫ್ ರಾಮೋಜಿ. ಇನ್ನು ‘ವೈಲ್ಡ್ ವೆಸ್ಟ್ ಸ್ಟಂಟ್ ಶೋ’, ರಾಮೋಜಿ ಸಿಟಿಯ ಸಿಗ್ನೇಚರ್ ಶೋ. ಇದರ ಹೊರತಾಗಿ ‘ಲೈಟ್ಸ್, ಕ್ಯಾಮೆರಾ, ಆಕ್ಷನ್’ ಪ್ರರ‍್ಶನವನ್ನು ಸಿನಿಪ್ರಿಯರು ಮಿಸ್ ಮಾಡುವ ಚಾನ್ಸೇ ಇಲ್ಲ.
ವಿಂಗ್ಸ್ – ಬರ್ಡ್ ಪಾರ್ಕ್
ಓಕೆ.. ಸಿನಿಮಾ ಲೋಕದಿಂದಾಚೆ ಏನಿದೆ ಎಂದು ಕೇಳುವವರಿಗಾಗಿ ಇಲ್ಲೊಂದು ಪಕ್ಷಿಧಾಮವೇ ಸೃಷ್ಟಿಯಾಗಿದೆ. ಜಗತ್ತಿನ ಎಲ್ಲ ವಿಶೇಷ ಹಾಗೂ ಆಕರ್ಷಕ ಪಕ್ಷಿಗಳು ಇಲ್ಲಿ ನೋಡಲು ಸಿಗುತ್ತವೆ. ಪಕ್ಷಿಗಳ ಸೌಖ್ಯಕ್ಕಾಗಿ ಮತ್ತು ನೋಡುಗರ ಕಣ್ಣಿಗೆ ಇನ್ನಷ್ಟು ಆಕರ್ಷಕಗೊಳಿಸುವ ಸಲುವಾಗಿ ಇಲ್ಲಿ ಬಣ್ಣ ಬಣ್ಣದ ಮರಗಿಡಗಳು, ಪಂಜರಗಳು ಗುಡಿಸಲುಗಳು ಎಲ್ಲವನ್ನೂ ನಿರ್ಮಿಸಿಟ್ಟಿದ್ದಾರೆ.

🔹 ಬಟರ್‌ಫ್ಲೈ ಗಾರ್ಡನ್
ಇದು ಚಿಟ್ಟೆಗಳ ಲೋಕ. ಸಾವಿರಾರು ಚಿಟ್ಟೆ ಪತಂಗಗಳ ಸಾಮ್ರಾಜ್ಯವೇ ಇಲ್ಲಿ ಅನಾವರಣಗೊಂಡಿದ್ದು, ಇದು ಗ್ರಾಫಿಕ್ಸೋ ನಿಜವೋ ಎಂಬ ಪ್ರಶ್ನೆ ಮೂಡಿಸಿಬಿಡುತ್ತದೆ. ಈ ಉದ್ಯಾನವನ ಕೂಡ ಅಷ್ಟೇ ನಯನಮನೋಹರ.
🔹 ಸಾಹಸ್ – ಇದು ಗಟ್ಟಿಗುಂಡಿಗೆಯ ಜಟ್ಟಿಗಳ ಜಗತ್ತು.
ಎದೆ ನಡುಗಿಸುವ ರಿಸ್ಕೀ ಆಟಗಳು ಮತ್ತು ಸಾಹಸಗಳಿಗಾಗಿಯೇ ಸಾಹಸ್ ಎಂಬ ಆಕ್ಷನ್ ವಲಯವನ್ನು ಮೀಸಲಿಟ್ಟಿದ್ದಾರೆ ರಾಮೋಜಿರಾವ್. ಹೈ ರೋಪ್ ಕೋರ್ಸ್, ನೆಟ್ ಕೋರ್ಸ್, ಎಟಿವಿ ರೈಡ್, ಬಂಜೀ, ಝಾರ್ಬಿಂಗ್, ಪೇಂಟ್ ಬಾಲ್ ಇಂಥ ಸಾಹಸ ಆಟಗಳನ್ನು ಆಡುವವರು ಮತ್ತು ನೋಡುವವರು ಇಲ್ಲಿ ತಪ್ಪದೇ ಹೋಗಬೇಕು.
🔹 ಬಾಹುಬಲಿ ಸೆಟ್
ಬಾಹುಬಲಿ ಸೆಟ್ ಬಗ್ಗೆ ಹೇಳೋ ಅಗತ್ಯವೇ ಇಲ್ಲ. ಈ ಸಿಟಿಯ ಅತ್ಯಂತ ಜನಪ್ರಿಯ ಆಕರ್ಷಣೆ ಮತ್ತು ಫೊಟೋ ಪಾಯಿಂಟ್ ಅಂದ್ರೆ ಅದು ಬಾಹುಬಲಿ ಸೆಟ್. ಇಡೀ ಮಾಹಿಷ್ಮತಿ ನಗರವನ್ನೇ ಇಲ್ಲಿ ಸೃಷ್ಟಿಸಲಾಗಿತ್ತು;. ಅರಮನೆ, ಹೊರಾಂಗಣದ ಶಿಲ್ಪಕಲೆಗಳು ಎಲ್ಲವೂ ಸಿನಿಪ್ರಿಯರ ಫೇವರಿಟ್.
🔹 ಮೋಶನ್ ಕ್ಯಾಪ್ಚರ್ ಮತ್ತು ವರ್ಚುವಲ್ ಶೂಟ್ ಸೆಟ್
ಚಿತ್ರರಂಗದ ಹೊಸ ತಂತ್ರಜ್ಞಾನಗಳ ರಹಸ್ಯ್ಗಗಳನ್ನು ತಿಳಿಯೋಕೆ ಇದಕ್ಕಿಂತ ಬೆಸ್ಟ್ ಜಾಗ ಇನ್ನೊಂದಿಲ್ಲ.
🔹 ಮಾಯಾಲೋಕ್ – ಹೊಸ ಆಕರ್ಷಣೆ
ತೆರೆ ಮುಂದೆ ನಡೆಯೋ ಮ್ಯಾಜಿಕ್ ಗೆ ಕಾರಣವಾಗುವ ತೆರೆ ಹಿಂದಿನ ಚಮತ್ಕಾರಗಳನ್ನು ನೋಡಿ ಅರಿಯೋದಾದ್ರೆ ಮಾಯಾಲೋಕ್ ಒಳಗೆ ಹೊಕ್ಕುಬರಬೇಕು.
🔹 ಸುಖೀಭವ – ವೆಲ್‌ನೆಸ್ ಸೆಂಟರ್
ಇನ್ನು ಇಷ್ಟೆಲ್ಲ ಆಟ ಸುತ್ತಾಟಗಳ ಹೊರತಾಗಿ ನೀವು ಕೇವಲ ವಿಶ್ರಾಂತಿಗಾಗಿ ಅಥವಾ ದೇಹಕ್ಕೆ ಮನಸಿಗೆ ಹೊಸ ಉಲ್ಲಾಸ ಹೊಂದುವುದಕ್ಕಾಗಿ ರಾಮೋಜಿ ಫಿಲ್ಮ್ ಸಿಟಿಗೆ ಬರುವುದಾದರೆ ನಿಮಗಾಗಿ ಸುಖೀಭವ ಎಂಬ ವೆಲ್ ನೆಸ್ ಕೇಂದ್ರವೂ ಇದೆ. ನೈಸರ್ಗಿಕ ಚಿಕಿತ್ಸೆಗಳ ಮೂಲಕ, ನ್ಯಾಚುರೋಪಥಿ, ಯೋಗ, ಆಯುರ್ವೇದ ಚಿಕಿತ್ಸೆಯ ಮೂಲಕ ದೇಹಕ್ಕೆ ಕಸುವು ಸಿಗುತ್ತದೆ.

ಕಾರ್ನಿವಲ್ ಸಂಭ್ರಮಗಳು
ರಾಮೋಜಿ ಫಿಲ್ಮ್ ಸಿಟಿ ಹಬ್ಬಗಳು ಬಂತೆಂದರೆ ಮದುವಣಗಿತ್ತಿಯಂತೆ ಸಿದ್ಧಗೊಳ್ಳುತ್ತದೆ. ಸೀಸನ್‌ಗೆ ತಕ್ಕಂತೆ ಹಾಲಿಡೇ ಕಾರ್ನಿವಲ್, ದಸರಾ-ದೀಪಾವಳಿ ಹಬ್ಬ, ವಿಂಟರ್ ಕಾರ್ನಿವಲ್, ಹೊಸವರ್ಷದ ಆಚರಣೆ – ಕಾರ್ನಿವಲ್ ಪೆರೇಡ್ ಎಲ್ಲವೂ ಜರುಗುತ್ತವೆ.
ಇನ್ನು ನಿಮಗೆ ರಾಮೋಜಿ ಸಿಟಿಯಲ್ಲಿ ಆಯ್ಕೆ ಮಾಡಲು ಕಷ್ಟವಾಗುವಷ್ಟು ವೆರೈಟೀ ಫುಡ್ ಸಿಗುತ್ತದೆ.
ಸಿತಾರಾ – ಲಕ್ಸುರಿ ಹೋಟೆಲ್
ತಾರಾ – ಕಂಫರ್ಟ್ ಹೋಟೆಲ್
ವಸುಂಧರ ವಿಲ್ಲಾ – ಫ್ಯಾಮಿಲಿ ಗೆಟ್ ಅವೇ
ಶಾಂತಿನಿಕೇತನ – ಬಜೆಟ್ ಸ್ಟೇ ಗ್ರೀನ್ಸ್ ಇನ್
ಹೋಟೆಲ್ ಸಹಾರಾ – ದೊಡ್ಡ ಕುಟುಂಬ, ಗ್ರೂಪ್‌ಗಳಿಗೆ ಸೂಕ್ತವಾದ ಡರ್ಮಿಟರಿ
ರಾಮೋಜಿ ಫಿಲ್ಮ್ ಸಿಟಿ ಕೇವಲ ಪ್ರವಾಸಿ ತಾಣವೂ ಅಲ್ಲ.. ಫಿಲ್ಮ್ ಸ್ಟುಡಿಯೋವೂ ಅಲ್ಲ. ಇಲ್ಲಿ ಕಾರ್ಪೊರೆಟ್ ಕಾರ್ಯಕ್ರಮಗಳು, ಸಮ್ಮೇಳನಗಳು, ಎಕ್ಸಿಬಿಷನ್ ಗಳು, ಡೆಸ್ಟಿನೇಷನ್ ವೆಡ್ಡಿಂಗ್ ಮತ್ತು ಹನಿಮೂನ್ ಗಳೂ ನಡೆಯುತ್ತವೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದು ಫನ್ ಜೊತೆ ಅಧ್ಯಯನ ಕೇಂದ್ರ ಕೂಡ. ಇಂಥ ಅದ್ಭುತ ಸ್ಟುಡಿಯೋ ಭಾರತದಲ್ಲಿದೆ ಎಂಬುದು ಹೆಮ್ಮೆಯ ಸಂಗತಿ.